ಎಡಿಟೋರಿಯಲ್

ಚೀನಾದಿಂದ ಒದಗುವ ಅವಕಾಶ ಬಾಚಿಕೊಳ್ಳಲು ನಾವೆಷ್ಟು ಸನ್ನದ್ಧ?

ರಾಜಾರಾಂ ತಲ್ಲೂರು

ಕೋವಿಡ್ ಕಾಲದಲ್ಲಿ ಚೀನಾ ಜಗತ್ತಿನಿಂದ ದೂರವಾಗಿ ಏಕಾಕಿಯಾಗಿದ್ದಾಗ, ಔಷಧಿ ಉದ್ದಿಮೆ, ಔಷಧಿ ಕಚ್ಚಾ ವಸ್ತುಗಳ(API) ರಂಗದಲ್ಲಿ ಪಾರಮ್ಯ ಸಾಧಿಸುವುದಕ್ಕೆ ಭಾರತಕ್ಕೊಂದು ಅದ್ಭುತ ಅವಕಾಶ ಇತ್ತು. ಆದರೆ, ಸನ್ನಿವೇಶ ಸಹಜವಾದ ಸಣ್ಣ ವೃದ್ಧಿ ಬಿಟ್ಟರೆ ಭಾರತಕ್ಕೆ ಗಮನಾರ್ಹವಾದ ಬೆಳವಣಿಗೆ ಸಾಧ್ಯವಾಗಲಿಲ್ಲ ಎಂಬುದು ವಾಸ್ತವ. ಏಕೆಂದರೆ, ಜಗತ್ತಿನ ಫಾರ್ಮಸಿ ಎಂದೇ ಹೆಸರಾಗಿರುವ ಭಾರತದಲ್ಲಿ ಜಗತ್ತಿನ ಒಟ್ಟು ಔಷಧಿಗಳಲ್ಲಿ ಶೇ.10 ನಮ್ಮಲ್ಲಿಯೇ ತಯಾರಾಗುತ್ತದೆ. ಆದರೆ, ಅದಕ್ಕೆ ಬೇಕಾದ ಕಚ್ಛಾ ಮಾಲುಗಳಿಗೆ ಸಂಬಂಧಿಸಿದಂತೆ, ಭಾರತವು ಈವತ್ತಿಗೂ ಶೇ.೮೫ರಷ್ಟು ಚೀನಾದ ಮೇಲೆ ಅವಲಂಬಿತವಾಗಿದೆ.

ಈ ಒಂದು ಉದಾಹರಣೆ, ತಳಮಟ್ಟದಲ್ಲಿ ಭಾರತದ ಸ್ಥಿತಿಯತ್ತ ಬೊಟ್ಟು ಮಾಡುತ್ತದೆ. ಈಗ ಈ ಸುದ್ದಿ ಯಾಕಪ್ಪಾ ಬಂತು ಎಂದರೆ, ಚೀನಾದಲ್ಲಿ ಜನಸಂಖ್ಯೆ ವೇಗವಾಗಿ ಕಡಿಮೆ ಆಗುತ್ತಿದ್ದು, ಭಾರತ ಜನಸಂಖ್ಯೆಯಲ್ಲಿ ನಂಬರ್ ಒನ್ ದೇಶವಾಗುವತ್ತ ಸಾಗಿದೆ. ಚೀನಾದಲ್ಲಿ ಉತ್ಪಾದಕ ಪ್ರಾಯವರ್ಗದಲ್ಲಿ ಬರುವವರ ಸಂಖ್ಯೆ ವೇಗವಾಗಿ ಇಳಿಯುತ್ತಿದೆ, ಹಾಗಾಗಿ ಎಳೆಯ ಉತ್ಪಾದಕ ವರ್ಗದ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವ ಭಾರತಕ್ಕೆ ಈಗ ಸುವರ್ಣಾವಕಾಶ, ಬಲು ಬೇಗ ಭಾರತ ಚೀನಾವನ್ನು ಹಿಂದಿಕ್ಕಲು ಸಾಧ್ಯವಾಗಲಿದೆ ಎಂಬೆಲ್ಲ ಚರ್ಚೆಗಳು ಆರಂಭಗೊಂಡಿವೆ.

ಆದರೆ, ಈ ಚರ್ಚೆಗಳು ಒಂದು ವಿಷಯವನ್ನು ಮರೆತೇ ನಡೆಯುತ್ತಿವೆ. ಅದೇನೆಂದರೆ, ಚೀನಾದ ಪ್ರಸ್ತುತ GDP 18 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು. ಅಂದರೆ, ಭಾರತದ ಇಂದಿನ ಒಟ್ಟು GDPಯ ಆರು ಪಟ್ಟು ಹೆಚ್ಚು. ಇದು 2027ರ ಹೊತ್ತಿಗೆ, ಎಲ್ಲವೂ ಸುಸೂತ್ರವಾಗಿ ಸಾಗಿದರೆ, ಭಾರತ GDP ಗಿಂತ ಅಬ್ಬಬ್ಬಾ ಎಂದರೆ ಐದು ಪಟ್ಟು ಗಾತ್ರಕ್ಕೆ ಇಳಿಯಲಿದೆ ಎಂಬುದು ಪರಿಣತರ ಲೆಕ್ಕಾಚಾರ. ಕಾಗದದ ಮೇಲೆ ಭಾರತದ ಮಟ್ಟಿಗೆ ಎಲ್ಲವೂ ಸುಂದರ-ಸುಗಮವಾಗಿ ಕಾಣಿಸುತ್ತಿದೆ. ಏಕೆಂದರೆ, ಇಲ್ಲಿನ ತಲಾ ಆದಾಯ ಇನ್ನೂ ಕಡಿಮೆ ಇದ್ದು, ವಿಶಾಲವಾದ ಮಧ್ಯಮ ವರ್ಗ ಮತ್ತದರ ಉತ್ಪಾದಕ ಪ್ರಾಯವರ್ಗದ ಜನಸಂಖ್ಯೆ ಎಲ್ಲರ ಗಮನ ಸೆಳೆಯುತ್ತಿದೆ. ಅದೇ ವೇಳೆಗೆ ಚೀನಾದಲ್ಲಿ ಸರ್ಕಾರವೇ ಉದ್ದಿಮೆಗಳ ಮಾಲೀಕನಾಗಿದ್ದರೆ, ಭಾರತದಲ್ಲಿ ಬಿರುಸಿನ ಖಾಸಗೀಕರಣಕ್ಕೆ ಸರ್ಕಾರ ಚಾಲನೆ ನೀಡಿದೆ. ಇದೆಲ್ಲದಕ್ಕೂ ಕಲಶ ಇಟ್ಟಂತೆ, ಚೀನಾ ಜಾಗತಿಕವಾಗಿ ಏಕಾಂಗಿಯಾಗಿಬಿಟ್ಟಿದೆ. ಈ ಯೋಚನೆಗಳ ಆಧಾರದಲ್ಲೇ ವಾಣಿಜ್ಯ ರಂಗದಲ್ಲಿ ಚೀನಾವನ್ನು ಹಿಂದಿಕ್ಕುವ ಚರ್ಚೆಗಳು ವೇಗ ಪಡೆಯುತ್ತಿವೆ.

ಇದನ್ನು ತಳಮಟ್ಟಕ್ಕಿಳಿದು ನೋಡಿದರೆ, ಭಾರತದಲ್ಲಿ ಜನಸಂಖ್ಯೆಯೇನೋ ಹೆಚ್ಚಾಗುತ್ತಿದೆ. 2064ರ ಹೊತ್ತಿಗೆ ಭಾರತದ ಜನಸಂಖ್ಯೆ 170 ಕೋಟಿಗೆ ತಲುಪಲಿದೆ. ಅಂದರೆ, ಆ ಹೊತ್ತಿಗೆ ಭಾರತದ ಜನಸಂಖ್ಯೆ ಚೀನಾದ ಜನಸಂಖ್ಯೆಗಿಂತ ಶೇ.50ರಷ್ಟು ಹೆಚ್ಚಾಗಲಿದೆಯಂತೆ. ಆದರೆ, ಇಲ್ಲಿನ ಮೂಲಸೌಕರ್ಯಗಳ ಗುಣಮಟ್ಟ, ಶಿಕ್ಷಣದ ಗುಣಮಟ್ಟ, ಸರ್ಕಾರಿ ಕೆಂಪುಪಟ್ಟಿ, ಬಾಟಲ್ ನೆಕ್‌ಗಳು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಆರ್ಥಿಕ ಅಸಮಾನತೆ, ಕೋಮು ವಿಭಜನೆಯ ರಾಜಕೀಯ ಇವೆಲ್ಲವೂ ಚೀನಾವನ್ನು ಭಾರತ ಹಿಂದಿಕ್ಕುವ ಚರ್ಚೆಯಲ್ಲಿ ಕಾಣೆಯಾಗಿವೆ. ಅವಕಾಶಗಳ ಎತ್ತು ಏರಿಗೆ ಎಳೆದರೆ, ಈ ಅಪಾಯಗಳು ದೇಶವನ್ನು ನೀರಿಗೆ ಎಳೆಯುತ್ತಿವೆ. ಉತ್ಪಾದಕತೆಯಲ್ಲಿ ಭಾರತ ಸಾಗುವ ದಾರಿ ಬಹಳ ದೂರದ್ದು. ಭಾರತ ತನ್ನ GDPಯ ಶೇ.14ನ್ನು ಉತ್ಪಾದನಾ ಕ್ಷೇತ್ರದಲ್ಲಿ ಗಳಿಸುತ್ತಿದ್ದರೆ, ಚೀನಾದ GDPಯಲ್ಲಿ ಉತ್ಪಾದನಾ ಕ್ಷೇತ್ರದ ಹಾಲಿ ಪಾಲು ಶೇ.27 ಅವರಿಗೆ ಜನಸಂಖ್ಯೆಯಲ್ಲಿ ಇಳಿಕೆಯ ಕಾರಣದಿಂದಾಗಿ ಆರ್ಥಿಕ ಬೆಳವಣಿಗೆ, 2030ರ ಹೊತ್ತಿಗೆ ಪ್ರತೀ ವರ್ಷ ಶೇ.2-3 ಇಳಿಯತೊಡಗುತ್ತದೆ ಎಂಬುದು ಜಾಗತಿಕವಾಗಿ ಆರ್ಥಿಕ ಪರಿಣತರ ನಿರೀಕ್ಷೆ. ಹಾಗಾಗಿ ಭಾರತ ಈಗ ದಿಕ್ಕು ತಪ್ಪಿದರೆ ಬೆಳೆದು ನಿಲ್ಲುವ ಒಂದು ಸುವರ್ಣಾವಕಾಶವನ್ನು ಕಳೆದುಕೊಳ್ಳಲಿದೆ ಎಂಬುದೂ ಸತ್ಯ.

ಇಂತಹ ಸನ್ನಿವೇಶದಲ್ಲಿ ಭಾರತ ನಿಜಕ್ಕೂ ಮಾರುಕಟ್ಟೆಯಲ್ಲಿ ಮುನ್ನುಗ್ಗಬೇಕಿದ್ದರೆ, ಇಲ್ಲಿನ ಮಾರುಕಟ್ಟೆಯನ್ನು ವಿದೇಶೀ ಹೂಡಿಕೆಗಳಿಗೆ ತೆರೆದು, ಇಲ್ಲಿನ ಸವಲತ್ತು-ಕಚ್ಚಾಮಾಲು-ಸೋವಿ ದರದ ಕಾರ್ಮಿಕರ ಶ್ರಮಗಳನ್ನು ವಿದೇಶಿ ಕಂಪೆನಿಗಳಿಗೆ ನುಂಗಿ ನೊಣೆಯಲು ಅವಕಾಶ ಕೊಡುವುದನ್ನು ಬಿಟ್ಟು, ದೇಶದ ಒಳಗೆ, ಜಗತ್ತಿಗೆ ರಫ್ತು ಮಾಡಬಲ್ಲ ಗುಣಮಟ್ಟದ ಉದ್ಯಮಗಳನ್ನು ಉತ್ಪಾದನೆಗಳನ್ನು ಬೆಳೆಸಲು ಮುಂದಾಗಬೇಕು. ಹಾಗೆಂದಾಕ್ಷಣ ಈಗ ತಕ್ಷಣಕ್ಕೆ ಕಾಣಿಸುವುದು ಸರ್ಕಾರದ ಇಬ್ಬರು ಗುಜರಾತಿ ಗೆಳೆಯರು ಮಾತ್ರ. ಇದು ಈಗಾಗಲೇ ಸಂಪತ್ತಿನ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಮುಂದಿನ ಹತ್ತು-ಇಪ್ಪತ್ತು ವರ್ಷಗಳಿಗೆ ಸೂಕ್ತವಾದ ಯೋಜನೆಯೊಂದನ್ನು ರೂಪಿಸಿಕೊಂಡು, ಅದಕ್ಕೆ ತಕ್ಕ ವಾತಾವರಣವನ್ನು ಸಾಮಾಜಿಕವಾಗಿ ನಿರ್ಮಾಣ ಮಾಡಿಕೊಂಡು, ಅದಕ್ಕನುಗುಣವಾಗಿ ಕನಿಷ್ಠ ೧೦-೧೫ ಜಾಗತಿಕ ದರ್ಜೆಯ ಬ್ರ್ಯಾಂಡ್‌ಗಳನ್ನು ದೇಶದಲ್ಲಿ ಸನ್ನದ್ಧಗೊಳಿಸಿಕೊಳ್ಳದಿದ್ದರೆ, ಚೀನಾದ ಜೊತೆ ಪೈಪೋಟಿ ಕನಸಿನ ಮಾತು. ಇಷ್ಟೇ ಅಲ್ಲ, ಕೇವಲ ಜನಸಂಖ್ಯೆಯೇ ದೇಶವನ್ನು ಆರ್ಥಿಕವಾಗಿ ಉದ್ಧಾರ ಮಾಡಲಿದೆ ಎಂದು ಕಾಯುವ ಹೊತ್ತಿಗೆ, ಭಾರತದ ಜನಸಂಖ್ಯೆ ಕೂಡ ಇನ್ನು ಕೆಲವೇ ವರ್ಷಗಳಲ್ಲಿ ಚೀನಾದಂತೆಯೇ “ವೃದ್ಧಾಪ್ಯ”ದ ಹೊಸ್ತಿಲಿಗೆ ತಲುಪಲಿದೆ ಎಂಬುದನ್ನೂ ಮರೆಯುವಂತಿಲ್ಲ.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

3 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

5 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago