– ಡಿ ವಿ ರಾಜಶೇಖರ
ಚೀನಾ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಅವರನ್ನು ಕ್ಷಿಪ್ರಕ್ರಾಂತಿಯಲ್ಲಿ ಸೇನೆ ಪದಚ್ಯುತಗೊಳಿಸಿದೆ ಎಂಬ ಪಾಶ್ಚಾತ್ಯ ಮೂಲದ ವದಂತಿಗಳಿಗೆ ಇದೀಗ ತೆರೆಬಿದ್ದಿದೆ. ಆ ವದಂತಿಗಳಿಗೆ ಉತ್ತರವೋ ಎಂಬಂತೆ ಕ್ಷಿ ಜಿನ್‍ಪಿಂಗ್ ಅವರನ್ನು ಮತ್ತೆ ದೇಶದ ಅಧ್ಯಕ್ಷರನ್ನಾಗಿ ಮೂರನೆಯ ಅವಧಿಗೆ ಮುಂದುವರಿಸಲು ಆಡಳಿತ ಕಮ್ಯುನಿಸ್ಟ್ ಪಕ್ಷದ ಕಾಂಗ್ರ್ರೆಸ್ ನಿರ್ಧರಿಸಿದೆ.
ಕಳೆದ ತಿಂಗಳ ಅಂತ್ಯದಲ್ಲಿ ಉಜ್ಬೆಕಿಸ್ತಾನದ ಸಮರಕಂಡ್‍ನಲ್ಲಿ ನಡೆದ ಶಾಂಗೈ ಸಹಕಾರ ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ಕ್ಷಿ ಅವರು ನಂತರದ ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈ ಬೆಳವಣಿಗಯನ್ನೇ ಆಧಾರವಾಗಿಟ್ಟುಕೊಂಡು ಕ್ಷಿ ಅವರ ಪದಚ್ಯುತಿಯಾಗಿರಬಹುದೆಂದು ವದಂತಿಗಳು ಹಬ್ಬಿದ್ದವು ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಈ ವಿಷಯ ದೊಡ್ಡ ಸುದ್ದಿಯಾಗಿತ್ತು. ಕ್ಷಿ ಅವರು ಕರೋನಾ ನಿಯಮದನ್ವಯ ಕ್ವಾರಂಟೈನ್‍ನಲ್ಲಿ ಇರುವುದಾಗಿ ಚೀನಾದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರಾದರೂ ಪದಚ್ಯುತಿ ವರದಿಗಳು ಬರುತ್ತಲೇ ಇದ್ದವು. ಇದೀಗ ಕ್ಷಿ ಅವರು ಪಕ್ಷದ 20ನೆಯ ಕಾಂಗ್ರೆಸ್ ಸಭೆಯ ಅಧ್ಯಕ್ಷತೆ ವಹಿಸಿದ್ದುದು ಮತ್ತು ಅವರು ಬಯಸಿದಂತೆ ಎಲ್ಲವೂ ನಡೆಯುತ್ತಿರುವುದು ವದಂತಿಕೋರರಿಗೆ ಮುಖಭಂಗವಾದಂತಾಗಿದೆ.
ಕ್ಷಿ ಅವರನ್ನು ಅಧ್ಯಕ್ಷರನ್ನಾಗಿ ಇನ್ನೂ ಐದು ವರ್ಷಕಾಲ ಮುಂದುವರಿಸಲು ಅಗತ್ಯ ಸಂವಿಧಾನ ತಿದ್ದುಪಡಿಯನ್ನೂ ಕಾಂಗ್ರೆಸ್ ಅಂಗೀಕರಿಸಿದೆ. ಮಾವೋ ಜೆಡಾಂಗ್ ನಂತರ ಅತಿ ದೀರ್ಘಕಾಲ ಅಧ್ಯಕ್ಷರಾಗಲಿರುವವರು ಕ್ಷಿ ಜಿನ್‍ಪಿಂಗ್. ಯಾರೇ ಆಗಲಿ ಎರಡು ಅವಧಿಗಿಂತ ಹೆಚ್ಚು ಕಾಲ ಅಧ್ಯಕ್ಷರಾಗಿರಬಾರದು ಮತ್ತು ವಯಸ್ಸು 68 ಮೀರಿರಬಾರದು ಎಂಬ ನಿಯಮವನ್ನು ಪಕ್ಷ ಈ ಹಿಂದೆ ಜಾರಿಗೆ ತಂದಿತ್ತು. ಆ ನಿಯಮಕ್ಕೆ ಈಗ ತಿಲಾಂಜಲಿ ನೀಡಿದ್ದು 69 ವರ್ಷ ವಯಸ್ಸಿನ ಕ್ಷಿ ಅವರು ಅನಿರ್ದಿಷ್ಟ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ತಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳದ ಪಕ್ಷದ ಹಿರಿಯರು ಪಕ್ಷದ ಉನ್ನತ ಸಮಿತಿಯಾದ ಸೆಂಟ್ರಲ್ ಕಮಿಟಿಗೇ ಆಯ್ಕೆಯಾಗದಂತೆ ಕ್ಷಿ ನೋಡಿಕೊಂಡಿದ್ದಾರೆ. ತಮ್ಮ ಬೆಂಬಲಿಗರನ್ನೇ ಪಾಲಿಟ್ ಬ್ಯೂರೋದ ಸ್ಥಾಯಿ ಸಮಿತಿಗೆ ಆಯ್ಕೆಯಾಗುವಂತೆ ಕ್ಷಿ ನೋಡಿಕೊಂಡಿರುವುದರಿಂದ ಅವರು ಬಯಸುವವರೆಗೆ ಅಧ್ಯಕ್ಷ ಸ್ಥಾನದಲ್ಲಿ ಉಳಿಯಬಹುದಾದ ಸಾಧ್ಯತೆಗಳು ಸೃಷ್ಟಿಯಾಗಿವೆ. ಪ್ರಧಾನಿಯಾಗಿದ್ದ ಲಿ ಕೆಕ್ವಿಯಾಂಗ್ ಪಕ್ಷದ ಪಾಲಿಟ್ ಬ್ಯೂರೋ ಸ್ಥಾಯಿ ಸಮಿತಿಯಿಂದ ಕೈಬಿಡಲಾಗಿದೆ. ಅವರು ಮುಂದಿನ ಆರು ತಿಂಗಳು ಮಾತ್ರ ಅಧಿಕಾರದಲ್ಲಿ ಇರಲಿದ್ದಾರೆ. ಅವರ ಜಾಗಕ್ಕೆ ಷಾಂಗೈ ನಗರದ ಪಕ್ಷದ ಮಾಜಿ ಮುಖ್ಯಸ್ಥ ಲಿ ಕಿಯಾಂಗ್ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಇಡೀ ದೇಶದ ಆರ್ಥಿಕತೆಯ ಜವಾಬ್ದಾರಿಯನ್ನು ಲಿ ಕಿಯಾಂಗ್ ಹೊರಲಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ಕ್ಷಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ಹಿಂದಿನ ಅಧ್ಯಕ್ಷ ಹು ಜಿಂಟಾವೋ ಅವರನ್ನು ಬಲವಂತವಾಗಿ ಸಭೆಯಿಂದ ಹೊರಗೆ ಹಾಕಲಾಗಿದೆ. ಅನಾರೋಗ್ಯದ ಕಾರಣದಿಂದ ಅವರು ಹೊರಹೋದರೆಂದು ಸ್ಪಷ್ಟನೆ ನೀಡಲಾಗಿದೆ. ಆದರೆ ವಾಸ್ತವವೇ ಬೇರೆ ಇದ್ದಂತೆ ಕಾಣುತ್ತಿದೆ. ಹು ಜಿಂಟಾವೋ ಅವರಲ್ಲದೆ ಇನ್ನೂ ಕೆಲವರು ಹಿರಿಯ ನಾಯಕರನ್ನು ಅಧಿಕಾರ ಸ್ಥಾನಗಳಿಂದ ಕೆಳಗಿಳಿಸಲಾಗಿದೆ. ಜಿಂಟಾವೋ ಅವರು ಅನಾರೋಗ್ಯದಿಂದ ನರಳುತ್ತಿದ್ದಾರೆಯೇ ಅಥವಾ ಅವರನ್ನು ನಿವೃತ್ತಿಗೊಳಿಸಲಾಯಿತೇ ಮುಂತಾದ ಪ್ರಶ್ನೆಗಳಿಗೆ ಚೀನಾದಲ್ಲಿ ಉತ್ತರ ಸಿಗುವ ಸಾಧ್ಯತೆ ಇಲ್ಲ. ಹೇಗೂ ಜಿಂಟಾವೋ ಅವರನ್ನು ಪಕ್ಷದ ಸೆಂಟ್ರಲ್ ಕಮಿಟಿಯಲ್ಲಿ ಮುಂದುವರಿಸುವ ಸಾಧ್ಯತೆ ಇರಲಿಲ್ಲ. ಕ್ಷಿ ಅವರ ಪದಚ್ಯುತಿ ವದಂತಿಗಳ ಹಿಂದೆ ಜಿಂಟಾವೋ ಬೆಂಬಲಿಗರ ಕೈವಾಡವಿದೆ ಎಂಬ ವದಂತಿಗಳೆ ಈ ವಿಚಾರಕ್ಕೆ ಇಷ್ಟು ಮಹತ್ವ ಬರಲು ಕಾರಣ.
ಇದೇನೇ ಇದ್ದರೂ ಕಾಂಗ್ರೆಸ್ ಸಭೆಯ ನಂತರ ಕ್ಷಿ ಅವರು ಮತ್ತಷ್ಟು ಪ್ರಬಲರಾಗಿ ಹೊರಹೊಮ್ಮಿದ್ದಾರೆ. ಸರ್ವಾಧಿಕಾರಿ ಎಂದು ಕರೆಯಬಹುದಾದಷ್ಟು ಅವರು ಪ್ರಬಲರಾಗಿದ್ದಾರೆ. ಪಕ್ಷದ ಕಾಂಗ್ರೆಸ್ ಸಭೆ ಒಂದು ವಾರ ಕಾಲ ನಡೆದು ಇದೇ ಶನಿವಾರ ಮುಗಿದಿದೆ. ಕಾಂಗ್ರೆಸ್ ಕಾರ್ಯಕಲಾಪ ವರದಿ ಮಾಡಲು ಅವಕಾಶ ಇರಲಿಲ್ಲವಾದ್ದರಿಂದ ನಿಖರವಾಗಿ ಹೀಗೇ ಆಯಿತು ಎಂದು ಹೇಳಲು ಸಾಧ್ಯವಿಲ್ಲ. ಈಗ ಹೊರಬಿದ್ದಿರುವ ವರದಿಗಳ ಪ್ರಕಾರ ಚೀನಾ ಮುಂದಿನ ದಿನಗಳಲ್ಲಿ ದೇಶದ ಭದ್ರತೆ ಮತ್ತು ಸಮಗ್ರತೆಗೆ ಒತ್ತು ನೀಡಲಿದೆ. ಟಿಬೆಟ್‍ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನ ಸೈನಿಕರ ನಡುವೆ ಆದ ಸಂಘರ್ಷದ ಸಾಕ್ಷ್ಯ ಚಿತ್ರವನ್ನೇ ಸದಸ್ಯರು ವೀಕ್ಷಿಸಿದರೆಂದು ಹೇಳಲಾಗಿದೆ. ತಾನು ಮಾಡಿದ ಅತಿಕ್ರಮಣವನ್ನು ಸದಸ್ಯರು ಸಮರ್ಥಿಸಿಕೊಂಡರೆಂದೂ ಹೇಳಲಾಗಿದೆ. ಆದರೆ ಅಧಿಕೃತವಾಗಿ ಏನೂ ಪ್ರಕಟವಾಗಿಲ್ಲ. ಹಾಂಕಾಂಗ್ ಮತ್ತು ತೈವಾನ್ ಕುರಿತ ಬೆಳವಣಿಗೆಗಳನ್ನೂ ಸದಸ್ಯರಿಗೆ ವಿವರಿಸಲಾಗಿದೆ. ಹಾಂಕಾಂಗ್ ಈಗಾಗಲೇ ತನ್ನ ಸ್ವಾಧೀನದಲ್ಲಿದ್ದು ಅಲ್ಲಿನ ವಿದ್ಯಾರ್ಥಿ ಚಳವಳಿಯನ್ನು ನಿಭಾಯಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಮಾಡಲಾಗಿದೆ. ತೈವಾನ್ ವಿಚಾರದಲ್ಲಿ ಚೀನಾದ ಧೋರಣೆಯೇನೂ ಬದಲಾಗಿಲ್ಲ. ಕ್ಷಿ ಅವರು ಸಭೆಯಲ್ಲಿ ಮಾಡಿದ ಭಾಷಣದಲ್ಲಿಯೂ ತೈವಾನ್‍ನ ಪ್ರಸ್ತಾಪವಾಗಿದ್ದು ಶಾಂತಿ ಮಾರ್ಗದಲ್ಲಿಯೇ ಆ ಪ್ರದೇಶವನ್ನು ದೇಶದಲ್ಲಿ ವಿಲೀನಗೊಳಿಸಲಾಗುವುದು. ಅಗತ್ಯ ಬಿದ್ದರೆ ಸೇನಾ ಬಲ ಬಳಸಲಾಗುವುದು ಎಂದು ಕ್ಷಿ ಅವರು ಸಭೆಯಲ್ಲಿ ಮತ್ತೆ ಘೋಷಿಸಿದ್ದಾರೆ. ಆದರೆ ಯಾವಾಗ ಎನ್ನುವುದನ್ನು ಅವರು ಬಹಿರಂಗಮಾಡಿಲ್ಲ.
ಭಾರತದ ಗಡಿ ಅತಿಕ್ರಮಣವನ್ನು ಸಮರ್ಥಿಸಿಕೊಂಡಿರುವ ಚೀನಾ ಕಮ್ಯುನಿಸ್ಟ್ ಪಕ್ಷದ ನಿಲುವಿನ ಬಗ್ಗೆ ಅಂತಾರಾಷ್ಟ್ರೀಯವಾಗಿ ಯಾವುದೇ ರೀತಿಯ ಖಂಡನೆ ಕೇಳಿಬರುತ್ತಿಲ್ಲ. ಹಿಂದೆಯೂ ಹೀಗೆಯೇ ಆಗಿದೆ. ಆದರೆ ತೈವಾನ್ ವಿಚಾರದಲ್ಲಿ ಚೀನಾದ ನಿಲುವನ್ನು ಖಂಡಿಸುವ ದೇಶಗಳು ಲೆಕ್ಕವಿಲ್ಲ. ಅಂತಾರಾಷ್ಟ್ರೀಯ ಸಮುದಾಯ ಮತ್ತು ಪ್ರಬಲದೇಶಗಳು ಅನುಸರಿಸುತ್ತ ಬಂದಿರುವ ಈ ತಾರತಮ್ಯ ಖಂಡನೀಯ. ಭಾರತದ ವಿದೇಶಾಂಗ ಸಚಿವರು ಈ ಬಗ್ಗೆ ಪ್ರಬಲ ರಾಷ್ಟ್ರಗಳ ಗಮನ ಸೆಳೆದ ನಂತರವೂ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣುತ್ತಿಲ್ಲ.
ಕರೋನಾದಿಂದಾಗಿ ಮತ್ತು ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿಯಿಂದ ವಿಶ್ವದ ಇಂಧನ ಪೂರೈಕೆಯ ಮೇಲೆ ಆಗಿರುವ ಕೆಟ್ಟ ಪರಿಣಾಮಗಳು ಚೀನಾ ಆಡಳಿತಗಾರರಿಗೂ ದೊಡ್ಡ ಸವಾಲುಗಳನ್ನು ಒಡ್ಡಿವೆ. ಈ ಸವಾಲುಗಳನ್ನು ಎದುರಿಸಲು ಈವರೆಗೆ ಅನುಸರಿಸಿದ ಕ್ರಮಗಳನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ. ದೇಶದ ಅಭಿವೃದ್ಧಿ ಮಾರ್ಗವನ್ನು ಹತ್ತು ವರ್ಷಗಳ ಹಿಂದೆಯೇ ಡೆಂಗ್ ಕ್ಷಿಯಾಪಿಂಗ್ ರೂಪಿಸಿದ್ದು ಅದರಂತೆ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲಾಗಿದೆ. ಈ ದಿಸೆಯಲ್ಲಿ ಸೇವಾ ವಲಯದ ಜೊತೆಗೆ ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಿರುವುದರಿಂದ ದೇಶ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಿದೆ. ಕರೋನಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಂದ ಚೀನಾ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ನಿರುದ್ಯೋಗ ಹೆಚ್ಚಿದೆ, ಬೆಲೆಗಳು ಏರಿವೆ. ಪರಿಸ್ಥಿತಿ ಸುಧಾರಿಸಲು ಚೀನಾ ಹೊಸ ದಾರಿಗಳನ್ನು ಹುಡುಕುವತ್ತ ಹೆಜ್ಜೆ ಹಾಕಲಿದೆ. ಈ ಹಿಂದೆ ಯೂರೋಪಿನ ಹಲವು ದೇಶಗಳಲ್ಲಿ ಹಾಗೆಯೇ ಭಾರತದ ಸುತ್ತ ಇರುವ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ, ಮಾಲ್ಡೀವ್ಸ್ ಮುಂತಾದ ದೇಶಗಳಲ್ಲಿನ ಪ್ರಮುಖ ಯೋಜನೆಗಳಲ್ಲಿ ಚೀನಾ ಬಂಡವಾಳ ಹೂಡಿದೆ. ಆದರೆ ಆ ಯೋಜನೆಗಳು ನಿರೀಕ್ಷಿತಮಟ್ಟದಲ್ಲಿ ಜಾರಿಯಾಗುತ್ತಿಲ್ಲ. ಹೀಗಾಗಿ ಆ ಹಣ ನಿರುಪಯುಕ್ತವಾಗಿದೆ. ಈ ಅಂಶವನ್ನು ಚೀನಾ ಗಮನಿಸಿದೆ. ಗಮನಿಸಿದ ನಂತರವೂ ಚೀನಾ ಈ ವಿಚಾರದಲ್ಲಿ ನೀತಿ ಬದಲಿಸಿಲ್ಲ. ಅಂದರೆ ಭಾರತದ ನೆರೆಯ ದೇಶಗಳ ಜೊತೆ ಚೀನಾ ಆರ್ಥಿಕ ಸಂಬಂಧಗಳನ್ನು ಮುಂದುವರಿಸಲಿದೆ ಎಂದಾಯಿತು.
ಇದು ಒಂದು ರೀತಿಯಲ್ಲಿ ಭಾರತದ ಸುತ್ತಲ ದೇಶಗಳನ್ನು ತನ್ನ ಕಡೆಗೆ ಸೆಳೆದುಕೊಂಡು ಭಾರತವನ್ನು ಒಂಟಿಯನ್ನಾಗಿಸುವುದು ಚೀನಾದ ಉದ್ದೇಶ ಇರಬಹುದು. ಇದೊಂದು ರೀತಿಯಲ್ಲಿ ಕಿರುಕುಳ. ಸದಾ ಭಾರತವನ್ನು ತುದಿಗಾಲಲ್ಲಿ ನಿಲ್ಲಿಸುವುದು ಚೀನಾ ಉದ್ದೇಶ. ಭಾರತ ಹಲವು ವರ್ಷಗಳಿಂದ ಈ ಕಿರುಕುಳನ್ನು ಸಹಿಸಿಕೊಳ್ಳುತ್ತ ಬಂದಿದೆ. ಇದೊಂದು ಸವಾಲು ಎಂದು ಭಾರತ ಸ್ವೀಕರಿಸಿ ನೆರೆಯ ದೇಶಗಳ ಮನಸ್ಸು ಗೆಲ್ಲಬೇಕು. ಹಣವೇ ಎಲ್ಲವೂ ಅಲ್ಲ ಎನ್ನುವುದನ್ನು ಆ ದೇಶಗಳ ನಾಯಕರಿಗೆ ಮನವರಿಕೆ ಮಾಡಿಕೊಡಬೇಕು. ಶ್ರೀಲಂಕಾ ದೀವಾಳಿಯಾದಾಗ ಭಾರತ ತತ್‍ಕ್ಷಣ ನೆರವಿಗೆ ಧಾವಿಸಿತು. ಚೀನಾ ಆಮೊದಲು ಸಾಕಷ್ಟು ಸಾಲಕೊಟ್ಟಿದ್ದರೂ ಸಂಕಷ್ಟದಲ್ಲಿ ನೆರವಿಗೆ ಬಂದದ್ದು ಭಾರತವೇ.
ಪಾಕಿಸ್ತಾನದಲ್ಲಿಯೂ ಚೀನಾ ಸಾಕಷ್ಟು ಬಂಡವಾಳ ಹೂಡಿದೆ. ಶ್ರೀಲಂಕಾಕ್ಕೆ ಬಂದ ಗತಿಯೇ ಒಂದು ದಿನ ಪಾಕಿಸ್ತಾನಕ್ಕೂ ಬರಬಹುದು. ಅದನ್ನು ತಿಳಿದು ಭಾರತದ ಜೊತೆ ಮೈತ್ರಿ ಸಾಧಿಸುವತ್ತ ಅಲ್ಲಿನ ನಾಯಕರು ಮುಂದಾಗಬೇಕು. ಆದರೆ ಅಂಥ ದೂರದೃಷ್ಟಿಯಿರುವ ನಾಯಕತ್ವ ಅಲ್ಲಿಯೇ ಹುಟ್ಟಬೇಕು. ಚೀನಾದಲ್ಲಿಯೂ ಭಾರತ ಪರವಾದಿ ನಾಯಕತ್ವ ಇಲ್ಲ, ಹಾಗೆಯೇ ನೆರೆರಾಷ್ಟ್ರಗಳಲ್ಲಿಯೂ ಇಲ್ಲದಿರುವುದು ಒಂದು ದುರಂತ.
ಸಮಾಜವಾದದ ಹೊಸ ಯುಗಕ್ಕೆ ಚೀನಾ ಪ್ರವೇಶಿಸಿದೆ ಎಂದು ಕ್ಷಿ ಜಿನ್‍ಪಿಂಗ್ ಘೋಷಿಸಿದ್ದಾರೆ. ಚೀನಾಕ್ಕೆ ನೂರು ವರ್ಷ ತುಂಬುವ ವೇಳೆಗೆ (1849- 2049) ವಿಶ್ವದಲ್ಲಿ ಅತ್ಯಂತ ಬಲಶಾಲಿ ಮತ್ತು ಅತ್ಯಧಿಕ ಪ್ರಮಾಣದ ಅಭಿವೃದ್ಧಿ ಸಾಧಿಸಿದ ದೇಶವಾಗಲಿದೆ ಎನ್ನುವ ಆಶಯ ಕ್ಷಿ ಅವರದ್ದು. ಈ ದಿಸೆಯಲ್ಲಿ ಕ್ಷಿ ಅವರು ಆಕ್ರಮಣಕಾರಿ ಮಾರ್ಗವನ್ನು ತುಳಿಯಲಿದ್ದಾರೆ.
ಬೆಂಗಳೂರು : 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.…
ಮುಂಬೈ : ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್…
ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ…
ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ…
ಸ್ವಿಟ್ಜರ್ಲೆಂಡ್: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…
ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…