ಎಡಿಟೋರಿಯಲ್

ಸಂಪಾದಕೀಯ: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು

ದಕ್ಷಿಣ ಕಾಶ್ಮೀರ ಎಂದು ಪ್ರಖ್ಯಾತವಾಗಿರುವ ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಚ್ಚ ಹಸಿರಿನ ಪರಿಸರದ ಜೊತೆಗೆ ಇಲ್ಲಿನ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು, ಹತ್ತಾರು ಸೊಗಸಾದ ನೆನಪುಗಳೊಂದಿಗೆ ಮರಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಗೆ ಕೆಲವು ಅಹಿತಕರ ಘಟನೆಗಳಿಂದ ಕಹಿ ನೆನೆಪುಗಳೊಂದಿಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ಹಲ್ಲೆ, ಗಲಾಟೆ ಹಾಗೂ ಇನ್ನಿತರ ಕಾನೂನು ಭಂಗ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ಪ್ರವಾಸಿಗರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಖುದ್ದು ಪ್ರವಾಸಿಗರೇ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಸೂಕ್ತವಾದ ರಕ್ಷಣೆ ಇಲ್ಲವಾದರೇ, ಯಾವ ಧೈರ್ಯದಿಂದ ಇಲ್ಲಿಗೆ ಭೇಟಿ ನೀಡುವುದು? ಅನಾಹುತಗಳು ಸಂಭವಿಸಿದರೇ ಹೊಣೆ ಯಾರು ಎಂದು ಪ್ರವಾಸಿಗರು ಪ್ರಶ್ನಿಸಲಾರಂಭಿಸಿದ್ದಾರೆ.
ಕಾವೇರಿ ನಿಸರ್ಗಧಾಮದ ವಾಹನ ನಿಲುಗಡೆ ಜಾಗದಲ್ಲಿ ಟ್ಯಾಕ್ಸಿ ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಪ್ರವಾಸಿಗರನ್ನು ಒತ್ತಾಯ ಪೂರ್ವಕವಾಗಿ ಟ್ಯಾಕ್ಸಿ ಹತ್ತುವಂತೆ ಕಿರಿಕಿರಿ ಮಾಡುತ್ತಿದ್ದಾರೆ. ಇದೇ ವಿಷಯಕ್ಕೆ ಕಲಹ ಏರ್ಪಡುತ್ತಿದೆ. ಕೆಲವು ದಿನಗಳ ಹಿಂದೆ ಟ್ಯಾಕ್ಸಿ ಚಾಲಕ, ಪ್ರವಾಸಿಗನೋರ್ವ ಕಾರಿಗೆ ಒರಗಿ ನಿಂತ ಎಂದು ಥಳಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ತಿಂಗಳ ಹಿಂದೆ ಒಬ್ಬರು ಮಹಿಳೆಯ ಮೇಲೆ ಕಾರು ಚಾಲಕ ಥಳಿಸಿದ ಹಿನ್ನಲೆ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕಾರು ಚಾಲಕ ಹಲ್ಲೆ ನಡೆಸಿದ ವೀಡಿಯೋ ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇನ್ನು ಅಪಘಾತದಂತಹ ಪ್ರಕರಣಗಳಲ್ಲಿ ಪ್ರವಾಸಿಗರ ವಾಹನವೆಂದು ತಿಳಿದರೆ ಹಲ್ಲೆ ನಡೆಸಿದ ಮೇಲೆಯೇ ಇತರ ವಿಚಾರದ ಮಾತುಕತೆ ಆರಂಭವಾಗುತ್ತದೆ.

ಪ್ರವಾಸಿ ತಾಣಗಳಲ್ಲಿ ಗಲಾಟೆ, ಹಲ್ಲೆಗಳು ಸಾಮಾನ್ಯವಾದಂತಿದೆ. ಇತ್ತೀಚಿನ ಕೆಲವು ತಿಂಗಳ ಬೆಳವಣಿಗೆಗಳನ್ನು ಗಮನಿಸಿದರೆ, ಕಾವೇರಿ ನಿಸರ್ಗಧಾಮದಲ್ಲಿ ಯುವಕನೋರ್ವ ಪ್ರೇಯಸಿಗೆ ಚೂರಿ ಹಾಕಿದ್ದು, ಪ್ರವಾಸಿ ಮಹಿಳೆಯ ಮೇಲೆ ಕಾರು ಚಾಲಕ ಹಲ್ಲೆ ನಡೆಸಿದ್ದು, ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ಗೆ ಆಗಮಿಸಿದ ಕೇರಳದ ಪ್ರವಾಸಿಗರೊಂದಿಗೆ ಎನ್‌ಟಿಸಿ ಕಾರ್ಮಿಕರ ದುರ್ನಡತೆ, ಹಿಂದೆ ಮಾಂದಲ್‌ಪಟ್ಟಿಗೆ ಆಗಮಿಸಿದ ಪ್ರವಾಸಿಗರಿಗೆ ಸ್ಥಳೀಯರು ಹಲ್ಲೆ ನಡೆಸಿರುವುದು, ಕೆಲವು ದಿನಗಳ ಹಿಂದೆ ಕಾರು ಚಾಲಕ ಪ್ರವಾಸಿಗನ ಮೇಲೆ ನಡೆಸಿದ ಹಲ್ಲೆ, ಹೀಗೆ ಹಲವು ಅಹಿತಕರ ಘಟನೆ ನಡೆಯುತ್ತಲೇ ಇವೆ.

ಕಾವೇರಿ ನಿಸರ್ಗಧಾಮ, ನಿಸರ್ಗಧಾಮ ಟೂರಿಸ್ಟ್ ಸೆಂಟರ್, ದುಬಾರೆ, ಮಾಂದಲ್‌ಪಟ್ಟಿ ಹಾಗೂ ಇನ್ನಿತರ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಮೇಲೆ ನಡೆಯುವ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪ್ರವಾಸಿಗರು ಪೊಲೀಸ್ ಮೆಟ್ಟಿಲೇರಿದ್ದಾರೆ. ಆದರೆ, ಹಲ್ಲೆ ನಡೆಸಿದವರು ಪ್ರಭಾವ ಬಳಸಿ, ರಾಜಿ ಸಂದಾನ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಘಟನೆಗಳು ಮರುಕಳಿಸುತ್ತಿದೆ.

ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸುವ ಕೆಲಸ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಗಬೇಕಾಗಿದೆ. ಇಲ್ಲದಿದ್ದಲ್ಲಿ ಪ್ರವಾಸಿಗರು ಕೊಡಗಿಗೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಪ್ರವಾಸೋದ್ಯಮ ಅವಲಂಬಿತರು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಕ್ಷುಲ್ಲಕ ಕಾರಣಕ್ಕೆ ನಡೆಯುವ ಗಲಾಟೆಗಳಿಂದ ಭಾರೀ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ. ಕೆಲವು ವರ್ಷಗಳ ಹಿಂದೆ ದುಬಾರೆಗೆ ಭೇಟಿ ನೀಡಿದ ಕೇರಳದ ೧೯ ವರ್ಷದ ಯುವಕನೋರ್ವ ಸ್ಥಳೀಯರಿಂದ ಹಲ್ಲೆಗೊಳಗಾದ ಆರೋಪದಲ್ಲಿ ಮರಣ ಹೊಂದಿದ ಘಟನೆ ಇದಕ್ಕೆ ಸೂಕ್ತ ಉದಾಹರಣೆ. ಪ್ರವಾಸಿಗರಿಗೆ ಅಗತ್ಯ ಭದ್ರತೆ ಒದಗಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಬೇಕಾಗಿದೆ.
ಪ್ರವಾಸಿಗರ ಮೇಲೆ ಆಗುವ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಘಟನೆಗಳ ಮೇಲೂ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ಕೊಡಗಿನ ಹಿರಿಮೆ ಮತ್ತಷ್ಟು ಹೆಚ್ಚಿಸಬೇಕಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪ್ರವಾಸಿ ತಾಣಗಳಲ್ಲಿ ಸಿಬ್ಬಂದಿಗಳ ಮೂಲಕ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಮಾಡಬೇಕಿದೆ. ಪ್ರವಾಸಿಗರು ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂದರ್ಭದಲ್ಲಿ ತ್ವರಿತವಾಗಿ ಸೂಕ್ತ ನ್ಯಾಯ ಒದಗಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗಬೇಕಿದೆ.

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

4 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

4 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

5 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

5 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

5 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

5 hours ago