ಎಡಿಟೋರಿಯಲ್

ಸುಟ್ಟುಹೋದ ಉಯ್ಯಾಲೆ ಮರ

 

ನಾನು ಹುಟ್ಟಿದ ಹಳ್ಳಿಯಲ್ಲಿ ಸಣ್ಣ ರೈತರು, ಕೂಲಿಕಾರರು, ಸಣ್ಣ ವ್ಯಾಪಾರಸ್ಥರೂ ಆಗಿದ್ದ ಇಪ್ಪತ್ತು ಮುಸ್ಲಿಮರ ಮನೆಗಳಿದ್ದವು. ಅಲ್ಲಿ ಮಸೀದಿಯಿರಲಿಲ್ಲ. ನಮಾಜನ್ನು ಮುಸ್ಲಿಮರ ಕಡ್ಡಾಯ ಅರ್ಹತೆಯನ್ನಾಗಿ ವಿಧಿಸಿ ಪರೀಕ್ಷಿಸುವವರೂ ಇರಲಿಲ್ಲ. ಜನ ಧಾರ್ಮಿಕರಾಗಿದ್ದರು. ದುಡಿತದ ಸುಳಿಯಲ್ಲಿ ಸಿಲುಕಿದ್ದ ಅವರಿಗೆ ಶಾಸ್ತ್ರಬದ್ಧವಾಗಿ ನಮಾಜು ಮಾಡಲು ವೇಳೆಯಿರಲಿಲ್ಲ. ದುಡಿಮೆಯೇ ಪ್ರಾರ್ಥನೆಯಾಗಿತ್ತು. ರಂಜಾನ್ ತಿಂಗಳಲ್ಲಿ ಮೊಹರಂ ಚಿಹ್ನೆಗಳನ್ನು ಕೂರಿಸುವ ಮಕಾನಿನಲ್ಲೇ ಒಬ್ಬ ಮೌಲವಿಯನ್ನು ಕರೆಯಿಸಿ ನಮಾಜು ಮಾಡುತ್ತಿದ್ದರು. ವರುಷಕ್ಕೆ ಎರಡಾವರ್ತಿ ಬ್ರಕೀದ್-ರಂಜಾನ್ ಹಬ್ಬಗಳಲ್ಲಿ ತರೀಕೆರೆಗೆ ಹೋಗಿ ಈದಗಾದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು. ನಾವು ನಮಾಜು ತಪ್ಪಿಹೋಗುತ್ತದೆಯೆಂದು ತೇಕುತ್ತ ಓಡುತ್ತಿದ್ದೆವು.

ಕುಟುಂಬದಲ್ಲಿರುವ ಚಿಳ್ಳೆಪಿಳ್ಳೆಗಳಿಗೆ ಒಂದೇ ಥಾನಿನಿಂದ ಬಟ್ಟೆ. ಕುಟುಂಬದ ಹಿರಿಯರ ಹಿಂದೆ ಮಕ್ಕಳು ಮೊಮ್ಮಕ್ಕಳು ಹೋಗುವಾಗ, ತಾಯ್ಕೋಳಿ ಹಿಂದೆ ಹೂಮರಿ ಹೋಗುವಂತೆ ತೋರುತ್ತಿತ್ತು. ಆಗ ರೆಡಿಮೇಡ್ ಬಟ್ಟೆ ಕಡಿಮೆ. ಕೆಲವರು ನಮಾಜಿನ ಹೊತ್ತಾಗುತ್ತಿದ್ದರೂ ಟೈಲರ್ ಬಳಿ ಗೋಗರೆಯುತ್ತ ಕೂತಿರುತ್ತಿದ್ದರು. ಹೊಸಬಟ್ಟೆ ಹೊಲಿಸಲಾಗದವರು ಹಳೆಯವನ್ನು ಒಗೆದು ಇಸ್ತ್ರಿಮಾಡಿ ಉಟ್ಟಿರುತ್ತಿದ್ದರು. ಅಮ್ಮ ಹೊಸಬಟ್ಟೆಯನ್ನು ಬುಟ್ಟಿಯ ಮೇಲೆ ಹರವಿ, ಕೆಂಡದಲ್ಲಿ ಲೋಬಾನ ಹಾಕಿ ಘಮಘಮ ಮಾಡುತ್ತ್ತದ್ದಳು. ಅಪ್ಪ ಅತ್ತರನ್ನು ಬಟ್ಟೆಗೆ ಪೂಸುವನು. ಅಕ್ಕ ಕಡ್ಡಿಯಲ್ಲಿ ಕಪ್ಪುಪುಡಿಯನ್ನು ಅದ್ದಿ ನಮ್ಮ ಕಣ್ಣಿನ ಕೆಳರೆಪ್ಪೆಯ ದಂಡೆ ಸುರಮಾ ಕಾಡಿಗೆ ಹಚ್ಚುವಳು. ಸಿಂಗಾರಗೊಂಡು ಹೋಗುವ ನಾವು ಮಳೆಗಾಲದ ಕೆಸರನ್ನು ಸಿಡಿಸಿಕೊಂಡು ಜಾರಿಬಿದ್ದ ವರ್ಣರಂಜಿತರಾಗಿ ಮರಳುತ್ತಿದ್ದವು.

ತರೀಕೆರೆಯ ಸರ್ವ ದಿಕ್ಕಿನ ಮಸೀದಿಗಳಿಂದ ಜನ ತಕಬೀರ್ ಹಾಡುತ್ತ ಈದಗಾಕ್ಕೆ ಹೋಗುತ್ತಿದ್ದರು. ತಕಬೀರಿನ ‘ಅಲ್ಲಾಹು ಅಕಬರ್, ಲಾಯಿಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ವಲಿಯುಲ್ಲ ಹಮ್ದ್’ ಪಂಕ್ತಿಯನ್ನು ಮುಂದಿನವರು ಹೇಳಿದ ಬಳಿಕ ಹಿಂದಿನವರು ಪುನರುಕ್ತಿಸಬೇಕು. ಮನೆ ಅಂಗಡಿ ಜಗಲಿಗಳಲ್ಲಿ ಜನ ನಿಂತು ನಮ್ಮ ಜಾಥಾ ನೋಡುತ್ತಿದ್ದರು. ಈದಗಾ ಮೈದಾನದಲ್ಲಿ ಹಾಸಿದ ಚಾಪೆಗಳ ಮೇಲೆ ಸಾಲಾಗಿ ಕೂತು, ನಮಾಜಿಗಳು ಧರಿಸಿದ ವಿವಿಧ ವೇಷಗಳನ್ನೂ ಪೇಟ ಟೋಪಿ ರುಮಾಲುಗಳನ್ನೂ ನೋಡುವುದೊಂದು ಸಂಭ್ರಮ. ಕೆಲವರು ಆಗಷ್ಟೇ ಅರಬಸ್ಥಾನದಿಂದ ಬಂದಿಳಿದವರಂತೆ ಉದ್ದನೆಯ ಗೌನು ಧರಿಸಿ ತಲೆಗೆ ಕಟ್ಟಿದ ಬಿಳಿ ರುಮಾಲಿನ ಮೇಲೆ ಕರಿಹಗ್ಗ ಸುತ್ತಿರುತ್ತಿದ್ದರು. ಸಾಹುಕಾರರು ಹತ್ತಾರು ಗುಂಡಿಗಳಿರುವ ನಿಲುವಂಗಿ ತೊಟ್ಟು ಕಪ್ಪುಚಶ್ಮ ಹಾಕಿ, ದಿರಿಸನ್ನು ಪ್ರದರ್ಶಿಸುತ್ತ ಮೌಲಾನ ಅಬ್ದುಲ್ ಕಲಾಂ ಆಜಾದ್ ಆಗಿರುತ್ತಿದ್ದರು. ಅಂಗಡಿ ಹೋಟೆಲುಗಳ ಬ್ಯಾರಿಗಳು ಮಾಪ್ಳಾಗಳು ಬಿಳಿಮುಂಡು ಸುತ್ತಿಕೊಂಡು ಬಿಳಿಯ ತಲೆವಸ್ತ್ರದಲ್ಲಿರುತ್ತಿದ್ದರು. ನಾವು ‘ಇದೇನು ಹಿಂದುಗಳಂತೆ ಪಂಚೆ ಉಡುತ್ತಾರಲ್ಲ’ ಎನ್ನುತ್ತಿದ್ದೆವು.

ತರೀಕೆರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸುತ್ತಮುತ್ತಲ ಹಳ್ಳಿಯವರು ಬರುವನಕ ಶುರುವಾಗುತ್ತಿರಲಿಲ್ಲ. ಜಮಾಯತಿನ ಮುಖಂಡ ಎದ್ದುನಿಂತು ಸುತ್ತಮುತ್ತಲಿನ ಒಂದೊಂದೇ ಹಳ್ಳಿಯ ಹೆಸರು ಕೂಗಿ ‘ಬಂದರೇನಪ್ಪಾ?’ ಎಂದು ಕೇಳುವರು. ಆಗ ನಮ್ಮೂರಿನ ಹಿರಿಯರು ಬಂದಿದ್ದೇವೆಂದು ಸಾಬೀತುಪಡಿಸಲು ಟವೆಲ್ಲನ್ನು ಗಾಳಿಯಲ್ಲಿ ಬೀಸುವರು. ಮೌಲವಿಯವರು ಎದ್ದು ನಿಂತು ನಿಮ್ಮ ಪಂಕ್ತಿಗಳನ್ನು ಸರಿಮಾಡಿಕೊಳ್ಳಿ ಎನ್ನುವರು. ನಮಾಜಿಗೆ ನಿಂತಾಗ ಅಕ್ಕಪಕ್ಕದವರ ಭುಜ ಪರಸ್ಪರ ಸ್ಪರ್ಶಿಸುತ್ತಿರಬೇಕು. ನಡುವೆ ಜಾಗಬಿಟ್ಟರೆ ಅದರೊಳಗೆ ಸೈತಾನ ಬಂದು ನಿಲ್ಲುತ್ತಾನೆಂದು ನಂಬಿಕೆ. ಮುಂದಿನ ಪಂಕ್ತಿಯಲ್ಲಿ ಕುಳಿತ ನಮಾಜಿಗಳ ಪಾದಗಳು ಜೋಡಿಸಿಟ್ಟ ಹೆಂಚುಗಳಂತೆ ಕಾಣುತ್ತಿದ್ದವು. ಅವುಗಳ ಬಣ್ಣ ಮೃದುತ್ವ ಸೀಳುಗಳನ್ನು ನೋಡಿ, ಅವರ ವರ್ಗವನ್ನು ಹೇಳಬಹುದಿತ್ತು.

ನಮಾಜು ಮುಗಿದ ಬಳಿಕ ದೀರ್ಘ ದುವಾ ಕಾರ್ಯಕ್ರಮ. ಈಗ ಮೌಲವಿ ಅರಬ್ಬಿಮಂತ್ರಗಳಿಂದ ಉರ್ದುವಿಗೆ ಜಿಗಿಯುತ್ತಿದ್ದರು. ನಾವು ಎರಡೂ ಕೈಗಳನ್ನು ಜೋಡಿಸಿ ಬೊಗಸೆಯನ್ನು ಆಗಸಮುಖಿಯಾಗಿ ಹಿಡಿಯುತ್ತಿದ್ದೆವು. ಯಾ ಅಲ್ಲಾ, ನೀನು ಕರುಣಾಮಯಿ, ಸರ್ವಶಕ್ತ, ನಿನಗೆ ಗೊತ್ತಿಲ್ಲದ್ದು ಯಾವುದು? ನಾವು ಪಾಪಿಗಳು, ಅಸಹಾಯಕರು, ನಮ್ಮ ಮೇಲೆ ನಿನ್ನ ಕರುಣೆಯಿರಲಿ, ಸತ್ತ ಹಿರಿಯರಿಗೆ ಸ್ವರ್ಗ ಪ್ರಾಪ್ತಿಯಾಗಲಿ, ಅವರಿಗೆ ಸಮಾಧಿ ಹಿಂಸೆಯಿಂದ ವಿಮೋಚನೆ ಸಿಗಲಿ, ನಮಾಜು ಮಾಡುವ ಶ್ರದ್ಧೆ ದಯಪಾಲಿಸು, ಬಡವರಿಗೆ ಸಹಾಯ ಮಾಡುವ ಹೃದಯವಂತಿಕೆ ಕೊಡು, ಹಿರಿಯರಿಗೆ ಗೌರವಿಸುವ ಕಿರಿಯರಿಗೆ ಪ್ರೀತಿಸುವ ಸದ್ಬುದ್ಧಿ ನೀಡು, ತರುಣರ ದುಡಿಮೆಯಲ್ಲಿ ಬರಕತ್ ಬರಲಿ, ಕಾಯಿಲೆ ಬಿದ್ದಿರುವವರು ಗುಣಮುಖರಾಗಲಿ, ನಮ್ಮ ಅಕ್ಕತಂಗಿಯರಿಗೆ ಮದುವೆಯ ಅವಕಾಶವಾಗಲಿ- ಅದೊಂದು ನಿಡಿದಾದ ಬೇಡಿಕೆ ಪಟ್ಟಿ. ಪ್ರತಿ ಬೇಡಿಕೆಗೂ ಸಭೆ ಆಮೀನ್ ಎನ್ನುತ್ತಿತ್ತು. ಸಾವಿರಾರು ಸ್ವರಗಳು ಒಂದೇ ಸಲ ಉಚ್ಚರಿಸುವಾಗ ವಿಶಿಷ್ಟ ಮಾಧುರ್ಯ ಹೊಮ್ಮುತ್ತಿತ್ತು. ಉದ್ಯೋಗ ಮದುವೆ ಆರೋಗ್ಯದ ವಿಷಯ ಬಂದಾಗ ದೊಡ್ಡಸ್ವರದಲ್ಲಿ ಆಮೀನ್ ಹೊಮ್ಮುತ್ತಿತ್ತು. ಕೆಲವೊಮ್ಮೆ ದುವಾ ನಡೆಸಿಕೊಡುವ ಮೌಲವಿ ನಡುನಡುವೆ ಬಿಕ್ಕುತ್ತಿದ್ದುದುಂಟು. ಆಗ ಜನರ ಕಣ್ಣಲ್ಲೂ ನೀರು.

ಇದಾದ ಬಳಿಕ ಈದ್‌ಮುಬಾರಕ್ ವಿನಿಮಯ. ಸಮವಯಸ್ಕರ ಜತೆ ಅಪ್ಪುಗೆಯಾದರೆ, ಹಿರಿಯರ ಕೈಗಳಲ್ಲಿ ಕೈಸೇರಿಸಿ ಶುಭಾಶಯ ಸಲ್ಲಿಕೆ. ಮನೆಗೆ ಬಂದರೆ ಹೆಣ್ಣುಮಕ್ಕಳು ಬಣ್ಣದ ನೀರನ್ನು ತಟ್ಟೆಯಲ್ಲಿ ತುಂಬಿ ಗಂಡಸರ ದೃಷ್ಟಿ ತೆಗೆಯುವವರು. ಆಗ ಹಬ್ಬದ ಸಂಭಾವನೆ ಸಂದಾಯ ಮಾಡಬೇಕಿತ್ತು. ನಾವು ಅಮ್ಮನಿಗೂ, ಅಪ್ಪನಿಗೂ ಕಾಲುಮುಟ್ಟಿ ನಮಸ್ಕರಿಸುತ್ತಿದ್ದೆವು. ಕೆಲವು ಹಿರಿಯರು ‘ಅಲ್ಲಾನಿಗೆ ಬಿಟ್ಟು ಬೇರೆ ಯಾರಿಗೂ ಬಾಗಬಾರದು’ ಎಂದು ಕಾಲಿಗೆ ಬೀಳಿಸಿಕೊಳ್ಳುತ್ತಿರಲಿಲ್ಲ. ಅಮ್ಮ ಸೆರಗುಹೊತ್ತು ಕಣ್ಣುಮುಚ್ಚಿ ತಲೆಯನ್ನು ಮುಟ್ಟಿ ‘ಸೌಸಾಲ್ ಜೀಯೊ ಮೇರೆ ಬಚ್ಚೆ. ಅಲ್ಲಾ ತುಮೆ ಹಯಾತಿ ದೆ, ಕಮಾಯಿಮೇ ಬರ್ಕತ್ ದೇ, ತನ್‌ದುರಸ್ತಿ ದೇ’ ಎಂದು ಹರಸುತ್ತಿದ್ದಳು.

ನಮಾಜು, ಧಾರ್ಮಿಕ ಪ್ರವಚನ, ದುವಾಗಳ ಒಂದು ಗಂಟೆ ಕಾರ್ಯಕ್ರಮ ಸಮಾಪ್ತಿಯಾಗುವುದಕ್ಕೆ ಜನ ಚಡಪಡಿಸುತ್ತಿದ್ದರು. ಮುಗಿಯಿತೊ ಹೆಸಬಟ್ಟೆಯ ಸರಸರ, ಖುರ್ಬಾನಿಯ ಪ್ರಾಣಿಬಲಿ, ಅದರ ಹಸಿಗೆ, ಮಾಂಸದಾನ, ಒಲೆಹೂಡಿಕೆ, ಅಡುಗೆ, ಊಟ, ಬಂಧುಗಳ ಭೇಟಿ ಶುರು. ಬಕ್ರೀದಿನಲ್ಲಿ ಮನೆಯ ಹೊಸ್ತಿಲ ಬಳಿ ದೊಡ್ಡ ಪಾತ್ರೆಯಿಟ್ಟರೆ, ಖುರ್ಬಾನಿಯ ಮಾಂಸ ಬಂದು ಬೀಳುತ್ತಿತ್ತು. ಶುಭಾಶಯ ಕೋರಲು ಹೋಗುವ ಪ್ರತಿ ಮನೆಯಲ್ಲಿ ತುತ್ತಾದರೂ ಬಿರಿಯಾನಿ, ಚಮಚೆಯಾದರೂ ಸಿಹಿ ತಿನ್ನಬೇಕು. ನಾವು ಹುಡುಗರು ಹಬ್ಬದ ಕಾಣಿಕೆ ವಸೂಲಿಗೆ ಹೊರಡುತ್ತಿದ್ದೆವು. ಎರಡು ರೂಪಾಯಿತನಕ ಕಲೆಕ್ಷನ್ ಆಗುತ್ತಿತ್ತು. ಅದರಲ್ಲಿ ಮಧ್ಯಾಹ್ನದ ಮ್ಯಾಟಿನಿ ಆಗಬೇಕು. ಹಬ್ಬದ ಪ್ರಯುಕ್ತ ಮುಸ್ಲಿಮರ ಜೀವವನ್ನು ಆಧರಿಸಿದ ‘ಪಾಕೀಜಾ’ ‘ಮೇರೆ ಮೆಹಬೂಬ್’ ‘ಹಾತಿಂತಾಯ್’ ‘ದಯಾರೆ ಮದೀನ’ ಮೊದಲಾಗಿ ಮುಸ್ಲಿಂ ಕುಟುಂಬದ ಕಥೆಯುಳ್ಳ ಉರ್ದು ಸಿನಿಮಾ ಹಾಕಲಾಗುತ್ತಿತ್ತು. ಥಿಯೇಟರ್ ತುಂಬ ಇಡಿಕಿರಿದ ಸೆಂಟಿನ ಪರಿಮಳ, ಗದ್ದಲ. ರೊಕ್ಕವೆಲ್ಲ ಖರ್ಚಾದ ಬಳಿಕವೇ ಮನೆಯತ್ತ ಮುಖ ಮಾಡುತ್ತಿದ್ದೆವು.

ನಮಾಜು ಮುಗಿಸಿ ಹಳ್ಳಿಗೆ ಬಂದರೆ, ಉಯ್ಯಾಲೆ ಆಟಕ್ಕೆ ಹುಡುಗರು ಹುಡುಗಿಯರು ಸಜ್ಜಾಗಿರುತ್ತಿದ್ದರು. ಗಲ್ಲಿಯಲ್ಲಿ ಪುರಾತನ ಕಾಲದ ಬೇವಿನಮರ. ಅದರಲ್ಲಿ ಸೂಫಿಗಳ ಹೆಸರಲ್ಲಿ ಹಸಿರು ಬಾವು ಏರಿಸುತ್ತಿದ್ದರಿಂದ ಝಂಡೇಕಾ ಝಾಡ್ ಎನ್ನಲಾಗುತ್ತಿತ್ತು. ಅದರ ಕಟ್ಟೆಯ ಮಕ್ಕಳು ಆಡುತ್ತಿದ್ದವು. ಮುದುಕರು ಅಡ್ಡಾಗಿರುತ್ತಿದ್ದರು. ಚಿಕ್ಕಮಕ್ಕಳನ್ನು ಸೊಂಟದಲ್ಲೆತ್ತಿಕೊಂಡು ಮಹಿಳೆಯರು ಬಂದು ಹಕ್ಕಿಪಕ್ಕಿ ತೋರುತ್ತಿದ್ದರು. ನೆರಳಲ್ಲಿ ಬಡಗಿಗಳು ನೇಗಿಲ ಕೆತ್ತುವ, ಕುಂಟೆ ಕೂರಿಗೆ ಜೋಡಿಸುವ ಕಾಮಗಾರಿಗಳು. ಪ್ರಾಯದ ಹುಡುಗ ಹುಡುಗಿಯರು ಬೇವಿನ ಮರಕ್ಕೆ ಉಯ್ಯಾಲೆ ಹಾಕಿ ಜೀಕುತ್ತಿದ್ದರು. ಉಯ್ಯಾಲೆಯ ಒಂದು ತುದಿಗೆ ಹೆಂಗಳೆಯರಿಗೆ ಪ್ರಿಯನಾಗಿದ್ದ ಅನ್ವರ್ ಚಿಕ್ಕಪ್ಪ ಬೈಸಕಿ ಹೊಡೆದು ಜೀಕಿದನೆಂದರೆ, ಉಯ್ಯಾಲೆಯ ಇನ್ನೊಂದು ತುದಿ ಆಗಸಕ್ಕಡರುತ್ತಿತ್ತು. ಹೆಂಗಳೆಯರು ‘ಅಮ್ಮಾ ಮೈ ಮರೀಗೇ’ ಎಂದು ಸಂತೋಷದಿಂದ ಕಿರುಚುತ್ತಿದ್ದರು. ‘ನಕ್ಕೊರೆ ಡರತೀ ಛೊಕರಿಯ್ಞಾ’ ಎಂದು ಅಂಗಳದಲ್ಲಿ ಕೂತು ನೋಡುತ್ತಿದ್ದ ಹಿರಿಯರು ಕೂಗಿ ಹೇಳುತ್ತಿದ್ದರು. ಇದೇ ಬೇವಿನ ಮರದಡಿ ಅತಿಹೆಚ್ಚು ಹೊತ್ತು ಮೊಹರಂ ಮೆರವಣಿಗೆ ತನ್ನ ಪಾಳಗಾರ ಆಟ ಚಾಟಿಹೊಡೆದಾಟ ಪ್ರದರ್ಶನ ನೀಡುತ್ತಿತ್ತು. ಒಂದು ದಿನ ಗಲ್ಲಿಯಲ್ಲಿದ್ದ ಹುಲ್ಲಿನ ಮನೆಗಳಿಗೆ ಬೆಂಕಿಬಿದ್ದಿತು. ನನಗೆ ನೆನಪಿದೆ ದೀಪಾವಳಿಯ ಪಟಾಕಿ ಹೊಡೆದಂತೆ, ಛಾವಣಿಗೆ ಹಾಕಿದ್ದ ಬೊಂಬುಗಳು ಗಂಟುಗಳು ಸಿಡಿದ್ದಿದ್ದು. ಜ್ವಾಲೆಗೆ ಸಿಲುಕಿ ಹಬ್ಬದ ದಿನ ಉಯ್ಯಾಲೆ ಹಾಕುತ್ತಿದ್ದ ಬೇವಿನಮರ ಸುಟ್ಟು ಹೋಯಿತು. ಅದು ಸುಟ್ಟಿದ್ದೇ ಗಲ್ಲಿಯ ಲಕ್ಷಣವೇ ಹೋಯಿತು. ಹೊಸ ಬೇವಿನ ಸಸಿಯೊಂದನ್ನು ತಂದು ನೆಡಲಾಯಿತು. ಅದು ಬೆಳೆದು ಬಲವಾಗುವ ಹೊತ್ತಿಗೆ ಅದರಡಿ ನಡೆಯುತ್ತಿದ್ದ ಉಯ್ಯಾಲೆ, ಮೊಹರಂ ಕುಣಿತದ ಚಟುವಟಿಕೆಗಳೆಲ್ಲ ‘ಇಸ್ಲಾಮಿಕ್ ಅಲ್ಲ’ ಎಂದು ನಿಂತುಹೋಗಿದ್ದವು. ನಮ್ಮೂರ ಧರ್ಮದ ಕಲ್ಪನೆಯೇ ಬದಲಾಗಿತ್ತು.

andolanait

Recent Posts

ಎಚ್.ಡಿ.ಕೋಟೆಯಲ್ಲಿ ಮತ್ತೆ ಶುರುವಾಯ್ತು ಹುಲಿ ಉಪಟಳ

ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…

8 hours ago

ಇನ್ಸ್ಟಾಗ್ರಾಮ್ ಪರಿಚಯ : ಪೊಲೀಸಪ್ಪನ ಜತೆ ಮೈಸೂರು ಮೂಲದ ಗೃಹಿಣಿ ಎಸ್ಕೇಪ್

ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…

8 hours ago

ಮೈಸೂರಲ್ಲಿ ಸಂಭ್ರಮದ ಹನುಮೋತ್ಸವ ; ಮೆರವಣಿಗೆಯಲ್ಲಿ ಸಾಗಿದ ಅತ್ಯಾಕರ್ಷಕ ಹನುಮಮೂರ್ತಿಗಳು

ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…

9 hours ago

ಫೇಸ್‌ಬುಕ್‌ ಕಹಾನಿ | ಪ್ರೀತಿ ಹರಸಿ ಬಂದವನಿಗೆ ಹನಿಟ್ರ್ಯಾಪ್‌ ಗಾಳದ ಶಂಕೆ ; ಹಣಕ್ಕೆ ಡಿಮ್ಯಾಂಡ್‌….

ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…

9 hours ago

ಯುನಿಟಿ ಮಾಲ್‌ ನಿರ್ಮಾಣಕ್ಕೆ ವಿರೋಧ ಇಲ್ಲ : ಸಂಸದ ಯದುವೀರ್‌

ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…

9 hours ago

ಮೈಸೂರಲ್ಲಿ ಎರಡು ದಿನ ಮಾಗಿ ಸಂಭ್ರಮ : ಅವರೆಕಾಯಿ ಸೊಗಡು ಜೋರು…

ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…

9 hours ago