ಎಡಿಟೋರಿಯಲ್

ಬಿಜೆಪಿಯ ಹತಾಶೆ ಕಾಂಗ್ರೆಸ್ ಪಾಲಿಗೆ ಟಾನಿಕ್ ಆಗಬಹುದೇ?

ವಿರೋಧ ಪಕ್ಷದ ನಡೆ ಖಂಡಿಸಿ ಆಳುವ ಪಕ್ಷ ಪತ್ರಿಕಾ ಜಾಹೀರಾತು ನೀಡುವ ಹೊಸ ಸಂಪ್ರದಾಯ ಸೃಷ್ಟಿಯಾಗಿದೆ!

ಬಿಜೆಪಿಯ ಹತಾಶೆ ಕಾಂಗ್ರೆಸ್ ಪಾಲಿಗೆ ಟಾನಿಕ್ ಆಗಬಹುದೇ?
ಲೋಕೇಶ್ ಕಾಯರ್ಗ
ಹಿಂದೊಮ್ಮೆ ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ ಎಂದು ಸ್ವಯಂಘೋಷಣೆ ಮಾಡಿಕೊಂಡಿದ್ದ ಪಕ್ಷ ಕಾಂಗ್ರೆಸ್. ಇಂದಿರಾ ಗಾಂಧಿ ಅವರು ಎಲ್ಲ ರಾಜಕೀಯ ಸವಾಲುಗಳನ್ನು ಮೆಟ್ಟಿ ನಿಂತು ತನ್ನ ಅಧಿಕಾರವನ್ನು ಸ್ಥಾಪಿಸಿದ್ದ ಕಾಲವದು. ಬಾಂಗ್ಲಾ ಯುದ್ಧದ ಗೆಲುವಿನ ಬಳಿಕ ಇಂದಿರಾ ಸುತ್ತ ಭಟ್ಟಂಗಿಗಳೇ ತುಂಬಿದ್ದರು. ಅಂದಿನ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಬರುವಾ ತಮ್ಮ ನಾಯಕಿಯನ್ನು ಮೆಚ್ಚಿಸಲು ಈ ಹೇಳಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಜಯಪ್ರಕಾಶ್ ನಾರಾಯಣ್ ಮುಂತಾದ ನಾಯಕರು,  ಇಂದಿರಾ ಹಠಾವೋ  ಆಂದೋಲನ ಆರಂಭಿಸಿದ್ದರು. ಮುಂದೆ ಇಂದಿರಾ ಅವರು ತುರ್ತುಪರಿಸ್ಥಿತಿ ಹೇರಿದ್ದು, ವಿರೋಧಿ ನಾಯಕರನ್ನು ಜೈಲಿಗೆ ಕಳುಹಿಸಿದ್ದು, ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದು…ಎಲ್ಲವೂ ಇತಿಹಾಸದ ಘಟನೆಗಳು.
ಅಂದು ತನಗೆ ಪರ್ಯಾಯವಿಲ್ಲ ಎಂದು ಬೀಗಿದ್ದ ಕಾಂಗ್ರೆಸ್ ಇಂದು ತನ್ನ ಅಸ್ತಿತ್ವದ ಹುಡುಕಾಟದಲ್ಲಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢ ಹೊರತುಪಡಿಸಿ ಉಳಿದ ಯಾವ ರಾಜ್ಯದಲ್ಲೂ ಪಕ್ಷದ ಸ್ವತಂತ್ರ ಸರಕಾರವಿಲ್ಲ. ಅಂದು ಕಾಂಗ್ರೆಸ್  ಅಧಿಕಾರದ ಉತ್ತುಂಗದಲ್ಲಿದ್ದಂತೆ ಇಂದು ಬಿಜೆಪಿ ಹೆಚ್ಚು  ಕಡಿಮೆ ಅದೇ ತುರಿಯಾವಸ್ಥೆಯಲ್ಲಿದೆ.
ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಕಾಂಗ್ರೆಸ್ ಬೀದಿಗಿಳಿದಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಆರಂಭಿಸಿರುವ ಭಾರತ್ ಜೋಡೊ ಯಾತ್ರೆ ಈ ಬೀದಿ ಹೋರಾಟದ ಭಾಗ. ದಕ್ಷಿಣದ  ಕನ್ಯಾಕುಮಾರಿಯಿಂದ ಆರಂಭಗೊಂಡಿರುವ ಯಾತ್ರೆ ತಮಿಳುನಾಡು ಮತ್ತು ಕೇರಳವನ್ನು ದಾಟಿ ಸದ್ಯ ಕರ್ನಾಟಕದಲ್ಲಿದೆ. ತಮಿಳುನಾಡಿನ ಡಿಎಂಕೆ ಪಕ್ಷ ಈಗ ಕಾಂಗ್ರೆಸ್ಸಿನ ಮಿತ್ರ ಪಕ್ಷ. ಇಲ್ಲಿ ಸ್ಟಾಲಿನ್ ಸರಕಾರದ ವಿರುದ್ಧ ವಾಗ್ದಾಳಿ ಮಾಡುವ ಅವಕಾಶ ಇರಲಿಲ್ಲ. ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ವಿರುದ್ಧವೂ ರಾಹುಲ್ ಅವರು ಕಟು ಟೀಕೆ ಮಾಡುವ ಸಂದರ್ಭ ಬರಲಿಲ್ಲ.
ಆದರೆ ಕರ್ನಾಟಕದ ಗುಂಡ್ಲುಪೇಟೆಗೆ ಕಾಲಿಡುತ್ತಿದ್ದಂತೆ ರಾಹುಲ್ ಮತ್ತು ರಾಜ್ಯ ನಾಯಕರು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಆರಂಭಿಸಿದರು. ಆಡಳಿತ ಪಕ್ಷವೂ ಇದಕ್ಕೆ ತಕ್ಕ ಉತ್ತರ ನೀಡಿದ್ದರೆ  ಪ್ರಕರಣ ಇಲ್ಲಿಗೇ ಕೊನೆಯಾಗುತ್ತಿತ್ತೇನೋ?
ಆದರೆ ಕರ್ನಾಟಕದಲ್ಲಿ ಇದಕ್ಕಿಂತ ಭಿನ್ನವಾದ ವಿದ್ಯಮಾನ ಕಂಡು ಬಂದಿದೆ.  ವಿರೋಧ ಪಕ್ಷವೊಂದರ ನಡೆಯನ್ನು ಖಂಡಿಸಿ ಆಳುವ ಪಕ್ಷ  ಪತ್ರಿಕಾ ಜಾಹೀರಾತು ನೀಡುವ ಹೊಸ ಸಂಪ್ರದಾಯವೊಂದು ಸೃಷ್ಟಿಯಾಗಿದೆ. ಜಾಹೀರಾತಿನಲ್ಲಿ ಪ್ರತಿಪಕ್ಷವು ಎತ್ತಿರುವ ಪ್ರಶ್ನೆಯನ್ನು ಬಿಟ್ಟು ವೈಯಕ್ತಿಕ ಸ್ವರೂಪದ ಆರೋಪಗಳನ್ನು ಮಾಡಲಾಗಿದೆ. ಕಾಂಗ್ರೆಸ್ಸಿನ ಭಾರತ ಜೋಡೋ ಯಾತ್ರೆಯನ್ನು ಖಂಡಿಸಿ ಆಡಳಿತ ಪಕ್ಷ ಮೊದಲ ದಿನ  ನೀಡಿದ  ಪತ್ರಿಕಾ ಜಾಹೀರಾತಿನಲ್ಲಿ  ‘‘ತೋಡೊ ಪಿತಾಮಹನ ಮರಿ ಮಗನಿಂದ ಜೋಡಿಸಲು ಸಾಧ್ಯವೇ?’’ ಎಂದು ಪ್ರಶ್ನಿಸಲಾಗಿದೆ. ಇಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ‘ವಿಭಜನೆಯ ಪಿತಾಮಹ’ ಎಂದು ಬಿಜೆಪಿ ನೇರವಾಗಿ ಬಿಂಬಿಸಿದೆ.
ನೆಹರು ಕುಟುಂಬದ ಬಗ್ಗೆ ಬಿಜೆಪಿ ನಾಯಕರು ಹಿಂದಿನಿಂದಲೂ ಟೀಕೆ ಮಾಡುತ್ತಲೇ ಬಂದಿದ್ದಾರೆ. ಗುಜರಾತ್‌ನಲ್ಲಿ ವಲ್ಲಭಭಾಯ್ ಪಟೇಲ್ ಅವರ ಅತಿ ಎತ್ತರದ ಪ್ರತಿಮೆ ಸ್ಥಾಪನೆಯ ಸಂದರ್ಭದಲ್ಲೂ  ನೆಹರು ಅವರನ್ನು ಖಳನಾಯಕನಾಗಿ ಬಿಂಬಿಸುವ ಪ್ರಯತ್ನ ನಡೆದಿತ್ತು. ಆದರೆ ರಾಷ್ಟ್ರೀಯ ನಾಯಕರ ಸಾಲಿನಲ್ಲಿ ಸೇರಿರುವ ನೆಹರೂ ಅವರನ್ನು ನೇರವಾಗಿ ನಿಂದಿಸುವ ಸಾಹಸಕ್ಕೆ ಯಾವ ನಾಯಕರೂ ಕೈ ಹಾಕಿರಲಿಲ್ಲ. ಹಾಗೆ ನೋಡಿದರೆ ಮಾಜಿ ಪ್ರಧಾನಿ ವಾಜಪೇಯಿ ಅವರು ನೆಹರೂ ಅವರನ್ನು ಅನೇಕ ಸಂದರ್ಭಗಳಲ್ಲಿ  ಶ್ಲಾಘಿಸಿದ್ದರು. ಈಗ ನೆಹರೂ, ದೇಶದ ಖಳನಾಯಕ ಎಂದು ಅಧಿಕೃತವಾಗಿ ಜಾಹೀರಾತು ನೀಡಿರುವ ಆಡಳಿತ ಪಕ್ಷ ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ಆಚರಿಸುವ ಎಲ್ಲ ದಿನಗಳನ್ನು ರದ್ದು ಪಡಿಸಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಆಡಳಿತ ಪಕ್ಷ ಸುದ್ದಿಗಳ ರೂಪದ ಜಾಹೀರಾತು ನೀಡುವ ಮೂಲಕ ಯಾತ್ರೆಯನ್ನು ಖಂಡಿಸುವ ಮತ್ತು ಲೇವಡಿ ಮಾಡುವ ಮತ್ತೊಂದು ಪ್ರಯತ್ನ ನಡೆಸಿದೆ. ‘ಪೆಯ್ಡ್ ನ್ಯೂಸ್ ’ ಸಂಸ್ಕೃತಿಗೆ ಮಣೆ ಹಾಕಿರುವ ಪಕ್ಷದ ಈ ಜಾಹೀರಾತಿಗೆ ಪಕ್ಷೀಯರಿಂದಲೂ  ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದರೆ ರಾಜ್ಯನಾಯಕರು ಎಲ್ಲವನ್ನೂ ಸಮರ್ಥಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ನೆಹರು ಮತ್ತು ಅವರ ಮರಿ ಮಗನನ್ನು ಖಂಡಿಸುವ ಭರದಲ್ಲಿ ಬಿಜೆಪಿ ಹಲವು ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿರುವುದು ನಾವು ಗಮನಿಸಬೇಕಾದ ಅಂಶ.  ಆಡಳಿತ ಪಕ್ಷವೊಂದು ತನ್ನ ನಿರ್ಧಾರವನ್ನು ಸಮರ್ಥಿಸಿ ಜಾಹೀರಾತು  ನೀಡಿದ ಉದಾಹರಣೆಗಳಿವೆ. ಕೃಷಿ ಕಾಯಿದೆ ವಿರುದ್ಧ ಪ್ರತಿಭಟನೆ ವಿಕೋಪಕ್ಕೆ ಹೋದಾಗ ಕೇಂದ್ರ ಸರ್ಕಾರ ಜಾಹೀರಾತು ನೀಡುವ ಮೂಲಕ ಈ ಕಾಯಿದೆಯನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿತ್ತು. ಆದರೆ ಪ್ರತಿಪಕ್ಷವೊಂದರ ಆರೋಪಗಳನ್ನು ಖಂಡಿಸಿ ಮರು ಆರೋಪ ಮಾಡುವ ಜಾಹೀರಾತು ಪ್ರಕಟನೆ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆ. ಒಂದು ವೇಳೆ ರಾಹುಲ್ ಗಾಂಧಿ ಅಥವಾ ರಾಜ್ಯ ನಾಯಕರು ಎತ್ತಿದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಜಾಹೀರಾತು ನೀಡಿದ್ದರೆ  ಆಡಳಿತ ಪಕ್ಷದ ಕ್ರಮ ಹೆಚ್ಚು ಔಚಿತ್ಯಪೂರ್ಣವಾಗಿರುತ್ತಿತ್ತು. ಆದರೆ ಜಾಹೀರಾತಿನ ಉಲ್ಲೇಖಗಳು, ಆರೋಪಕ್ಕೆ ಪ್ರತ್ಯಾರೋಪ ರೂಪದಲ್ಲಿ ‘‘ ನಾನಲ್ಲ, ನೀನು’’ ಎನ್ನುವಂತಿವೆ.
ನೆಹರು ಮತ್ತವರ ವಂಶದ ಮೇಲೆ ಬಿಜೆಪಿ  ಮಾಡುತ್ತಿದ ಆರೋಪಗಳನ್ನು ಜಾಹೀರಾತು ಮೂಲಕ ಪ್ರಕಟಿಸುವ ಮೂಲಕ ಅಧಿಕೃತತೆಯ ಮುದ್ರೆ ನೀಡಿರುವುದು ಕೂಡ ಹೊಸ ಬೆಳವಣಿಗೆ.  ಇದು ಆಳುವ ಪಕ್ಷದ ಅತುರದ  ಅಥವಾ ಅತಿರೇಕದ ನಡೆಯೋ ಅಥವಾ ಆಕ್ರಮಣಕಾರಿ ನೀತಿಯ ಭಾಗವೋ ಎನ್ನುವುದನ್ನು ಕಾಲವೇ ಹೇಳಬೇಕಾಗಿದೆ. ಆದರೆ ಪಕ್ಷಾತೀತ ನಾಯಕರಾಗಿ ಎಲ್ಲ ಪಕ್ಷಗಳ ನಾಯಕರ ಗೌರವಕ್ಕೆ ಪಾತ್ರರಾಗಿದ್ದ ವಾಜಪೇಯಿ ಯುಗ ಮುಗಿದು ಬಿಜೆಪಿ ಸಾಕಷ್ಟು ಮುಂದಕ್ಕೆ ಸಾಗಿ ಬಂದಿದೆ ಎನ್ನುವುದು ಸ್ಪಷ್ಟ.
ರಾಷ್ಟ್ರೀಯ ನಾಯಕರ ಸಾಲಿನಲ್ಲಿದ್ದು ಸರಕಾರದ ಅಧಿಕೃತ ಗೌರವಕ್ಕೆ ಪಾತ್ರರಾಗಿರುವ ನಾಯಕರನ್ನು ‘ವಿಭಜನೆಯ ಪಿತಾಮಹ’ ಎಂದು ಕರೆದ ಪಕ್ಷ   ‘‘ಪೇ ಸಿಎಂ’’ ಒಕ್ಕಣೆಯ  ಕ್ಯೂಆರ್ ಕೋಡ್ ಉಳ್ಳ ಟೀಶರ್ಟ್ ಧರಿಸಿದ ಯುವಕರ ಮೇಲೆ ಎಫ್‌ಐಆರ್ ದಾಖಲಿಸುವ ಕೆಲಸವನ್ನೂ ಮಾಡುತ್ತಿದೆ. ಇದರಲ್ಲಿ ಯಾರ ನಡೆ ಸರಿ, ಯಾರ ನಡೆ ತಪ್ಪು ಎನ್ನುವುದಕ್ಕಿಂತ ಸರಕಾರದ ಹತಾಶೆ ಎದ್ದು ಕಾಣುತ್ತಿದೆ.
ಭಾರತ್ ಜೋಡೊ ಯಾತ್ರೆಗೆ ರಾಜ್ಯದಲ್ಲಿ ಬಂದಿರುವ ಪ್ರತಿಕ್ರಿಯೆ ಮುಂದಿನ ದಿನಗಳಲ್ಲಿ ವೋಟುಗಳಾಗಿ ಪರಿವರ್ತನೆಯಾಗುವುದೋ ಇಲ್ಲವೋ ಖಚಿತವಿಲ್ಲ. ಆದರೆ ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ, ಯಾತ್ರೆಯನ್ನು ಹೀಗಳೆಯುವ ಮೂಲಕ ಸರಕಾರ ಪ್ರತಿಕ್ರಿಯೆ ನೀಡಲು ಹೊರಟಿರುವುದು ಬಿಜೆಪಿಯ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ. ಆಡಳಿತಾರೂಢ ಪಕ್ಷದ ಈ  ಹತಾಶೆಯ ಕ್ರಮಗಳೇ ಕಾಂಗ್ರೆಸ್ ಪಾಲಿಗೆ  ಟಾನಿಕ್ ಆಗಬಹುದು.
ಇಂದಿರಾಗಾಂಧಿ ಸರಕಾರ ಹೇರಿದ ತುರ್ತುಪರಿಸ್ಥಿತಿಯನ್ನು ಖಂಡಿಸುತ್ತಲೇ ಅಧಿಕಾರಕ್ಕೆ ಬಂದ ಪಕ್ಷ ಈಗ ಅದೇ ಮಾರ್ಗದಲ್ಲಿ ಸಾಗುತ್ತಿದೆ ಎಂದು ಹಿರಿಯ ನಾಯಕರಿಗಾದರೂ ಅರ್ಥವಾಗಬೇಕು. ರಾಜ್ಯ ಬಿಜೆಪಿಯ ಇತ್ತೀಚಿನ ಕ್ರಮಗಳಿಗೆ ಕೇಂದ್ರ ನಾಯಕರ ಒಪ್ಪಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇವೆಲ್ಲವೂ ಅಪ್ರಬುದ್ದತೆ ಮತ್ತು ಅವಸರದ ತೀರ್ಮಾನಗಳೆನ್ನುವುದು ಮುಂದಿನ ದಿನಗಳಲ್ಲಾದರೂ  ಅರ್ಥವಾಗಬಹುದು. ಕಾಂಗ್ರೆಸ್ಸಿನ ಭಾರತ್ ಜೋಡೊ ಯಾತ್ರೆ ಇನ್ನೂ ಎರಡು ವಾರ ರಾಜ್ಯದಲ್ಲಿ ಸಂಚರಿಸಲಿದೆ. ಸರಕಾರದ ಮುಂದಿನ ಪ್ರತಿಕ್ರಿಯೆ ಏನು, ಹೇಗೆ ಎನ್ನುವುದು ಸದ್ಯದ ಮಟ್ಟಿಗೆ ಕುತೂಹಲದ ವಿಚಾರ.
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago