ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 16 ಶುಕ್ರವಾರ 2022

ಹವಾಮಾನದ ಮುನ್ಸೂಚನೆಯೇ ಇಲ್ಲದೆ ಬಹುರೂಪಿ ಆಯೋಜನೆ

ಹವಾಮಾನದ ಮುನ್ಸೂಚನೆ ಸಿಗದ ಕಾರಣ ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಆಯೋಜಿಸಿದ್ದ ಕರಕುಶಲ ಮೇಳದ ಮಳಿಗೆಗಳಿಗೆ ಮಳೆಯ ರಕ್ಷಾ ಕವಚಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್‌ನಲ್ಲಿಯೇ ವಿಶ್ವದ ಪ್ರತಿಯೊಂದು ವಿಚಾರಗಳನ್ನೂ ತಿಳಿಯಬಹುದಾಗಿದೆ. ಕಾರ್ಯಪ್ಪನವರು ಮೊಬೈಲ್‌ನಲ್ಲಿ ಹವಾಮಾನ ವರದಿ ಕ್ಲಿಕ್ ಮಾಡಿದ್ದರೆ ಒಂದು ವಾರದ ವರದಿ ತಿಳಿಯಬಹುದಿತ್ತು. ಹವಾಮಾನ ಇಲಾಖೆಯು ಗಾಳಿ, ಮಳೆ ಸಾಧ್ಯತೆಯ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಮ್ಮೂರಿನಲ್ಲಿ ಕಳೆದ ಏಪ್ರಿಲ್ ೨೫ರಂದು ನಡೆಯಬೇಕಿದ್ದ ಸತ್ಯ ಹರಿಶ್ಚಂದ್ರ ನಾಟಕವನ್ನು ಮುಂದೂಡಲಾಗಿತ್ತು. ಅಂತಹ ಸಣ್ಣ ಕಾರ್ಯಕ್ರಮವನ್ನೇ ಮುನ್ನೆಚ್ಚರಿಕೆ ವಹಿಸಿ ನಡೆಸುವಾಗ, ರಾಷ್ಟ್ರೀಯ ಮಟ್ಟದ ಬಹುರೂಪಿಯಂತಹ ಉತ್ಸವಗಳನ್ನು ಆಯೋಜಿಸುವಾಗ ರಂಗಾಯಣದ ನಿರ್ದೇಶಕರು ಎಡವಿದ್ದೇಕೆ? ಮೌಂಡೋಸ್ ಚಂಡಮಾರುತದ ಪರಿಣಾಮ ಕೆಲ ದಿನಗಳ ಮಳೆ, ಚಳಿ ಇದ್ದುದರಿಂದ ಜನರು ಬಹುರೂಪಿಗೆ ಕಡಿಮೆ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಪುಸ್ತಕ ಮಳಿಗೆಗಳು ಜನರಿಲ್ಲದೆ ಖಾಲಿ ಇದ್ದದ್ದು ಕೂಡ ಕಂಡಬಂದಿತ್ತು. ಪ್ರತಿ ವರ್ಷ ಈ ರೀತಿ ಚಳಿಗಾಲದಲ್ಲಿ ಆಯೋಜಿಸುವ ಬದಲು ಸೂಕ್ತ ಹವಾಮಾನ ಕಾಲದಲ್ಲಿ ಬಹುರೂಪಿ ಆಯೋಜಿಸಿದರೆ ರಂಗಾಸಕ್ತರಿಗೂ ಅನುಕೂಲ, ಜೊತೆಗೆ ಬಹುರೂಪಿಯೂ ಯಶಸ್ವಿಯಾಗುತ್ತದೆ.

ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು 


ನೂತನ ಬಸ್‌ಗಳು ಬೇಕು

ಮೈಸೂರು ನಗರ ಸಾರಿಗೆ ನಿಲ್ದಾಣದಿಂದ ಬೋಗಾದಿ ೨ನೇ ಹಂತಕ್ಕೆ ಹೊರಡುವ ಮಾರ್ಗ ಸಂಖ್ಯೆ ೫೧-ಎ (ಕೆಎ-೦೯ ಎಫ್ ೪೨೦೩) ಬಸ್ಸು ತುಂಬಾ ಹಳೆಯದಾಗಿದ್ದು, ಬಸ್ಸಿನ ಚಾಲಕ ಬ್ರೇಕ್ ಹಾಕಿದರೆ ಫ್ಯಾಕ್ಟರಿಯಲ್ಲಿನ ಸೈರನಿನ್ನಂತೆ ಶಬ್ದ ಬಂದು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಸಾರಿಗೆ ಇಲಾಖೆಯ ಅಽಕಾರಿಗಳು ಇಂತಹ ಹಳೆಯ ಬಸ್ಸುಗಳನ್ನು ರಸ್ತೆಗೆ ಬಿಡದೆ ಸ್ಕ್ರ್ಯಾಪ್ ಮಾಡಬೇಕಿದೆ. ಹಳೆಯದಾದ ಸಾಕಷ್ಟು ಬಸ್ಸುಗಳು ನಗರದ ವಿವಿಧ ಭಾಗಗಳಲ್ಲಿ ಸಂಚಾರ ಮಾಡುತ್ತಿದ್ದು, ಅವುಗಳಲ್ಲಿ ಸಂಚರಿಸಲು ಆತಂಕ ಉಂಟಾಗಿದೆ. ಕೆಲ ಬಸ್ಸುಗಳಂತೂ ಸಂಪೂರ್ಣ ಹದಗೆಟ್ಟಿವೆ. ಜೊತೆಗೆ ರಸ್ತೆಗಳೂ ಕೂಡ ಹಳ್ಳ ಬಿದ್ದಿದ್ದು, ಇಂತಹ ರಸ್ತೆಗಳಲ್ಲಿ ಈ ಬಸ್ಸುಗಳು ಸಂಚರಿಸುತ್ತಿರುವುದು ಅಪಾಯಕಾರಿ ಅನಿಸುತ್ತದೆ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಳೆಯ ಬಸ್ಸುಗಳಿಗೆ ವಿದಾಯ ಹೇಳಿ, ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್ಸುಗಳನ್ನು ಸಂಚಾರಕ್ಕೆ ಒದಗಿಸಬೇಕು.

ಜೆ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು.


ವೃತ್ತಿಪರರ ಮೇಲೆ ಹಲ್ಲೆ ಕಾನೂನು ರಕ್ಷಣೆ ಅಗತ್ಯ

ಇತ್ತೀಚಿನ ದಿನಮಾನಗಳಲ್ಲಿ ವೃತ್ತಿಪರರಾದ ವೈದ್ಯರು, ವಕೀಲರು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ಮತ್ತು ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಹಳೆಯ ದ್ವೇಷ, ಸಮಾಜಘಾತುಕ ಶಕ್ತಿಗಳ ಕೆಂಗಣ್ಣು ಇತ್ಯಾದಿ ಕಾರಣಗಳಿಂದ ಇಂತಹ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಕೆಲ ಬಾರಿ ಕೊಲೆ ಮಾಡುವ ಹಂತಕ್ಕೂ ಹೋಗಿವೆ. ಸಮಾಜದಲ್ಲಿ ಈ ಮೂರೂ ವರ್ಗದ ವೃತ್ತಿಪರರು ತಮ್ಮದೇ ಆದ ನೆಲೆಗಟ್ಟುಗಳಲ್ಲಿ ಸಮಾಜದ ಆರೋಗ್ಯ ಮತ್ತು ಸುವ್ಯವಸ್ಥೆಗಾಗಿ ಕೆಲಸ ಮಾಡುತ್ತಿದ್ದು, ಅಂತಹವರ ಮೇಲೆ ಹಲ್ಲೆ, ದಾಳಿಗಳು ನಡೆಯುವುದು ಅಪಾಯಕಾರಿ ಬೆಳವಣಿಗೆ. ರೋಗಿಯನ್ನು ಗುಣಪಡಿಸುವ ಉದ್ದೇಶದಿಂದಲೇ ವೈದ್ಯರು ಚಿಕಿತ್ಸೆ ನೀಡುವುದು. ಆ ವೇಳೆ ರೋಗಿಗೆ ಕಾಯಿಲೆ ವಾಸಿಯಾಗಬಹುದು ಅಥವಾ ಗುಣವಾಗದೆ ಪ್ರಾಣವೇ ಹೋಗ ಬಹುದು. ಆದರೆ, ರೋಗಿಯ ಸಂಬಂಽಕರು ವೈದ್ಯರ ಮೇಲೆ ಹಲ್ಲೆ ನಡೆಸು ವುದು ಅಥವಾ ವೈದ್ಯನ ಜೀವವನ್ನೇ ತೆಗೆದು ಬಿಡುವ ಹಂತಕ್ಕೆ ಹೋಗುವುದು ಎಷ್ಟು ಸರಿ? ಅದೇ ರೀತಿ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಆ ವೇಳೆ ಸೋಲಾ ದಾಗ ಮತ್ಯಾವುದೋ ಕಾರಣಕ್ಕೆ ಹಲ್ಲೆ ಮಾಡುವುದು, ಕೊಲೆ ಬೆದರಿಕೆ ಒಡ್ಡು ವುದು ಸಲ್ಲದು. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲರೊಬ್ಬರ ಮೇಲೆ ಪೊಲೀಸ್ ಅಽಕಾರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವ ಎರಡು ವಿಭಾಗದವರ ನಡುವೆ ಈ ರೀತಿ ಸಂಘರ್ಷಗಳು ಉಂಟಾದರೆ ಸಾಮಾಜಿಕ ಹಿತವನ್ನು ರಕ್ಷಿಸುವವರು ಯಾರು? ಪತ್ರಕರ್ತರೂ ಸಮಾಜದ ಲೋಪದೋಷಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆಲ್ಲ ಸೂಕ್ತ ರಕ್ಷಣೆ ನೀಡಬೇಕಾದ್ದು ಸರ್ಕಾರದ ಕರ್ತವ್ಯವಲ್ಲವೇ? ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಬೇ.ನ. ಶ್ರೀನಿವಾಸಮೂರ್ತಿ, ತುಮಕೂರು.


ಸರ್ಕಾರಿ ಶಾಲೆಗಳ ಕಡೆಗೆ ಗಮನ ಹರಿಸಿ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಜನರಿಗೆ ಆಸ್ತಕಿ ಕಡಿಮೆ ಎಂಬಂತಾಗಿದೆ. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ ಎನ್ನಲಾಗಿದೆ. ಒಂದು ವೇಳೆ ಅದು ನಿಜವಾಗಿದ್ದರೆ, ಅದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆ ಪ್ರದೇಶದಲ್ಲಿ ಕಡಿಮೆ ಇವೆ ಎಂಬುದೇ ಕಾರಣ. ನಗರ ಪ್ರದೇಶಗಳಲ್ಲಿನ ಪೋಷಕರು ಸರ್ಕಾರಿ ಶಾಲೆ ಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಇಚ್ಛಿಸದೆ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದು, ಇದರಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಬಹುತೇಕ ಎಲ್ಲ ಜನರೂ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಮೇಲೆ ಅವಲಂಬಿತರಾಗಿದ್ದಾರೆ.ಆದರೆ, ಸರ್ಕಾರಿ ಶಾಲೆ ಎಂಬ ಮಾತ್ರಕ್ಕೆ ಕೀಳರಿಮೆಯಿಂದ ನೋಡುವುದೇಕೆ? ಅನೇಕ ವಿದ್ಯಾರ್ಥಿಗಳಿಗೆ ತಮ್ಮ ವ್ಯಾಸಂಗ ಮುಗಿಸಿದ ಬಳಿಕ ಹೇಗಾದರೂ ಸರ್ಕಾರಿ ಕೆಲಸ ಪಡೆಯುವ ಹಂಬಲವಿರುತ್ತದೆ. ತಮ್ಮ ಜೀವನದುದ್ದಕ್ಕೂ ಸರ್ಕಾರದ ಸಂಬಳ ಹಾಗೂ ನಿವೃತ್ತಿಯ ನಂತರವೂ ಸರ್ಕಾರದ ಸೌಲಭ್ಯ ಪಡೆಯುವ ಹಲವಾರು ನೌಕರರು ಕೂಡ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುವುದು ವಿಪರ್ಯಾಸ. ಸರ್ಕಾರಿ ಶಾಲೆಗಳಲ್ಲಿ ಓದಿದ ಅಸಂಖ್ಯಾತ ಮಂದಿ ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನಮಾನ ಪಡೆದಿದ್ದಾರೆ. ಅವರನ್ನು ಆದರ್ಶವಾಗಿ ಇಟ್ಟುಕೊಂಡು ಸರ್ಕಾರಿ ನೌಕರರೂ ಸೇರಿದಂತೆ ನಾಗರಿಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಬೇಕಿದೆ.

ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು

andolanait

Recent Posts

ಹೊಸ ತಾಲ್ಲೂಕುಗಳಿಗೆ ಸಧ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

12 seconds ago

ಸಾಮಾಜಿಕ ಬಹಿಷ್ಕಾರ ಹಾಕಿದ್ರೆ 3 ವರ್ಷ ಜೈಲು ಜೊತೆಗೆ ದಂಡ : ಮಸೂದೆ ಮಂಡಿಸಿದ ರಾಜ್ಯ ಸರ್ಕಾರ

ಬೆಳಗಾವಿ : ಅನಿಷ್ಟ ಪದ್ಧತಿಯಾಗಿ ಇನ್ನೂ ಉಳಿದುಕೊಂಡಿರುವ ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ…

8 mins ago

ಹನಗೂಡಿನಲ್ಲಿ ಹುಲಿ ದರ್ಶನ : ಭೀಮನೊಂದಿಗೆ ಕೂಂಬಿಂಗ್‌ ಆರಂಭ

ಹುಣಸೂರು : ಹನಗೋಡು ಹೋಬಳಿ ನಾಗಮಂಗಲ ಮತ್ತು ಮುತ್ತುರಾಯನಹೊಸಹಳ್ಳಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಸಂಬಂಧ ಅರಣ್ಯ ಇಲಾಖೆ ಬುಧವಾರ…

15 mins ago

ಬೋನಿಗೆ ಬಿದ್ದ ಗಂಡು ಚಿರತೆ : ಗ್ರಾಮಸ್ಥರ ಆತಂಕ ದೂರ

ತಿ.ನರಸೀಪುರ : ತಾಲ್ಲೂಕಿನ ಬೂದಹಳ್ಳಿ ಗ್ರಾಮದಲ್ಲಿ ಗುರುವಾರ 6 ವರ್ಷದ ಗಂಡು ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ.…

19 mins ago

ಗೋವಾ ಅವಘಡ : ಭಾರತದಿಂದ ಪರಾರಿಯಾದ ಲುತ್ರಾ ಸೋದರರು ಥಾಯ್ಲೆಂಡ್‌ನಲ್ಲಿ ವಶಕ್ಕೆ

ಪಣಜಿ : ಗೋವಾ ಬೆಂಕಿ ಅವಘಡ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್…

58 mins ago

ಡೀಮ್ಡ್‌ ಅರಣ್ಯ ಪ್ರದೇಶ ಗುರುತಿಸುವಿಕೆಗೆ ಸಮಿತಿ ರಚನೆ : ಈಶ್ವರ ಖಂಡ್ರೆ

ಬೆಳಗಾವಿ : ಸರ್ಕಾರ ರಾಜ್ಯದಲ್ಲಿ 2022ರಲ್ಲಿ ಒಟ್ಟು 3,30,000 ಹೆಕ್ಟೇರ್ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಇರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ…

2 hours ago