ಎಡಿಟೋರಿಯಲ್

ಸಂಪಾದಕೀಯ : ಚುನಾವಣೆ ತಯಾರಿ, ‘ಭರವಸೆ’ಗಳ ನಡುವೆ ಬಸವರಾಜ ಬೊಮ್ಮಾಯಿ ಸಾಧನೆಯ ತುಲನೆ!

ಯಾವುದೇ ಸರ್ಕಾರದ ಯಶಸ್ವಿ ಆಡಳಿತವನ್ನು ಅಳೆಯುವುದು ಹೇಗೆ? ಇಂಥ ಪ್ರಶ್ನೆಗೆ ಸುಲಭ ಉತ್ತರ ಆ ಸರ್ಕಾರ ಆಡಳಿತಕ್ಕೆ ಬರುವ ನೇತೃತ್ವ ವಹಿಸಿದ ಪಕ್ಷ ನೀಡಿದ ಭರವಸೆ ಹಾಗೂ ಜಾರಿಗೊಳಿಸಿದ ಹಾದಿಯ ತುಲನೆ. ಹಿಂದೆಲ್ಲಾ ಇದು ಐದು ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಅಂದರೆ ಚುನಾವಣೆ ವೇದಿಕೆಗಳೇ ಸರ್ಕಾರದ ಸಾಧನೆಗಳನ್ನು ಓರೆಗೆ ಹಚ್ಚುವ ಮಾರ್ಗವಾಗಿತ್ತು. ಇತ್ತೀಚಿನ ದಶಕಗಳಲ್ಲಿ ಇದೂ ಬದಲಾವಣೆಯಾಗಿದೆ. ಸರ್ಕಾರ ರಚನೆಯಾದ ನಂತರ ಐದು ವರ್ಷದಲ್ಲಿ ಇದನ್ನು ತಿಳಿಸಲು ಹತ್ತಾರು ಮಾರ್ಗಗಳು ಹುಟ್ಟಿಕೊಂಡಿವೆ. ಈಗಂತೂ ಸರ್ಕಾರದ ನೇತೃತ್ವ ವಹಿಸಿದವರು(ಸಿಎಂ) ಹಾಗೂ ಇಲಾಖೆ ಮುಖ್ಯಸ್ಥರು(ಸಚಿವರು) ತಂತಮ್ಮ ಸಾಧನೆಗಳನ್ನು ಕಾಲಕಾಲಕ್ಕೆ ಜನರ ಮುಂದೆ ಇಡುತ್ತಲೇ ಇದ್ದಾರೆ. ನೂರು ದಿನದ ಸಾಧನೆ, ಆರು ತಿಂಗಳ ಸಾಧನೆ, ವರ್ಷದ ಸಮಾವೇಶ.. ಹೀಗೆ ನಾನಾ ರೂಪ ಪಡೆದಿದೆ.

ಕರ್ನಾಟಕದಲ್ಲಿ ಪೂರ್ಣಾವಧಿ ಸರ್ಕಾರ ಆಡಳಿತ ನಡೆಸಿರುವುದು ಕಡಿಮೆಯೇ. ದೇವರಾಜ ಅರಸು, ಸಿದ್ದರಾಮಯ್ಯ ಅವರು ಮಾತ್ರ ಅವಧಿ ಪೂರೈಸಿದ ಪಟ್ಟಿಯಲ್ಲಿ ಪ್ರಮುಖರು. ಉಳಿದಂತೆ ಬಹುತೇಕ ಆಡಳಿತ ನಡೆಸಿದವರು ರಾಜಕೀಯ ಕಾರಣಗಳಿಗೆ ಅವಧಿ ಪೂರ್ಣಗೊಳಿಸಿದ್ದು ಇಲ್ಲ. ಕೆಲವರು ಅವಧಿಗಿಂತ ಮುಂಚೆಯೇ ಸರ್ಕಾರ ವಿಸರ್ಜಿಸಿದರೆ, ಕೆಲವರು ಬಹುಮತ ಕೊರತೆಯಿಂದ ಅಧಿಕಾರ ಕಳೆದುಕೊಂಡಿದ್ದಾರೆ. ಇದರಿಂದ ಅವಧಿ ಪೂರ್ಣ ಆಡಳಿತ ನಡೆಸಿ ತಾವು ಕೊಟ್ಟ ಭರವಸೆ ಎಷ್ಟು ಈಡೇರಿಸಿದ್ದೇವೆ ಎಂದು ಜನರ ಮುಂದೆ ಇಟ್ಟವರು ಕಡಿಮೆಯೇ.

ಏಕೆಂದರೆ ಯಾವುದೇ ಪಕ್ಷ ನೇತೃತ್ವದ ಸರ್ಕಾರ ರಚನೆಯಾಗುವ ಮುನ್ನ ಆ ಪಕ್ಷ ಜನರಿಗೆ ಪ್ರಣಾಳಿಕೆ ಮೂಲಕ ಹತ್ತಾರು ಭರವಸೆಗಳನ್ನು ನೀಡಿರುತ್ತದೆ. ಅಧಿಕಾರಕ್ಕೆ ಬಂದ ಮೇಲೆ ಕಾಲಮಿತಿಯೊಳಗೆ ಆರ್ಥಿಕ ಹೊಂದಾಣಿಕೆಯೊಂದಿಗೆ ಸಾಮಾಜಿಕ ಕಾರ್ಯಕ್ರಮ ಹಾಗೂ ಅಭಿವೃದ್ದಿ ಯೋಜನೆ ಜಾರಿಗೊಳಿಸುವುದು ಭರವಸೆ ನೀಡಿದ ಪಕ್ಷದ ಹೊಣೆಯೂ ಹೌದು. ಜನ ಕೇಳುವ ಮುನ್ನವೇ ಸರ್ಕಾರದ ನೇತೃತ್ವ ವಹಿಸಿದವರು, ಆಡಳಿತಾರೂಢ ಪಕ್ಷದ ಮುಖ್ಯಸ್ಥರು ಈ ಹೊಣೆಗಾರಿಕೆ ನಿಭಾಯಿಸಬೇಕಾಗುತ್ತದೆ. ಜನತಾ ನ್ಯಾಯಾಲಯದ ಮುಂದೆ ತಮ್ಮ ಸಾಧನೆಯ ಪಕ್ಷಿನೋಟ ಇಡಬೇಕಾಗುತ್ತದೆ.

ರಾಜ್ಯದಲ್ಲಿ ಈಗ ಬಿಜೆಪಿ ನೇತೃತ್ವದ ಆಡಳಿತ. ಒಮ್ಮೆಯೂ ಪೂರ್ಣ ಬಹುಮತ ಪಡೆಯದೇ ಇದ್ದರೂ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಅದರಲ್ಲಿ ಎರಡು ಬಾರಿ ದಿನಗಳ ಲೆಕ್ಕದಲ್ಲಿ ಮಾತ್ರ. ಇನ್ನೆರಡು ಬಾರಿಯು ಮೂರು ವರ್ಷದ ಆಚೀಚೆಯೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಕಳೆದ ವರ್ಷ ಬಿಜೆಪಿ ವರಿಷ್ಠರು ನೀಡಿದ ಸೂಚನೆ ಮೇರೆಗೆ ರಾಜೀನಾಮೆ ನೀಡಿ ತಾವೇ ಸೂಚಿಸಿದ್ದ ಬಸವರಾಜ ಬೊಮ್ಮಾಯಿ ಸಿಎಂ ಆಗುವಂತೆ ನೋಡಿಕೊಂಡಿದ್ದಾರೆ. ಬೊಮ್ಮಾಯಿ ಅವರು ನೇತೃತ್ವ ವಹಿಸಿದರೂ ಯಡಿಯೂರಪ್ಪ ಅವರ ಹೆಸರಿನ ನೆರಳಿನಿಂದ ಹೊರಬರಲು ಇನ್ನೂ ಅವರಿಗೆ ಆಗಿಲ್ಲ. ಆಗಲೇ ವರ್ಷದ ಅವಧಿ ಪೂರೈಸುವ, ಈ ಕಾಲದ ಸಾಧನೆ ನೋಟ ಮುಂದಿಡುವ ಸಮಯ ಬಂದಿದೆ.

ದೇಶ ಹಾಗೂ ರಾಜ್ಯಗಳೆರಡರಲ್ಲೂ ಬಿಜೆಪಿ ನೇತೃತ್ವದ ಡಬ್ಬಲ್ ಎಂಜಿನ್ ಸರ್ಕಾರವಿದೆ. ಇದರ ಫಲ ನಿರೀಕ್ಷೆ ಮೀರಿ ರಾಜ್ಯಾಭಿವೃದ್ದಿ, ಜನರ ಹಿತಕ್ಕೆ ಸಿಕ್ಕಿರಬಹುದು ಎಂಬ ನಿರೀಕ್ಷೆಗಳಿದ್ದವು.ಅದು ಇನ್ನು ನಿರೀಕ್ಷೆಯಾಗಿಯೇ ಉಳಿದಿದೆ. ಏಕೆಂದರೆ ಕೇಂದ್ರದ ಯೋಜನೆಗಳಿಂದ ರಾಜ್ಯಕ್ಕೆ ಸಿಗಬೇಕಾದ ಪಾಲು ಬಹಳಷ್ಟು ಯೋಜನೆಗಳಲ್ಲಿ ಸಿಕ್ಕಿಲ್ಲ. ಜಿಎಸ್‌ಟಿ ತೆರಿಗೆ ನೆಪದಲ್ಲಿ ಕೇಂದ್ರದ ಬೊಕ್ಕಸಕ್ಕೆ ಹಣದ ಹರಿವು ಹೆಚ್ಚಿದರೂ ಅದು ರಾಜ್ಯದ ಪಾಲಿಗೆ ಮಾತ್ರ ಇಲ್ಲ ಎನ್ನುವುದೂ ಇದೆ.

ರಾಜ್ಯದಲ್ಲೂ ಒಂದು ವರ್ಷದಲ್ಲಿ ಜನಮುಖಿ ಯೋಜನೆಗಳ ಜಾರಿಗಿಂತ ಧರ್ಮದ ನೆಲೆಯಲ್ಲೇ ಸರ್ಕಾರದ ಆಡಳಿತ ನೋಡುವ ಪ್ರಯತ್ನ ನಡೆದಿದೆ. ಗುತ್ತಿಗೆಯಲ್ಲಿ ಶೇ.೪೦ ರಷ್ಟು ಕಮಿಷನ್ ವಿವಾದ, ಅದಕ್ಕೆ ಸಚಿವರಾಗಿದ್ದ ಈಶ್ವರಪ್ಪ ತಲೆದಂಡ, ಪಿಎಸ್‌ಐ ನೇಮಕ ಹಗರಣ, ಶಿವಮೊಗ್ಗ ಸೇರಿ ಹಲವು ಕಡೆ ಕೋಮು ಸಂಘರ್ಷದ ಪ್ರಕರಣಗಳು, ಆರ್‌ಎಸ್‌ಎಸ್ ಪ್ರಣೀತ ಪಠ್ಯಪುಸ್ತಕ ಪರಿಷ್ಕರಣೆ, ಭ್ರಷ್ಟಾಚಾರದಡಿ ಎಸಿಬಿ ದಾಳಿಗೆ ಐಎಎಸ್ ಸೇರಿ ಹಲ ಅಧಿಕಾರಿಗಳು ಸಿಲುಕಿದ ಸಂಖ್ಯೆ ಹೆಚ್ಚಿರುವ ಸರಮಾಲೆಯೇ ಈ ಸರ್ಕಾರದ ಸಾಧನೆಯನ್ನು ಓರೆಗೆ ಹಚ್ಚಿದೆ.

ಮಳೆ ಅನಾಹುತವೂ ಸೇರಿದಂತೆ ಜ್ವಲಂತ ಸಮಸ್ಯೆಗಳಿಗೆ, ಇಲಾಖೆಯ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಏಳೆಂಟು ಸಚಿವರನ್ನು ಬಿಟ್ಟರೆ ಬಹುತೇಕರು ಕೆಲವು ಜಿಲ್ಲೆಗಳಿಗೇ ಭೇಟಿ ನೀಡಿಲ್ಲ. ಉಸ್ತುವಾರಿ ಸಚಿವರು ತ್ರೈಮಾಸಿಕ ಪ್ರಗತಿ ಪರಿಶೀಲನೆಯನ್ನೂ ಮಾಡಿಲ್ಲ.

ಬಸವರಾಜ ಬೊಮ್ಮಾಯಿ ಅವರಂತೂ ವರ್ಷದ ಆರು ತಿಂಗಳು ನಾಯಕತ್ವ ಬದಲಾವಣೆಯೆಂಬ ಗುಮ್ಮಕ್ಕೆ ಸಿಲುಕಿ ಆಡಳಿತದಲ್ಲಿ ತೊಡಗಿಸಿಕೊಳ್ಳಲೂ ಆಗಲಿಲ್ಲ. ತಾವೇ ಮಂಡಿಸಿದ ಬಜೆಟ್ ಅನುಷ್ಠಾನಕ್ಕೆ ಪ್ರಯತ್ನ ನಡೆಸಿದರೂ ಮೂರನೇ ವರ್ಷವೂ ಮುಂದುವರೆದಿರುವ ಕೋವಿಡ್ ಕರಿನೆರಳು ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದರಿಂದ ಅದು ಸಾಧನೆಗೆ ಅಡ್ಡಿಯಾಗಿದೆ.

ಶಿಕ್ಷಕರು ಸಹಿತ ವಿವಿಧ ಇಲಾಖೆಗಳ ನೇಮಕಾತಿಯೂ ಬರೀ ಹೇಳಿಗಳಿಗೆ ಸೀಮಿತವಾಗಿದೆ. ಇನ್ನೇನಿದ್ದರೂ ಚುನಾವಣೆ ತಯಾರಿ ಸಮಯ. ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಿಗದಿಯಾಗಬಹುದು. ಈ ವರ್ಷಾಂತ್ಯಕ್ಕೆ ಗುಜರಾತ್ ರಾಜ್ಯದೊಂದಿಗೆ ನಮ್ಮಲ್ಲೂ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ಹಾಗೂ ಸಚಿವರು,ಶಾಸಕರಿಗೆ ಆ ಕಡೆಯೇ ಗಮನ ಇರುವುದರಿಂದ ಸರ್ಕಾರದ ಸಾಧನೆ ಸಮಾವೇಶವೂ ಇದೇ ದಿಕ್ಸೂಚಿಗೆ ಸೀಮಿತವಾಗಬಹುದು. ಆದರೂ ಉಳಿದ ಏಳೆಂಟು ತಿಂಗಳಲ್ಲಿ ಸರ್ಕಾರದ ಭರವಸೆ ಈಡೇರುವತ್ತ ಗಮನ ನೀಡುವ ಅವಕಾಶವೂ ಇದೆ. ಇದಕ್ಕೆ ಸಮಾವೇಶ ಗಮನ ನೀಡಲಿ.

andolanait

Share
Published by
andolanait

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

24 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

3 hours ago