‘ಶಿಕ್ಷಣ ಒಂದು ಪ್ರಬಲವಾದ ಅಸ್ತ್ರ. ವಿಶ್ವವನ್ನೇ ಬದಲಾವಣೆ ಮಾಡುವ ಶಕ್ತಿ ಅದಕ್ಕಿದೆ’ ಎಂದು ಶೋಷಿತ ವರ್ಗಗಳ ವಿಮೋಚನೆಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟವೇ ಅಂತಿಮ ದಾರಿ ಎಂದು ಅದರ ಮಹತ್ವವನ್ನು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ತೋರಿಸಿಕೊಟ್ಟರು. ಅದಕ್ಕಾಗಿ ಸ್ವತಃ ಹೆಚ್ಚು ಅಧ್ಯಯನ ಮಾಡಿ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಶ್ರಮಿಸಿದ್ದು ಇತಿಹಾಸ. ನಮ್ಮ ನಡುವೆ ಇರುವ ಲೇಖಕರಾದ ದೇವನೂರ ಮಹಾದೇವ ತಮ್ಮ ಕೃತಿ ‘ಎದೆಗೆ ಬಿದ್ದ ಅಕ್ಷರ’ದಲ್ಲಿ ‘ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲಕೊಡುತ್ತದೆ’ ಎಂದು ಅಕ್ಷರದ ಮಹತ್ವವನ್ನು ತಿಳಿಸಿದ್ದಾರೆ. ವಾಸ್ತವವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರಮದ -ಲವಾಗಿ ಜಾರಿಗೆ ಬಂದ ಮೀಸಲಾತಿ ವ್ಯವಸ್ಥೆಯಿಂದ ಇಡೀ ದೇಶದಲ್ಲಿ ದಲಿತ ವರ್ಗ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಗಣನೀಯ ಪ್ರಗತಿ ಕಂಡಿರುವ ವಾಸ್ತವವನ್ನು ತಳ್ಳಿಹಾಕಲಾಗದು.
ಎರಡು ವಾರಗಳ ಹಿಂದೆ ಅಂದರೆ ಮಾರ್ಚ್ ೨೧ರಂದು ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಅರಾಯ್ ಎಂಬಲ್ಲಿ ಸ್ವಂತ ಮನೆ ಇಲ್ಲದ ಕಡು ಬಡವರು ಅಲ್ಲಿನ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಜೋಪಡಿಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಯಿತು. ಅಕ್ರಮ ಮನೆಗಳ ನೆಲಸಮದ ಜೊತೆ ಬೆಂಕಿಯೂ ಬಡವರ ಮನೆಗಳನ್ನು ಸುಡುತ್ತಿತ್ತು. ಬುಲ್ಡೋಜರ್ ಮತ್ತು ಬೆಂಕಿ ಕೆನ್ನಾಲಿಗೆಗೆ ತನ್ನ ಮನೆಯು ನೆಲಸಮವಾಗಿ ಸುಟ್ಟು ಬೂದಿಯಾಗುವ ಭಯದಿಂದ ಆತಂಕಗೊಂಡ ಎಂಟು ವರ್ಷದ ಬಾಲಕಿ ಯೊಬ್ಬಳು ತನ್ನ ಜೀವದ ಹಂಗನ್ನೂ ತೊರೆದು ಮನೆಯೊಳಗೆ ನುಗ್ಗಿ ತನ್ನ ಭವಿಷ್ಯವನ್ನು ರೂಪಿಸುವ ಪುಸ್ತಕಗಳನ್ನು ಎದೆಗವಚಿಕೊಂಡು ಹೊರಗೆ ಓಡುತ್ತಾ ಬಂದಳು.
ಬಾಲಕಿ ಓಡಿ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಡೀ ದೇಶ ಮಾತ್ರವಲ್ಲ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತು. ಪ್ರಯಾಗ್ ರಾಜ್ ನಗರದಲ್ಲಿನ ಕೆಲವು ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಎ. ಎಸ್. ಓಕಾ ಮತ್ತು ಉಜ್ವಲ್ ಭುಯಾನ್ ಅವರು ಬಾಲಕಿಯು ತನ್ನ ಪುಸ್ತಕಗಳೊಡನೆ ನೆಲಸಮವಾಗುತ್ತಿದ್ದ ಮನೆಯಿಂದ ಹೊರಗೆ ಓಡಿ ಬರುತ್ತಿದ್ದುದನ್ನು ಪ್ರಸ್ತಾಪಿಸಿ ‘ಈ ಘಟನೆ ಎಲ್ಲರ ಮನಸ್ಸಿಗೂ ಆತಂಕ ಉಂಟುಮಾಡುವಂತಹದ್ದು’ ಎಂದು ಉತ್ತರ ಪ್ರದೇಶ ಸರ್ಕಾರದ ನಡೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಈ ಕ್ರಮ ‘ಅಕ್ರಮ ಮತ್ತು ಅಸೂಕ್ಷ್ಮವಾದದ್ದು’ ಎಂದು ಟೀಕಿಸಿತು.
ಸಂವಿಧಾನದ ವಿಧಿ ೨೧ರ ಪ್ರಕಾರ ಪ್ರತಿಯೊಬ್ಬರಿಗೂ ಬದುಕಲು ಒಂದು ಸೂರನ್ನು ಒದಗಿಸುವುದು ಯಾವುದೇ ನಾಗರಿಕ ಸರ್ಕಾರದ ಕರ್ತವ್ಯ. ಇದು ಈ ನೆಲದ ಕಾನೂನು. ಈ ಕನಿಷ್ಠ ಸೌಲಭ್ಯವನ್ನೂ ಪೂರೈಸುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು. ಯಾವುದೇ ಸರ್ಕಾರ ತನ್ನ ಈ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದರೆ ಬಡವರು ಏಕೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಸೂರನ್ನು ನಿರ್ಮಿಸಿಕೊಳ್ಳುತ್ತಾರೆ ಎನ್ನುವ ಬಗೆಗೆ ಸರ್ಕಾರಗಳು ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ.
ಹಿಂಸಾಕೃತ್ಯಗಳಲ್ಲಿ ಆರೋಪಿಗಳಾದ ಕೆಲವರ ಮನೆಗಳನ್ನು ಬುಲ್ಡೋಜರ್ ಗಳಿಂದ ನೆಲಸಮ ಮಾಡುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕ್ರಮವನ್ನು ತಾರತಮ್ಯದಿಂದ ಕೂಡಿದ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಹೀಗೆಯೇ ಮುಂದುವರಿಯಬೇಕೆನ್ನುವ ಸಿದ್ಧಾಂತ ದಲ್ಲಿ ನಂಬಿಕೆ ಉಳ್ಳ ಜನರು ಕೊಂಡಾಡುತ್ತಾರೆ. ಆದರೆ ಇತ್ತೀಚೆಗೆ ಬುಲ್ಡೋ ಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆಹಾಕಿರುವುದು ಯೋಗಿ ಅವರ ನಿರಂಕುಶ ಆಡಳಿತಕ್ಕೆ ಛೀಮಾರಿ ಹಾಕಿದಂತಾಗಿದೆ.
ಇಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ್ದು ಅನನ್ಯ ಯಾದವ್ ಎನ್ನುವ ಬಡಬಾಲಕಿಯ ಶಿಕ್ಷಣದ ಅರಿವಿನ ಬಗೆಗೆ. ಈ ಬಾಲಕಿಯ ಕನಸಿನ ಬಗ್ಗೆ ಬಿಬಿಸಿ ಕೂಡ ಒಂದು ಕಿರು ಸಂದರ್ಶನ ನಡೆಸಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಈ ಬಾಲಕಿಯ ಶಿಕ್ಷಣದ ಖರ್ಚನ್ನು ತಾವು ನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ. ಅನನ್ಯ ಯಾದವ್ ನಮ್ಮ ಕಣ್ಣಿಗೆ ಬಿದ್ದ ಒಬ್ಬ ಬಾಲಕಿ. ಇಂತಹ ಲಕ್ಷಾಂತರ ಕೋಟ್ಯಂತರ ಅನನ್ಯ ಯಾದವ್ ಇಡೀ ದೇಶದ ಉದ್ದಗಲಕ್ಕೂ ಇದ್ದಾರೆ. ಇವರಿಗೆಲ್ಲ ಯಾರು ಶಿಕ್ಷಣ ಕೊಡುತ್ತಾರೆ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ಶಿಕ್ಷಣ ನೀಡುವಲ್ಲಿ ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ ಎನ್ನುವುದರತ್ತ ನೋಡುವುದು ಮುಖ್ಯ.
ಉತ್ತರ ಪ್ರದೇಶ ನಮ್ಮ ದೇಶದ ರಾಜಕಾರಣದಲ್ಲಿ ಬಹು ಪ್ರಮುಖ ಪಾತ್ರವಹಿಸುವ ದೊಡ್ಡ ರಾಜ್ಯ. ಎಂಬತ್ತು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಈ ರಾಜ್ಯದಿಂದ ಬರುವವರೇ ಪ್ರಧಾನ ಮಂತ್ರಿಯಾಗಿ ದೇಶದ ಆಡಳಿತ ನಡೆಸಿದ್ದಾರೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರೂ ಗುಜರಾತಿನವರಾದರೂ ಉತ್ತರ ಪ್ರದೇಶದಿಂದ ಆಯ್ಕೆಯಾಗಿ ಬಂದಿದ್ದಾರೆ. ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರವಹಿಸುವ ಉತ್ತರ ಪ್ರದೇಶ ಒಟ್ಟಾರೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯ. ಕಳೆದ ವರ್ಷ ಲೋಕಸಭೆಯಲ್ಲಿ ನೀಡಿದ ಅಂಕಿ ಅಂಶದ ಪ್ರಕಾರ ಇಡೀ ದೇಶದಲ್ಲಿ ೨೦೨೪-೨೫ರಲ್ಲಿ ೧.೧೭ ದಶಲಕ್ಷ ಮಕ್ಕಳು ಅರ್ಧಕ್ಕೇ ಶಾಲೆ ಬಿಟ್ಟಿದ್ದಾರೆ. ೭,೮೪,೨೨೮ ಮಕ್ಕಳು ಹೈಯರ್ ಸೆಕೆಂಡರಿ ಒಳಗೆ ಅರ್ಧದಲ್ಲಿಯೇ ಶಿಕ್ಷಣ ಮುಂದುವರಿಸಲಾಗದೆ ಶಾಲೆ ಗಳಿಂದ ಹೊರಗುಳಿದಿದ್ದಾರೆ. ಈ ರಾಜ್ಯವನ್ನು ಹೊರತು ಪಡಿಸಿದರೆ ಜಾರ್ಖಂಡ್‌ನಲ್ಲಿ ೬೫,೦೭೦ ಮತ್ತು ಅಸ್ಸಾಂ ನಲ್ಲಿ ೬೩,೮೪೮ ಮಕ್ಕಳು ಅರ್ಧದಲ್ಲಿಯೇ ಶಾಲೆಗಳನ್ನು ಬಿಟ್ಟಿದ್ದಾರೆ.
ಮಕ್ಕಳು ಅರ್ಧದಲ್ಲಿಯೇ ಶಾಲೆಗಳನ್ನು ಬಿಡಲು ಮನೆಯಲ್ಲಿನ ಕಡುಬಡತನ, ಸರಿಯಾದ ಶಿಕ್ಷಣ ಸೌಲಭ್ಯಗಳಿಲ್ಲದಿರುವುದು ಅಂದರೆ ಸ್ವಂತ ಊರುಗಳಲ್ಲಿ ಶಾಲೆಗಳಿಲ್ಲದೆ ಇರುವುದು ಪ್ರಮುಖ ಕಾರಣಗಳಾಗಿವೆ. ಜೊತೆಗೆ ಕುಟುಂಬದ ಹದಗೆಟ್ಟ ಆರ್ಥಿಕ ಸ್ಥಿತಿಗತಿ, ಇದರ ಪರಿಣಾಮ ಮಕ್ಕಳನ್ನೂ ದುಡಿಮೆಗೆ ಹಚ್ಚುವುದು ಹಾಗೂ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡುವ ಸಂಪ್ರದಾಯ. ಶಾಲೆಗಳಿಗೆ ಶುಲ್ಕ ಕಟ್ಟಲಾಗದಿರುವುದು ಮತ್ತು ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ಬೇರೆ ಊರುಗಳಿಗೆ ವಲಸೆ ಹೋಗುವುದು ಮುಖ್ಯ ಕಾರಣವಾಗಿವೆ.
ಇಂದಿಗೂ ಕೂಡ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಲ್ಲ. ಊರಿಂದ ಊರಿಗೆ ಮಕ್ಕಳು ನಡೆದುಕೊಂಡೇ ಹೋಗಬೇಕಿರುವ ದುಃಸ್ಥಿತಿ ಇದೆ. ಹೀಗಾಗಿ ಶಾಲೆಗಳಿಗೆ ಚಕ್ಕರ್ ಹೊಡೆಯದೆ ಹೋಗುವ ಮಕ್ಕಳ ಸಂಖ್ಯೆಯು ಕಡಿಮೆ ಆಗಿದೆ. ಶೈಕ್ಷಣಿಕ ತಜ್ಞರ ಪ್ರಕಾರ ಈ ಎಲ್ಲ ಕಾರಣಗಳ ಜೊತೆಗೆ ತಮ್ಮ ಜೀವನಕ್ಕೆ ಸಂಬಂಧಿಸಿಲ್ಲದ ಪಠ್ಯಗಳಿಂದ ಓದಲು ಆಸಕ್ತಿ ಕಳೆದುಕೊಳ್ಳುವುದು ಮುಂದುವರಿದಿದೆ. ಇದಲ್ಲದೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೂ ಮುಖ್ಯ ಕಾರಣವಾಗಿದ್ದು, ಮಕ್ಕಳನ್ನು ಶಾಲೆಗಳಿಗೆ ಆಕರ್ಷಿಸಲು ಮಧ್ಯಾಹ್ನದ ಉಪಾಹಾರ ಕಾರ್ಯಕ್ರಮ, ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ಪೂರೈಕೆಯನ್ನು ಸರ್ಕಾರ ಎಲ್ಲಡೆಯೂ ಹೆಚ್ಚಿಸುವುದು ಅನಿವಾರ್ಯವಾಗಿದೆ. ೨೦೦೯ರಲ್ಲಿ ಅಂದಿನ ಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯ್ದೆಯಂತೆ ವಲಸೆ ಮಕ್ಕಳಿಗೆ ಆಯಾ ಊರಿನ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಉಚಿತ ಪ್ರವೇಶ ನೀಡಬೇಕು ಮತ್ತು ಹಾಗೆಯೇ ತಮ್ಮ ಶೈಕ್ಷಣಿಕ ಅವಧಿ ಮುಗಿದ ಮೇಲೆ ಅಂತಹ ಮಕ್ಕಳ ಪೋಷಕರ ಬೇಡಿಕೆಯಂತೆ ಬೇರೆ ಊರುಗಳ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅವಶ್ಯವಾದ ಸರ್ಟಿಫಿಕೇಟ್‌ಗಳನ್ನು ನೀಡಬೇಕು.
ಈ ಎಲ್ಲ ಸೌಲಭ್ಯಗಳ ನಡುವೆಯೂ ಪ್ರಾಥಮಿಕ ಶಾಲೆಯ ಹಂತದ ಲ್ಲಿಯೇ ಹಲವು ಕಾರಣಗಳಿಗಾಗಿ ಮಕ್ಕಳು ಅರ್ಧದಲ್ಲಿಯೇ ಶಾಲೆ ಬಿಡುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಗಳು ನಿಯಂತ್ರಿಸಲಾಗದ ಸ್ಥಿತಿ ಮುಂದುವರಿದಿರುವುದು ದುರಂತ. ಅಂಬೇಡ್ಕರ್ ನಗರದ ಬಾಲಕಿ ಅನನ್ಯಗೆ ಮೂಡಿದಂತಹ ಜಾಗೃತಿ ಎಲ್ಲ ಬಡಮಕ್ಕಳಲ್ಲೂ ಮೂಡಬೇಕಿದೆ. ಅಂದರೆ ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸುವ ಶೈಕ್ಷಣಿಕ ವಾತಾವರಣ, ಕುಟುಂಬ ಮತ್ತು ಸಮಾಜದಲ್ಲಿ ಬರಬೇಕಾದ ಉತ್ತೇಜನಕಾರಿ ವ್ಯವಸ್ಥೆ ಇದಕ್ಕೆ ಪೂರಕವಾಗಬಲ್ಲದು. ಹಳ್ಳಿಗಾಡುಗಳಲ್ಲಿಯೂ ಹೆಚ್ಚುತ್ತಿರುವ ಖಾಸಗಿ ಆಂಗ್ಲಶಾಲೆಗಳ ಶೈಕ್ಷಣಿಕ ಗುಣಮಟ್ಟ ಮತ್ತು ಸೌಲಭ್ಯಗಳು ಉಳ್ಳವರಿಗೆ ಸಹಾಯವಾಗಿದೆ. ಇದರಿಂದ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳಲ್ಲಿ ವರ್ಷ ವರ್ಷವೂ ಪ್ರವೇಶಾತಿ ಕಡಿಮೆ ಆಗುತ್ತಿದೆ. ದುರಂತ ಎಂದರೆ ಸರ್ಕಾರಿ ಶಾಲೆಗಳ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದರಿಂದ ಅನಿವಾರ್ಯವಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪುತ್ತಿರುವುದು ವಿಪರ್ಯಾಸ.
ಈ ಎಲ್ಲ ಸಮಸ್ಯೆಗಳ ನಡುವೆ ಕೇರಳ ರಾಜ್ಯವು ಸಾಕ್ಷರತೆ ಮತ್ತು ಶೈಕ್ಷಣಿಕವಾಗಿ ಇಡೀ ದೇಶದಲ್ಲಿಯೇ ಮೊದಲ ಸ್ಥಾನವನ್ನು ನಿರಂತರವಾಗಿ ಉಳಿಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ೨೦೨೪ ಮತ್ತು ೨೦೨೫ರ ಅವಧಿಯಲ್ಲಿನ ಸುಮಾರು ಎಂಟು ರಾಜ್ಯಗಳ ಸಾಕ್ಷರತೆಯ ಪ್ರಮಾಣ ಹೀಗಿದೆ:
ಕೇರಳ ಶೇ. ೯೪, ಲಕ್ಷದ್ವೀಪ ಶೇ. ೯೧. ೮೫, ಮಿಜೋರಾಂ ಶೇ. ೯೧. ೩೩, ದೆಹಲಿ ಶೇ. ೮೮. ೭, ಉತ್ತರಾಖಂಡ ಶೇ. ೮೭. ೬, ತ್ರಿಪುರ ಶೇ. ೮೭. ೭೫, ಮಹಾರಾಷ್ಟ್ರ ಶೇ. ೮೪. ೮, ಪಂಜಾಬ್ ಶೇ. ೮೩. ೭, ಗೋವಾ ಶೇ. ೮೭. ೪, ತಮಿಳುನಾಡು ಶೇ. ೮೦, ಕರ್ನಾಟಕ ಶೇ. ೭೫, ಆಂಧ್ರ ಪ್ರದೇಶ ಶೇ. ೬೭, ತೆಲಂಗಾಣ ಶೇ. ೬೬. ೫೪, ಮತ್ತು ಅತ್ಯಂತ ಕಡಿಮೆ ಸಾಕ್ಷರತೆ ಇರುವ ರಾಜ್ಯ ಎಂದರೆ ಬಿಹಾರ ಶೇ. ೬೧. ೮ ಇದೆ. ಕೇಂದ್ರದ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣಾದೇವಿ ಅವರು ಇತ್ತೀಚೆಗೆ ಲೋಕಸಭೆಗೆ ನೀಡಿರುವ ಮಾಹಿತಿ ಇದು. ದಕ್ಷಿಣ ರಾಜ್ಯಗಳು ವಿಶೇಷವಾಗಿ ಕರ್ನಾಟಕವು ಸಂಪನ್ಮೂಲ ಕ್ರೋಡೀಕರಣದಲ್ಲಿ ಮುಂದಿದ್ದರೂ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಬೇಕೆನ್ನುವ ಕೇಂದ್ರ ಸರ್ಕಾರದ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದು ಕಾಣುತ್ತಿದೆ.
ಬೆಳ್ತಂಗಡಿ: ಇಲ್ಲಿನ ನಾರಾವಿಯ ಕುತ್ತೂರಿನಲ್ಲಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ…
ಹನೂರು: ಪಟ್ಟಣದಿಂದ ಅಜ್ಜಿಪುರ- ರಾಮಾಪುರ ರಸ್ತೆಯ ಮಾರ್ಗ ಮಧ್ಯದ ಅರಕನಹಳ್ಳ ಬಳಿ ಹಾಡಹಗಲೇ ಕಾಡು ಆನೆಗಳು ರಸ್ತೆ ಸಮೀಪವೆ ಆಗಮಿಸುತ್ತಿರುವುದರಿಂದ…
ರಾಮನಗರ : ಇಲ್ಲಿನ ಮಾಗಡಿಯ ಸೋಲೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಕ್ಚರ್ ಆಗಿ ನಿಂತದ್ದ ಕ್ಯಾಂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಪ್ರಶಸ್ತಿಗಳಲ್ಲೊಂದಾದ ‘ಕನ್ನಡ ಚಳವಳಿ ವೀರ ಸೇನಾನಿ ಮ.ರಾಮಮೂರ್ತಿ ದತ್ತಿ ಪ್ರಶಸ್ತಿ’ಗೆ ಮೈಸೂರಿನ ಕನ್ನಡ…
ಕಾಫಿ, ಸಂಬಾರ ಪದಾರ್ಥ, ಸಿದ್ಧ ಉಡುಪು, ಡೇರಿ ಉತ್ಪನ್ನಕ್ಕೆ ಹೊಡೆತ ಡಿ.ವಿ ರಾಜಶೇಖರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ…
ಸೂಕ್ತ ಚಿಕಿತ್ಸೆಗಾಗಿ ರೋಗಿಗಳ ಪರದಾಟ; ವೈದ್ಯರ ನೇಮಕಕ್ಕೆ ಒತ್ತಾಯ ಲಕ್ಷ್ಮಿಕಾಂತ್ ಕೊಮಾರಪ್ಪ ಸೋಮವಾರಪೇಟೆ: ಪಟ್ಟಣದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡ…