ಎಡಿಟೋರಿಯಲ್

ದೆಹಲಿ ಧ್ಯಾನ : ರಾಮಲೀಲಾ ಉತ್ಸವಗಳ ನಡುವೆ ರಾವಣಾಸುರನ ನೆನೆದು

ಶ್ರೀಲಂಕೆಯ ರಾಷ್ಟ್ರವಾದವನ್ನು ಪ್ರತಿನಿಧಿಸುವ ಶಕಪುರುಷನೆಂದು ರಾವಣನನ್ನು ಪುನರುಜ್ಜೀವಿಸುವ ಆಂದೋಲನ ಆಧುನಿಕ ಶ್ರೀಲಂಕೆಯಲ್ಲಿ ಜರುಗಿತ್ತು!

ರಾಮಲೀಲಾ ಉತ್ಸವಗಳ ನಡುವೆ ರಾವಣಾಸುರನ ನೆನೆದು
ಸುಮಾರು 22 ವರ್ಷಗಳ ಹಿಂದಿನ ಮಾತು. ಇದೇ ಅಕ್ಟೋಬರ್ ತಿಂಗಳ ದಿನಗಳು. ಉತ್ತರ ಭಾರತದ ಉದ್ದಗಲದ ಪೇಟೆ ಪಟ್ಟಣಗಳು ಮಹಾನಗರಗಳಲ್ಲಿ ಇಂದಿನಂತೆಯೇ ನೂರಾರು ಅಡಿಗಳ ಎತ್ತರದ ರಾವಣನ ಪ್ರತಿಕೃತಿಗಳನ್ನು ಸುಡುವ ಸಾವಿರಾರು ರಾಮಲೀಲಾ ಉತ್ಸವಗಳು ಭರದಿಂದ ಜರುಗಿದ್ದವು.
ರಾವಣನನ್ನು ಮಹಾ ಖಳನೆಂದು ಸಾರುವ ಪ್ರವೃತ್ತಿಯನ್ನು ಪ್ರತಿಭಟಿಸಿ ತಮಿಳುನಾಡಿನಲ್ಲಿ  ಹಿಡಿಯಷ್ಟು ದ್ರಾವಿಡವಾದಿಗಳು ಪ್ರತಿಭಟಿಸಿದ್ದರು. ಚೆನ್ನೈನಲ್ಲಿ ‘ರಾವಣ ಲೀಲೆ’ಯ ಅಂಗವಾಗಿ ರಾಮ, ಲಕ್ಷ್ಮಣ, ಭರತನ ಪ್ರತಿಕೃತಿಗಳನ್ನು ಸುಡಲು ಮುಂದಾಗಿದ್ದರು. ಪೊಲೀಸರು ಅವರನ್ನು ಬಂಧಿಸಿದರು.  ಈ ಘಟನೆ ಸುದ್ದಿ ಮಾಧ್ಯಮಗಳ ಗಮನ ಸೆಳೆದಿರಲಿಲ್ಲ.
ಆದರೆ  ಸಮಾರಂಭವೊಂದರಲ್ಲಿ ಕರುಣಾನಿಧಿ ರಾವಣನನ್ನು ಆವಾಹಿಸಿದ್ದರು. ರಾವಣನನ್ನು ಅವಹೇಳನ ಮಾಡುವುದೆಂದರೆ ತಮ್ಮನ್ನೇ ಅವಮಾನಿಸಿದಂತೆ ಎಂದಿದ್ದರು. ಅವರ ಈ ಹೇಳಿಕೆ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿತಗೊಂಡಿತ್ತು. ಹಿಂದೂ ಮುನ್ನಣಿ ಸಂಘಟನೆ ಕರುಣಾನಿಧಿ ಹೇಳಿಕೆಯ ವಿರುದ್ಧ ಕಠಿಣ ಶಬ್ದಗಳ ಪ್ರತಿಕ್ರಿಯೆ ನೀಡಿತ್ತು. ಅಂದಿನ ಬಿಜೆಪಿ ನೇತತ್ವದ ಎನ್‌ಡಿಎ  ಸರ್ಕಾರ ಕಟ್ಟರ್ ಹಿಂದೂ ರಾಷ್ಟ್ರವಾದವನ್ನು ಶಾಲಾ ಕಾಲೇಜು ಪಠ್ಯಕ್ರಮದಲ್ಲಿ ಅಳವಡಿಸಲು ಮುಂದಾಗಿತ್ತು. ಆಗ ಡಿಎಂಕೆಯು ಎನ್‌ಡಿಎ ಸರ್ಕಾರದ ಭಾಗವಾಗಿತ್ತು. ಡಿಎಂಕೆ ಪಠ್ಯಕ್ರಮದ  ಅಳವಡಿಕೆಯ  ಈ ಕೃತ್ಯ ಆರ್ಯವಾದದ ಹೇರಿಕೆ ಎಂದು  ಪ್ರತಿಕ್ರಿಯಿಸಿದ್ದರು ಕರುಣಾನಿಧಿ.
ಉತ್ತರ ಭಾರತೀಯರು ಕೋಟ್ಯಂತರ  ರುಪಾಯಿ ವೆಚ್ಚ ಮಾಡಿ ಮೊನ್ನೆಯಷ್ಟೇ ರಾವಣ ಕುಂಭಕರ್ಣ ಮೇಘನಾದರ ಪ್ರತಿಕೃತಿಗಳನ್ನು ಸಾರ್ವಜನಿಕವಾಗಿ ಸುಟ್ಟು ರಾಮಲೀಲಾ ಉತ್ಸವ ಆಚರಿಸಿದರು. ರಾವಣನನ್ನು ಸೋಲಿಸಿದ ಶ್ರೀರಾಮ ವಿಜಯಿಯಾಗಿ ಮರಳುವುದನ್ನು ಆಚರಿಸುವ ದೀಪಾವಳಿ ಕದ ಬಡಿಯುತ್ತಿದೆ.
ಕೇವಲ ತಪಸ್ಸು ಆಚರಿಸಿದ ಮಾತ್ರಕ್ಕೇ ಶೂದ್ರ ಶಂಬೂಕನ ತಲೆ ಕಡಿದ, ಸೀತೆಯ ಶೀಲ ಶಂಕಿಸಿ ಅಗ್ನಿಪರೀಕ್ಷೆಗೆ ಗುರಿ ಮಾಡಿದ,  ಮರೆಯಲ್ಲಿ ನಿಂತು ಮೋಸದಿಂದ ವಾಲಿಯನ್ನು ಕೊಂದ, ತುಂಬು ಗರ್ಭಿಣಿ ಪತ್ನಿ ಸೀತೆಯನ್ನು ನಿರ್ದಯಿಯಾಗಿ ಕಾಡಿಗಟ್ಟಿದ ಶ್ರೀರಾಮನನ್ನು ಪೂಜಿಸಿ ರಾವಣನನ್ನು ಸಾವಿರಾರು ವರ್ಷಗಳಿಂದ ಸುಡುತ್ತ ಬರಲಾಗಿದೆ ಎಂಬುದು  ದ್ರಾವಿಡ ರಾಜಕಾರಣದ ತಕರಾರು.
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸ್ಥಾಪಕ ಸಿ.ಎನ್. ಅಣ್ಣಾದುರೈ 1947ರಷ್ಟು ಹಿಂದೆಯೇ ರಚಿಸಿ ಪ್ರದರ್ಶಿಸಿದ್ದ ಮತ್ತೊಂದು ನಾಟಕ ‘‘ನೀದಿ ದೇವನ್ ಮಯಕ್ಕಂ’’.ತಪ್ಪಿತಸ್ಥನೆಂದು ತೀರ್ಪು ನೀಡಿ ಕೇಸ್ ಕ್ಲೋಸ್ ಮಾಡಲಾಗಿದ್ದ ರಾವಣನ ವಿಚಾರಣೆಯನ್ನು  ಮತ್ತೆ ತೆರೆಯುವ ನಾಟಕವಿದು.
ತನ್ನ ಕಂಬ ರಾಮಾಯಣದಲ್ಲಿ ಕರುಣಾಳು ರಾಮನ ಚಿತ್ರವನ್ನು ಕಟ್ಟಿರುವ ತಮಿಳು ಕವಿ ಕಂಬನ್ ಕಟಕಟೆಯಲ್ಲಿ ನಿಲ್ಲುತ್ತಾನೆ. ರಾವಣ ಕೇಳುವ ಹರಿತ ಪ್ರಶ್ನೆಗಳ ಪ್ರವಾಹವನ್ನು ಭರಿಸಲಾರದೆ, ರಾಮನ ಕರುಣಾಳುತನಕ್ಕೆ ಸಾಕ್ಷ್ಯ ಒದಗಿಸಲಾರದೆ ಕಕ್ಕಾಬಿಕ್ಕಿ ಆಗುತ್ತಾನೆ. ಶೂದ್ರನಾಗಿದ್ದರೂ ತಪಸ್ಸು ಮಾಡಿ ಧರ್ಮವನ್ನು ಉಲ್ಲಂಘಿಸಿದ ಅಪರಾಧಕ್ಕಾಗಿ ಶಿರಚ್ಛೇದದ ಶಿಕ್ಷೆಗೆ ಗುರಿಯಾಗುವವನು ಶಂಬೂಕ. ಇಂತಹ ಶಂಬೂಕನ ತಾಯಿಯ ಆಕ್ರಂದನದ ಜೊತೆಗೆ ತನ್ನ ಶೀಲವನ್ನು ಶಂಕಿಸಿದ ರಾಮನ ವಿರುದ್ಧ ಸೀತೆಯ ಆಕ್ರೋಶ.  ಮರು ವಿಚಾರಣೆಯಲ್ಲಿ ರಾವಣನ ಬೆನ್ನಿಗೆ ನಿಲ್ಲುವ ಅಂಶಗಳನ್ನು ಈ ನಾಟಕ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ರಾಮಾಯಣ ಸಿಂಹಳದ ಸಾಂಸ್ಕತಿಕ- ಧಾರ್ಮಿಕ ಮುಖ್ಯಧಾರೆಯ ಭಾಗ ಅಲ್ಲ. ಆದರೆ ರಾವಣಾವಳೀಯ ಮತ್ತು ಇತರೆ ಪ್ರಾಚೀನ ಸಿಂಹಳೀಯ ಕೃತಿಗಳು ಆತನನ್ನು ಮಹಾನ್ ಎಂದು ಬಿಂಬಿಸಿವೆ. ದ್ವೀಪದ ಇತಿಹಾಸದಲ್ಲಿ ಪರಕೀಯ- ಭಾರತೀಯ ಆಕ್ರಮಣವನ್ನು ಪ್ರತಿರೋಧಿಸಿದ ಮೊದಲಿಗ ರಾವಣ. ಶ್ರೀಲಂಕೆಯ ರಾಷ್ಟ್ರವಾದವನ್ನು ಪ್ರತಿನಿಧಿಸುವ ಶಕಪುರುಷನೆಂದು ರಾವಣನನ್ನು ಪುನರುಜ್ಜೀವಿಸುವ ಆಂದೋಲನ ಆಧುನಿಕ ಶ್ರೀಲಂಕೆಯಲ್ಲಿ ಜರುಗಿತ್ತು ಎಂದು ಶ್ರೀಲಂಕೆಯನ್ನು ವರದಿ ಮಾಡಿದ ಹಿರಿಯ ಪತ್ರಕರ್ತ ಪಿ.ಕೆ.ಬಾಲಚಂದ್ರನ್ ಹೇಳಿದ್ದಾರೆ.  ರಾವಣ ಸೀತೆಯನ್ನು ಅಪಹರಿಸಿದ ಎಂಬ ಕಾರಣಕ್ಕಾಗಿ ರಾಮ ಲಂಕೆಯ ಮೇಲೆ ದಾಳಿ ನಡೆಸಿದ ಎಂಬ ರಾಮಾಯಣದ ಕತೆಯನ್ನು ಅನುಬುಧ ತಿರಸ್ಕರಿಸುತ್ತಾರೆ.  ರಾವಣನಿಂದ ರಾಜ್ಯವನ್ನು ಕಿತ್ತುಕೊಳ್ಳಬಯಸಿದ್ದ ಆತನ ಮಲತಮ್ಮ ವಿಭೀಷಣನೇ ದಾಳಿ ನಡೆಸುವಂತೆ ರಾಮನನ್ನು ಆಹ್ವಾನಿಸಿದ್ದ ಎಂಬುದು ಸಿಂಹಳ ರಾಷ್ಟ್ರವಾದಿಗಳ ವಾದ.
ಮಧ್ಯಪ್ರದೇಶದ ಜಬ್ಬಲ್‌ಪುರದ ದರ್ಜಿ ಮುನ್ನಾ ಲಾಲ್ ನಾಮದೇವ ಕಳೆದ ೩೭ ವರ್ಷಗಳಿಂದ ರಾವಣನನ್ನು ಪೂಜಿಸುತ್ತಿದ್ದಾನೆ. ರಾವಣನ ಮಕ್ಕಳ  ಹೆಸರುಗಳನ್ನೇ ಮಕ್ಕಳಿಗೆ ಇಟ್ಟಿದ್ದಾನೆ. ಆತನ ಅಂಗಡಿಯ ಹೆಸರು ‘ಜೈ ಲಂಕೇಶ್ ಟೇಲರ್ಸ್’.
ರಾಜಸ್ತಾನದ ಜೋಧಪುರ- ಮಂಡೋರದ ಮುದ್ಗಲ್ ಗೋತ್ರದ ದವೆ ಬ್ರಾಹ್ಮಣರು  ನವರಾತ್ರದಲ್ಲಿ ಯಜ್ಞ ನಡೆಸುವುದೇ ಅಲ್ಲದೆ ರಾವಣನ ಆತ್ಮಕ್ಕೆ ಶಾಂತಿ ಕೋರಿ ಶ್ರಾದ್ಧ ನಡೆಸುತ್ತಾರೆ. ಜೋಧಪುರದಲ್ಲಿ ಇವರು ಕಟ್ಟಿರುವ ರಾವಣ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ರಾವಣನ ಪತ್ನಿ ಮಂಡೋದರಿ  ಪಶ್ಚಿಮ ರಾಜಸ್ತಾನದ ಪಟ್ಟಣ ಮಂಡೋರದ ಮಗಳು. ಹೀಗಾಗಿ ರಾವಣನನ್ನು ಜೋಧಪುರದ ಅಳಿಯ ಎಂದೇ ಬಗೆಯುತ್ತದೆ ದವೆ ಬ್ರಾಹ್ಮಣ ಸಮುದಾಯ.
ದಸರೆಯಲ್ಲಿ ರಾಮಲೀಲಾ ಆಚರಿಸಿ ರಾವಣನ ಬೃಹತ್ ಗೊಂಬೆಗಳನ್ನು ಸುಡುವುದನ್ನು ದವೆ ಬ್ರಾಹ್ಮಣರು ಒಪ್ಪುವುದಿಲ್ಲ.  ಉತ್ತರ ಪ್ರದೇಶದ ಕಾನ್ಪುರದ ರಾವಣ ದೇವಾಲಯ ನೂರು ವರ್ಷಗಳಿಗೂ ಹೆಚ್ಚು ಹಳೆಯದು. ದಸರೆಯಲ್ಲಿ ಪೂಜೆಗಾಗಿ ಬಾಗಿಲು ತರೆಯುವುದು ವರ್ಷಕ್ಕೊಮ್ಮೆ. ಈ ದೇವಾಲಯದ ಪೂಜಾರಿ ಹರಿಓಂ ತಿವಾರಿ ಮಾತುಗಳು ಅರ್ಥಗರ್ಭಿತ- ದ್ರಾವಿಡ ಗೌಡ್ ಬುಡಕಟ್ಟಿಗೆ ಸೇರಿದ ರಾವಣ. ವೈದಿಕ ಯುಗದಲ್ಲಿ ಅತ್ಯಂತ ಬುದ್ಧಿವಂತನೆಂದು ಹೆಸರಾಗಿದ್ದ. ರಾಕ್ಷಸ ಪಕ್ಷಪಾತಿಯಾಗಿದ್ದ ಆತ ಬ್ರಾಹ್ಮಣರಿಗಾಗಿ ಏನನ್ನೂ ಮಾಡಲಿಲ್ಲ . ಹೀಗಾಗಿ ಅವನ ಸೊಕ್ಕು ಮುರಿಯಲೆಂದೇ ವಿಷ್ಣು ಪರಮಾತ್ಮ ರಾಮನಾಗಿ ಜನಿಸಿದ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲೊಂದು ರಾವಣಗ್ರಾಮ ಉಂಟು. ಇದೇ ಸೀಮೆಯ ಮಂಡಸೂರು ಜಿಲ್ಲೆಯ ರಾವಣ ರುಂಡಿ ಮತ್ತು ಶಾಜಪುರ ಜಿಲ್ಲೆಯ ಭದಖೇಡಿಯಲ್ಲೂ ರಾವಣ ಪೂಜೆ ನಡೆಯುತ್ತದೆ. ರಾವಣರುಂಡಿಯ ರಾವಣ ವಿಗ್ರಹದ ಎತ್ತರ ೩೫ ಅಡಿಗಳು. ಮಧ್ಯಪ್ರದೇಶದ ಛಿಂದ್ವಾಡ ಮತ್ತು ಛತ್ತೀಸ್‌ಗಢದ ಗೊಂಡ ಬುಡಕಟ್ಟು ಜನಾಂಗದಲ್ಲಿ ಲಂಕಾಪತಿ ಪೂಜೆಯ ಪರಂಪರೆಯೇ ಉಂಟು. ಮಧ್ಯಪ್ರದೇಶದ ಇಂದೂರಿನ ಪರ್ದೇಸೀಪುರದ ವಾಲ್ಮೀಕಿ ಸಮಾಜಕ್ಕೆ ರಾವಣ ದಹನದ ವೀಕ್ಷಣೆ ನಿಷಿದ್ಧ. ಈ ಸಮುದಾಯದ ಪಾಲಿಗೆ ರಾವಣ ದೈವ.
ಝಾರ್ಖಂಡದ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಶಿಬು ಸೊರೇನ್ ರಾಮಲೀಲಾ ಆಚರಣೆಯಂದು ರಾವಣನ ಪ್ರತಿಕತಿ ಗೊಂಬೆಗೆ ಕೊಳ್ಳಿ ಇಡುವ ಆಮಂತ್ರಣವನ್ನು ನಿರಾಕರಿಸಿದ್ದರು. ರಾವಣನನ್ನು ತಮ್ಮ ಕುಲಗುರು ಎಂದು ಕರೆದಿದ್ದ ಸೊರೇನ್ ಮಹಾನ್ ವಿದ್ವಾಂಸನ ಪ್ರತಿಕತಿಯನ್ನು ಸುಡುವುದು ಸಲ್ಲದು ಎಂದಿದ್ದರು. ಈ ಸೀಮೆಗಳ ಬುಡಕಟ್ಟು ಜನಾಂಗಗಳ ಗುರುವಿನ ಹೆಸರಿನ ಅವಿಭಾಜ್ಯ ಭಾಗ ರಾವಣ.
ಸಾವಿರಾರು ವರ್ಷಗಳಿಂದ ಉರಿಯುತ್ತಿರುವ ಬೆಂಕಿಯಲ್ಲಿ ಶೂದ್ರ ಶಂಬೂಕ, ಮಹಿಳೆ ಸೀತೆ, ಅಸುರ ರಾವಣ, ಎದುರು ಪಾಳೆಯದ ವಾನರ ವಾಲಿ ಬೇಯುತ್ತಲೇ ಬಂದಿದ್ದಾರೆ. ನ್ಯಾಯಕ್ಕಾಗಿ ಜ್ವಾಲೆಗಳ ನಡುವಿನ ಆಕ್ರಂದನಕ್ಕೆ ಲೋಕ ಕಿವುಡು ಕುರುಡು!
andolanait

Recent Posts

ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.‌15ರಂದು ಖ್ಯಾತ ನಟ ವಿ.ರವಿಚಂದ್ರನ್‌ ಅವರು…

3 hours ago

ಅಮೃತ್ ೨.೦ ಯೋಜನೆಗೆ ನಾಗರಿಕರ ಅಸಮಾಧಾನ

ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ  ಸರಗೂರು: ಪಟ್ಟಣದ…

3 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದು: ಮುಖ್ಯಮಂತ್ರಿಗಳು ಶೀಘ್ರ ನಿರ್ಧಾರ ಕೈಗೊಳ್ಳಲಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…

3 hours ago

ಓದುಗರ ಪತ್ರ: ಸಮಾಜವನ್ನು ಜಾಗೃತಗೊಳಿಸುವ ಚಿತ್ರಗಳನ್ನು ದುನಿಯಾ ವಿಜಿ ಹೆಚ್ಚಾಗಿ ನಿರ್ದೇಶಿಸಲಿ

ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…

4 hours ago

ಓದುಗರ ಪತ್ರ: ಗವಿಸಿದ್ಧೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ: ಸಿಎಂ ನಿರ್ಧಾರ ಶ್ಲಾಘನೀಯ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…

4 hours ago

ಇವರ ಪಾಪಗಳನ್ನೆಲ್ಲ ಸಹಿಸಿಕೊ ಸಹ್ಯಾದ್ರಿ!

ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…

4 hours ago