ಸುತ್ತೋಲೆಯನ್ನೇ ಹೊರಡಿಸಿದ್ದ ಅಬ್ದುಲ್ ಕಲಾಂ!
• ಜಯಪ್ರಕಾಶ ಪುತ್ತೂರು
ಆ ದಿನಗಳಲ್ಲಿ ಕಲಾಂ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡುವ ಅಪರೂಪದ ಸುದ್ದಿ ಹರಡಿದಾಗ ದೇಶದಾದ್ಯಂತ ವಿಜ್ಞಾನಿಗಳು ಸಂಭ್ರಮಿಸಿದರು. ದೇಶಕ್ಕೆ ದೇಶವೇ ಸಂತೋಷದಿಂದ ಕುಣಿದಾಡಿತು. ಆ ಸಂಭ್ರಮದ ವಾತಾವರಣವನ್ನು ಜ್ಞಾಪಿಸಿಕೊಂಡರೆ ಸಾಕು, ಮೈ ರೋಮಾಂಚನವಾಗುತ್ತದೆ. ಕಲಾಂ ಅವರಿಗೆ ಒಲಿದ ‘ಭಾರತ ರತ್ನ ಮತ್ತು ಆ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಕಲಾಂ ಅವರು ಕೈಗೊಂಡ ನಿರ್ಧಾರವನ್ನು ಮರೆಯಲು ಸಾಧ್ಯವೇ ಇಲ್ಲ!
ಅಂದು ಕಲಾಂ ಅವರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಬೆಂಗಳೂರಿನ ರಕ್ಷಣಾ ಸಂಶೋಧನಾ ಪ್ರಯೋಗಾಲಯ ಗಳು ಸಜ್ಜಾಗಿದ್ದವು. ಬೆಂಗಳೂರಿನಲ್ಲಿಯೇ ಇರುವ ವಿವಿಧ ಘಟಕಗಳು ಹಾಗೂ ಅವುಗಳೊಂದಿಗೆ ಉತ್ಪಾದನಾ ಕಾರ್ಯದಲ್ಲಿ ಕೈ ಜೋಡಿಸಿರುವ ಸಾರ್ವಜನಿಕ ಕ್ಷೇತ್ರದ ಬೃಹತ್ ಸಂಸ್ಥೆಗಳು ಇಂತಹ ಅಪೂರ್ವ ಕ್ಷಣಗಳಿಗೆ ತುದಿಗಾಲಿನಲ್ಲಿ ಸಿದ್ದರಾಗಿದ್ದವು. ‘ಭಾರತ ರತ್ನ ಗೌರವ ನೀಡುವ ಸಂಭ್ರಮವನ್ನು ದೂರದರ್ಶನ ಹಾಗೂ ಇನ್ನಿತರ ಮಾಧ್ಯಮಗಳ ಪ್ರಸಾರಗಳಿಂದ ಕಣ್ಣು ತುಂಬಾ ನೋಡಿ ನಾವೆಲ್ಲರೂ ಧನ್ಯರಾದೆವು. ಎಲ್ಲರೂ ದೆಹಲಿಯತ್ತ ನಿರೀಕ್ಷೆಯ ಕಣ್ಣುಗಳಿಂದ ನೋಡುತ್ತಿದ್ದಂತೆ ಬಂತು ನೋಡಿ, ದೊಡ್ಡ ಸುತ್ತೋಲೆ! ಈ ಗೌರವವನ್ನು ನಮ್ಮ ಸಂಸ್ಥೆಗಳಿಗೆ ಅರ್ಪಿಸಿಕೊಂಡ ಕಲಾಂ ಹೀಗೆಂದು ಅಪಣೆ ಕೊಡಿಸಿದರು
‘ಯಾರೂ ಇನ್ನು ಮುಂದೆ ನನ್ನ ಹೆಸರಿನ ಜತೆಗೆ ‘ಭಾರತ ರತ್ನ’ವೆಂದು ಸೇರಿಸದಿರಿ. ಯಾವುದೇ ಸತ್ತಾರ, ಅಭಿನಂದನಾ ಕೂಟ ಹಾಗೂ ಸಂಭ್ರಮಗಳನ್ನು ಏರ್ಪಡಿಸದಿರಿ. ಈ ಸಂಬಂಧ ಯಾರೂ ನನ್ನ ಕಚೇರಿಗೆ ಅಥವಾ ವಿಮಾನ ನಿಲ್ದಾಣಗಳಿಗೆ ಬರಬಾರದು. ಹೂ, ಹಾರ, ಶಾಲು ಹಾಗೂ ಇನ್ನಿತರ ಸತ್ಕಾರ ಕಾರ್ಯದ ಯಾವುದೇ ಪದಾರ್ಥಗಳನ್ನು ಎಲ್ಲಿಯೂ ತರಬೇಡಿ, ನಾವು ದೇಶದ ಕಾರ್ಯವನ್ನು ಜೊತೆಯಾಗಿ ಮುಂದುವರಿಸೋಣ. ಇದುವೇ ನೀವು ನೀಡುವ ಗೌರವ’.
ಎಂಥ ಆಶ್ಚರ್ಯ! ಎಂತಹ ಅಪರೂಪದ ಮಾತುಗಳು!! – ಹೀಗಾಗಿ ಕಲಾಂ ಅವರು ಹೋದಲೆಲ್ಲಾ ನಾವು ಸಾಮಾನ್ಯವಾಗಿ ನೋಡುವ ಗೌಜು, ಭಾಜ-ಭಜಂತ್ರಿ ಹಾಗೂ ಸನ್ಮಾನದ ಗೊಂದಲ ನಡೆಯಲಿಲ್ಲ. ಕಲಾಂ ಅವರು ಪ್ರಶಸ್ತಿ ಸಿಕ್ಕಿದ ಬಳಿಕ ಪ್ರಥಮವಾಗಿ ಬೆಂಗಳೂರಿಗೆ ಬರುವ ಕ್ಷಣಗಳು ಸಮೀಪಿಸಿದವು. ಬೆಂಗಳೂರು ನಗರದ ಹಿರಿಯ ನಿರ್ದೇಶಕರುಗಳು ಹಾಗೂ ವಿಜ್ಞಾನಿ, ತಂತ್ರಜ್ಞರ ಬಳಗಕ್ಕೆ ಈ ಬಾರಿ ವಿಮಾನ ನಿಲ್ದಾಣಕ್ಕೆ ಧಾವಿಸುವ ತವಕ ಇತ್ತೇನೋ ನಿಜ. ಆದರೆ ಮೊದಲೇ ಯಾವುದೇ ವೇಳೆಯಲ್ಲಿ ‘ಸರ್ಕಾರಿ ವಾಹನವೇರಿ ಅನವಶ್ಯಕವಾಗಿ ಬರಬೇಡಿ’ ಎಂಬ ಕಡ್ಡಾಯ ಆದೇಶ ಹೊರಡಿಸಿದ್ದ ಕಾರಣ, ಮುಂದುವರಿಯುವ ಧೈರ್ಯ ಯಾರಿಗೂ ಬರಲಿಲ್ಲ. ಕೊನೆಗೆ ಸಂಸ್ಥೆಯ ಶಿಷ್ಟಾಚಾರದ ಪ್ರಧಾನ ಅಧಿಕಾರಿಯಾದ ನಾನು ಎಂದಿನಂತೆ ಕಲಾಂ ಅವರನ್ನು ಸಹಜವಾಗಿಯೇ ಎದುರುಗೊಳ್ಳಲು ಹೊರಟು ನಿಂತೆ.
ನಿರ್ದೇಶಕರ ಬಳಗ ಹಾಗೂ ವಿಜ್ಞಾನಿಗಳ ಪರವಾಗಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ (ಎ.ಡಿ.ಎ.) ಕಾರ್ಯಕ್ರಮ ನಿರ್ದೆಶಕ ಡಾ.ಕೋಟಾ ಹರಿನಾರಾಯಣ ಕೂಡ ಧಾವಿಸಿ ಬಂದಿದ್ದರು. ಎಲ್ಲವೂ ಎಂದಿನಂತೆಯೇ ಸದ್ದುಗದ್ದಲವಿಲ್ಲದೆ ನಡೆದು ಹೋಯಿತು. ಏನೂ ಹೆಚ್ಚಿನ ವಿಶೇಷನಡೆದಿಲ್ಲ ಎಂಬ ಭಾವನೆ ಹೊತ್ತ ಎಂದಿನ ನಗು ಮೊಗದ ಕಲಾಂ ಅವರು ಆ ದಿನ ಬರೀ ಒಂದು ಸಣ್ಣ ಹೇರ್‌ಕಟ್ ಮಾತ್ರವೇ ಮಾಡಿಸಿದಂತಿತ್ತು. ನಾವಿಬ್ಬರೂ ಅಂಜುತ್ತಲೇ ‘ಅಭಿನಂದನೆಗಳು ಸರ್’ ಎಂದು ಉಲಿದೆವು. ಕಲಾಂ ಅವರ ಎಂದಿನ ದೇಶಾವರಿ ನಗೆ ಕಂಡು ಬಂತು. ಅವರುನಮ್ಮಸಂಸ್ಥೆವಿನ್ಯಾಸಹಾಗೂ ಅಭಿವೃದ್ಧಿಪಡಿಸುತ್ತಿದ್ದ ‘ತೇಜಸ್’ ಲಘು ಯುದ್ಧ ವಿಮಾನದ ಪ್ರಗತಿ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ ನಿತ್ಯದಂತೆಯೇ ಅಂದೂ ಯಾಂತ್ರಿಕವಾಗಿ ನಡೆದುಕೊಂಡರು. ಪ್ರತಿಬಾರಿಯಂತೆ ಈ ಬಾರಿಯೂ ನಾನು ಸಾಹೇಬರ ಸಣ್ಣ ಬ್ಯಾಗನ್ನು ನಯವಾಗಿ ಕಸಿದುಕೊಂಡೆ. ಎಂದಿನಂತೆ ತುಂಟತನದ ಮುಗುಳುನಗೆ ಮೂಡಿಸಿದರು. ಪ್ರಶ್ನಾರ್ಥಕ ಕಣ್ಣುಗಳೊಂದಿಗೆ ನನ್ನತ್ತ ನೋಡಿ ತಿಳಿಯಾದ ವಾತಾವರಣ ಸೃಷ್ಟಿಸಿದರು. ಮರುದಿನ ಎ.ಡಿ.ಎ. ಸಂಸ್ಥೆಯಲ್ಲಿ ದೊಡ್ಡಮಟ್ಟದ ಪ್ರಗತಿಶೀಲನಾ ಸಭೆ ನಡೆಯುವುದಿತ್ತು.
ಬೆಂಗಳೂರಿನ ವಿವಿಧ ಸಂಸ್ಥೆಗಳ ಹಿರಿಯ ವಿಜ್ಞಾನಿಗಳ ಸಮೂಹ ಹಾಗೂ ನಿರ್ದೆಶಕರುಗಳು, ಅಭಿಮಾನ ಪೂರ್ವಕವಾಗಿ ಪ್ರಾಂಗಣದಲ್ಲಿ ಒಟ್ಟಾಗಿ ನೆರೆದರು. ನಾನು ಮತ್ತು ಡಾ.ಕೋಟಾ ಹರಿನಾರಾಯಣ ಹಾಗೂ ಏರ್ ಮಾರ್ಷಲ್ ರಾಜಕುಮಾರ್ ಅವರೊಂದಿಗೆ ‘ಭಾರತ ರತ್ನ’ವನ್ನು ತೀರಾ ಸರಳವಾಗಿ ನಾವೆಲ್ಲಾ ಬರಮಾಡಿಕೊಂಡೆವು. ಆನಂತರ ಎಂದಿನಂತೆಯೇ ಸಿಪಾಯಿಗಳು, ಪೊಲೀಸ್ ಮತ್ತು ಭದ್ರತಾಧಿಕಾರಿಗಳ ಬೂಟ್ ಜೋಡಣೆಯ ಶಬ್ದಗಳು ಹಾಗೂ ಶಿಸ್ತಿನ ಪ್ರದರ್ಶನ ನಡೆಯಿತು. ಆಗ ನಸುನಗುತ್ತಾ ಮುಗ್ಧ ಪುಟಾಣಿಯಂತೆ ಅಚ್ಚರಿಯ ಕಣ್ಣುಗಳಿಂದ ಕಲಾಂ ಅವರು ಹೊರಬಂದರು. ನಮ್ಮೆಲ್ಲರತ್ತ ದೃಷ್ಟಿ ಹಾಯಿಸಿದರು. ಅಲ್ಲಿದ್ದ ನಮ್ಮ ಪ್ರತಿಯೊಬ್ಬರ ಹೃದಯವನ್ನೂ ಸ್ಪಂದಿಸಿದ ಮಧುರ ಭಾವ ಅಲ್ಲಿ ಕಲಾಂ ಅವರಲ್ಲಿ ಕಂಡು ಬಂದಿತು. ಈ ಸಂಭ್ರಮ, ಅಭಿನಂದನೆಗಳು ಹಾಗೂ ಸತ್ಕಾರ ಎಷ್ಟೊಂದು ಸರಳವಾಗಿತ್ತೆಂದರೆ, ಹೊರಗಿನ ನಾಟಕೀಯ ಜಗತ್ತಿನ ಭಾಜ-ಭಜಂತ್ರಿ, ಗಲಾಟೆ ಹಾಗೂ ಬೊಬ್ಬೆಗಳ ಆಚರಣೆಗಳಿಂದ ಹೊರತಾಗಿ ಇದು ಶಾಂತಿಯುತವಾಗಿ ಅದ್ಭುತವಾಗಿ ಮೂಡಿಬಂದದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಸರಳತೆಯಲ್ಲಿಯೂ ಇಂತಹ ಆಡಂಬರವಿಲ್ಲದ ಸಂಭ್ರಮ ನಡೆಸುವುದು ಖಂಡಿತ ಸಾಧ್ಯ ಎಂಬುದಕ್ಕೆ ಸ್ವಾಗತ ಕಾರ್ಯಕ್ರಮ ಪ್ರತ್ಯಕ್ಷ ಸಾಕ್ಷಿಯಾಯಿತು.
‘ಭಾರತ ರತ್ನ ಸ್ವೀಕರಿಸಿದ ಬಳಿಕ ಇಡೀ ದಿನ ವಿವಿಧೆಡೆಗೆ ಭೇಟಿ ಹಾಗೂ ಸಮೀಕ್ಷಾ ಸಭೆ. ಆ ರಾತ್ರಿ ವಿಮಾನದಲ್ಲಿ ಹೈದರಾಬಾದಿಗೋ ಮದ್ರಾಸಿಗೋ ಅಥವಾ ಕೊಚ್ಚಿಗೋ ಮತ್ತೆ ಪ್ರಯಾಣ. ಭಾನುವಾರ ಇಡೀ ದಿನ ಅಲ್ಲಿ-ಇಲ್ಲಿ ಹೋದೆಡೆಯಲ್ಲಿ ಸಭೆ, ಸಮಾರಂಭಗಳು, ಕಾರ್ಯಕ್ಷೇತ್ರಕ್ಕೆ ಭೇಟಿ ಹಾಗೂ ಸಮೀಕ್ಷಾ ಸಭೆ, ಅಲ್ಲಿಂದ ರಾತ್ರಿಯವಿಮಾನಹಿಡಿದಕಲಾಂಅವರು ಹೊಸದಿಲ್ಲಿಯಲ್ಲಿಸೋಮವಾರದಂದು ಬೆಳಿಗ್ಗೆ ಕೆಲಸಕ್ಕೆ ಹಾಜರು. ಇವರ ದಕ್ಷಿಣ ಭಾರತ ಅಥವಾ ಇನ್ನಿತರ ಪ್ರವಾಸಗಳ ವೇಳೆ ಅಲ್ಲಿನ ವಿವಿಧ ವಿಶ್ವವಿದ್ಯಾಲಯ ಅಥವಾ ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿ ಇದ್ದೇ ಇರುತ್ತಿತ್ತು. ಒಳ್ಳೆಯ ಸಂಬಂಧ ಬೆಳೆಸುತ್ತಾ ತನ್ನ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ದೊಡ್ಡ ಉಪಕ್ರಮವೊಂದರ ಪ್ರಾರಂಭಕ್ಕೆ ಮುನ್ನುಡಿ ಬರೆದಿದ್ದರು. ಇದರಿಂದಾಗಿ, ದೇಶದ ಯುವ ಶಕ್ತಿಗಳಿಗೆ ತಾಂತ್ರಿಕ ಲೋಕದ ಹಾಗೂ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ, ತಮ್ಮ ತಾರುಣ್ಯದಲ್ಲೇ ಆಸಕ್ತಿ ತಳೆಯುವಂತಹ ಒಂದು ಅಪೂರ್ವ ಅವಕಾಶ ದಕ್ಕಿತು ಎಂದು ಹೇಳಿದರೆ ಹೆಚ್ಚು ಸಮಂಜಸವಾದೀತು.
ವಿಶೇಷ ಸಭ್ಯತೆ ಪ್ರದರ್ಶನ ಒಪ್ಪದ ಕಲಾಂ
ಕಲಾಂ ಅವರಿಗೆ ಅವರದೇ ಆದಂತಹ ಕೆಲವೊಂದು ಗುಣವಿಶೇಷತೆಗಳಿದ್ದವು. ವಿಶೇಷ ಸಭ್ಯತೆಯ ಪ್ರದರ್ಶನ ಮಾಡುವುದನ್ನು ಅವರು ಒಪ್ಪುತ್ತಿರಲಿಲ್ಲ. ಅವರಿಂದ ನೀನೆಂದೂ ‘ಫೆಂಟಾಸ್ಟಿಕ್ ಫೆಲೋ ಎಂದು ಹೇಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಇಂತಹ ಸನ್ನಿವೇಶಗಳನ್ನು ನಾನು 7 ವರ್ಷಗಳ ಸೇವಾ ಅವಧಿಯಲ್ಲಿ ತಂದುಕೊಳ್ಳದೇ ಇರಲು ಬಹಳ ಶ್ರಮ ಪಡಬೇಕಾಯಿತು. ಕಲಾಂ ಅವರು ನಮ್ಮ ಮುಖ್ಯಸ್ಥರಾಗಿರುವಷ್ಟು ಕಾಲ ಹಾಗೂ ರಾಷ್ಟ್ರಪತಿಗಳಾಗಿ ಹೊರಡುವ ವೇಳೆಯವರೆಗೂ ಕರ್ತವ್ಯವನ್ನು ಮುಂದುವರಿಸುವ ಈ ಭಾಗ್ಯ ನನ್ನದಾಯಿತು. ಈ ಹೊತ್ತು ಕಲಾಂ ಎಂಬ ‘ಭಾರತ ರತ್ನ’ ನಮ್ಮೊಂದಿಗೆ ಇಲ್ಲದಿದ್ದರೂ ಅವರಿಂದ ನಾವು ಕಲಿತ ಒಳ್ಳೆಯ ಪಾಠ ನಮ್ಮ ಬದುಕಿನ ಅನೇಕ ಸಮಸ್ಯೆಗಳಿಗೆ ಅತ್ಯುತ್ತಮ ಔಷಧಿಗಳಾಗಿ ಸಿಕ್ಕಿರುವುದೇ ಮಹಾಭಾಗ್ಯ. ಅದಕ್ಕಿಂತ ಹೆಚ್ಚೇನು ಬೇಕು ಅಲ್ಲವೇ?
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…