ಎಡಿಟೋರಿಯಲ್

ಬ್ಯಾಂಕ್ ಠೇವಣಿ ದರಗಳು ಏರಿವೆ, ಸಣ್ಣ ಉಳಿತಾಯಗಳಿಗೆ?

ಪ್ರೊ.ಆರ್.ಎಂ.ಚಿಂತಾಮಣಿ

ಜಗತ್ತಿನಾದ್ಯಂತ ಈ ವರ್ಷಾರಂಭದಿಂದಲೇ ಕೇಂದ್ರಿಯ ಬ್ಯಾಂಕುಗಳು ಅತಿಯಾದ ಬೆಲೆಯೇರಿಕೆಗಳನ್ನು (ಹಣದುಬ್ಬರವನ್ನು) ನಿಯಂತ್ರಿಸಲು ನೀತಿ ಬಡ್ಡಿ ದರಗಳನ್ನು ಹೆಚ್ಚಿಸಿವೆ. ನಮ್ಮ ರಿಸರ್ವ್ ಬ್ಯಾಂಕು ಸಹಿತ ಬ್ಯಾಂಕುಗಳು ಮತ್ತು ಹಣಕಾಸು ಕಂಪೆನಿಗಳಿಗೆ (ಬ್ಯಾಂಕೇತರ) ತಾನು ಕೊಡುವ ಅಲ್ಪಾವಽ ತಾತ್ಕಾಲಿಕ ಸಾಲಗಳ ಮೇಲಿನ ಆಕರಿಸುವ ಬಡ್ಡಿದರ ರೆಪೊ ದರವನ್ನು ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಶೇ.೨.೨೫ ಹೆಚ್ಚಿಸಿದೆ. ಇದರಿಂದ ಸ್ವಾಭಾವಿಕವಾಗಿಯೇ ಬ್ಯಾಂಕುಗಳಿಗೆ ಅವಶ್ಯವಿದ್ದಾಗ ನಗದು ಹರಿವಿನ ಮೇಲಿನ ವೆಚ್ಚ ಹೆಚ್ಚಾಗುತ್ತದೆ. ಪರಿಣಾಮವಾಗಿ ಅವುಗಳು ತಾವು ಅರ್ಥ ವ್ಯವಸ್ಥೆಗೆ ಒದಗಿಸುವ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಬೇಕಾಗುತ್ತದೆ.

ರೆಪೊ ದರ ಹೆಚ್ಚಾದಾಗಲೆಲ್ಲ ಬ್ಯಾಂಕುಗಳು ತಮ್ಮ ಹಣಕಾಸು ವೆಚ್ಚಗಳನ್ನಾಧರಿಸಿ ತಾವು ಕೊಡುವ ವಿವಿಧ ಸಾಲಗಳ ಬಡ್ಡಿ ದರಗಳನ್ನು ಹೆಚ್ಚಿಸಿ ನಿಗದಿಗೊಳಿಸಿವೆ. ಅದಕ್ಕೊಂದು ಸೂತ್ರವೂ ಇದೆ. ಸಾಲ ಕೊಡಲು ಲಭ್ಯವಿರುವ ಹಣದ ಸೀಮಾಂತ (ಹೆಚ್ಚುವರಿ) ವೆಚ್ಚಗಳ ಆಧಾರದ ಮೇಲೆ ಬಡ್ಡಿದರಗಳನ್ನು ನಿರ್ಧರಿಸಲಾಗುವುದು. ಈ ಸೀಮಾಂತ ವೆಚ್ಚ ಮತ್ತು ದರ ವಿವಿಧ ಸಾಲಗಳಿಗಾಗಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ಇರುತ್ತದೆ. ಬ್ಯಾಂಕುಗಳಲ್ಲಿ ಸಾಲ ಕೊಡಲು ಲಭ್ಯವಿರುವ ದೊಡ್ಡ ಮೊತ್ತವೇ ಠೇವಣಿಗಳು. ಆದ್ದರಿಂದಲೇ ವಾಕರ ಹೇಳಿದ್ದು ‘ಬೇರೆಯವರ ಹಣವನ್ನು ತನ್ನದೆಂಬಂತೆ ವ್ಯವಹರಿಸುವವನೇ ಬ್ಯಾಂಕರ್’ ಎಂದು.

ಬ್ಯಾಂಕುಗಳಲ್ಲಿರುವ ಅತಿ ಅಗ್ಗದ ಠೇವಣಿಗಳೆಂದರೆ ‘ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ  ಠೇವಣಿಗಳು. ಇವುಗಳನ್ನು ಕಾಸಾ ಠೇವಣಿಗಳೆನ್ನುವುದು. ಉಳಿದಂತೆ ೧೫ ದಿನಗಳಿಂದ ೧೦ ವರ್ಷಕ್ಕೂ ಮೇಲ್ಪಟ್ಟ ಅವಽಗಳ ‘ಅವಧಿ ಠೇವಣಿ’ಗಳಿರುತ್ತವೆ. ಅಲ್ಲದೆ ದೈನಿಕ ಮತ್ತು ಮಾಸಿಕ ಕಂತುಗಳಲ್ಲಿ ಜಮಾ ಆಗುತ್ತಾ, ಕೂಡಿಕೊಳ್ಳುತ್ತಾ ಹೋಗುವ ಠೇವಣಿಗಳೂ ಇರುತ್ತವೆ. ಎಲ್ಲಕ್ಕೂ ಬೇರೆ ಬೇರೆ ಬಡ್ಡಿ ದರಗಳಿರುತ್ತವೆ. ಒಟ್ಟು ಠೇವಣಿಗಳಲ್ಲಿ ‘ಕಾಸಾ ಪ್ರಮಾಣ ಹೆಚ್ಚಾಗಿದ್ದಷ್ಟು ಒಟ್ಟು ಬಡ್ಡಿ ಭಾರ ಕಡಿಮೆಯಾಗಿದ್ದು, ಅಲ್ಪಾವಽ ಮತ್ತು ಮಧ್ಯಮಾವಧಿ ಸಾಲಗಳನ್ನು ಕಡಿಮೆ ಬಡ್ಡಿ ದರಗಳಲ್ಲಿ ಕೊಡಬಹುದು.

ಠೇವಣಿ ದರಗಳನ್ನು ಹೆಚ್ಚಿಸುವ ಅವಶ್ಯಕತೆ ಇತ್ತು

ರಿಸರ್ವ್ ಬ್ಯಾಂಕು ಪ್ರಕಟಿಸಿರುವ ಅಂಕಿ ಸಂಖ್ಯೆಗಳ ಪ್ರಕಾರ ನ. ೧೮ರಂದು ಇದ್ದಂತೆ ಬ್ಯಾಂಕು ಸಾಲಗಳು ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಶೇ.೧೭.೨ರಷ್ಟು ಹೆಚ್ಚಾಗಿವೆ. ಆದರೆ ಇದೇ ಅವಽಯಲ್ಲಿ ಬ್ಯಾಂಕ್ ಠೇವಣಿಗಳು ಶೇ.೯.೬ ಮಾತ್ರ ಹೆಚ್ಚಾಗಿವೆ. ಆರ್ಥಿಕ ಚೇತರಿಕೆ ಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುತ್ತಿರುವುದರಿಂದ ಬ್ಯಾಂಕ್ ಸಾಲಗಳಿಗೆ ಬೇಡಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ಪ್ರಮಾಣದಲ್ಲಿ ಠೇವಣಿಗಳು ಹೆಚ್ಚದಿದ್ದರೆ ಬ್ಯಾಂಕುಗಳಿಗೆ ನಗದು ಹರಿವಿನ  ಕೊರತೆಯಾಗಿ ಹೆಚ್ಚಿನ ವೆಚ್ಚದಲ್ಲಿ ಬೇರೆ ಮೂಲಗಳಿಂದ (ರಿಸರ್ವ್ ಬ್ಯಾಂಕಿನಿಂದ ಅಥವಾ ಬಾಂಡುಗಳಿಂದ) ಹೆಚ್ಚಿನ ಬಡ್ಡಿ ತೆತ್ತು ನಗದು ಹೊಂದಿಸಿಕೊಳ್ಳಬೇಕಾಗುತ್ತದೆ. ಸಾಲ ಪಡೆಯುವವರಿಗೂ ಭಾರವಾದೀತು. ಆದ್ದರಿಂದ ದೇಶದ ದೊಡ್ಡ ಬ್ಯಾಂಕು ಸ್ಟೇಟ್ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕುಗಳೂ ಕಳೆದ ವಾರ ವಿವಿಧ ಅವಧಿಗಳ ಠೇವಣಿಗಳ ಬಡ್ಡಿ ದರಗಳನ್ನು ಶೇ.೦.೨೦ ರಿಂದ ಶೇ.೦.೨೫ ರಷ್ಟು ಹೆಚ್ಚಿಸಿವೆ. ಹೆಚ್ಚು ಠೇವಣಿಗಳನ್ನು ಆಕರ್ಷಿಸುವುದು ಈಗ ಅನಿವಾರ್ಯವಾಗಿತ್ತು.

ಈ ವರ್ಷದ ಆರಂಭದವರೆಗೆ ಠೇವಣಿ ಬಡ್ಡಿ ದರಗಳು ತಳಮಟ್ಟದಲ್ಲಿಯೇ ಇದ್ದವು. ಮೇ ತಿಂಗಳಿಂದ ಹಂತ ಹಂತವಾಗಿ ಹೆಚ್ಚುತ್ತಾ ನಡೆದಿದೆ. ಸ್ಟೇಟ್ ಬ್ಯಾಂಕು ಈವರೆಗೆ ವಿವಿಧ ಮೊತ್ತಗಳು ಮತ್ತು ಅವಧಿಗಳಿಗೆ.೨.೦ರಷ್ಟು ಹೆಚ್ಚಿಸಿದ್ದು, ಅತಿ ಹೆಚ್ಚಿನ ದರ ಶೇ.೭.೦ಕ್ಕಿಂತ ಸ್ವಲ್ಪ ಕಡಿಮೆ ಇದ್ದು ಹಿರಿಯ ನಾಗರಿಕರ ಠೇವಣಿಗಳಿಗೆ ಶೇ.೦.೫೦ ಹೆಚ್ಚು ಕೊಡುತ್ತಿದೆ. ಎಲ್ಲ ಸರ್ಕಾರಿ ಬ್ಯಾಂಕುಗಳೂ ಇದನ್ನೇ ಅನುಸರಿಸಿದ್ದು, ಸ್ವಲ್ಪ ಆಚೆ ಈಚೆ ಇರುತ್ತವೆ. ಉಳಿತಾಯ ಖಾತೆಯ ಬಡ್ಡಿದರ ನಿರೀಕ್ಷಿಸಿದಷ್ಟು ಹೆಚ್ಚಾಗಿಲ್ಲ.

ಠೇವಣಿದಾರರಿಗೆ ಹೆಚ್ಚು ಬಡ್ಡಿ ಕೊಡುವಲ್ಲಿ ಖಾಸಗಿ ಬ್ಯಾಂಕುಗಳದ್ದೇ ಮೇಲುಗೈ, ಅದರಲ್ಲಿಯೂ ಸಣ್ಣ ಹಣಕಾಸು ಬ್ಯಾಂಕುಗಳು ಇನ್ನೂ ಒಂದು ಹೆಜ್ಜೆ ಮುಂದು. ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕಿನಲ್ಲಿ (ಎಚ್‌ಡಿಎಫ್‌ಸಿ) ಅತಿ ಹೆಚ್ಚಿನ ದರ ಶೇ.೭.೦ ಇದ್ದರೆ ಇಕ್ವಿಟಸ್ ಸ್ಮಾಲ್ ಫೈನಾನ್ಸ್ ಬ್ಯಾಂಕು ಶೇ.೮.೦ ಕೊಡುತ್ತದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕಿನಲ್ಲಿ ಪೀಕ ದರ ಶೇ.೭.೭೦ಕ್ಕೆ ಏರಿದ್ದರೆ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ ಶೇ.೭.೭೫ಕ್ಕೆ ಹೋಗಿದೆ. ಸಾಮಾನ್ಯವಾಗಿ ಬ್ಯಾಂಕುಗಳು ಮೊದಲು ಸಾಲಗಳ ಮೇಲೆ ಪಡೆಯುವ ಬಡ್ಡಿ ದರಗಳನ್ನು ಹೆಚ್ಚಿಸುತ್ತವೆ. ನಂತರ ಠೇವಣಿಗಳ ಮೇಲೆ ಕೊಡುವ ಬಡ್ಡಿದರ ಹೆಚ್ಚಿಸುತ್ತವೆ. ಆದರೆ ಈ ಸಲ ಈ ಸಮಯದ ಅಂತರ ಕಡಿಮೆಯಾಗಿದ್ದು, ಠೇವಣಿದಾರರಿಗೆ ಅನುಕೂಲ ಎನ್ನಬಹುದು.

ಕಳೆದ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಇದ್ದ ಒಂದು ವರ್ಷ ಅವಽಯ ಠೇವಣಿಗಳು ಮತ್ತು ಒಂದು ವರ್ಷದ ಸಾಲಗಳ ಬಡ್ಡಿ ದರಗಳನ್ನು ಗಮನಿಸೋಣ. ಬ್ಯಾಂಕ್ ಆಫ್ ಬರೋಡ ಸಂಶೋಧನಾ ವಿಭಾಗದ ವರದಿಯಂತೆ ಠೇವಣಿಗಳ ದರಗಳು ಅನುಕ್ರಮವಾಗಿ ಶೇ.೫.೭೦, ಶೇ.೬.೨೫ ಮತ್ತು ಶೇ.೬.೬೮ ಇದ್ದವು. ಅದೇ ರೀತಿ ಇದೇ ತಿಂಗಳಲ್ಲಿ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ಸ್ ಸೂತ್ರದಂತೆ ಸಾಲಗಳ ದರಗಳು ಶೇ.೭.೭೫, ಶೇ.೭.೯೦ ಮತ್ತು ಶೇ.೮.೦೫ ಇದ್ದವು. ಹೀಗಾಗಿ ಎರಡರ ನಡುವಿನ ಅಂತರ ಕಡಿಮೆಯಾಗುತ್ತಿದೆ.

ಸಣ್ಣ ಉಳಿತಾಯಗಳ ಬಡ್ಡಿ ದರಗಳು ಹೆಚ್ಚಬೇಕು:

ಪೋಸ್ಟ್ ಆಫೀಸ್‌ಗಳಲ್ಲಿಯ ಉಳಿತಾಯ ಯೋಜನೆಗಳನ್ನೆಲ್ಲ ‘ಸಣ್ಣ ಉಳಿತಾಯಗಳು ಎಂದು ಗುರುತಿಸಿ ಅವುಗಳ ಬಡ್ಡಿದರಗಳನ್ನು ಸರ್ಕಾರ ವಿಶೇಷ ರೀತಿಯಲ್ಲಿ ನಿಗದಿಪಡಿಸಿ ಮೂರು ತಿಂಗಳಿಗೊಮ್ಮೆ ಪ್ರಕಟಿಸುತ್ತದೆ (ಬದಲಾವಣೆಗಳಿದ್ದರೆ). ಈ ಗುಂಪಿನಲ್ಲಿ ಉಳಿತಾಯ ಪತ್ರಗಳು, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಹತ್ತಕ್ಕೂ ಹೆಚ್ಚು ಯೋಜನೆಗಳಿವೆ. ಈ ಉಳಿತಾಯಗಳೆಲ್ಲ ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳಿಗೆ ಕೊಟ್ಟಿರುವ ಸಾಲಗಳಿದ್ದಂತೆ.

ಸರ್ಕಾರಿ ಬಾಂಡ್ ಪೇಟೆಯಲ್ಲಿ ವ್ಯವಹರಿಸಲ್ಪಡುವ ೧೦ ವರ್ಷಗಳ ಅವಽಯ ಸರ್ಕಾರಿ ಬಾಂಡುಗಳ ಬೆಲೆಗಳ ಆಧಾರದ ಮೇಲೆ ಕಂಡುಕೊಳ್ಳಲಾದ ನಿವ್ವಳ ಲಾಭ ಅಥವಾ ನಷ್ಟವನ್ನಾಧರಿಸಿ ಸರಾಸರಿ ಕಂಡುಹಿಡಿದು ಈ ಎಲ್ಲಾ ಯೋಜನೆಗಳ ಬಡ್ಡಿ ದರಗಳನ್ನು ನಿರ್ಧರಿಸಿ ಕೊಡಲಾಗುತ್ತದೆ.

ಈಗ ಸಾಮಾನ್ಯ ಬಡ್ಡಿ ದರಗಳು ಹೆಚ್ಚಾಗಿರುವುದರಿಂದ ೧೦ ವರ್ಷಗಳ ಜ.ಸೆಕ್‌ಗಳ ಯೀಲ್ಡ್ ಪೇಟೆಯಲ್ಲಿ ಹೆಚ್ಚಾಗಲೇಬೇಕು. ಇದರ ಆಧಾರದ ಮೇಲೆ ಮುಂದಿನ ಮೂರು ತಿಂಗಳಿಗಾಗಿ ಈ ತಿಂಗಳ ಕೊನೆಯ ದಿನ ‘ಸಣ್ಣ ಉಳಿತಾಯಗಳ ಬಡ್ಡಿ ದರಗಳನ್ನು ಹೆಚ್ಚಿಸಿ ಪ್ರಕಟಿಸಲೇಬೇಕಾಗುತ್ತದೆ.

ಬಡ್ಡಿ ಆದಾಯವನ್ನೇ ಅವಲಂಬಿಸಿರುವ ನಿವೃತ್ತರು, ವಯಸ್ಸಾದ ಮಹಿಳೆಯರು ಮತ್ತು ಇತರರು ತಮ್ಮ ಜೀವಮಾನದ ಉಳಿತಾಯಗಳ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ತೊಡಗಿಸಿರುತ್ತಾರೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿಯೂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಉಳಿಸಿರುತ್ತಾರೆ. ಹಣ ದುಬ್ಬರದ ಈ ದಿನಗಳಲ್ಲಿ ಇವರೆಲ್ಲರಿಗೂ ಸಮರ್ಪಕ ಆದಾಯ ದೊರೆತು ಖರ್ಚು ತೂಗಿಸುವ ಶಕ್ತಿ ತುಂಬಬೇಕಲ್ಲವೆ?

ಈ ತಿಂಗಳ ೩೧ರಂದು ಆಶಾದಾಯಕ ಪ್ರಕಟಣೆ ಬಂದೀತೆ?

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago