ಸರ್ಕಾರಿ ಉದ್ಯೋಗದ ನೇಮಕಾತಿಯ ವಯೋಮಿತಿ ಹೆಚ್ಚಿಸಿ
ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸದೆ, ಸಾಕಷ್ಟು ನಿರುದ್ಯೋಗ ಸೃಷ್ಟಿಯಾಗಿ ಅಸಂಖ್ಯಾತ ಪ್ರತಿಭಾವಂತ ಸ್ಪರ್ಧಾಕಾಂಕ್ಷಿಗಳು ನಿಗದಿತ ವಯೋಮಾನವನ್ನು ಮೀರಿದ್ದು, ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಪಡೆಯಲು ಸಾಮಾನ್ಯ ವರ್ಗದವರಿಗೆ ವಯೋಮಿತಿ 35 ವರ್ಷ, ಹಿಂದುಳಿದ ವರ್ಗದವರಿಗೆ 38, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ 40 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ನಿಗದಿಪಡಿಸಿರುವ ವಯೋಮಿತಿಗೂ ಕರ್ನಾಟಕದಲ್ಲಿ ನಿಗದಿಪಡಿಸಿರುವ ವಯಸ್ಸಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ನಮ್ಮ ರಾಜ್ಯದಲ್ಲಿ ಏಕೆ ಹೆಚ್ಚಳವಾಗುತ್ತಿಲ್ಲ? ಮಾಹಿತಿ ಅನ್ವಯ ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ ಸಂಬಂಧಪಟ್ಟವರು ನೇಮಕಾತಿಗೆ ಕ್ರಮವಹಿಸಿಲ್ಲ. ಕಳೆದ ತಿಂಗಳು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಈ ವರ್ಷವೇ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿ, ಎರಡು ವರ್ಷಗಳಲ್ಲಿ 2.50 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಆದರೆ, ಇದು ಚುನಾವಣೆಯ ಮುನ್ನ ನೀಡುವ ಪಕ್ಷದ ಪ್ರಣಾಳಿಕೆಯೇ? ಕಳೆದ ಐದು ವರ್ಷಗಳಿಂದಲೂ ಸಾಧ್ಯವಾಗದ್ದು, ಚುನಾವಣೆಯ ಸಮೀಪದಲ್ಲಿ ಸಾಧ್ಯವಾಗುವುದಾದರೂ ಹೇಗೆ? ಸದ್ಯ ಈಗ ಯುವಕರು ವಯಸ್ಸಿನ ಮಿತಿಮೀರಿ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿದ್ದು, ಇದಕ್ಕೆಲ್ಲ ಪರ್ಯಾಯ ಪರಿಹಾರ ಇಲ್ಲವೇ ಎಂಬಂತಾಗಿದ್ದು, ಕೂಡಲೇ ಸರ್ಕಾರ ವಯಸ್ಸಿನ ಮಿತಿ ಸಡಿಲಗೊಳಿಸಿ ಮತ್ತೊಮ್ಮೆ ಕಾಲಾವಕಾಶ ನೀಡಿ ಸರ್ಕಾರಿ ಉದ್ಯೋಗ ದೊರೆತರೆ ಜೀವನದ ಭದ್ರತೆ ಸಿಕ್ಕಂತೆ ಎಂದು ಕಠಿಣ ಪರಿಶ್ರಮ ಪಡುವ ಲಕ್ಷಾಂತರ ಆಕಾಂಕ್ಷಿಗಳ ಕನಸನ್ನು ನನಸು ಮಾಡಲಿ. ಉಳಿದ ರಾಜ್ಯಗಳಂತೆ ನಮ್ಮಲ್ಲಿಯೂ ವಯಸ್ಸಿನ ಮಿತಿ ಹೆಚ್ಚಳ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರ ನಿರ್ಧರಿಸಲಿ ಎಂಬುದು ನಮ್ಮ ಬೇಡಿಕೆ.
– ಅನಿಲ್ ಕುಮಾರ್ ನಂಜನಗೂಡು
ಮೈಸೂರು – ಬೆಂಗಳೂರು ರಸ್ತೆಯ ಬಗ್ಗೆ ಆಪಾದನೆ ಸಮ್ಮತವಲ್ಲ
ಬೆಂಗಳೂರು – ಮೈಸೂರು ನಡುವಿನ ದಶಪಥ ನಿರ್ಮಾಣ ಕಾಮಗಾರಿ ಈಗಾಗಲೇ ಸಾಕಷ್ಟು ಮುಕ್ತಾಯಗೊಂಡಿದ್ದು, ಮದ್ದೂರಿನಿಂದ- ಬೆಂಗಳೂರುವರೆಗಿನ ನೂತನ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದೆ. ಪ್ರಯಾಣಿಕರೂ ಕೂಡ ಈ ರಸ್ತೆಯ ಬಗ್ಗೆ ಸಾಕಷ್ಟು ಧನಾತಕ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಸಂಸದ ಪ್ರತಾಪ್ ಸಿಂಹ ಅವರೂ ಮುಂದಿನ ಕೆಲ ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡು ಮೈಸೂರುವರೆಗೂ ಪ್ರಯಾಣಿಕರು ಸಂಚಾರ ಮಾಡಬಹುದು ಎಂದಿದ್ದಾರೆ. ಹೀಗಿರುವಾಗ ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಅವರು ದಶಪಥ ರಸ್ತೆ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅಷ್ಟು ಕಾಳಜಿ ಇರುವ ಅವರು ರಸ್ತೆ ಕಾಮಗಾರಿ ಆರಂಭಕ್ಕೂ ಮುನ್ನ ಹಾಗೂ ಕಾಮಗಾರಿ ಆರಂಭಿಕ ಹಂತದಲ್ಲಿ ಏಕೆ ಪರಿಶೀಲಿಸಲಿಲ್ಲ? ಈಗ ಶೇ.60ಕ್ಕೂ ಹೆಚ್ಚಿನ ಪ್ರಮಾಣದ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಆಗ ಸುಮ್ಮನಿದ್ದ ಸುಮಲತಾ ಅವರು ಈಗ ರಸ್ತೆ ಉದ್ಘಾಟನೆಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುತ್ತಿರುವ ಸಂದರ್ಭದಲ್ಲಿ ಈ ರೀತಿ ಟೀಕೆ ಮಾಡುವುದು ಎಷ್ಟು ಸರಿ? ಇದು ಸಲ್ಲದ ಆಪಾದನೆ ಮತ್ತು ಪೂರ್ವಾಗ್ರಹ ಪೀಡಿತವಾಗಿದೆ. ಪ್ರತಾಪಸಿಂಹ ಅವರಿಗೆ ಆ ರಸ್ತೆಯ ಸಂಪೂರ್ಣ ಕ್ರೆಡಿಟ್ ಸಲ್ಲುತ್ತದೆ ಎಂಬ ಒಂದೇ ಕಾರಣಕ್ಕೆ ಈ ರೀತಿಯ ಆಪಾದನೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.
-ಬ್ಯಾಂಕ್ ಶಿವಕುಮಾರ್, ಜೆ.ಪಿ.ನಗರ, ಮೈಸೂರು.
ಮಾನಸಿಕ ಅಸ್ವಸ್ಥರಿಗೆ ಬೇಕಿದೆ ಸೂಕ್ತ ನೆಲೆ
ಒಂದು ಕಾಲದಲ್ಲಿ ತಮ್ಮ ಕುಟುಂಬದೊಡನೆ ಬದುಕುತ್ತಿದ್ದ ಕೆಲವರು ಇಂದು ಮಾನಸಿಕ ಅಸ್ವಸ್ಥರಾಗಿ ಕುಟುಂಬದಿಂದಲೂ ದೂರಾಗಿ, ನೆಲೆಯೂ ಇಲ್ಲದೆ ಮೈಸೂರು, ಮಡಿಕೇರಿ, ಬೆಂಗಳೂರು ಹೆದ್ದಾರಿಗಳಲ್ಲಿ ಅಲೆದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಇವರು ಯಾರು? ಎಲ್ಲಿಂದ ಬಂದರು? ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇವರಲ್ಲಿ ಬಹುಪಾಲು ಬೇರೆ ಭಾಷೆಯವರಾ ಗಿದ್ದು, ಇಲ್ಲಿಗೆ ಬಂದು ಈ ರೀತಿ ಸರಿಯಾದ ಸಮಯಕ್ಕೆ ಊಟ, ನೀರು ಇಲ್ಲದೆ ಉಟ್ಟ ಕೊಳಕು ಬಟ್ಟೆಯಲ್ಲೇ ಅಲೆದಾಡುತ್ತಿದ್ದಾರೆ. ಇವರ ಪರಿಸ್ಥಿತಿ ಯನ್ನು ಗಮನಿಸಿದ ಕೆಲವರು ಊಟ, ನೀರು ನೀಡಿ ಮಾನವೀಯತೆ ತೋರಿದ್ದಾರೆ. ಆದರೆ ಇವರಿಗೆ ಸರಿಯಾದ ನೆಲೆ ಮಾತ್ರ ಸಿಗುತ್ತಿಲ್ಲ. ಹೀಗೆ ಬೀದಿಯಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಉತ್ತಮ ನೆಲೆ ಮತ್ತು ಸೂಕ್ತ ಚಿಕಿತ್ಸೆ ನೀಡಿದಲ್ಲಿ ಇವರು ಮೊದಲಿನಂತೆ ಜೀವನ ಸಾಗಿಸಬಹು ದಲ್ಲವೇ?. ಇತ್ತೀಚೆಗೆ ಮೈಸೂರು ಭಾಗದಲ್ಲಿಯೂ ಇಂತಹವರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲಾಡಳಿತ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಗಳು ಇಂತಹವರಿಗೆ ಸೂಕ್ತ ನೆಲೆ ಹಾಗೂ ಚಿಕಿತ್ಸೆ ನೀಡಬೇಕಿದೆ. ಅವರ ಮಾಹಿತಿ ಸಂಗ್ರಹಿಸಿ ಅವರು ಮರಳಿ ಕುಟುಂಬ ಸೇರಲು ಸಹಕರಿಯಾಗಬೇಕಿದೆ.
-ಜೆ.ಭೂಮಿಕ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಮಹಾರಾಜ ಕಾಲೇಜು.
ಸಾಕಷ್ಟು ಮಾಹಿತಿ ನೀಡಿದ ಆಂದೋಲನ ‘ಹಿನ್ನೋಟ’
‘ಆಂದೋಲನ’ ದಿನ ಪತ್ರಿಕೆಯು 2022ರ ವರ್ಷದ ಹಿನ್ನೋಟ ಎಂಬ ಶೀರ್ಷಿಕೆಯೊಂದಿಗೆ ವಿಶೇಷ ಸುದ್ದಿಯನ್ನು ಪ್ರಕಟಿಸಿದ್ದು, ಓದುಗರಿಗೆ ಅನೇಕ ಸಾಧಕರ ನೆನಪು ಮರುಕಳಿಸುವಂತೆ ಮಾಡಿದೆ. ಅವರು ಸಾಧನೆಗೈದ ವಿಷಯಗಳ ಬಗ್ಗೆ ಪುನರಾವರ್ತನೆ ಯಾಗುವ ಜೊತೆಗೆ ಅವರ ಸಾಧನೆಗಳನ್ನು ನೆನೆದು ನಮಗೆ ಹೆಮ್ಮೆ ಮತ್ತು ಮನಸ್ಸಂತೋಷಕ್ಕೆ ಕಾರಣವಾಗಿದೆ. ಈ ರೀತಿಯ ವಿಶೇಷ ಸಂಚಿಕೆ, ವರದಿ, ಅಂಕಣಗಳನ್ನು ಪ್ರಕಟಿಸುವುದರಲ್ಲಿ ‘ಆಂದೋಲನ’ ದಿನ ಪತ್ರಿಕೆ ಸಾಕಷ್ಟು ವಿಶೇಷತೆ ಗಳಿಂದ ಕೂಡಿದ್ದು, ಓದುಗರ ಅಭಿರುಚಿಗೆ ತಕ್ಕಂತೆ ವರದಿಗಳನ್ನು ಪ್ರಕಟಿಸುತ್ತಾ ಬಂದಿದೆ. ಪತ್ರಿಕೆಯ ಸಮಾಜಮುಖಿ ಕಾರ್ಯಗಳು ಉತ್ತಮ ಪರಿಣಾಮವನ್ನು ಬೀರುತ್ತಿವೆ. ಸಾರ್ವಜನಿಕರಿಗೂ ಉತ್ತಮವಾದ ಸಂದೇಶ ರವಾನೆಯಾಗಲು ಸಾಧ್ಯವಾಗಿದೆ. ಯಾವುದೇ ವ್ಯಕ್ತಿಯ ಸಾಧನೆಗಳನ್ನು ಕೆಲಸದ ಒತ್ತಡದಲ್ಲಿ ಮರೆತಿದ್ದ ನಮಗೆ ಪತ್ರಿಕೆಯಲ್ಲಿ ಪ್ರಕಟಿಸಿ ನೆನಪಿಗೆ ತರಲಾಗಿದೆ. ಈ ರೀತಿಯ ವಿಶೇಷ ವರದಿಯನ್ನು ಪ್ರಕಟಿಸಿದ ಪತ್ರಿಕೆ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳು.
-ಎಂ.ಎಸ್.ಉಷಾ ಪ್ರಕಾಶ್, ಬಿ.ಎಂ.ಕಾಲೋನಿ, ಮೈಸೂರು
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಒಂದು ವಿಶಿಷ್ಟ ದಾಖಲೆಗೆ ಪಾತ್ರರಾದರು. ಇದುವರೆಗೆ ಕರ್ನಾಟಕವನ್ನು ಸುದೀರ್ಘ…
ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ…
ದೂರ ನಂಜುಂಡಸ್ವಾಮಿ ಕಳೆದ ವರ್ಷ ಉಂಟಾದ ನಷ್ಟದಿಂದ ಉತ್ಸಾಹ ತೋರದ ವ್ಯಾಪಾರಿಗಳು; ರೈತರಲ್ಲಿ ಆತಂಕ ದೂರ: ತೋಟಗಾರಿಕೆ ಬೆಳೆಗಳಲ್ಲಿ ಒಂದಾದ…
ಕೆ.ಬಿ.ರಮೇಶನಾಯಕ ಮೈಸೂರು: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ನಡೆಸಿದ ದೀರ್ಘಾವಧಿ ಆಡಳಿತವನ್ನು ಹಿಂದಿಕ್ಕಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು…
ಹೇಮಂತ್ ಕುಮಾರ್ ಮಂಡ್ಯ: ಈ ಸರ್ಕಾರಿ ಶಾಲೆಗೆ ೧೩೭ ವರ್ಷ... ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ೪೧... ಒಂದು ಕಾಲದಲ್ಲಿ ೫೦೦ಕ್ಕೂ…
ಮಂಜು ಕೋಟೆ ಕೋಟೆ ರಾಜಕೀಯದಲ್ಲಿ ಹೊಸ ಬದಲಾವಣೆ; ಜಾ.ದಳಕ್ಕೆ ಶಾಕ್ ನೀಡಿದ ಮುಖಂಡರು ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು…