ಹಂಪಾಪುರಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ
ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ಮಾರ್ಗವಾಗಿ ಮೈಸೂರಿಗೆ ಹೋಗುವ ಬಸ್‌ಗಳು ಸರಗೂರು, ಎಚ್.ಡಿ.ಕೋಟೆಯಿಂದಲೇ ಭರ್ತಿಯಾಗಿ ಬರುತ್ತಿದ್ದು, ಹಂಪಾಪುರ ಗ್ರಾಮಗಳಲ್ಲಿ ಅವು ನಿಲುಗಡೆಯಾಗು-ವುದಿಲ್ಲ. ಅಲ್ಲದೆ ಅಂತರ ರಾಜ್ಯ ಬಸ್‌ಗಳಾದ ಮಾನಂದವಾಡಿ, ಕಲ್ಪೆಟ್ಟಗೆ ತೆರಳುವ ಬಸ್‌ಗಳು ಹಾಗೂ ಹವಾನಿಯಂತ್ರಿತ ಬಸ್‌ಗಳು ವಿದ್ಯಾರ್ಥಿಗಳ ಪಾಸ್‌ಗಳು, ಕಾರ್ಮಿಕರ ಸಾಮಾನ್ಯ ಮಾಸಿಕ ರಿಯಾಯಿತಿ ಪಾಸ್‌ಗಳನ್ನು ಅನುಮತಿಸುವುದಿಲ್ಲ. ಇದರೊಂದಿಗೆ ಆ ಬಸ್‌ಗಳಲ್ಲಿ ದುಪ್ಪಟ್ಟು ಪ್ರಯಾಣ ದರವಿದೆ. ಆದ್ದರಿಂದ ಮೈಸೂರಿಗೆ ದಿನನಿತ್ಯ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಬಸ್ ಸಿಗದೆ ಮೈಸೂರು ತಲುಪು ವುದು ಕಷ್ಟಕರವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಸಮಯ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸುವಂತೆ ಎಚ್.ಡಿ.ಕೋಟೆ ಬಸ್ ಡಿಪೋ ವ್ಯವಸ್ಥಾಪಕರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೆಎಸ್‌ಆರ್‌ಟಿಸಿ ಈ ಬಗ್ಗೆ ಸೂಕ್ತ ಗಮನ ನೀಡಿ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸಿಕೊಡಬೇಕು. ನಿಗದಿತ ಸಮಯಕ್ಕೆ ತಲುಪುವಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ‘ಕೈ ತೋರಿದಲ್ಲಿ ನಿಲ್ಲುವೆ‘ ಬಸ್‌ಗಳು ಮತ್ತೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು.
–ಎಚ್.ಎಂ.ಮಹದೇವಸ್ವಾಮಿ, ಹಂಪಾಪುರ, ಎಚ್.ಡಿ.ಕೋಟೆ ತಾ.
ಅಧಿಕಾರಕ್ಕಾಗಿ ಹಳೇ ಪಿಂಚಣಿ ಜಾರಿ ವ್ಯವಸ್ಥೆ ಅಸ್ತ್ರ
ಹಲವು ವರ್ಷಗಳಿಂದಲೂ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ನೌಕರರು ಹಳೇ ಪಿಂಚಣಿ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಲೇ ಬಂದಿದ್ದು, ಮೈಸೂರಿನಲ್ಲಿ ನೌಕರರು ಪ್ರತಿಭಟನೆಯನ್ನೂ ಮಾಡಿದ್ದಾರೆ. ವಿಧಾನಸಭಾ ಅಽವೇಶನದಲ್ಲಿ ಈ ಕುರಿತ ಸದಸ್ಯರ ಲಿಖಿತ ಪ್ರಶ್ನೆಗಳಿಗೆ ಸರ್ಕಾರದಿಂದ ಹಳೇ ಪಿಂಚಣಿ ಜಾರಿ ಸಾಧ್ಯವಿಲ್ಲ ಎಂಬ ಉತ್ತರ ಪದೇ ಪದೇ ಬರುತ್ತಿದೆ.
ಎನ್‌ಪಿಎಸ್ ಜಾರಿಯ ವೇಳೆ ನೌಕರರಿಗೆ ಭಾರಿ ಮೊತ್ತದ ಹಣ ಕೈ ಸೇರಲಿದೆ ಎಂದು ಬಿಂಬಿಸಲಾಗಿತ್ತು. ಇದೀಗ ಅದರ ಬಂಡವಾಳ ಬಯಲಾಗಿದ್ದು, ಕೇವಲ ೧ ಸಾವಿರ ರೂ. ಅಥವಾ ೨ ಸಾವಿರ ರೂ. ಮಾತ್ರ ಪಿಂಚಣಿ ದೊರೆಯುತ್ತಿದೆ ಎನ್ನುವುದು ನೌಕರರ ಭವಿಷ್ಯದ ಚಿಂತೆಯನ್ನು ಹೆಚ್ಚು ಮಾಡಿದೆ. ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಜಾರಿ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರೂ ಇದೀಗ ಇದೊಂದು ಚುನಾವಣಾ ಮತ ಬ್ಯಾಂಕ್ ವಿಷಯವೂ ಆಗಿದೆ. ಪಶ್ಚಿಮ ಬಂಗಾಳ ಸರ್ಕಾರ ಎನ್‌ಪಿಎಸ್ ಅನ್ನು ಒಪ್ಪಿಕೊಳ್ಳಲೇ ಇಲ್ಲ. ಪಂಜಾಬ್ ಮತ್ತು ಹಿಮಾಚಲ ರಾಜ್ಯಗಳಲ್ಲಿ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳು ತಾವು ಅಽಕಾರಕ್ಕೆ ಬಂದರೆ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದ್ದು ಫಲಕಾರಿಯಾಗಿದೆ. ಕರ್ನಾಟಕದಲ್ಲೂ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ಅಽಕಾರದ ಗದ್ದುಗೆ ಹಿಡಿಯಲು ಹಪಹಪಿಸುತ್ತಿವೆ. ಆದ್ದರಿಂದ ಈಗ ಯಾವುದೇ ಪಕ್ಷ ಹಳೇ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ರಾಜಕೀಯ ಪಕ್ಷಗಳಿಗೆ ವರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
–ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.
ದಲಿತರು ಮುಖ್ಯಮಂತ್ರಿ-ಆಗುವುದು ಯಾವಾಗ?
ಎಲ್ಲ ರಾಜಕೀಯ ಪಕ್ಷಗಳೂ ನಾಟಕೀಯ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದು, ತಾವು ಅಧಿಕಾರಕ್ಕೆ ಬಂದರೆ ದಲಿತ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತಿರುವುದು ಎಷ್ಟು ಸರಿ? ಎಂಬುದು ಚರ್ಚೆಯ ವಿಷಯವಾಗಿದೆ. ಇದುವರೆಗೂ ಅಧಿಕಾರದಲ್ಲಿದ್ದ ಯಾವುದೇ ಪಕ್ಷಗಳೂ ವಿದ್ಯೆಯಲ್ಲಿ, ವಿನಯದಲ್ಲಿ ಉತ್ತಮರಾಗಿದ್ದು ಪ್ರತಿಯೊಂದು ಸಮುದಾಯವನ್ನೂ ಸಮಾನ ದೃಷ್ಟಿಯಲ್ಲಿ ನೋಡುವ ವ್ಯಕ್ತಿತ್ವ, ಅನುಭವ, ಹಗರಣಮುಕ್ತ ವ್ಯಕ್ತಿತ್ವವುಳ್ಳ ರಾಜಕೀಯ ದಲಿತ ನಾಯಕರಿದ್ದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿ. ಈ ವಿಷಯ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿದೆ. ಆದರೂ ರಾಜಕೀಯ ನಾಯಕರು ದಲಿತ ಮುಖ್ಯಮಂತ್ರಿ ಎಂಬ ವಿಷಯವನ್ನು ಮುನ್ನೆಲೆಗೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ನ್ಯಾಯಸಮ್ಮತವಲ್ಲ. ಇನ್ನು ಮುಂದಾದರೂ ಇಂತಹ ಹೇಳಿಕೆಗಳನ್ನು ನೀಡದೆ ತಮ್ಮ ಪ್ರಣಾಳಿಕೆಯಲ್ಲಿ ಉತ್ತಮವಾದ ವಿಷಯಗಳನ್ನು ಪ್ರಕಟಿಸಿ ತಮ್ಮ ತಮ್ಮ ಪಕ್ಷಗಳನ್ನು ಅಧಿಕಾರಕ್ಕೆ ತರಲು ಶ್ರಮಿಸಲಿ.ಒಂದು ವೇಳೆ ಬಹುಮತ ಲಭಿಸಿದರೆ, ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ದಲಿತ ನಾಯಕನನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಮಾಡುವುದರ ಮೂಲಕ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವುದು ಸೂಕ್ತ.
–ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು.
ಮೈಸೂರು-ಎಚ್.ಡಿ.ಕೋಟೆ ಹೆದ್ದಾರಿ ದುರಸ್ತಿ ಪಡಿಸಿ
ಮೈಸೂರು-ಮಾನಂದವಾಡಿ ಅಂತರ ರಾಜ್ಯ ಹೆದ್ದಾರಿಯು ಎಚ್.ಡಿ. ಕೋಟೆ ತಾಲ್ಲೂಕಿನ ಸಾಕಷ್ಟು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಇಲ್ಲಿನ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ರಾಷ್ಟ್ರೀಯ, ರಾಜ್ಯ ನಾಯಕರುಗಳು, ಜನಪ್ರತಿನಿಧಿಗಳು ಇದೇ ಮಾರ್ಗವಾಗಿ ಎಚ್.ಡಿ.ಕೋಟೆಗೆ ಬರುತ್ತಾರೆ. ಅಲ್ಲದೆ. ಈ ರಸ್ತೆಯು ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಇದೇ ಮಾರ್ಗವನ್ನು ಅವಲಂಬಿಸಿರುವುದರಿಂದ ನಿತ್ಯವೂ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಸದ್ಯಕ್ಕೆ ಈ ರಸ್ತೆಯು ಗುಂಡಿ ಬಿದ್ದು ಹದಗೆಟ್ಟಿದ್ದು, ರಸ್ತೆ ದುರಸ್ತಿಯ ಕಾರ್ಯ ಮಾತ್ರ ಇನ್ನೂ ಆಗಿಲ್ಲ. ಪ್ರತಿ ದಿನ ಇಲ್ಲಿ ಒಂದಲ್ಲ ಒಂದು ಅಪಘಾತದ ಪ್ರಕರಣಗಳು ವರದಿಯಾಗುತ್ತಿದ್ದು, ಇತ್ತೀಚೆಗಷ್ಟೇ ಜೀವ ಉಳಿಸಬೇಕಾದ ಆಂಬ್ಯುಲೆನ್ಸ್ ಕೂಡ ಅಪಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆಯಿತು. ಇಂತಹ ಅವಘಡವನ್ನು ತಪ್ಪಿಸುವ ನಿಟ್ಟಿನಲ್ಲಿ ಈ ರಸ್ತೆಯ ದುರಸ್ತಿಯ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಹೆದ್ದಾರಿಯಲ್ಲಿನ ‘ವನಸಿರಿನಾಡು ಹೆಗ್ಗಡದೇವನಕೋಟೆಗೆ ಸ್ವಾಗತ‘ ಎಂಬ ಸ್ವಾಗತ ಕಮಾನಿನ ಬಳಿ ರಾಜಕೀಯ ಪ್ರೇರಿತ ಬ್ಯಾನರ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಕೂಡಲೇ ಅಲ್ಲಿರುವ ಬ್ಯಾನರ್‌ಗಳ ತೆರವು ಮಾಡುವ ಜೊತೆಗೆ ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.
–ಪ್ರದೀಪ್ ಸೋಗಳ್ಳಿ, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು.
ಹಾಸನ: ಕಂಬ ಏರಿ ವಿದ್ಯುತ್ ತಂತಿ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹಾಸನದ ಕಾಟೀಹಳ್ಳಿಯ ಟೀಚರ್ಸ್…
ಬೆಂಗಳೂರು: ನಟ ಶಿವರಾಜ್ ಕುಮಾರ್-ಉಪೇಂದ್ರ ಅಭಿನಯದ ಬಹು ನಿರೀಕ್ಷಿತ 45 ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಖ್ಯಾತ ಸಂಗೀತ ನಿರ್ದೇಶಕ…
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಡಿ ಚಾರ್ಜ್‌ಶೀಟ್ ಪರಿಗಣಿಸಲು ಕೋರ್ಟ್…
ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಭೇಟಿ ನೀಡಿ ತಾಯಿಯ ದರ್ಶನ…
ಕೊಡಗು: ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಕೆಚ್ಚೆಟ್ಟರ ಎಸ್ಟೇಟ್ ಕಾಫಿ ತೋಟದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. ಕಳೆದ ಕೆಲ ದಿನಗಳ ಹಿಂದೆ…
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಳ್ಳರ ಹಾವಳಿ ಮುಂದುವರಿದಿದ್ದು, ಸೂರ್ಯೋದಯ ನಗರ ಬಡಾವಣೆಯಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಮುಸುಕುಧಾರಿ…