ಎಡಿಟೋರಿಯಲ್

ವಂಚಿತ ಸಮುದಾಯಕ್ಕೆ ಒಳ ಮೀಸಲಾತಿ ಹಂಚೋದೇ ಸಾಮಾಜಿಕ ನ್ಯಾಯ

ಕೆ.ಬಿ.ರಮೇಶನಾಯಕ

ಚುನಾವಣೆಯ ವರ್ಷದಲ್ಲಿ ರಾಜಕೀಯ ಪಕ್ಷಗಳಿಂದಾಗಿ ಮೀಸಲಾತಿ, ಒಳ ಮೀಸಲಾತಿಯ ಚರ್ಚೆಯ ವಿಚಾರ ಮತ್ತೊಮ್ಮೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಮೀಸಲಾತಿ ಹೆಚ್ಚಿಸುವ ವಿಚಾರವೇ ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದರಲ್ಲಿ ಯಾವ ಅನುಮಾನವೇ ಇಲ್ಲ. ಏಕೆಂದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಲಿಂಗಾಯುತ-ವೀರಶೈವ ಪ್ರತ್ಯೇಕ ಧರ್ಮದ ವಿಚಾರ ಪ್ರಸ್ತಾಪಿಸಿ ಕೈಸುಟ್ಟುಕೊಂಡರು. ಈಗ ಅಂತಹದ್ದೇ ಸಾಹಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗುವ ಮೂಲಕ ಸಂದಿಗ್ದ ಸ್ಥಿತಿಗೆ ಸಿಲುಕಿಕೊಳ್ಳುವ ಸಾಧ್ಯತೆಯಿದೆ.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕವಾದ ನಿರ್ಣಯ ಕೈಗೊಂಡಿರುವ ಜತೆಗೆ ಸೌಲಭ್ಯ ವಂಚಿತ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂಬ ಕೂಗು ಎದ್ದಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸುವ ಕುರಿತಂತೆ ರಾಜ್ಯಸರ್ಕಾರ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಎಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ಆಯೋಗವನ್ನು ರಚನೆ ಮಾಡಿತ್ತು. ಈ ಆಯೋಗವು ನೀಡಿದ್ದ ವರದಿಯ ಆಧಾರದ ಮೇಲೆ ಪರಿಶಿಷ್ಟಜಾತಿಯ ಮೀಸಲು ಶೇ.೧೫ರಿಂದ ೧೭ಕ್ಕೆ, ಪರಿಶಿಷ್ಟ ಪಂಗಡದ ಮೀಸಲು ಶೇ.೩ರಿಂದ ೭ಕ್ಕೆ ಹೆಚ್ಚಿಸುವ ತೀರ್ಮಾನವನ್ನು ಕೈಗೊಂಡಿರುವ ಸರ್ಕಾರ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಿ ಆದೇಶ ಹೊರಡಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಅ.೯ ರಂದು ವಾಲ್ಮೀಕಿ ಜಯಂತಿ ದಿನದೊಳಗೆ ಈಡೇರಿಸುವಂತೆ ಅಂತಿಮ ಗಡುವು ನೀಡಿದ್ದ ವಾಲ್ಮೀಕಿಪೀಠದ ಸ್ವಾಮೀಜಿಯವರ ಹೋರಾಟಕ್ಕೆ ಮಣಿದ ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದರೂ ಕೇಂದ್ರಸರ್ಕಾರ ಅದನ್ನು ಒಪ್ಪಿ ಷೆಡ್ಯೂಲ್‌ ೯ರಲ್ಲಿ ಸೇರಿಸುವ ತನಕ ಕಾಯಬೇಕಾಗಿದೆ.

ರಾಜ್ಯದ ಜನಸಂಖ್ಯೆ ೨೦೧೧ರ ಗಣತಿಯಂತೆ ೬,೧೦,೯೫,೨೯೭ ಆಗಿದ್ದು, ಪರಿಶಿಷ್ಟ ಜಾತಿಯವರ ಸಂಖ್ಯೆ ೧,೦೪,೭೪,೯೯೨ ಇದ್ದು, ಶೇಕಡಾವಾರು ಪ್ರಮಾಣ ೧೭.೧೫ ಆಗಿದೆ. ಪ್ರಸ್ತುತ ಪರಿಶಿಷ್ಟ ಜಾತಿಗೆ ಶೇ.೧೫ರಷ್ಟು ಮೀಸಲಾತಿ ಒದಗಿಸಿದ್ದು, ಈಗ ಶೇ.೧೫ರಿಂದ ೧೮ಕ್ಕೆ ಹೆಚ್ಚಿಸುವ ಬೇಡಿಕೆ ಬಂದಿದ್ದರೂ ಶೇ.೧೭ಕ್ಕೆ ಹೆಚ್ಚಿಸಲು ತೀರ್ಮಾನವಾಗಿದೆ. ಅದೇ ರೀತಿ ಪರಿಶಿಷ್ಟ ವರ್ಗದವರ ಸಂಖ್ಯೆ ೪೨,೪೮,೯೮೭ ಇದ್ದು, ಶೇಕಡಾವಾರು ಪ್ರಮಾಣ ೬.೯೫ ಆಗಿದೆ. ಪ್ರಸ್ತುತ ಶೇ.೩ರಿಂದ ಏಳಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಮನ್ನಿಸಿ ತೀರ್ಮಾನ ಮಾಡಲಾಗಿದೆ. ಇದೀಗ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಹೋರಾಟ ಶುರುವಾಗಿದ್ದರೆ, ಒಕ್ಕಲಿಗ ಸಮಾಜದ ಮೀಸಲಾತಿ ಹೆಚ್ಚಿಸುವಂತೆ ಹೋರಾಟಕ್ಕೆ ಇಳಿಯಲು ತಯಾರಿ ಮಾಡಿಕೊಳ್ಳಲು ಒಕ್ಕಲಿಗರ ಸಂಘದವರು ಮುಂದಾಗಿದ್ದಾರೆ. ಇದೇ ರೀತಿ ಇತರ ಸಮಾಜಗಳು ಎಸ್‌ಸಿ- ಎಸ್ಟಿಗೆ ಸೇರಿಸುವಂತೆ ಬೇಡಿಕೆ ಇಟ್ಟಿವೆ.
ಡಿ.ದೇವರಾಜ ಅರಸು ಅವರು ೧೯೭೪ರಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಲು ಎಲ್.ಜಿ.ಹಾವನೂರು ಆಯೋಗವನ್ನು ರಚಿಸಿ ಅದರ ವರದಿಯನ್ನು ವಿಧಾನಸಭೆಯಲ್ಲೇ ಮಂಡಿಸಿ ಅಂಗೀಕರಿಸುವ ಜತೆಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡಿದರು. ವರ್ಗ-೧ಕ್ಕೆ, ಶೇ.೪, ವರ್ಗ-೨ಎಗೆ ಶೇ.೧೫, ವರ್ಗ-೩ಎಗೆ ಶೇ.೪, ವರ್ಗ- ೩ಬಿಗೆ ಶೇ.೪ರಷ್ಟು ಮೀಸಲಾತಿ ಹಂಚಲಾಗಿದೆ.
ಈ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ಅನುದಾನ ಕೊಟ್ಟು ಜಾತೀವಾರು ಜನಗಣತಿ ನಡೆಸಿದ್ದರು. ಈ ವರದಿಯು ವಿಧಾನಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಇದುವರೆಗೂ ರಚನೆಯಾಗಿದ್ದ ಹಿಂದುಳಿದ ಆಯೋಗದ ವರದಿಗಳ ಬಗ್ಗೆಯೂ ಚರ್ಚೆಯಲ್ಲಿ ಅದನ್ನು ಪ್ರಸ್ತಾಪಿಸುವ ಗೋಜಿಗೂ ಹೋಗಿಲ್ಲ. ಇದರ ನಡುವೆ ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಪಟ್ಟಿಗೆ ಅನೇಕ ಜಾತಿಗಳನ್ನ ಸೇರಿಸಿಕೊಳ್ಳುತ್ತಲೇ ಬಂದಿರುವುದರಿಂದ ಈಗ ದೊಡ್ಡ ಪಟ್ಟಿಯೇ ಇದೆ. ರಾಜ್ಯದಲ್ಲಿ ಪ್ರಸ್ತುತ ಎಸ್ಸಿಗೆ ಶೇ.೧೫, ಎಸ್ಟಿಗೆ ಶೇ.೩, ಹಿಂದುಳಿದ ವರ್ಗದವರಿಗೆ ಶೇ.೩೨ರಷ್ಟು ಇದೆ.
ಪರಿಶಿಷ್ಟ ಜಾತಿಯಲ್ಲಿ ಆದಿಕರ್ನಾಟಕ, ಆದಿಜಾಂಬವ, ಸಫಾಯಿ ಕರ್ಮಚಾರಿಗಳು ಹೀಗೆ ನೂರೊಂದು ಜಾತಿ ಇದ್ದರೆ, ಪರಿಶಿಷ್ಟಪಂಗಡದಲ್ಲಿ ನಾಯಕ, ಜೇನುಕುರುಬ, ಕಾಡುಕುರುಬ ಹೀಗೆ ೫೦ ಜಾತಿಗಳಿದೆ. ಹಿಂದುಳಿದ ವರ್ಗಗಳಲ್ಲಿ ಸಾಕಷ್ಟು ಜಾತಿಗಳು ಇದೆ. ಈಗ ಸರ್ಕಾರ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರ ಜನಸಂಖ್ಯೆಗೆ ತಕ್ಕಂತೆ ಮೀಸಲು ನಿಗದಿಪಡಿಸುವ ಸಂದರ್ಭ ಬಂದಿರುವ ಕಾರಣ ಮೀಸಲಾತಿ ಪ್ರಮಾಣ ಶೇ.೫೦ರಷ್ಟು ದಾಟದಂತೆ ನೋಡಿಕೊಳ್ಳಬೇಕಿದೆ.
ಈಗ ಇರುವ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿತ ಮಾಡಿ ಎಸ್ಸಿ-ಎಸ್ಟಿ ವರ್ಗದವರಿಗೆ ಕೊಡುವುದು ಅಷ್ಟು ಸುಲಭವಲ್ಲ. ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿಯಲ್ಲಿ ಇನ್ನೂ ಅನೇಕ ಸಮುದಾಯಗಳು ಮೀಸಲಾತಿಯಿಂದ ವಂಚಿತವಾಗಿದ್ದು, ತಮ್ಮನ್ನು ಮೀಸಲಾತಿ ವ್ಯಾಪ್ತಿಗೆ ತರುವಂತೆ ಒತ್ತಡ ಹೇರುತ್ತಿವೆ. ಅದೇ ರೀತಿ ಪರಿಶಿಷ್ಟಜಾತಿಯಲ್ಲೂ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಬಲವಾದ ಒತ್ತಡ ಬಂದಿದೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ದಲಿತ ವರ್ಗದ ಶಾಸಕರೇ ದೊಡ್ಡ ಮಟ್ಟದಲ್ಲಿ ಅಡ್ಡಿಯಾಗಿ ನಿಂತಿದ್ದಾರೆ. ಇದೇ ರೀತಿ ಪರಿಶಿಷ್ಟ ಪಂಗಡದಲ್ಲೂ ಇತರ ಸಮುದಾಯಕ್ಕೆ ಪ್ರತ್ಯೇಕ ಮೀಸಲು ಕೊಡಬೇಕೆಂದು ಆಯೋಗದ ಮುಂದೆ ವಾದಮಂಡಿಸಿ ಲಿಖಿತ ಮನವಿ ಸಲ್ಲಿಸಿದ್ದಾರೆ.
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಹೆಚ್ಚಿಸಿ ನಿಗದಿಪಡಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಇದುವರೆಗೂ ಮೀಸಲಾತಿಯಿಂದ ವಂಚಿತರಾದ ಸಮುದಾಯಗಳನ್ನು ಗುರುತಿಸಿ ಒಳ ಮೀಸಲಾತಿ ಕಲ್ಪಿಸುವುದು ಅನಿವಾರ್ಯವಾಗಿದೆ. ಮೀಸಲಾತಿ ಹೆಚ್ಚಿಸಿದಾಕ್ಷಣ ಎಲ್ಲರಿಗೂ ನ್ಯಾಯ ಸಿಗುತ್ತದೆ ಎನ್ನುವುದು ಕನಸಿನ ಮಾತು. ಇದುವರೆಗಿನ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದರೆ ಬಲಾಢ್ಯ ಸಮುದಾಯಗಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರಿ ಸೌಲಭ್ಯ, ಮೀಸಲಾತಿ ಸ್ಥಾನದಲ್ಲಿ ಆಯ್ಕೆಯಾಗುವುದು ಸೇರಿ ಎಲ್ಲವನ್ನು ಪಡೆದುಕೊಂಡರೆ, ಕೆಲವು ವರ್ಗದವರಿಗೆ ಸರಕಾರದ ಸವಲತ್ತು ಸಿಗದೆ ಇರುವ ಸಾವಿರಾರು ನಿದರ್ಶನವಿದೆ. ಇಂತಹ ವಿಚಾರ ನಮ್ಮ ಕಣ್ಣ ಮುಂದೆ ಇರುವ ಕಾರಣ ರಾಜ್ಯಸರ್ಕಾರ ಸೌಲಭ್ಯ ವಂಚಿತ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸುವುದು ಆದ್ಯ ಕರ್ತವ್ಯವೂ ಅಡಗಿದೆ.
ದಲಿತ ವರ್ಗದಲ್ಲೇ ಆದಿಜಾಂಬವ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕೆಂಬ ವರದಿ ನೀಡಿರುವುದರಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದರೆ, ಬೋವಿ ಸಮುದಾಯ ಈ ವರದಿಯ ವಿರುದ್ಧ ನಿಂತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕೆಂಬ ಕೂಗಿನಂತೆ ಆಯೋಗವು ಚಿಂತನೆ ನಡೆಸಿ ವರದಿ ಕೊಡಬೇಕಾದ ಅನಿವಾರ್ಯತೆ ಇದೆ. ಆಯೋಗವು ಬರೀ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನಿಗದಿ ಪಡಿಸಿ ಸರ್ಕಾರಕ್ಕೆ ಶಿಫಾರಸ್ಸಿನ ವರದಿ ಕೊಟ್ಟು ಕೂತು ಬಿಟ್ಟರೆ ದೊಡ್ಡ ಕಂದಕವೇ ನಿರ್ಮಾಣವಾಗಲಿದೆ. ಏಕೆಂದರೆ ಈಗಿನ ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ ಶೇ.೨೪ರಷ್ಟಾಗಲಿದೆ. ಉಳಿದಂತೆ ಹಿಂದುಳಿದ ವರ್ಗದ ಮೀಸಲಾತಿ ಶೇ.೨೫ರಷ್ಟು ಆಗಲಿದೆ. ಈ ಅಂಕಿ ಅಂಶ ಪರಿಗಣಿಸಿದರೆ ಹಿಂದುಳಿದ ವರ್ಗಗಳ ಮೀಸಲಾತಿ ಕಡಿತವಾಗಲಿದೆ.
ಈ ವರ್ಗದ ಮೀಸಲಾತಿ ಹೆಚ್ಚಿಸಬೇಕಾದರೆ ಸಂವಿಧಾನ ತಿದ್ದುಪಡಿತರಬೇಕಾಗುತ್ತದೆ. ಜತೆಗೆ ಸುಪ್ರೀಂಕೋರ್ಟ್ ಮೀಸಲಿನ ಪ್ರಮಾಣ ಶೇ.೫೦ಕ್ಕಿಂತ ದಾಟಬಾರದೆಂದು ಹೇಳಿರುವುದರಿಂದ ಇರುವ ಮೀಸಲಾತಿಯಲ್ಲೇ ಹಂಚಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಡವಾದರೂ ಸರಿಯೇ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿಕೊಡುವುದರ ಜತೆಗೆ ಮೀಸಲಾತಿ ವಂಚಿತ ಸಮುದಾಯಗಳನ್ನ ಒಳಗೊಳ್ಳುವಂತೆ ಮಾಡಬೇಕಾಗಿದೆ.
ಇದುವರೆಗೂ ಮೀಸಲಾತಿ ಸೌಲಭ್ಯ ವಂಚಿತರಾದ ಸಣ್ಣ ಸಣ್ಣ ಸಮುದಾಯಗಳಿಗೂ ಪ್ರಾತಿನಿಧ್ಯ ಕೊಡಬೇಕಾದರೆ ಅದು ಒಳ ಮೀಸಲಾತಿಯಿಂದ ಮಾತ್ರ ಸಾಧ್ಯವಿದೆ. ಏಕೆಂದರೆ ಕೇಂದ್ರಸರ್ಕಾರ ಮೇಲ್ವರ್ಗದ ಜನರಿಗೂ ಶೇ.೧೦ರಷ್ಟು ಮೀಸಲಾತಿ ಕಲ್ಪಿಸಿರುವುದರಿಂದ ಕರ್ನಾಟಕದಲ್ಲೂ ಈತನಕ ಸೌಲಭ್ಯದಿಂದ ದೂರವೇ ಇರುವ ಬಡ ಮತ್ತು ವಂಚಿತ ಸಮಾಜಕ್ಕೆ ನ್ಯಾಯ ಒದಗಿಸಲು ಮುಂದಾಗಬೇಕು. ಒಂದುವೇಳೆ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ನಿಗದಿಪಡಿಸಿದರೂ ಯಾವುದೇ ಪ್ರಯೋಜನವಾಗದು. ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ, ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಬಲ್ಲಂತಹ ಒಳ ಮೀಸಲಾತಿಯೇ ರಾಮಬಾಣ ಎನ್ನುವುದನ್ನು ಅರಿಯಬೇಕಿದೆ.

andolanait

Recent Posts

ಮೈಸೂರು ಅರಮನೆ ವೀಕ್ಷಣೆಗೂ ಬಂಕಿಂಗ್‌ ಹ್ಯಾಮ್‌ ಮಾದರಿ ತರಲಿ : ವಿಶ್ವನಾಥ್‌ ಆಗ್ರಹ

ಮೈಸೂರು : ಲಂಡನ್‌ನ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಎಲ್ಲರಿಗೂ ಪ್ರವೇಶ ಇಲ್ಲ. ದಿನಕ್ಕೆ ಇಂತಿಷ್ಟೇ ಜನ ಭೇಟಿ ನೀಡಬೇಕು ಎಂಬ…

22 mins ago

ರಾಜ್ಯದಲ್ಲಿ ಪದೇ ಪದೇ ಡ್ರಗ್ಸ್‌ ಜಾಲ ಪತ್ತೆ : ಪೊಲೀಸರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಹೋಂ ಮಿನಿಸ್ಟರ್‌

ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ತಯಾರಿಕೆಯ ಘಟಕಗಳು ಪತ್ತೆಯಾಗಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಡಿಮಿಡಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು…

52 mins ago

ಮುಂದಿನ ಎರಡ್ಮೂರು ತಿಂಗಳಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ : ಕಾರ್ಯಕರ್ತರು ತಯಾರಾಗಿರಲು ಡಿಕೆಶಿ ಕರೆ

ಬೆಂಗಳೂರು : ಮುಂದಿನ ಎರಡು ಮೂರು ತಿಂಗಳ ಒಳಗಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಗಳಿಗೆ ಚುನಾವಣೆ ನಡೆಸಲು…

1 hour ago

ನಾಳೆ ಮೈಸೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಮೈಸೂರು : ರಾಮಕೃಷ್ಣ ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಡಿ.30 ರ ಬದಲಿಗೆ 29ರಂದೇ ನಡೆಸಲಿರುವುದರಿಂದ…

1 hour ago

ಇನ್ಸ್‌ಸ್ಟಾಗ್ರಾಂನಲ್ಲಿ ಬ್ಯಾಡ್‌ ಕಾಮೆಂಟ್‌ : ಸಾನ್ವಿ ಸುದೀಪ್‌ ಖಡಕ್‌ ತಿರುಗೇಟು

ಬೆಂಗಳೂರು : ನಟ ಕಿಚ್ಚ ಸುದೀಪ್‌ ಮಗಳು, ಗಾಯಕಿ ಸಾನ್ವಿ ಸುದೀಪ್‌ ಬಗ್ಗೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ…

2 hours ago

ಬೆಂಗಳೂರಿನಲ್ಲಿ 55 ಕೋಟಿ ಮೌಲ್ಯದ ಡ್ರಗ್ಸ್ ವಶ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ಮಹಾರಾಷ್ಟ್ರದ ಎಎನ್‌ಟಿಎಫ್‌ ಅಧಿಕಾರಿಗಳು ಬೆಂಗಳೂರಿನಲ್ಲಿ ಮೂರು ಡ್ರಗ್ಸ್‌ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ 55 ಕೋಟಿ ಮೌಲ್ಯದ…

2 hours ago