ಎಡಿಟೋರಿಯಲ್

ಆಂದೋಲನ ನಾಲ್ಕು ದಿಕ್ಕಿನಿಂದ : 21 ಸೋಮವಾರ 2022

ರಾಹುಲ್ ಕುಟುಕಿದ ಮೋದಿ

ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಹೆಜ್ಜೆ ಹಾಕಿದ್ದರ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಗುಜರಾತ್‌ನ ಜೀವನಾಡಿಯಾಗಿರುವ ನರ್ಮದಾ ಅಣೆಕಟ್ಟೆ ಯೋಜನೆ ವಿರುದ್ಧ ಅಭಿಯಾನ ನಡೆಸಿದ್ದವರು ಮೇಧಾ ಪಾಟ್ಕರ್. ಮೂರು ದಶಕಗಳಿಂದ ನರ್ಮದಾ ಅಣೆಕಟ್ಟೆ ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ನಡೆಸುತ್ತಿರುವುದು ಕಂಡುಬಂದಿದೆ ಎಂದು ಮೋದಿ ಟೀಕಿಸಿದ್ದಾರೆ. ಗುಜರಾತ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ‘ಭಾರತ್ ಜೋಡೊ ಯಾತ್ರೆ’ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. ಗುಜರಾತ್ ಅಭಿವೃದ್ಧಿಗೆ ನಾವು ಶ್ರಮಿಸಿದ್ದೇವೆ ಮುಂದೆಯೂ ಗುಜರಾತ್ ಅನ್ನು ಶ್ರೇಷ್ಠರಾಜ್ಯವನ್ನಾಗಿ ರೂಪಿಸುತ್ತೇವೆ ಎಂದು ಮೋದಿ ಹೇಳಿದರು. ಗುಜರಾತ್ ನಲ್ಲೀಗ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ಬಿಜೆಪಿ- ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಹಣಾಹಣಿಗೆ ಇಳಿದಿವೆ.


ಚಿಕ್ಕಪ್ಪನಿಗೆ ಶಿರಸಾಷ್ಟಾಂಗ ನಮಸ್ಕಾರ

ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ತೆರವಾಗಿರುವ ಮೈನ್‌ಪುರಿ ಲೋಕಸಭಾ ಉಪಚುನಾವಣೆಯ ಪ್ರಚಾರ ತಾರಕಕ್ಕೇರಿದೆ. ಸಮಾಜವಾದಿ ಪಕ್ಷದ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಹೇಗಾದರೂ ವಶಪಡಿಸಿಕೊಳ್ಳುವ ಇರಾದೆ ಆಡಳಿತಾರೂಢ ಬಿಜೆಪಿಗೆ ಇದೆ. ಆದರೆ, ತಮ್ಮ ಕೋಟೆಯನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಅಖಿಲೇಶ್ ಯಾದವ್ ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನೇ ಕಣಕ್ಕೆ ಇಳಿಸಿದ್ದಾರೆ. ಅಲ್ಲದೇ ರಾಜಕೀಯ ಕೌಟುಂಬಿಕ ಕಲಹದಿಂದಾಗಿ ದೂರವಿದ್ದ ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ನೆರವನ್ನು ಅಖಿಲೇಶ್ ಯಾದವ್ ಪಡೆದಿದ್ದಾರೆ. ಚುನಾವಣಾ ಪ್ರಚಾರದ ಸಭೆಯಲ್ಲೇ ಅಖಿಲೇಶ್ ಯಾದವ್ ಅವರು ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪಾದಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ತಮ್ಮ ಮತ್ತು ಚಿಕ್ಕಪ್ಪನವರ ಸಂಬಂಧದಲ್ಲಿ ಯಾವುದೇ ಒಡಕು ಉಂಟಾಗಿಲ್ಲ ಎಂದು ಬಹಿರಂಗವಾಗಿ ಸಾರಿದ್ದಾರೆ. ಕೌಟುಂಬಿಕ ಕಲಹದ ಮತಲಾಭ ಪಡೆಯಲು ಮುಂದಾಗಿದ್ದ ಬಿಜೆಪಿಗೆ ಈ ಬೆಳವಣಿಗೆಯಿಂದ ಕೊಂಚ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.


ಹಿಮಾಚಲಕ್ಕೆ ಪ್ರವಾಸಿಗರ ಪ್ರವಾಹ

ಈಗಷ್ಟೇ ಮತದಾನ ನಡೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಸೇಬಿನ ಸಾಮ್ರಾಜ್ಯ ಹಿಮಾಲಯ ಪ್ರದೇಶದಲ್ಲೀಗ ಪ್ರವಾಸಿಗರ ಪ್ರವಾಹವೇ ಹರಿಯುತ್ತಿದೆ. ಕೋವಿಡ್ ಕಾರಣಕ್ಕಾಗಿ ಪ್ರವಾಸಿಗರ ಸಂಖ್ಯೆ ಕಳೆದ ವರ್ಷ ಕುಂಠಿತಗೊಂಡಿತ್ತು. ಈ ವರ್ಷ ಜನವರಿಯಿಂದೀಚೆಗೆ ೧.೩೦ ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಕೋವಿಡ್ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತಲೂ ಹೆಚ್ಚಿದೆ. ಕಳೆದ ವರ್ಷ ಭೇಟಿ ಕೊಟ್ಟವರ ಸಂಖ್ಯೆಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು. ಹಿಮಾಚಲ ಪ್ರದೇಶದ ಪ್ರವಾಸೋದ್ಯಮವು ಕೋವಿಡ್-ಪ್ರೇರಿತ ವಿರಾಮದ ನಂತರ ತೀವ್ರ ವೇಗವನ್ನು ಪಡೆದುಕೊಂಡಿದೆ ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ೩೧ ರವರೆಗೆ ಮೂರು ಪಟ್ಟು ಹೆಚ್ಚಾಗಿದೆ. ಅತಿಯಾದ ಚಳಿ ಇರುವ ಜನವರಿ ತಿಂಗಳಲ್ಲೇ ೭.೭೦ ಲಕ್ಷ ಜನರು ಬಂದಿದ್ದರು. ಜೂನ್ ತಿಂಗಳಲ್ಲಿ ಬಂದವರ ಸಂಖ್ಯೆ ೨೦ ಲಕ್ಷ ದಾಟಿತ್ತು. ಪ್ರವಾಸೋದ್ಯಮ ಇಲಾಖೆಯ ಅಂಕಿಅಂಶಗಳ ಪ್ರಕಾರ ಜನವರಿ ೧ ರಿಂದ ಅಕ್ಟೋಬರ್ ೩೧ ರ ನಡುವೆ ೨೮,೨೩೨ ವಿದೇಶಿಯರು ಭೇಟಿ ನೀಡಿದ್ದಾರೆ.


ಅಲ್ಪ ಬಡ್ಡಿ ಏರಿಕೆ ನಿರೀಕ್ಷೆ

ಹಣದುಬ್ಬರ ಕೊಂಚ ಪ್ರಮಾಣದಲ್ಲಿ ತಗ್ಗಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಡಿಸೆಂಬರ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ದ್ವೈಮಾಸಿಕ ಸಭೆಯಲ್ಲಿ ಹಿಂದಿನಂತೆ ಶೇ.೦.೫೦ರಷ್ಟು ಬಡ್ಡಿ ಏರಿಸುವ ಸಾಧ್ಯತೆ ಇಲ್ಲ. ಆದರೆ, ಏರಿಕೆ ಪ್ರಮಾಣವು ಶೇ.೦. ೩೫ರಷ್ಟು ಇರಲಿದೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಈಗಾಗಲೇ ಶೇ.೧.೯೦ರಷ್ಟು ಬಡ್ಡಿದರ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿದೆ. ಹಣದುಬ್ಬರ ನಿಗದಿತ ಪ್ರಮಾಣಕ್ಕೆ ತಗ್ಗುವವರೆಗೂ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ಅಥವಾ ತಗ್ಗಿಸುವ ಸ್ಥಿತಿಯಲ್ಲಿ ಆರ್‌ಬಿಐ ಇಲ್ಲ. ಹೀಗಾಗಿ ಹಣಕಾಸು ನೀತಿ ಸಮಿತಿ ಶೇ.೦.೩೫ರಷ್ಟು ಬಡ್ಡಿದರ ಏರಿಸಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು. ೨೦೨೩ರ ಉತ್ತರಾರ್ಧದೊಳಗೆ ಹಣದುಬ್ಬರ ನಿಗದಿತ ಮಿತಿಯೊಳಗೆ ಬರಲಿದೆ ಎಂದ ನಿರೀಕ್ಷೆ ಆರ್‌ಬಿಐ ಗವರ್ನರ್ ಶಕ್ತಿಕಾಂತದಾಸ್ ಅವರದು. ಅಲ್ಲಿಯವರೆಗೆ ಅಲ್ಪಪ್ರಮಾಣದ ಬಡ್ಡಿದರ ಏರಿಕೆ ಅನಿವಾರ್ಯ. ಆನಂತರ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

andolana

Recent Posts

ಮುದ್ದಿನ ಹಸುವಿಗೆ ಸೀಮಂತ ನೆರವೇರಿಸಿದ ರೈತ ಮಹಿಳೆ!

ಭೇರ್ಯ ಮಹೇಶ್ ಶಾಸೋಕ್ತವಾಗಿ ನಡೆದ ಕಾರ್ಯಕ್ರಮ; ಮುತ್ತೈದೆಯರ ಮೂಲಕ ಹಸುವಿಗೆ ಸೀರೆ ತೊಡಿಸಿ, ಹಣ್ಣು, ಸಿಹಿ ನೀಡಿP ಕೆ.ಆರ್.ನಗರ :…

4 hours ago

ಕಾಡಾನೆ ದಾಳಿ; ಶಾಲೆಯ ಗೇಟ್, ನೀರಿನ ಪೈಪ್ ನಾಶ

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಲೆಗೆ ಪದೇಪದೇ ಕಾಡಾನೆ ಲಗ್ಗೆ; ಪೋಷಕರು, ಗ್ರಾಮಸ್ಥರಲ್ಲಿ ಭೀತಿ ಹನೂರು: ಕಾಡಾನೆ ದಾಳಿಯಿಂದ ಪದೇಪದೇ ಶಾಲಾ…

4 hours ago

‘ಪ್ರಾದೇಶಿಕ ಪಕ್ಷಗಳಿಂದಷ್ಟೇ ರಾಜ್ಯಗಳ ಅಭಿವೃದ್ಧಿ ಸಾಧ್ಯ’

‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ…

4 hours ago

ಡಿಕೆಶಿ ಬರಿಗೈಲಿ ವಾಪಸ್

ರವಿಚಂದ್ರ ಚಿಕ್ಕೆಂಪಿಹುಂಡಿ ರಾಹುಲ್ ಬಳಿ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪ ತಕ್ಷಣಕ್ಕೆ ಸಿಗದ ಸ್ಪಂದನೆ; ಚರ್ಚೆ ಮುಂದೂಡಿದ ರಾಹುಲ್ ಹೈಕಮಾಂಡ್ ನಾಯಕರಿಂದ…

4 hours ago

ಅಧಿವೇಶನವನ್ನು ಒಂದು ವಾರ ವಿಸ್ತರಿಸಲು ಮನವಿ : ಸ್ಪೀಕರ್‌ಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…

16 hours ago