ಎಡಿಟೋರಿಯಲ್

ಜನಪರ ಕಾಳಜಿಯ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್

ಟಿ.ಎಸ್. ವೇಣುಗೋಪಾಲ್

ಕೃಷಿ ಉತ್ಪನ್ನಗಳು, ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವಾಗ ಕೇವಲ ರೈತರು ನೇರವಾಗಿ ಮಾಡುವಖರ್ಚನ್ನಷ್ಟೇ ಅಲ್ಲ, ಅವರ ಕುಟುಂಬದ ಶ್ರಮವನ್ನು, ಬರಬಹುದಾಗಿದ್ದ ಬಾಡಿಗೆ, ಬಡ್ಡಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು.’ ಎಂದು ಪ್ರಖ್ಯಾತ ಗ್ರಾಮೀಣ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ವಾದಿಸಿದ್ದರು. ಇದು ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಶಿಪಾರಸ್ಸಿನಲ್ಲಿ ಸ್ವಲ್ಪ ಮಾರ್ಪಾಡಿನೊಂದಿಗೆ ಸೇರ್ಪಡೆಯಾಯಿತು. ಸಿ೨ ವಿಧಾನ ಎಂದು ಕರೆಯುವ ಈ ಕ್ರಮ ಮುಂದೆ ಕೃಷಿಕರ ಪ್ರಮುಖ ಬೇಡಿಕೆಯಾಯಿತು.

ಸಾರ್ವತ್ರಿಕ ಪಡಿತರ ಪದ್ಧತಿಯನ್ನು ಬಲವಾಗಿ ಪ್ರತಿಪಾದಿಸಿದರು. ದೇಶಾದ್ಯಂತ ಅವಶ್ಯಕತೆ ಇರುವ ಎಲ್ಲರಿಗೂ ಗೋಧಿ ಹಾಗೂ ಅಕ್ಕಿ ದೊರೆಯುವಂತಾಗಬೇಕು ಎಂದು ಸೇನ್ ಪ್ರಬಲವಾಗಿ ವಾದಿಸಿದ್ದರು. ಅದರಿಂದ ದೇಶದ ಆರ್ಥಿಕತೆಗೆ ತೊಂದರೆಯಾಗುತ್ತದೆ ಎನ್ನುವುದನ್ನು ಸಾಂಖ್ಯಿಕ ಹಾಗೂ ಸೈದ್ಧಾಂತಿಕ ಪುರಾವೆಗಳ ಸಮೇತ ಬಲವಾಗಿ ಅಲ್ಲಗೆಳೆದರು. ಅದು ಉತ್ಪ್ರೇಕ್ಷೆ ಎಂದು ವಾದಿಸಿದರು. ಸಾರ್ವಜನಿಕ ಪಡಿತರ ಪದ್ಧತಿಗೆ, ಹಾಗೂ ರೈತರಿಗೆ ಅವರ ಉತ್ಪನ್ನಕ್ಕೆ ಸೂಕ್ತ ಬೆಲೆ ಕೊಡಲು ನಮ್ಮಲ್ಲಿರುವ ಹಣ ಸಾಕು ಎಂದು ವಾದಿಸಿದರು.

ಹೀಗೆ ಜೀವನದುದ್ದಕ್ಕೂ ಜನಪರವಾದ ಆರ್ಥಿಕ ನೀತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಅಭಿಜಿತ್ ಸೇನ್ ಇಂದು ನಮ್ಮೊಂದಿಗಿಲ್ಲ. ಇವರದು ಅಪರೂಪದ ಅರ್ಥಶಾಸ್ತ್ರಜ್ಞರ ಕುಟುಂಬ. ತಂದೆ ಸರ್ಮ ಸೇನ್, ಸೋದರ ಪ್ರೊಣಾಬ್ ಸೇನ್, ಮಾವ ಅರುಣ್ ಘೋಷ್, ಪತ್ನಿ ಜಯತಿ ಘೋಷ್ ಎಲ್ಲರೂ ಆರ್ಥಿಕ ಕ್ಷೇತ್ರದಲ್ಲಿ ಪ್ರಸಿದ್ಧರು. ಅವರ ಮಗಳು ಜಾಹ್ನವಿ ಸೇನ್, ಪತ್ರಕರ್ತೆ, ದಿ ವೈರ್ ಪತ್ರಿಕೆಯ ಉಪ ಸಂಪಾದಕಿ.

ಭೌತಶಾಸ್ತ್ರದ ಅಧ್ಯಯನವನ್ನು ಗುರಿಯಾಗಿಟ್ಟುಕೊಂಡು ಓದು ಪ್ರಾರಂಭಿಸಿದ ಸೇನ್‌ಅವರ ಆಸಕ್ತಿ ಅರ್ಥಶಾಸ್ತ್ರದಕಡೆಗೆ ತಿರುಗಿ, ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಬೆಳವಣಿಗೆಗೆ ಕೃಷಿ ಅಡಚಣೆಗಳು ಎಂಬ ವಿಷಯದ ಬಗ್ಗೆ ಭಾರತೀಯ ಅನುಭವದ ಹಿನ್ನೆಲೆಯಲ್ಲಿ ಸುಜಿ ಪೈನ್ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಮಂಡಿಸಿದರು. ನಂತರ ಸಸ್ಸೆಕ್ಸ್, ಆಕ್ಸಫರ್ಢ್, ಕೇಂಬ್ರಿಡ್ಜ್ ಮತ್ತು ಎಸ್ಸೆಕ್ಸ್ ವಿಶ್ವವಿದ್ಯಾನಿಲಯಗಳಲ್ಲಿ ಪಾಠ ಮಾಡಿ, ಅನಂತರ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಅಧ್ಯಯನ ಹಾಗೂ ಯೋಜನೆಯ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಅಲ್ಲಿ ಕೃಷ್ಣ ಭಾರದ್ವಾಜ್, ಪ್ರಭಾತ್ ಪಟ್ನಾಯಕ್, ಸಿ.ಪಿ. ಚಂದ್ರಶೇಖರ್, ಅಮಿತ್ ಬಾಧುರಿ ಹಾಗೂ ಪತ್ನಿಜಯತಿ ಘೋಷ್ ಜತೆ ಸೇರಿಕೊಂಡು ಅಭಿವೃದ್ಧಿ ಅರ್ಥಶಾಸ್ತ್ರ ಹಾಗೂ ಭಾರತದ ಆರ್ಥಿಕತೆಯ ವಿಭಾಗವನ್ನು ಉನ್ನತ ಮಟ್ಟದ ಕೇಂದ್ರವಾಗಿ ಬೆಳೆಸುವಲ್ಲಿ ಶ್ರಮಿಸಿದರು.

ನಾಲ್ಕು ದಶಕಗಳ ಕಾಲ ಅರ್ಥಶಾಸ್ತ್ರದ ಹಲವು ವಿಷಯಗಳನ್ನು ಬೋಧಿಸಿ, ಸಂಶೋಧನೆ ನಡೆಸಿ, ನೂರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರ ಸಂಶೋಧನಾ ವಿದ್ಯಾರ್ಥಿಗಳು ನಡೆಸಿರುವ ಅಧ್ಯಯನ ಭಾರತೀಯ ಅರ್ಥಶಾಸ್ತ್ರವನ್ನು ಕುರಿತಂತೆ ನಮ್ಮ ಅರಿವನ್ನು ಹೆಚ್ಚಿಸಿದೆ.

ಜೊತೆಗೆ ಸರ್ಕಾರ ಹಾಗೂ ಇತರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅಭಿಜಿತ್ ಭಾರತದ ಯೋಜನಾ ಆಯೋಗದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ೧೯೯೭ರಲ್ಲಿ ಸರ್ಕಾರ ಇವರನ್ನು ಕೃಷಿ ಖರ್ಚು ಹಾಗೂ ಬೆಲೆ ನಿಗದಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಹಲವಾರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆಯನ್ನು ಸೂಚಿಸಲು ಈ ಸಮಿತಿಯನ್ನು ಕೇಳಿಕೊಳ್ಳಲಾಗಿತ್ತು. ಇವರು ೪ನೇ ಹಣಕಾಸು ಸಮಿತಿಯ ಸದಸ್ಯರಾಗಿ ಹಾಗೂ ಪಶ್ಚಿಮ ಬಂಗಾಳ, ತ್ರಿಪುರ ಸರ್ಕಾರಗಳ ರಾಜ್ಯ ಯೋಜನಾ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ನಂತರ ಇವರನ್ನು ಆಹಾರ ಧಾನ್ಯಗಳ ದೀರ್ಘಕಾಲೀನ ನೀತಿಯನ್ನು ಕುರಿತ ಉನ್ನತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ರೈತರಿಗೆ ಸೂಕ್ತ ಬೆಲೆ ಸಿಗಬೇಕೆಂಬುದು ಅವರ ಶಿಫಾರಸ್ಸಾಗಿತ್ತು. ನರೇಂದ್ರ ಮೋದಿ ಸರ್ಕಾರ ಯೋಜನಾ ಆಯೋಗದ ಸ್ಥಾನದಲ್ಲಿ ನೀತಿ ಆಯೋಗವನ್ನು ಸ್ಥಾಪಿಸುವವರೆಗೆ ಇವರ ಸೇವೆ ಮುಂದುವರಿದಿತ್ತು. ಇವರು ಸೇವೆ ಸಲ್ಲಿಸಿದ ಸಮಿತಿಗಳಲ್ಲಿ ಕೇವಲ ಹೆಸರಿಗಷ್ಟೇ ಸದಸ್ಯರಾಗಿರಲಿಲ್ಲ. ಪ್ರತಿಯೊಂದು ಸಮಿತಿಯಲ್ಲೂ ಅತ್ಯಂತ ವಿಶಿಷ್ಟವಾದ ಹೊಳಹುಗಳನ್ನು ನೀಡುತ್ತಿದ್ದರು. ಪ್ರತಿಯೊಂದು ಚರ್ಚೆಯಲ್ಲೂ ಅದು ಅರ್ಥಶಾಸ್ತ್ರಜ್ಞರೊಂದಿಗಾಗಲಿ, ಅಕ್ಟಿವಿಸ್ಟ್‌ಗಳ ಜೊತೆಗಾಗಲಿ, ರಾಜಕೀಯ ನೇತಾರರೊಂದಿಗಾಗಲಿ ಅಂಕಿಅಂಶಗಳು ಹಾಗೂ ಅರ್ಥಶಾಸ್ತ್ರದ ಸಿದ್ದಾಂತಗಳ ಮೂಲಕವೇ ಮನವರಿಕೆ ಮಾಡಿಕೊಡುತ್ತಿದ್ದರು. ಜೊತೆಗೆ ಚಾರಿತ್ರಿಕ ಆಯಾಮವೂ ಇವರ ಚಿಂತನೆಯಲ್ಲಿರುತ್ತಿತ್ತು.

ಹಾಗಾಗಿಯೇ ಎಷ್ಟೋ ಜನರ ಗಮನಕ್ಕೆ ಬರದೇ ಹೋಗುತ್ತಿದ್ದ ಅಂಶಗಳು ಇವರಿಗೆಗೋಚರಿಸುತ್ತಿತ್ತು.

ಭಿನ್ನವಾದ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುತ್ತಿದ್ದ, ಕೇಳಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡುತ್ತಿದ್ದ ಅಪರೂಪದ ಆರ್ಥಿಕಚಿಂತಕರಾಗಿದ್ದರು. ತಮ್ಮ ವಿರೋಧವನ್ನು ಅರ್ಥಶಾಸ್ತ್ರ ಹಾಗೂ ಅಂಕಿ ಅಂಶಗಳ ನೆರವಿನಿಂದ ಪ್ರತಿಪಾದಿಸುತ್ತಿದ್ದರು. ಹಾಗಾಗಿ ಇವರಿಗೆ ವೈಯಕ್ತಿಕ ನೆಲೆಯಲ್ಲಿ ವಿರೋಧಿಗಳು ಕಡಿಮೆ.

ಇವರು ಕೃಷಿ ಅರ್ಥಶಾಸ್ತ್ರದ ಭಾರತೀಯ ಸೊಸೈಟಿ ಹಾಗೂ ಕಾರ್ಮಿಕ ಅರ್ಥಶಾಸ್ತ್ರದ ಭಾರತೀಯ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಅವರಿಗೆ ೨೦೧೦ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಕೊಡಲಾಗಿತ್ತು.

ಅವರ ಎಲ್ಲಾ ಅಧ್ಯಯನ ಹಾಗೂ ಸಲಹೆಗಳು ಜನರ ಬದುಕನ್ನು ಸುಧಾರಿಸುವ ಕಡೆಗೇಇತ್ತು.

ನಿಷ್ಠೂರವಾಗಿ ಅಭಿಪ್ರಾಯವನ್ನು ಹೇಳುತ್ತಿದ್ದ ಸೇನ್ ಎಂದೂ ಅಧಿಕಾರಕ್ಕೆ ಹಾತೊರೆದವರಲ್ಲ ಎಂದು ಅವರ ಒಡನಾಡಿಗಳು ಹೇಳುತ್ತಾರೆ. ಇವರ ಜನಪರ ನಿಲುವು ಇವರನ್ನು ಹಲವು ಚಳವಳಿಗಳ ಹಾಗೂ ಆಂದೋಲನಗಳ ಸನೀಹಕ್ಕೆ ತಂದಿತು. ಆಹಾರದ ಹಕ್ಕಿಗಾಗಿನ ಚಳವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಹಸಿವು, ಬಡತನ, ಶಿಕ್ಷಣ ಇವೆಲ್ಲಾ ಇವರ ಕಾಳಜಿಯ ವಿಷಯಗಳು. ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸಿಕೊಡಬೇಕಾದದ್ದು ಸರ್ಕಾರದ ಕರ್ತವ್ಯಎಂದೇ ಅವರು ಭಾವಿಸಿದ್ದರು. ಚಾರಿತ್ರಿಕವಾಗಿ ಸರ್ಕಾರಗಳು ಈ ಕೆಲಸವನ್ನು ಮಾಡುತ್ತ ಬಂದಿವೆ ಎಂದು ವಾದಿಸುತ್ತಿದ್ದರು. ಹಾಗಾಗಿಯೇ ಇತ್ತೀಚಿನ ಉಚಿತ ಕೊಡುಗೆಗಳ ಚರ್ಚೆ ವಿಚಿತ್ರವಾಗಿತೋರುತ್ತದೆ. ಏಕೆಂದರೆ, ಕಾರ್ಪೊರೇಟ್ ಜಗತ್ತಿಗೆ ಪುಕ್ಕಟೆಯಲ್ಲಿ ಹಲವು ಸೌಲಭ್ಯವನ್ನು ಬೆಂಬಲಿಸುವ ಹಲವರು, ಸಾಮಾನ್ಯರಿಗೆ ನೆರವು ನೀಡುವಾಗ ವಿರೋಧಿಸುವುದು ಅಚ್ಚರಿಯ ವಿಷಯ ಎನ್ನುತ್ತಿದ್ದರು. ಹಾಗೆಯೇ ಸರ್ಕಾರ ಜನರಿಗೆ ಒಂದಿಷ್ಟು ಹಣ ವರ್ಗಾಯಿಸಿ ಎಲ್ಲರಿಗೂ ನೀರು, ಆರೋಗ್ಯ, ಶಿಕ್ಷಣ, ನೈರ್ಮಲ್ಯ ಹಾಗೂ ಪೌಷ್ಟಿಕಾಂಶ ಒದಗಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದರು.

ಇವರ ಎಷ್ಟೋ ಸಲಹೆಗಳು ಇನ್ನೂ ಅನುಷ್ಠಾನವಾಗಬೇಕಿರುವ ಈ ಸಂದರ್ಭದಲ್ಲಿ ಅವುಗಳ ಪರವಾಗಿ ಸಮರ್ಥವಾಗಿ ಮಾತನಾಡ ಬಲ್ಲವರಾಗಿದ್ದ ಪ್ರೊಫೆಸರ್ ಸೇನ್ ಇಂದು ನಮ್ಮೊಂದಿಗಿಲ್ಲದ್ದು ಒಂದು ದೊಡ್ಡ ನಷ್ಟ.

andolana

Recent Posts

ನಂಜುಂಡೇಶ್ವರ ದೇವಾಲಯದ ಹುಂಡಿ ಎಣಿಕೆ: 82 ಲಕ್ಷ ರೂ. ಕಾಣಿಕೆ ಸಂಗ್ರಹ

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜುಂಡೇಶ್ವರನ ದೇವಾಲಯದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ…

2 mins ago

ಇರಾನ್-ಅಮೆರಿಕಾ ಯುದ್ಧ: ಮಂಡ್ಯದಲ್ಲಿ ಕಂಟ್ರೋಲ್ ರೂಂ

ಮಂಡ್ಯ: ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ…

8 mins ago

ಹನೂರು: ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ಮನೋಜ್‌ ಕುಮಾರ್‌ ನೇತೃತ್ವದ ತಂಡ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಪಟ್ಟಣದ ಕ್ರಿಸ್ತರಾಜ ಶಾಲೆಯ ಶಿಕ್ಷಕ ಮನೋಜ್ ಕುಮಾರ್.ಪಿ. ಅವರು ರಾಷ್ಟ್ರೀಯ…

19 mins ago

ಜನಗಣತಿ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಜನಗಣತಿ ಕಾರ್ಯವು ರಾಷ್ಟçದ ಅತ್ಯಂತ ಪ್ರಮುಖ ಮತ್ತು ಬೃಹತ್ ಕಾರ್ಯಕ್ರಮವಾಗಿದ್ದು, ದೇಶದ ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳು…

34 mins ago

ಪರಿಸರ ಬಲಿಯಾಗದಂತೆ ಯೋಜನೆ ರೂಪುಗೊಳ್ಳಲಿ: ಸಂಜಯ್ ಗುಬ್ಬಿ

ಮಂಡ್ಯ: ಯಾವುದೇ ಅಭಿವೃದ್ಧಿ ಯೋಜನೆಯು ಪರಿಸರವನ್ನು ಬಲಿಗೊಟ್ಟು ರೂಪಿತವಾಗಬಾರದು. ಉದ್ದೇಶಿತ ಮೇಕೆದಾಟು ಯೋಜನೆಯಿಂದ ಕಾವೇರಿ ವನ್ಯಜೀವಿ ವಲಯದ ಸುಮಾರು 4,800…

46 mins ago

ಅಧಿಕಾರ ಹಸ್ತಾಂತರ ವಿಚಾರ: ಹೊಸ ಬಾಂಬ್‌ ಸಿಡಿಸಿದ ಕೇಂದ್ರ ಸಚಿವ ಎಚ್‌ಡಿಕೆ

ಮೈಸೂರು: ಅಧಿಕಾರ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಇಂದು…

1 hour ago