ರಾತ್ರೋರಾತ್ರಿ ಅರಸು ಬೆನ್ನಿಗೆ ಹಾಕಿದ ವ್ಯಕ್ತಿಯಿಂದ ನೈತಿಕತೆ ಕಲಿಯಬೇಕಿಲ್ಲ: ಸಂಸದರ ಗುಡುಗು
ಮೈಸೂರು: ಐವತ್ತು ವರ್ಷಗಳ ರಾಜಕೀಯ ಜೀವನದ ಪಯಣದಲ್ಲಿ ಎಳ್ಳಷ್ಟು ಕಪ್ಪುಚುಕ್ಕೆ ಹೊಂದಿಲ್ಲ. ಯಾವ ಪಕ್ಷದಲ್ಲಿ ಇರುತ್ತೇನೋ ಅಲ್ಲಿ ಅಸ್ತಿಯಾಗಿದ್ದೇನೆಯೇ ಹೊರತು ಹೊರೆಯಾಗಿಲ್ಲ. ಸ್ವಾಭಿಮಾನದ ಚಕ್ರವರ್ತಿ,ಮುತ್ಸದ್ಧಿ ಎನ್ನುವಂತೆ ಹೆಸರನ್ನು ಪಡೆದಿರುವ ನಾನು ರಾಜಕೀಯ ಅಲೆಮಾರಿ ರಾಜನಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ವಿ.ಶ್ರೀನಿವಾಸಪ್ರಸಾದ್,ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ಗೆ ತಿರುಗೇಟು ನೀಡಿದರು.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ರಾಜಕೀಯಕ್ಕೆ ಬಂದು ಇನ್ನೂ ಒಂದೂವರೆ ವರ್ಷಗಳು ಕಳೆದರೆ 50 ವರ್ಷಗಳಾಗಲಿದೆ. 1974ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಸೇರಿ ಒಂಬತ್ತು ಬಾರಿ ಲೋಕಸಭಾ ಚುನಾವನೆಗೆ ಸ್ಪರ್ಧಿಸಿ ಆರು ಬಾರಿ ಗೆಲುವು ಕಂಡಿದ್ದೇನೆ. ಐದು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಗೆಲುವು ಸಾಧಿಸಿ,ಮೂರು ಬಾರಿ ಸೋತಿದ್ದೇನೆ. ಹೋರಾಟದ ಹಿನ್ನಲೆಯಿಂದ ಬಂದಿರುವ ಕಾರಣ ಆಯಾಯ ಸಂದರ್ಭದಲ್ಲಿ ಅನಿವಾರ್ಯವಾಗಿ ಪಕ್ಷ ತೊರೆದಿದ್ದೇನೆ ಹೊರತು ಅಧಿಕಾರ,ಪದವಿ ಆಸೆಗಾಗಿ ಹೋಗಿಲ್ಲ ಎಂದು ಹೇಳಿದರು. ಐದು ವರ್ಷಗಳ ಕಾಲ ಸಿಎಂ, ಎರಡು ಬಾರಿ ವಿಪಕ್ಷನಾಯಕನಾಗಿರುವ ಸಿದ್ದರಾಮಯ್ಯ ಬಾದಾಮಿ,ಕೋಲಾರ,ಚಿಕ್ಕನಾಯಕನಹಳ್ಳಿ,ಚಾಮರಾಜಪೇಟೆ ಸೇರಿ ಯಾವ್ಯಾವುದೋ ಕ್ಷೇತ್ರಗಳನ್ನು ಅಲೆಮಾರಿಗಳಂತೆ ಹೇಳುವ ಬದಲಿಗೆ ಒಂದು ಕ್ಷೇತ್ರವನ್ನು ಹೇಳಲಿ ಎನ್ನುವ ಮಾತನ್ನು ಹೇಳಿದ್ದೇನೆ. ಅದೇ ರೀತಿ ವಿಶ್ವನಾಥ್ ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಕುರಿತು ಹೇಳಿದ್ದೇನೆ. ಆದರೆ, ಯಾವ ರಾಜಕಾರಣದ ಹಿನ್ನಲೆ ಗೊತ್ತಿರದ ವಿಶ್ವನಾಥ್ ನನ್ನ ಬಗ್ಗೆ ಮಾತನ್ನಾಡಿ ರಾಜಕೀಯ ಅಲೆಮಾರಿಗಳ ರಾಜನೆಂದು ಹೇಳಿದ್ದಾರೆ. ಯಾವ್ಯಾವ ಕಾಲದಲ್ಲಿ ನಿನಗೆ ಸಹಾಯ ಮಾಡಿದ್ದೇನೆಂದು ಸ್ವಲ್ಪ ನೆನಪಿಸಿಕೊಳ್ಳಿ ವಿಶ್ವನಾಥ್ ಎಂದು ನೇರವಾಗಿ ಪ್ರಶ್ನಿಸಿದರು.
ರಾತ್ರೋರಾತ್ರಿಗೆ ಅರಸು ಬೆನ್ನಿಗೆ ಚೂರಿ
ಪಕ್ಷೇತರನಾಗಿ ಸ್ಪರ್ಧಿಸಿದ್ದ ನಾನು ಜನತಾಪಕ್ಷ ಸಂಸ್ಥಾ ಕಾಂಗ್ರೆಸ್ಗೆ ಜತೆ ವಿಲೀನವಾದಾಗ ಕಾಂಗ್ರೆಸ್ ಸೇರಿದ್ದೆ. ೧೯೭೯ರಲ್ಲಿ ಇಂದಿರಾ-ಅರಸು ಕಾಂಗ್ರೆಸ್ ಇಬ್ಬಾಗವಾದಾಗ ಪಕ್ಷಾಂತರ ಮಾಡಲಿಲ್ಲ. ಪದವಿ ಆಸೆಗೆ ಹೋಗಲಿಲ್ಲ.1977ರಲ್ಲಿ ಡಿ.ದೇವರಾಜ ಅರಸು ಜತೆಗೆ ಇದ್ದ ಮಲ್ಲಿಕಾರ್ಜುನ ಖರ್ಗೆ, ವಿಶ್ವನಾಥ್ ಅಧಿಕಾರ ಕಳೆದುಕೊಂಡ ಮೇಲೆ ರಾತ್ರೋರಾತ್ರಿ ಬೆನ್ನಿಗೆ ಚೂರಿ ಹಾಕಿ ಇಂದಿರಾ ಕಾಂಗ್ರೆಸ್ ಸೇರಿದರು. ಇವರು ನನ್ನ ರಾಜಕೀಯದ ಬಗ್ಗೆಮಾತನಾಡಲು ಯಾವ ನೈತಿಕತೆ ಇದೆ ಎಂದು ಕುಟುಕಿದರು.
ವಿಶ್ವನಾಥ್ ಒಬ್ಬ ನಕಲಿ ಶಾಮ, ಚುನಾವಣೆಯಲ್ಲಿ ಸೋತ ಮೇಲೆ ಯಾರನ್ನು ಬೈಯದೆ ಬಿಟ್ಟಿಲ್ಲ. ನಂಜಪ್ಪ, ಮಂಚನಹಳ್ಳಿಮಹದೇವ, ಸಾ.ರಾ.ಮಹೇಶ್, ಎಚ್.ಪಿ.ಮಂಜುನಾಥ್, ಪ್ರತಾಪ್ ಸಿಂಹ ಎಲ್ಲರನ್ನು ಬಯ್ದಿದ್ದಾರೆ. ಆಣೆಪ್ರಮಾಣ ಮಾಡಲು ಕರೆಯುವುದು,ಹೀಯಾಳಿಸುವುದು ಮಾಡಿಕೊಂಡು ಬಂದಿರುವುದೇ ಹೆಚ್ಚು ಹೊರತು ಯಾರಿಗೂ ಕೃತಜ್ಞನಾಗಿಲ್ಲ. ಕಾಂಗ್ರೆಸ್ನಲ್ಲಿದ್ದಾಗ 1985ರ ಚುನಾವಣೆಯಲ್ಲಿ 42 ಜನರಿಗೆ ಟಿಕೆಟ್ ಕೊಡಿಸಿದ್ದವರಲ್ಲಿ ವಿಶ್ವನಾಥ್ ಒಬ್ಬ. ಅವರೆಲ್ಲರೂ ಗೌರವದಿಂದ ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್, ನಂಜಯ್ಯನಮಠ,ರಮಾನಾಥ ರೈ ಸೇರಿದಂತೆ ೪೨ ಜನರು ಗೌರವವಿಟ್ಟುಕೊಂಡು ಬಂದಿದ್ದಾರೆ. ಆದರೆ, ಈತ ಆಶ್ರಯ ಕೊಟ್ಟವರನ್ನು ಮರೆತು ಈಗ ಅಲೆಮಾರಿ ಎನ್ನುತ್ತಿದ್ದಾನೆ. ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾನೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಹೊಸದಿಲ್ಲಿಯಲ್ಲಿ ಆಶ್ರಯ ಕೊಟ್ಟಿದ್ಯಾರು?
೧೯೮೫ರಲ್ಲಿ ಕೆ.ಎಚ್.ಪಾಟೀಲ್ ಅವರು ವಿಶ್ವನಾಥ್ಗೆ ಟಿಕೆಟ್ ಕೊಡಬಾರದೆಂದು ಹೇಳಿದ್ದರು. ಆದರೆ, ಗದಗದಲ್ಲಿ ಯುವ ಕಾಂಗ್ರೆಸ್ಸಿಗರು ಅರ್ಜಿ ಸಲ್ಲಿಸಿರುವ ಕಾರಣ ಮೂವರ ಹೆಸರನ್ನು ಪಟ್ಟಿ ಮಾಡುವಂತೆ ಪಟ್ಟು ಹಿಡಿದುಕೊಂಡಿದ್ದರಿಂದ ಕೆ.ಆರ್.ನಗರದಲ್ಲೂ ಕೆಂಚೇಗೌಡ, ಭದ್ರೇಗೌಡರ ಜತೆ ವಿಶ್ವನಾಥ್ ಹೆಸರು ಪ್ಯಾನಲ್ನಲ್ಲಿ ಹೋಯಿತು. ನನ್ನ ಮಾತನ್ನು ಮೀರದೆ ಹೈಕಮಾಂಡ್ ಟಿಕೆಟ್ ಕೊಟ್ಟಿದ್ದು ಜ್ಞಾಪಕ ಇಲ್ಲವೇ ಎಂದು ಪ್ರಶ್ನಿಸಿದರು.
ಹೊಸದಿಲ್ಲಿಯಲ್ಲಿ ನಾಲ್ಕು ವರ್ಷಗಳ ಕಾಲ ಆಶ್ರಯ ಕೊಟ್ಟಿದ್ದು ಯಾರು? 1989ರಲ್ಲಿ ಗೆದ್ದಾಗ ಎರಡು ಕೈ ಮುಗಿದು ಕಾಲಿಗೆ ಬಿದ್ದರು. ವೀರಪ್ಪಮೊಯ್ಲಿ ಸಿಎಂ ಆಗಿದ್ದಾಗ ವಿಶ್ವನಾಥ್ಗೆ ಮಂತ್ರಿ ಸ್ಥಾನ ಕೊಡಬಾರದೆಂದು ಹೇಳಿದಾಗ ಪಟ್ಟು ಹಿಡಿದು ಪಟ್ಟಿಯಲ್ಲಿ ಸೇರಿಸಿದೆ. ನಾಲ್ಕು ವರ್ಷ ಸಾಕಾಗಿದೆ. ನಮ್ಮ ಮನೆಯಲ್ಲಿ ನಿಮ್ಮ ಫೋಟೋ ಇಟ್ಟು ಪೂಜೆ ಮಾಡ್ತೀವಿ ಅಂತ ಯಾರ ಹೆಂಡ್ತಿ ಹೇಳಿದ್ರು ಎಂದು ಗೊತ್ತಿಲ್ಲವೇ? ಕೆ.ಆರ್.ನಗರದಲ್ಲಿ ನನ್ನ ಪಾಲಿಗೆ ವಿ.ಶ್ರೀನಿವಾಸಪ್ರಸಾದ್ ಅವರೇ ತಿರುಪತಿ ತಿಮ್ಮಪ್ಪ ಇದ್ದಾಗೆ ಅಂತ ಹೇಳಿದ್ದನ್ನು ಮರೆತುಬಿಟ್ಟಿದ್ದೀಯಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಕೃತಜ್ಞತೆ ಇಲ್ಲದ ಮನುಷ್ಯ
:ನಂಜನಗೂಡು ಉಪ ಚುನಾವಣೆಯಲ್ಲಿ ನನ್ನ ವಿರುದ್ಧವೇ ಪ್ರಚಾರ ಮಾಡಿ ಈಡುಗಾಯಿ ಒಡೆಯುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೈಮುಗಿದು ನಿಂತಿದ್ದ ಸಿದ್ದರಾಮಯ್ಯ, ರಾಜಕೀಯದಲ್ಲಿ ಸಹಾಯ ಮಾಡಿ ಬೆಳೆದ ವಿಶ್ವನಾಥ್ಗೆ ಕೃತಜ್ಞತೆ ಇಲ್ಲ ಎಂದರು. ಯಾರಿಂದಲೂ ತಿರಸ್ಕಾರಗೊಂಡಿಲ್ಲ. ಅಲೆಮಾರಿಯಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿಲ್ಲ ಎಂದರು.
ಹೈಕಮಾಂಡ್ ಆಸಕ್ತಿಯಿಂದ ಮಂತ್ರಿಗಿರಿ
ನಾನೇನೂ ಕಾಂಗ್ರೆಸ್ಗೆ ಸೇರಬೇಕೆಂದು ಹೋಗಲಿಲ್ಲ. ರಾಜ್ಯರಾಜಕಾರಣಕ್ಕೆ ಬರುವಂತೆ ಅನೇಕರು ಹೇಳಿದ ಫಲವಾಗಿ ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ. ಎರಡನೇ ಬಾರಿ ಗೆದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಈ ವೇಳೆ ಆಸ್ಕರ್ ಫರ್ನಾಂಡೀಸ್ ಅವರೇ ಎ.ಕೆ.ಆಂಟನಿ ಮೂಲಕ ನನ್ನ ಹೆಸರನ್ನು ಸ್ವಇಚ್ಛೆಯಿಂದ ಕಳುಹಿಸಿದರೇ ಹೊರತು ನಾನಾಗಿಯೇ ಯಾರನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಮಂತ್ರಿಗಿರಿಗಾಗಿ ಯಾರನ್ನೂ ಗೋಗೆರೆಯುವ ಸ್ಥಿತಿ ನನಗಿಲ್ಲ.ನನಗಿರುವ ಅನುಭವದ ಆಧಾರದ ಮೇಲೆ ಕಂದಾಯ ಖಾತೆ ಕೊಡುವಂತೆ ಎ.ಕೆ.ಆಂಟನಿ ಹೇಳಿದರು. ಸಿದ್ದರಾಮಯ್ಯ ಅವರಿಗೆ ಹೊಟ್ಟೆಕಿಚ್ಚು,ಅಸೂಯೆ. ಒಂದು ಮಾತನ್ನು ಕೇಳದೆ ಏಕಾಏಕೀ ಮಂತ್ರಿಗಿರಿಯಿಂದ ಕೈಬಿಟ್ಟಿದ್ದು ಮನಸ್ಸಿಗೆ ತುಂಬಾ ನೋವಾಗಿದ್ದನ್ನು ಹೇಳಿದೆ. ನಿಮಗೆ ಅನಾರೋಗ್ಯ, ಖಾತೆ ನಿರ್ವಹಿಸಲು ಸಾಧ್ಯವಿಲ್ಲವೇ ಎನ್ನುವ ಒಂದು ಮಾತನ್ನು ಕೇಳಿದ್ದರೆ ನಾನೇ ಹೊರಬರುತ್ತಿದ್ದೆ ಎಂದು ಹೇಳಿದರು. ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ಸಂತೇಮರಹಳ್ಳಿ ಮಹದೇವಸ್ವಾಮಿ, ಕುಂಬ್ರಳ್ಳಿ ಸುಬ್ಬಣ್ಣ,ನಂದಕುಮಾರ್,ಭರತ್ರಾಮಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ಸಂತೇಮರಹಳ್ಳಿ ಮಹದೇವಸ್ವಾಮಿ, ಕುಂಬ್ರಳ್ಳಿ ಸುಬ್ಬಣ್ಣ,ನಂದಕುಮಾರ್,ಭರತ್ರಾಮಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು
ಹೊಸ ವರ್ಷದಂದು ಹಲವರು ಬಂಧು,ಬಳಗ, ಸ್ನೇಹಿತರ ಜತೆ ಸೇರಿ ಸಂಭ್ರಮಿಸಿದರು. ಆದರೆ ಸಾಂಸ್ಕ ತಿಕ ನಗರ ಮೈಸೂರಿನಲ್ಲಿ ದಾಖಲೆ ಮದ್ಯ…
ಸ್ವಾಗತಾರ್ಹ ನಡೆ! ಜಾತಿ ಮೀರಿ ಪ್ರೀತಿಸಿದರೆ ಕುಂದಲ್ಲವದು ಮರ್ಯಾದೆಗೆ ಬದಲಿಗೆ ಹೆಚ್ಚುವುದು ಮರ್ಯಾದೆ ಗೌರವ! ಜಾತಿ ಕಟ್ಟಳೆ ಮುರಿವ ಸಮತೆಯ…
ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್‌ಗಳು ಬಳಕೆಯಾದ ನಂತರ ನಿರ್ಲಕ್ಷ್ಯಕ್ಕೆ ಒಳಪಡುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಒಂದೆಡೆ…
ಲೊಕ್ಕನಹಳ್ಳಿ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಹನೂರು: ಒಂದೆಡೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು…
ನವೀನ್ ಡಿಸೋಜ ೧೮,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ರೈತರು; ಹವಾಮಾನ ವೈಪರೀತ್ಯದ ನಡುವೆಯೂ ಕಟಾವು ಕಾರ್ಯ ಚುರುಕು ಮಡಿಕೇರಿ:…
ಚಾಮರಾಜನಗರ: ತೀವ್ರ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಕಳೆದ ೨-೩ ದಿನಗಳಿಂದ ಎದುರಾಗಿರುವ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ…