ಎಡಿಟೋರಿಯಲ್

ಮಳೆ ಅಬ್ಬರಕ್ಕೆ ಚಾ.ನಗರ ಜಿಲ್ಲೆಯಲ್ಲಿ ಅಪಾರ ಹಾನಿ; ತುರ್ತು ಪರಿಹಾರ ಅಗತ್ಯ

ಚಾಮರಾಜನಗರ ಜಿಲ್ಲಾದ್ಯಂತ ಕಳೆದ ಒಂದು ವಾರ ಕಾಲ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳು, ರಸ್ತೆ, ಸೇತುವೆ, ಕೆರೆ, ಶಾಲೆ, ಆಸ್ಪತ್ರೆ ಕಟ್ಟಡಗಳು ಹಾನಿಗೊಂಡಿವೆ. ಒಟ್ಟು ೪೮ ಗ್ರಾಮಗಳು ಜಲಾವೃತಗೊಂಡು ಜನಜೀವನ ಸಂಕಷ್ಟಕ್ಕೆ ಸಿಲುಕಿತ್ತು.   

ಕಳೆದ ವಾರದಲ್ಲಿ ೧೧೯ ಮಿ.ಮೀ.ವಾಡಿಕೆ ಮಳೆಯಾಗಬೇಕಿತ್ತು.

ಆದರೆ, ೫೧೩ ಮಿ.ಮೀ. ಹೆಚ್ಚು ಮಳೆಯಾಗಿ ಜಿಲ್ಲೆಯ ಜನರನ್ನು ಸಂಕಷ್ಟಕ್ಕೆ ನೂಕಿತ್ತು. ೧೧೪೨ ಮನೆಗಳು ಹಾನಿಗೊಂಡಿವೆ. ೭೭ ಶಾಲಾ ಕಟ್ಟಡಗಳು, ೧೪೩ ಲೋಕೋಪಯೋಗಿ ಇಲಾಖೆ ರಸ್ತೆಗಳು, ೧೬ ಸೇತುವೆಗಳು, ೧೧ ಕಲ್ವರ್ಟ್ಗಳು, ೬ ಆಸ್ಪತ್ರೆಗಳು ಹಾಳಾಗಿವೆ. ೫ ದೊಡ್ಡ ಕೆರೆಗಳ ಏರಿ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಫಸಲು ಹಾನಿಗೊಂಡಿವೆ. ೯ ಮೇಕೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ೧೩೦೦ ಕೋಳಿಗಳು ನೀರು ಪಾಲಾಗಿವೆ. ೧೭೩೧ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಂಡಿದೆ. ೩೫೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೋಟದ ಬೆಳೆಗಳು ಜಲಾವೃತಗೊಂಡಿವೆ. ಈ ಪೈಕಿ ೧೨೬ ಹೆಕ್ಟೇರ್ ಫಸಲು ಸಂಪೂರ್ಣ ಹಾನಿಗೊಂಡಿದೆ.

೬೧ ಹೆಕ್ಟೇರ್ ಬಾಳೆ, ೩೦ ಹೆ.ಅರಿಶಿನ, ೨೦ ಹೆ.ಟೊಮ್ಯಾಟೋ ಫಸಲು ನಷ್ಟವಾಗಿದೆ. ಚಾಮರಾಜನಗರ ತಾಲ್ಲೂಕಿನ ಕಾಡಹಳ್ಳಿ, ಮಸಗಾಪುರ, ಹೊಂಗನೂರು, ಗಂಗವಾಡಿ, ಬೆಟ್ಟಹಳ್ಳಿ, ಜ್ಯೋತಿಗೌಡನಪುರ, ಕರಳಮೋಳೆ, ಸರಗೂರು, ಆಲೂರು, ಹೊಂಡರಬಾಳು, ಕಾಗಲವಾಡಿ, ಚಂದಕವಾಡಿ ಭಾಗಗಳಲ್ಲಿ ತೋಟದ ಬೆಳೆಗಳು ಹಾಳಾಗಿವೆ. ಇದರಿಂದ ಸುಮಾರು ೨೯.೬೧ ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.

ಇದಲ್ಲದೆ ೧೧೫೬ ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತ, ಕಬ್ಬು, ಮುಸುಕಿನ ಜೋಳದ ಫಸಲು ಜಲಾವೃತಗೊಂಡಿದೆ.

ಇದರ ಪೂರ್ಣ ಪ್ರಮಾಣದ ನಷ್ಟ ತಿಳಿಯಲು ಕಾಲಾವಕಾಶ ಬೇಕಿದೆ. ಇನ್ನು ೨ ದಿನಗಳು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಆದ್ದರಿಂದ ನಿಖರವಾಗಿ ಬೆಳೆ ನಷ್ಟದ ಅಂದಾಜು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ನೀರಿನಿಂದ ಹೆಚ್ಚು ತೊಂದರೆಗೆ ಒಳಗಾದ ಯಳಂದೂರು ತಾಲ್ಲೂಕಿನ ಅಗರ, ಮಾಂಬಳ್ಳಿ, ಯಳಂದೂರಿನಲ್ಲಿ ಒಟ್ಟು ೪ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ೯೫೦ ಜನರು ಈ ಕೇಂದ್ರಗಳಲ್ಲಿ ವಾಸ್ತವ್ಯವಿದ್ದಾರೆ.

ಧಾರಾಕಾರ ಮಳೆಯಿಂದ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಹೆಚ್ಚು ನಷ್ಟವಾಗಿದೆ. ಚಾಮರಾಜನಗರ ತಾಲ್ಲೂಕಿನ ಕಥಾನಾಯಕನ ಕೆರೆ, ಗುಂಬಳ್ಳಿ ಕೆರೆ, ಯಲಕ್ಕೂರಿನ ಹೊಸಕೆರೆ, ಯರಗಂಬಳ್ಳಿ ಸಮೀಪದ ಹುಳುಗೆರೆಗಳ ಏರಿ ಒಡೆದು ಹಾನಿಯಾಗಿದೆ. ಇದೆಲ್ಲವೂ ಪ್ರಾಥಮಿಕ ವರದಿಯಾಗಿದೆ. ಇನ್ನು ಪೂರ್ಣ ಪ್ರಮಾಣದ ವರದಿ ಬರಬೇಕಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ಧಾರೆ.

ಮಳೆ ಅಬ್ಬರದಿಂದ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ತಪ್ಪಲಿನಲ್ಲಿರುವ ಅವಳಿ ಜಲಾಶಯಗಳಾದ ಸುವರ್ಣಾವತಿ ಮತ್ತು ಚಿಕ್ಕಹೊಳೆಗಳು ಭರ್ತಿಯಾಗಿ ಸುವರ್ಣಾವತಿ ಹೊಳೆಗೆ ೨ ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿಸಲಾಯಿತು. ಜೊತೆಗೆ ಮಳೆಯೂ ಹೆಚ್ಚಾದ್ದರಿಂದ ಈ ಹೊಳೆ ಅಂಚಿನಲ್ಲಿರುವ ಆಲೂರು, ಹೊಮ್ಮ, ಅಂಬಳೆ, ಯಳಂದೂರು, ಯರಿಯೂರು, ಗಣಿಗನೂರು, ಮದ್ದೂರು, ಬೂದಿತಿಟ್ಟು, ಅಗರ, ಮಾಬಳ್ಳಿ ಗ್ರಾಮಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದರು. ಮನೆಗಳಿಗೆ ನೀರು ನುಗ್ಗಿ ದಿನಸಿ ಪದಾರ್ಥ ನೀರು ಪಾಲಾದವು. ಜಾನುವಾರುಗಳು ಮೇವಿಗೆ ಪರದಾಡಬೇಕಾಯಿತು. ಮಳೆಯ ಹೊಡೆತದಿಂದ ಊಟಕ್ಕೂ ಪರದಾಡುವಂತಾಯಿತು. ಯಳಂದೂರು ತಾಲ್ಲೂಕಿನಲ್ಲಿ ಹೆಚ್ಚಾಗಿ ಕಬ್ಬು, ಭತ್ತ, ಮುಸುಕಿನ ಜೋಳದ ಫಸಲು ಜಲಾವೃತಗೊಂಡು ಹಾನಿಯಾಗಿದೆ.

ಇನ್ನು ೨-೩ ದಿನಗಳು ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯಕ್ಕೆ ಆಗಿರುವ ಹಾನಿಯ ಬಗ್ಗೆ ತಕ್ಷಣ ಸರ್ವೆ ಮಾಡಿಸಿ ತುರ್ತು ಪರಿಹಾರ ಕೈಗೊಳ್ಳಬೇಕಿದೆ. ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶಾಸಕ ಎನ್.ಮಹೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ತಾಲ್ಲೂಕುಗಳಲ್ಲಿ ಮಳೆ ಹಾನಿ ಪ್ರದೇಶವನ್ನು ಪರಿಶೀಲನೆ ನಡೆಸಿದ್ಧಾರೆ. ಶುಕ್ರವಾರ ಬೆಳಿಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸಿಲ್ದಾರರು, ತಾಪಂ ಇಒಗಳು, ಪಿಡಿಒಗಳ ಸಭೆ ನಡೆಸಿ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಈಗಾಗಲೇ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಲಾಗಿದೆ. ಮನೆ ಹಾನಿಗೊಂಡು ತೊಂದರೆಗೆ ಈಡಾದವರಿಗೆ ೧೦ ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ.

ಬೆಳೆ ಹಾನಿ ಬಗ್ಗೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಬೇಕಿದೆ. ಇದು ಬೇಗ ಆರಂಭ ಆಗಬೇಕಿದೆ. ಜಮೀನುಗಳಲ್ಲಿ ನಿಂತಿರುವ ನೀರು ಇಂಗಿಹೋದ ನಂತರ ಸರ್ವೆ ಮಾಡಿದರೆ ಏನೂ ಪ್ರಯೋಜನವಿಲ್ಲ.

ಮಳೆ ಹಾನಿಯನ್ನು ಸರಿಪಡಿಸಲು ಸಾಕಷ್ಟು ಅನುದಾನದ ಅವಶ್ಯಕತೆಯಿದೆ. ಸಚಿವ ವಿ.ಸೋಮಣ್ಣ ಅವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಂತ್ರಸ್ತರಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಮಾಡಿಸಿ ಹಾನಿಯಿಂದಾಗಿರುವ ನಷ್ಟವನ್ನು ಸರಿದೂಗಿಸಬೇಕಿದೆ.

andolana

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

1 hour ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

6 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

10 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

10 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

10 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

13 hours ago