‘ಮೂವತ್ತು ನಲ್ವತ್ತು ಹುಡುಗರಿಗೆ ಫುಡ್ ಪಾಯ್ಸನ್ ಆಗಿ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಬರ್ತಾ ಇದ್ದಾರೆ. ನೀವು ಬೇಗ ಹೋಗಿ ಸರ್’ ಕಂಟ್ರೋಲ್ ರೂಂನ ಕರೆ.
‘ಹೇಗಿದೆ ಅವರ ಕಂಡಿಷನ್. ಏಕಾಯ್ತು? ಹೇಗಾಯ್ತು?’
‘ಸೀರಿಯಸ್ ಅಂತ ಹೇಳ್ತಿದ್ದಾರೆ. ಏಳೆಂಟು ಮಕ್ಕಳನ್ನು ICU ಗೆ ಹಾಕಿದ್ದಾರಂತೆ. ಆಸ್ಪತ್ರೆ ಹತ್ತಿರ ಸಿಕ್ಕಾಪಟ್ಟೆ ಜನ ಸೇರ್ತಿದ್ದಾರೆ. ಕಮೀಷನರ್ ಸಾಹೇಬ್ರೂ ಬರ್ತಿದ್ದಾರೆ. ನೀವು ಬೇಗ ಹೊರಡಿ’
‘on the way ಇದ್ದೇನೆ. ಆ ಸ್ಕೂಲು ಯಾವುದು? ಎಲ್ಲಿ ಬರುತ್ತೆ? ಹೇಗಾಯ್ತಂತೆ?’
‘ಕೈಲಾಸಪುರಂ ಗೌರ್ಮೆಂಟು ಸ್ಕೂಲು. ಅಮೆರಿಕದ ಹಾಲಿನ ಪುಡಿ ಕೊಡ್ತಾರಲ್ಲಾ ಸಾರ್? ಅದನ್ನ ಮಾಮೂಲಿನಂತೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಕೊಟ್ಟಿದ್ದಾರೆ, ಈಗ ಮಧ್ಯಾಹ್ನ ವಾಂತಿ ಭೇದಿ ಶುರುವಾಗಿದೆ. ಅದೇ ಕಾರಣವೋ ಬೇರೆ ಏನಾದ್ರೂ ರೀಸನ್ ಇದೆಯೋ ಗೊತ್ತಿಲ್ಲ. ಎಲ್ಲ ಮಕ್ಕಳೂ ಕೈಲಾಸಪುರಂ ಸ್ಲಂ ಏರಿಯಾದವರು. ಕೂಲಿ ಕಾರ್ಮಿಕರ ಮಕ್ಕಳು. ಜನ ಆಸ್ಪತ್ರೆಯತ್ತ ನುಗ್ಗಿ ನುಗ್ಗಿ ಬರ್ತಾ ಇದ್ದಾರಂತೆ. ನೀವು ಬೇಗ ಹೊರಟುಬಿಡಿ’
‘ಆಗಲೇ ಹೊರಟಿದ್ದೇನೆ ಅಂದೆನಲ್ಲಪ್ಪಾ’
‘ವೋ ನೀವೂನು. ಹೊರಡೋದೆಲ್ಲಿ ಬಂತು? ಇನ್ನೂ ಫೋನಲ್ಲೇ ಮಾತಾಡ್ತಿದ್ದೀರಿ’ ಕಂಟ್ರೋಲ್ ರೂಂ ಅರಸುವಿನ ದನಿಯಲ್ಲಿ ಚಿಕ್ಕ ವ್ಯಂಗ್ಯವಿತ್ತು.
ಆಗಿನ್ನೂ ಊಟಕ್ಕೆಂದು ಮನೆಗೆ ಬಂದಿದ್ದೆ. ಜೀಪಿಗಾಗಿ ಕಾಯುತ್ತಿದ್ದೆ. ವೈರ್ ಲೆಸ್ಸಿನಲ್ಲೇ ವಿಚಾರಿಸುತ್ತಾ ಹೊರಟರೆ ಇಡೀ ನಗರಕ್ಕೆ ಸಂಭಾಷಣೆ ಕೇಳಿಸುತ್ತೆ. ಜೀಪ್ ಬರುವುದರೊಳಗೆ ಕಂಟ್ರೋಲ್‌ಗೆ ಕಾಲ್ ಮಾಡಿದ್ದೆ.
ಅಷ್ಟರಲ್ಲೇ ಜೀಪೂ ಬಂತು. ಸುದ್ದಿ ತಿಳಿದ ತಕ್ಷಣ ಮಿಂಚಿನ ವೇಗದಲ್ಲಿ ಬಂದರು ಎಂದು ಬರೆಯುತ್ತಾರಲ್ಲಾ ಹಾಗೆ ದೌಡಾಯಿಸಿದೆ. ಇಡೀ ಕೆ.ಆರ್.ಆಸ್ಪತ್ರೆ ಹೆಂಗಸರು ಮಕ್ಕಳಿಂದ ತುಂಬಿ ಹೋಗಿದೆ. ಉದ್ರಿಕ್ತ ಜನ ಆಕ್ರೋಶದಿಂದ ಕೂಗಾಡುತ್ತಿದ್ದಾರೆ. ಒಬ್ಬರೂ ಒಳ ಹೋಗದಂತೆ ಪೊಲೀಸರು ಕೋಟೆ ಕಟ್ಟಿ ನಿಂತಿದ್ದಾರೆ.
‘ನಮ್ಮ ಮಕ್ಕಳನ್ನು ನೋಡ್ಬೇಕು. ನಮ್ಮ ಸಂಕಟ ಗೊತ್ತಾಗೊಲ್ವಾ? ಏಕೆ ತಡಿತೀರಿ ನಮ್ಮುನ್ನಾ’ ಎಂದು ಆವೇಶಭರಿತ ಹೆಂಗಸರು, ಗಂಡಸರು ಪೊಲೀಸರ ಮೇಲೇ ಮುಗಿ ಬಿದ್ದಿದ್ದರು.
ಅದೇ ವೇಳೆಗೆ ಕಮೀಷನರ್ ಅವರೂ ಬಂದರು. ‘ಎಲ್ಲರಿಗೂ ಹೊಟ್ಟೆ ಕ್ಲೀನ್ ಮಾಡಿ ವಾಂತಿ ಮಾಡಿಸ್ತಾ ಇದ್ದಾರೆ. ಈ ಟೈಮಲ್ಲಿ ಯಾರೂ ಹೋಗಬೇಡಿ. ವಾರ್ಡಿಗೆ ಕರೆದುಕೊಂಡು ಬಂದಾಗ ಆ ಮಕ್ಕಳ ಹೆಸರು ಹೇಳ್ತೀವಿ ಒಬ್ಬೊಬ್ಬರಾಗಿ ಒಳಗೆ ಹೋಗಿ ನೋಡಿ ಬರುವಿರಂತೆ. ಡಾಕ್ಟರುಗಳು ಅವರವರ ಕೆಲಸ ಮಾಡುವುದಕ್ಕೆ ಬಿಡಿ’ ಕಮೀಷನರ್ ಅವರ ಮಾತು ಗಾಳಿಗೆ ಹೋಯಿತು. ‘ಒಂದೇ ಒಂದು ಸಾರಿ ನೋಡ್ಕಂಡು ಬರ್ತೀವಿ ಒಳೀಕೆ ಬುಡಿ’ ಒತ್ತಾಯ ಹೆಚ್ಚಿತು. ಈ ನಡುವೆ ಆಸ್ಪತ್ರೆಯೊಳಕ್ಕೆ ಹೇಗೋ ನುಸುಳಿ ಹೋಗಿ ಚಿಕಿತ್ಸೆ ನೀಡುತ್ತಿದ್ದ ಜಾಗದಲ್ಲಿ ರಂಪಾಟ ಮಾಡಿದ ಹತ್ತಾರು ಜನಕ್ಕೆ ಲಾಠಿ ರುಚಿ ತೋರಿಸಿ ಪೊಲೀಸರು ಎಳೆತಂದರು. ಇದು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿತು. ‘ನಮ್ಮ ಮಕ್ಕಳು ಸಾಯ್ತಾ ಇದ್ದಾರೆ ಅಂದ್ರೆ ನಮಿಗೇ ಹೊಡಿತೀರಾ ಸಾಮೀ’ ಎಂಬ ಆಕ್ರಂದನ ಆಕ್ರೋಶ ಭುಗಿಲೆದ್ದಿತು.
ಇಂಥ ಸಂದರ್ಭದಲ್ಲಿ ಪೊಲೀಸರಿರಲಿ ಯಾರ ಮಾತನ್ನೂ ಜನ ಕೇಳುವುದಿಲ್ಲ. ಕಾರ್ಪೊರೇಟರ್ ಅಥವಾ ಎಂಎಲ್‌ಎ ಇದ್ದರೆ ಅವರ ಮಾತು ಕೊಂಚ ಕೇಳಬಹುದು. ಆದರೆ ಸಮಾಧಾನ ಹೇಳಬಲ್ಲ ಯಾರೊಬ್ಬ ಮುಖಂಡರೂ ಕಾಣುತ್ತಿಲ್ಲ. ‘ಕಾರ್ಪೊರೇಟರುಗಳು, ಏರಿಯಾ ಮುಖಂಡರನ್ನು ಕರೆಸಿದರೆ ಒಳ್ಳೆಯದು ಸಾರ್. ಅವರ ಮಾತನ್ನು ಇವರು ಕೇಳ್ತಾರೆ’ ಎಂದು ಕಮೀಷನರಿಗೆ ಹೇಳಿದೆ.
ಅಲ್ಲಿದ್ದ ನಾಲ್ಕಾರು ಅಧಿಕಾರಿಗಳು ಒಮ್ಮೆಲೇ ನನ್ನ ಮೇಲೆ ಮುಗಿಬಿದ್ದರು. ಕಿರಿಯ ಅಧಿಕಾರಿಯಾದ ನಾನು ಕಮೀಷನರೊಂದಿಗೆ ಮಾತಾಡಿದ್ದು ಕೆಲವರಿಗೆ ತಲೆಹರಟೆಯಂತೆ ಕಾಣಿಸಿತು.
‘ಅವರೇಕೆ ಬರಬೇಕು? we shall not give them undue importance.they take advantage of this ಎಂದೆಲ್ಲ ಆಕ್ಷೇಪಿಸಿದರು.
‘ರಾಜಕಾರಣಿಗಳು ಅಂದ್ರೆ ಅಷ್ಟು ಕಳಪೆಯಲ್ಲ. ಜನರ ಕಷ್ಟ ಸುಖಕ್ಕೆ ಸ್ಪಂದಿಸಿರುತ್ತಾರೆ ಸಾರ್. ರಾತ್ರೋ ರಾತ್ರಿ ಜನಗಳಿಗಾಗಿ ಪೊಲೀಸ್ ಸ್ಟೇಷನ್ನು, ಆಸ್ಪತ್ರೆ, ರೆವಿನ್ಯೂ ಆಫೀಸು ಅಂತೆಲ್ಲ ಓಡಾಡಿರುತ್ತಾರೆ. ಕಾಂಟ್ಯಾಕ್ಟ್ ಚೆನ್ನಾಗಿರುತ್ತೆ. ಅವರು ಬಂದು ಸಮಾಧಾನ ಹೇಳಿದರೆ ಜನ ಕೇಳ್ತಾರೆ’ ಅಂದೆ, ದನಿ ಎತ್ತರಿಸಿ.
‘ಹರಿಕತೆ ಬೇಡ. ಸುಮ್ಮನೆ ನಿಂತ್ಕೊಳ್ರೀ’ ಡಿಸಿಪಿಯೊಬ್ಬರು ಗದರಿದರು. ನನಗೂ ತಡೆಯಲಿಲ್ಲ, ‘ಅಕಸ್ಮಾತ್ ಡೆತ್ ಗಿತ್ ಆದರೆ ಪರಿಸ್ಥಿತಿ ಹೀಗೇ ಇರೊಲ್ಲಾ ಸಾರ್ ಅದಕ್ಕೆ ಹೇಳಿದೆ’ ಪೆಚ್ಚುದನಿಯಲ್ಲಿ ಅಂದು ಸುಮ್ಮನೆ ನಿಂತೆ.
ಕಮೀಷನರ್ ಡಾ.ಕೃಷ್ಣಮೂರ್ತಿಯವರು ‘ಇರಲಿ ಕರೆಸ್ರೀ. ಅವರುಗಳು ಬಂದ್ರೆ ತಪ್ಪೇನಿಲ್ಲ. ನಾವಾಗಿ ಕರೆಸೋದ್ರಿಂದ ಜವಾಬ್ದಾರಿಯುತವಾಗಿ ಇರ್ತಾರೆ ಬಿಡಿ’ ಎಂದರು.
ಅವರೇ ಹೇಳಿದ ಮೇಲೆ ಮತ್ತೇನು? ತಕ್ಷಣ ಕಾರ್ಪೊರೇಟರುಗಳ ಮನೆಗೆ ಫೋನ್ ಮಾಡಿಸಿದೆವು. ಜನಗಳ ನೇರ ಸಂಪರ್ಕ ಇರುವ ಸುತ್ತಮುತ್ತಲಿನ ಏರಿಯಾ ಮುಖಂಡರು, ಮಾಜಿ ಕಾರ್ಪೊರೇಟರುಗಳಿಗೂ ಕರೆ ಮಾಡಿ ವಿನಂತಿಸಿದೆವು. ಅನೇಕರು ತಕ್ಷಣ ಬಂದರು. ಅವರವರೇ ಜವಾಬ್ದಾರಿ ತೆಗೆದುಕೊಂಡು ಜನರನ್ನು ಸಂತೈಸಿದರು. ಪರಿಸ್ಥಿತಿ ಎಷ್ಟೋ ಸುಧಾರಿಸುತ್ತಿತ್ತು.
ಅಷ್ಟರಲ್ಲಿ ನಾಲ್ಕು ಜನ ಮಕ್ಕಳು ಸತ್ತೇಹೋದರಂತೆ ಎಂಬ ಸುದ್ದಿ ಕಾಡ್ಗಿಚ್ಚಾಗಿ ಹರಡಿತು. ಜನ ಉದ್ರಿಕ್ತರಾದರು. ಕೈ ಕೈ ಮಿಲಾಯಿಸುವ ಪರಿಸ್ಥಿತಿ. ಯಾರ ಮೇಲಾದರೂ ಹಲ್ಲೆ ಮಾಡಿದರೂ ಸರಿ ಆಸ್ಪತ್ರೆಯೊಳಕ್ಕೆ ನುಗ್ಗಲು ಜನ ಸಿದ್ಧರಾದರು. ಆ ವೇಳೆಗಾಗಲೇ ನಾಲ್ಕಾರು ಬಾಲಕರ ಹೊಟ್ಟೆ ಸ್ವಚ್ಛಗೊಳಿಸಿ ವಾರ್ಡಿಗೆ ಹಾಕಿದ್ದರು.
‘ಹೀಗೇ ಒಬ್ಬೊಬ್ಬರನ್ನೂ ವಾರ್ಡಿಗೆ ಹಾಕುತ್ತಿದ್ದೇವೆ, ಈಗ ವಾರ್ಡಿಗೆ ಹಾಕಿರುವ ಮಕ್ಕಳನ್ನು ನೋಡಿ ಬರಲು ಮನೆಯವರು ಒಬ್ಬೊಬ್ಬರೇ ಹೋಗಿ’ ಎಂದು ಹೇಳಿದೆವು. ಅವರೊಂದಿಗೆ ನಾಲ್ಕು ಜನ ಮುಖಂಡರನ್ನೂ ಜೊತೆ ಮಾಡಿ ಕಳಿಸಿದೆವು. ಅವರು ಹೋಗಿ ಯಾರಾದರೂ ಸತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿ ಬಂದು ಹೇಳಲಿ ಎಂದು. ‘ಈಗ ವಾರ್ಡಿಗೆ ಹೋಗಿ ನೋಡಿಕೊಂಡು ತಕ್ಷಣ ವಾಪಸ್ ಬರಬೇಕು’ ಎಂಬ ಷರತ್ತು ಹಾಕಿ ಒಂದು ಬ್ಯಾಚ್ ಕಳಿಸಿದೆವು. ಈ ಉಪಾಯ ಫಲಿಸಿತು. ಹೊರಬಂದ ಅವರು ಯಾರೂ ಸತ್ತಿಲ್ಲವೆಂದು ದೃಢಪಡಿಸಿದರು. ನಂತರ ಒಬ್ಬೊಬ್ಬರೇ ಹೋಗಿ ನೋಡಿಕೊಂಡು ಸಮಾಧಾನವಾಗಿ ಬಂದರು.
ಪರಿಸ್ಥಿತಿ ತಿಳಿಯಾಯಿತು. ಕೆಲವು ಮಕ್ಕಳು ಮಾತ್ರ ICU ನಲ್ಲಿದ್ದರು. ರಾತ್ರಿ ವೇಳೆಗೆ ಅರ್ಧದಷ್ಟು ಮಕ್ಕಳು ಚೇತರಿಸಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು. ಮಾರನೇ ದಿನ ಮಧ್ಯಾಹ್ನದ ವೇಳೆಗೆ ಮಕ್ಕಳೆಲ್ಲರೂ ಕ್ಷೇಮವಾಗಿ ಮನೆ ತಲುಪಿದ್ದರು. ಪರಿಸ್ಥಿತಿ ತಿಳಿಯಾಗಲು ಮುಖಂಡರ ಮಧ್ಯಸ್ಥಿಕೆ ದೊಡ್ಡ ವರವಾಯಿತು.
ಆಸ್ಪತ್ರೆಗೆ ಕರೆತಂದಿದ್ದ ಶಿಕ್ಷಕರು ಸಿಬ್ಬಂದಿಯನ್ನೆಲ್ಲ ದೂರದ ಪೊಲೀಸ್ ಠಾಣೆಗೆ ಗೌಪ್ಯವಾಗಿ ಕಳಿಸಿ ಕೊಟ್ಟಿದ್ದೆವು. ಉದ್ರಿಕ್ತರ ಕೈಗೇನಾದರೂ ಅವರಂದು ಸಿಕ್ಕಿದ್ದರೆ ಸಿಗಿದು ಹಾಕುತ್ತಿದ್ದರೋ ಏನೋ?
ಮಾರನೇ ದಿನ ಬೆಳಿಗ್ಗೆ ನಡೆಸಿದ ಮಹಜರಿನಲ್ಲಿ ಅಮೆರಿಕದಿಂದ ಕಳುಹಿಸಿದ್ದ ಹಾಲಿನ ಡಬ್ಬಗಳನ್ನು ಪರಿಶೀಲಿಸಿದೆ. ಅನೇಕ ಡಬ್ಬಗಳ ಸೀಲ್ ಒಡೆದಿರಲಿಲ್ಲ. ಸೀಲ್ ಒಡೆದಿದ್ದ ಐದು ಕೆ.ಜಿ. ಡಬ್ಬಾದಿಂದ ಹಾಲಿನ ಪುಡಿ ತೆಗೆದು ಹಾಲು ಮಾಡಿ ಕೊಟ್ಟಿದ್ದರು. ಮೂರ್ನಾಲ್ಕು ದಿನಗಳಿಂದ ಮಕ್ಕಳು ಅದೇ ಡಬ್ಬಾದ ಹಾಲನ್ನೇ ಕುಡಿದಿದ್ದಾರೆ. ಯಾರಿಗೂ ಏನೂ ಆಗಿಲ್ಲ! ಅಂದರೆ ನಿನ್ನೆ ಕುಡಿದ ಹಾಲಿಗೆ ಯಾರಾದರೂ ವಿಷವಸ್ತು ಬೆರೆಸಿದ್ದರೇ?
(ಮುಂದುವರಿಯುವುದು)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…
ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…