40 ವರ್ಷ ಪ್ರಾಯದ ರಾಜಾ ಮಹೇಂದ್ರ ಪ್ರತಾಪ್‌ಗೆ ಎರಡೂ ಕಾಲುಗಳಿಲ್ಲ ಮತ್ತು ಎರಡೂ ಕೈಗಳಿಲ್ಲ. ಆದರೂ ಅವರು ತನ್ನ ತಲೆಯನ್ನು ತಾನೇ ಬಾಚಿಕೊಳ್ಳುತ್ತಾರೆ. ತನ್ನ ಮನೆಯ ಬೀಗವನ್ನು ತಾನೇ ಹಾಕುತ್ತಾರೆ. ತಾನು ಕೆಲಸ ಮಾಡುವ ಕಟ್ಟಡದ ಲಿಫ್ಟ್ ಕೆಟ್ಟಿದ್ದರೆ ಸಲೀಸಾಗಿ ಮೆಟ್ಟಿಲು ಹತ್ತಿ ಹೋಗುತ್ತಾರೆ. ಮನೆ ಅಥವಾ ಆಫೀಸಿನಿಂದ ಹೊರಗಿದ್ದಾಗ, ಅಥವಾ ರಸ್ತೆ ದಾಟುವಾಗ ಅಕ್ಕಪಕ್ಕದವರು ಆಶ್ಚರ್ಯಗೊಂಡು ತನ್ನನ್ನೇ ನೋಡುವಾಗ ಅವರಿಗೆ ಏನೂ ಮುಜುಗರ ವಾಗುವುದಿಲ್ಲ. ಬದಲಿಗೆ, ಏನೋ ಒಂದು ರೀತಿಯಲ್ಲಿ ಖುಷಿ ಪಡುತ್ತಾರೆ. ಮತ್ತೆ ಯಾರಾದರೂ ಮೆಚ್ಚುಗೆಯಿಂದ ನೋಡಿದರಂತೂ ಇನ್ನೂ ಹೆಚ್ಚಿನ ಖುಷಿ ಅನುಭವಿಸುತ್ತಾರೆ. ಎಂಬಿಎ ಮಾಡಿ ಅಹಮದಾಬಾದಿನ ಓಎನ್‌ಜಿಸಿ ಕಚೇರಿಯಲ್ಲಿ ಫೈನಾನ್ಸ್ ಆಂಡ್ ಅಕೌಂಟ್ಸ್ ಆಫೀಸರ್ ಆಗಿ ಕೈತುಂಬಾ ಸಂಬಳ ಪಡೆಯುವ ರಾಜಾ ಮಹೇಂದ್ರ ಅಂಗವಿಕಲರಿಗೆ ಮಾತ್ರವಲ್ಲ, ಇತರ ಸಾಮಾನ್ಯರಿಗೂ ಆತ್ಮ ವಿಶ್ವಾಸದ ಮೂರ್ತಿಯಾಗಿ ಕಾಣುವುದರಲ್ಲಿ ಸಂಶಯವಿಲ್ಲ.
ಮಹೇಂದ್ರ ಪ್ರತಾಪ್ ಹುಟ್ಟು ಅಂಗವಿಕಲರಲ್ಲ. ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ಜನಿಸಿದ ಮಹೇಂದ್ರ ಪ್ರತಾಪ್ ಬಾಲ್ಯದಲ್ಲಿ ಒಂದು ಬುದ್ಧಿಗೇಡಿತನದ ಸಾಹಸ ಮಾಡಲು ಹೋಗಿ ತಮ್ಮ ಕೈಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಅವರು ಐದು ವರ್ಷದವರಾಗಿದ್ದಾಗ ಒಂದು ದಿನ ಆಟವಾಡುತ್ತಿದ್ದಾಗ ಕೆಲವು ಮಕ್ಕಳು ‘ನಿನ್ನ ಹೆಸರು ಪ್ರತಾಪ ಅಲ್ಲವೇ, ನಿನಗೆ ವಿದ್ಯುತ್ ತಂತಿಗೆ ಕಬ್ಬಿಣದ ಸರಳನ್ನು ತಾಗಿಸಿ ಹಿಡಿದುಕೊಂಡು ನಿಲ್ಲುವ ಧೈರ್ಯ ಇದೆಯಾ?’ ಎಂದು ಸವಾಲು ಹಾಕಿದರು. ಹುಡುಗು ಬುದ್ಧಿಯ ಪ್ರತಾಪ್ ತನ್ನ ಪ್ರತಾಪ ತೋರಿಸಲು ಮುಂದಾಗಿ ಆ ಸವಾಲನ್ನು ಸ್ವೀಕರಿಸಿ, ಕಬ್ಬಿಣದ ಸರಳನ್ನು ಹೈವೊಲ್ಟೇಜ್ ವಿದ್ಯುತ್ ತಂತಿಗೆ ತಾಗಿಸಿದರು ಅಷ್ಟೇ! ಕ್ಷಣಾರ್ಧದಲ್ಲಿ ಅಗಾಧ ಪ್ರಮಾಣದ ವಿದ್ಯುತ್ ಅವರ ದೇಹದೊಳಕ್ಕೆ ಪ್ರವಹಿಸಿತು. ಅವರ ಜೀವವುಳಿದರೂ, ಕೈಕಾಲುಗಳು ಸುಟ್ಟು ಹೋದವು. ಆಸ್ಪತ್ರೆಗೆ ಕೊಂಡೊಯ್ದಾಗ ಎರಡೂ ಕೈ ಮತ್ತು ಎರಡೂ ಕಾಲುಗಳನ್ನು ಕತ್ತರಿಸಬೇಕಾಗಿ ಬಂದಿತು.
ಆ ದಿನದಿಂದ ಮುಂದಿನ ತಮ್ಮ ಹದಿನಾರನೇ ವಯಸ್ಸಿನ ತನಕ ಪ್ರತಾಪ್ ಮನೆಯಿಂದ ಹೊರಕ್ಕೆ ಬರಲಿಲ್ಲ. ಶಾಲೆಗೆ ಹೋಗುವುದು ನಿಂತಿತು. ತಮ್ಮ ಕೋಣೆಯ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿ ಇರಬೇಕಾಯಿತು. ಅವರ ತಂದೆ ಮಗನ ಸ್ಥಿತಿಗೆ ಎಷ್ಟು ಮುಜುಗರ ಪಡುತ್ತಿದ್ದರೆಂದರೆ, ಮನೆಗೆ ಯಾರಾದರೂ ನೆಂಟರು ಬಂದಾಗ ಪ್ರತಾಪ್ ಅವರೆದುರು ಬಾರದಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಬಟ್ಟೆ ಹೊಲಿಸಬೇಕಿದ್ದರೆ ಟೈಲರನ್ನು ಮನೆಗೇ ಕರೆಸುತ್ತಿದ್ದರು. ಕ್ಷೌರ ಮಾಡಿಸಲು ಕ್ಷೌರಿಕನನ್ನು ಮನೆಗೆ ಕರೆಸುತ್ತಿದ್ದರು. ಹಾಗೆಯೇ, ಹುಷಾರಿಲ್ಲದಾಗ ಡಾಕ್ಟರನ್ನೂ ಮನೆಗೆ ಕರೆಸುತ್ತಿದ್ದರು.
ಆದರೆ, ಪ್ರತಾಪರ ಮೂವರು ಅಕ್ಕಂದಿರು ಅವರ ನೆರವಿಗೆ ನಿಂತು, ಸ್ಛೂರ್ತಿ ನೀಡುತ್ತಿದ್ದರು. ಅವರು ಪ್ರತಾಪರಿಗೆ ತಮ್ಮ ತರಗತಿಯ ಪುಸ್ತಕಗಳನ್ನು ಕೊಟ್ಟು ಓದಲು ಪ್ರೇರೇಪಿಸುತ್ತಿದ್ದರು. ತನ್ನ ಅಕ್ಕಂದಿರ ಪ್ರೀತಿ, ಬೆಂಬಲದಿಂದ ನಿಧಾನಕ್ಕೆ ಆತ್ಮವಿಶ್ವಾಸ ಪಡೆದುಕೊಂಡ ಪ್ರತಾಪ್, ಮೊದಲು ತೆವಳಲು ಪ್ರಾರಂಭಿಸಿದರು. ಆಗ ಅವರ ಕಾಲಿನ ಚರ್ಮ ಒಡೆದು ರಕ್ತ ಒಸರುತ್ತಿತ್ತು. ಆದರೂ ಛಲ ಬಿಡದೆ ಮುಂದುವರಿಸಿದರು. ಹಾಗೆ ತೆವಳುತ್ತ ನಿಧಾನವಾಗಿ ನಡೆಯಲು ಕಲಿತರು. ಬಾಯಿ ಮತ್ತು ಕೈಗಂಟಿನ ಸಹಾಯದಿಂದ ವಸ್ತುಗಳನ್ನು ಎತ್ತಲು ಕಲಿತರು. ಹೀಗೆ ಕಲಿಯುತ್ತ ಮುಂದೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದನ್ನೂ ಕರಗತ ಮಾಡಿಕೊಂಡರು. ದವಡೆಯನ್ನು ಉಪಯೋಗಿಸಿ ಬರೆಯುವುದನ್ನೂ ಕಲಿತರು. ನಂತರ, ಕಾಲು ಗಂಟಿನ ಮೇಲೆ ಸರಾಗವಾಗಿ ನಡೆಯಲು ಶಕ್ಯರಾದರು.
ಕಾಲು ಗಂಟುಗಳಿಗೆ ಚಪ್ಪಲಿಗಳನ್ನು ಮಾಡಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಯಾವ ಮೋಚಿಯೂ ಅವರ ಸಹಾಯಕ್ಕೆ ಬರಲಿಲ್ಲ. ಹಲವು ವರ್ಷಗಳ ಪ್ರಯತ್ನದ ನಂತರ ಒಬ್ಬ ಮೋಚಿ ಅವರ ನೆರವಿಗೆ ಬಂದು, ಚಪ್ಪಲಿಗಳನ್ನು ಮಾಡಿಕೊಟ್ಟರು. ಪ್ರತಾಪ್ ಮುಂದೆ, ಶಾಲೆಗೆ ಹೋಗದಿದ್ದರೂ ಮಾಡಿಯಾಗಿ ಕುಳಿತು, ಹತ್ತು ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ಪಾಸು ಮಾಡಿದರು. ನಂತರ, ಬಿ.ಕಾಂ., ಅದರ ನಂತರ ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದರು. ಆ ನಂತರ ಮಹೇಂದ್ರ ಪ್ರತಾಪ್ ಹಿಂತಿರುಗಿ ನೋಡಲಿಲ್ಲ.
ದೆಹಲಿ ಮೂಲದ ನ್ಯಾಷನಲ್ ಸೆಂಟರ್ ಫಾರ್ ಪ್ರೊಮೋಶನ್ ಆಫ್ ಎಂಪ್ಲಾಯ್ಮೆಂಟ್ ಫಾರ್ ಡಿಸೆಬಲ್ಡ್ ಪೀಪಲ್’ ದಿಂದ ಸ್ಕಾಲರ್‌ಶಿಪ್ ಪಡೆದು, ಫೈನಾನ್ಸ್ ಓದಿದರು. ಪ್ರತಾಪ್‌ಗೆ ಉದ್ಯೋಗಕ್ಕಾಗಿ ಹಲವಾರು ಸಂದರ್ಶನದ ಕರೆಗಳು ಬಂದವು. ಆದರೆ, ಸಂದರ್ಶನಕಾರರು ಪ್ರತಾಪ್‌ರನ್ನು ಮುಖತಃ ನೋಡುತ್ತಲೇ ಅವರಿಗೆ ಉದ್ಯೋಗ ನೀಡಲು ಹಿಂಜರಿಯುತ್ತಿದ್ದರು. ಪ್ರತಿ ಸಂದರ್ಶನದ ನಂತರ ಪ್ರತಾಪ್ ತೀವ್ರವಾದ ನಿರಾಶೆಗೆ ಒಳಗಾಗುತ್ತಿದ್ದರು. ಆದರೂ, ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಪುನಃ ಪುನಃ ಪ್ರಯತ್ನಿಸುತ್ತಿದ್ದರು. ಅದರ ಫಲವಾಗಿ, ಕೊನೆಗೆ ದೆಹಲಿಯ ‘ನ್ಯಾಷನಲ್ ಹೌಸಿಂಗ್ ಬ್ಯಾಂಕ್’ನಲ್ಲಿ ಸಹಾಯಕ ಮೇನೇಜರ್ ಹುದ್ದೆ ಪಡೆಯುವಲ್ಲಿ ಯಶಸ್ವಿಯಾದರು. ಸದ್ಯ ಮಹೇಂದ್ರ ಪ್ರತಾಪ್ ಅಹಮದಾಬಾದಿನ ಓಎನ್ ಜಿಸಿ ಸಂಸ್ಥೆಯಲ್ಲಿ ‘ಫೈನಾನ್ಸ್ ಆಂಡ್ ಅಕೌಂಟ್ಸ್ ಆಫೀಸರ್’ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಪ್ರತಾಪ್ ಸ್ವತಃ ತಾವೇ ಅರ್ಹ ಅಂಗವಿಕಲ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡುತ್ತಾರೆ.
ಪ್ರತಾಪ್ ತಮ್ಮ ಚಟುವಟಿಕೆ ಹಾಗೂ ಉತ್ಸಾಹಭರಿತ ನಡವಳಿಕೆಗಳಿಂದಾಗಿ ತಮ್ಮ ಈಗಿನ ಹಾಗೂ ಹಿಂದಿನ ಕಚೇರಿಗಳಲ್ಲಿ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳ ಸಂಪೂರ್ಣ ಬೆಂಬಲ, ಗೌರವ ಹಾಗೂ ಪ್ರೀತಿಯನ್ನು ಪಡೆದಿದ್ದಾರೆ. ತೀವ್ರವಾದ ತಮ್ಮ ಅಂಗವಿಕಲತೆಯನ್ನು ಒಂದುವಿಕಲತೆಯಾಗಿಯೇ ಸ್ವೀಕರಿಸದ ಪ್ರತಾಪ್, ಜನ ತನ್ನನ್ನು ಇತರ ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಪರಿಗಣಿಸಬೇಕೆಂದು ಬಯಸುತ್ತಾರೆ. ಅವರು ಯಾವತ್ತೂ, ಎಲ್ಲಿಯೂ, ಯಾರಿಗೂ ಹೇಳುವ ಮಾತೆಂದರೆ-‘ನೀವು ನನಗೆ ಯಾವ ಕೆಲಸವನ್ನು ಬೇಕಾದರೂ ಕೊಡಿ, ನಾನದನ್ನು ಮಾಡುತ್ತೇನೆ. ನನಗೆ ಯಾರ ಕರುಣೆ ಬೇಕಾಗಿಲ್ಲ. ನೀವು ನನ್ನನ್ನು ಎಲ್ಲರಂತೆಯೇ ಒಬ್ಬ ಸಾಮಾನ್ಯ ಮನುಷ್ಯ ಎಂದು ಪರಿಗಣಿಸಿದರೆ ನನಗದು ನೀವು ಕೊಡುವ ಗೌರವ ಹಾಗೂ ಪ್ರೀತಿ’ ಎಂಬುದು. ಕಚೇರಿಯಲ್ಲಿ ಯಾವುದೇ ಹೊಸ ಕೆಲಸವಿರಲಿ ಪ್ರತಾಪ್ ಅಲ್ಲಿ ಮುಂದಿನ ಸಾಲಲ್ಲಿರುತ್ತಾರೆ. ಬೆರಳುಗಳಿಲ್ಲದಿದ್ದರೂ ಅವರ ಕೈಬರಹ ಬಹಳ ಸುಂದರವಾಗಿದೆ. ಇಂತಹ ವ್ಯಕ್ತಿಯನ್ನು ಗೌರವಿಸದವರು, ಪ್ರೀತಿಸದವರು ಇರಲು ಸಾಧ್ಯವೇ?
ಪ್ರತಾಪ್‌ರ ಕುಟುಂಬದವರು. ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರೆ, ಪ್ರತಾಪ್ ತಮ್ಮ ಕಂಪೆನಿ ನೀಡಿದ ಅಹಮದಾಬಾದಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವಿವಾಹಿತರಾಗಿರುವ ಅವರು ಬಟ್ಟೆ ಒಗೆಯುವುದು, ಅಡುಗೆ ಮಾಡುವುದು ಮೊದಲಾಗಿ ತಮ್ಮೆಲ್ಲಾ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಯಾರ ಸಹಾಯವೂ ಇಲ್ಲದೆ ಬಸ್ಸು, ರೈಲು ಹಾಗೂ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಅಷ್ಟೇ ಅಲ್ಲದೆ, ಹಲವು ಬಾರಿ ವಿದೇಶಗಳನ್ನು ಸುತ್ತಿ ಬಂದಿದ್ದಾರೆ. ಚೀನಾ ಮತ್ತು ಜಪಾನಿನಲ್ಲಿ ನಡೆದ ‘ವರ್ಲ್ಡ್ ಡಿಸೇಬಲ್ಡ್ ಫೋರಮ್’ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ತಮ್ಮ ವಿದೇಶ ಪ್ರವಾಸಗಳ ಅನುಭವದಿಂದ ಪ್ರತಾಪ್, ಭಾರತವು ಅಂಗವಿಕಲ ಸ್ನೇಹಿ ದೇಶವಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ೨.೭ ಕೋಟಿ, ಅಂದರೆ, ಜನಸಂಖ್ಯೆಯ ೨.೨೧% ಜನ ಒಂದಲ್ಲ ಒಂದು ರೀತಿಯ ಅಂಗವೈಕಲ್ಯತೆ ಹೊಂದಿದ್ದಾರೆ. ಆದರೂ, ಇಂದಿಗೂ ಭಾರತೀಯ ಸಮಾಜ ಅಂಗವಿಕಲ ವ್ಯಕ್ತಿಗಳನ್ನು ಕರುಣೆಯಿಂದ ಅಥವಾ ಪೂರ್ವಗ್ರಹದಿಂದ ಕಾಣುವುದೇ ವಿನಾ ಅವರನ್ನು ಇತರ ಸಾಮಾನ್ಯ ವ್ಯಕ್ತಿಗಳಂತೆ ಗೌರವ, ಪ್ರೀತಿಯಿಂದ ಕಾಣುವಷ್ಟು ಪ್ರಬುದ್ಧವಾಗಿ ಬೆಳೆದಿಲ್ಲದಿರುವುದು ವಿಷಾದನೀಯ ಸಂಗತಿ.
” ಪ್ರತಾಪ್ ತಮ್ಮ ಚಟುವಟಿಕೆ ಹಾಗೂ ಉತ್ಸಾಹಭರಿತ ನಡವಳಿಕೆಗಳಿಂದಾಗಿ ತಮ್ಮ ಈಗಿನ ಹಾಗೂ ಹಿಂದಿನ ಕಚೇರಿಗಳಲ್ಲಿ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳ ಸಂಪೂರ್ಣ ಬೆಂಬಲ, ಗೌರವ ಹಾಗೂ ಪ್ರೀತಿಯನ್ನು ಪಡೆದಿದ್ದಾರೆ. ತೀವ್ರವಾದ ತಮ್ಮ ಅಂಗವಿಕಲತೆಯನ್ನು ಒಂದು ವಿಕಲತೆಯಾಗಿಯೇ ಸ್ವೀಕರಿಸದ ಪ್ರತಾಪ್, ಜನ ತನ್ನನ್ನು ಇತರ ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಪರಿಗಣಿಸಬೇಕೆಂದು ಬಯಸುತ್ತಾರೆ. ಅವರು ಯಾವತ್ತೂ, ಎಲ್ಲಿಯೂ, ಯಾರಿಗೂ ಹೇಳುವ ಮಾತೆಂದರೆ-‘ನೀವು ನನಗೆ ಯಾವ ಕೆಲಸವನ್ನು ಬೇಕಾದರೂ ಕೊಡಿ, ನಾನದನ್ನು ಮಾಡುತ್ತೇನೆ. ನನಗೆ ಯಾರ ಕರುಣೆ ಬೇಕಾಗಿಲ್ಲ. ನೀವು ನನ್ನನ್ನು ಎಲ್ಲರಂತೆಯೇ ಒಬ್ಬ ಸಾಮಾನ್ಯ ಮನುಷ್ಯ ಎಂದು ಪರಿಗಣಿಸಿದರೆ ನನಗದು ನೀವು ಕೊಡುವ ಗೌರವ ಹಾಗೂ ಪ್ರೀತಿ’ ಎಂಬುದು. ಕಚೇರಿಯಲ್ಲಿ ಯಾವುದೇ ಹೊಸ ಕೆಲಸವಿರಲಿ ಪ್ರತಾಪ್ ಅಲ್ಲಿ ಮುಂದಿನ ಸಾಲಲ್ಲಿರುತ್ತಾರೆ. ಬೆರಳುಗಳಿಲ್ಲದಿದ್ದರೂ ಅವರ ಕೈಬರಹ ಬಹಳ ಸುಂದರವಾಗಿದೆ. ಇಂತಹ ವ್ಯಕ್ತಿಯನ್ನು ಗೌರವಿಸದವರು, ಪ್ರೀತಿಸದವರು ಇರಲು ಸಾಧ್ಯವೇ?”
– ಪಂಜು ಗಂಗೊಳ್ಳಿ
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…