ಪರಿವಾರ, ತಳವಾರ ಎಸ್‌ಟಿಗೆ ಸೇರಿದರೂ ಮುಂದುವರಿದ ಬಿಕ್ಕಟ್ಟು
ಕೆ.ಬಿ.ರಮೇಶನಾಯಕ
ಮೈಸೂರು: ಹಲವು ದಶಕಗಳಿಂದ ಇದ್ದ ತಳವಾರ, ಪರಿವಾರ ಸಮಸ್ಯೆ ಪರಿಹರಿಸುವ ಜತೆಗೆ ಶೇ.3ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಮುಂಬರುವ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಅದೇ ಬಿಜೆಪಿ ನೇತೃತ್ವದ ಸರ್ಕಾರ ಹಳೆಯ ಪ್ರಕರಣಗಳನ್ನು ಕೈಬಿಡುವ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬಾರದಿರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಳವಾರ ಮತ್ತು ಪರಿವಾರ ಪದವು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆಯಾಗಿದ್ದರೂ 2020ರ ಅವಧಿಯ ಹಿಂದೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ದಾಖಲಾಗಿರುವ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಯಾವ ನಡೆಯನ್ನು ಅನುಸರಿಸಬೇಕು ಎನ್ನುವ ವಿಚಾರ ಕುರಿತು ಸ್ಪಷ್ಟೀಕರಣ ನೀಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಬರೆದಿರುವ ಪತ್ರ ಧೂಳು ತಿನ್ನುತ್ತಿದೆ. ಹೀಗಾಗಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆುಂಲ್ಲಿರುವ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿ ಸಭೆಯನ್ನು ರಾಜಕೀಯ ಒತ್ತಡ ತಂತ್ರ ಅನುಸರಿಸಿ ಮುಂದೂಡಲಾಗುತ್ತಿದೆ. ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಮೈಸೂರು ಜಿಲ್ಲೆಯಲ್ಲಿ ಬಾಕಿ ಉಳಿದಿರುವ 54 ಪ್ರಕರಣಗಳಲ್ಲಿ ಕಾನೂನು ಹೋರಾಟ ಎದುರಿಸುತ್ತಿರುವವರು ಕಚೇರಿಯಿಂದ ಕಚೇರಿಗೆ ಅಲೆಯುವುದು ಮಾತ್ರ ತಪ್ಪಿಲ್ಲ.
ಸಂಭ್ರಮಪಟ್ಟಿದ್ದೇ ಭಾಗ್ಯ: ಕಳೆದ ಮೂರು ದಶಕಗಳಿಂದಲೂ ಮೈಸೂರು ಪ್ರಾಂತ್ಯದಲ್ಲಿ ತಳವಾರ ಮತ್ತು ಪರಿವಾರ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಕೇಂದ್ರ ಸರ್ಕಾರ 2020ರ ಮಾರ್ಚ್ ತಿಂಗಳಿನಲ್ಲಿ ಲೋಕಸಭೆ, ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ ಅನುಮೋದನೆ ಕೊಟ್ಟು ರಾಷ್ಟ್ರಪತಿಗಳಿಂದ ಅಂಗೀಕಾರ ನೀಡಲಾಗಿತ್ತು. ಇದರಿಂದಾಗಿ ಜಾತಿ ಪ್ರಮಾಣ ಪತ್ರ, ಜಾತಿ ಸಿಂಧುತ್ವ ಪ್ರಮಾಣ ಪತ್ರದ ಗೊಂದಲದ ಸಮಸ್ಯೆ ಎದುರಿಸುತ್ತಿದ್ದ ಈ ಸಮಾಜದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸಮಾಧಾನಪಟ್ಟುಕೊಂಡಿದ್ದರು. ಅದೇ ರೀತಿ ರಾಜ್ಯ ಸರ್ಕಾರ ಪರಿವಾರ ಮತ್ತು ತಳವಾರ ಪದಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದೆಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. ಆದರೆ, ಅದೇ ಕಾಲಕ್ಕೆ ಪರಿವಾರ ಮತ್ತು ತಳವಾರದವರು ಸುಳ್ಳು ದಾಖಲೆಗಳನ್ನು ನೀಡಿ ನಾಯಕ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ನೀಡಿರುವ ದೂರಿನ ಅರ್ಜಿಗಳು ಇತ್ಯರ್ಥವಾಗದೆ ಇರುವುದೇ ಹಲವರನ್ನು ಸಂದಿಗ್ಧ ಕ್ಕೆ ಸಿಲುಕಿಸಿದೆ.
ಎರಡು ವರ್ಷಗಳಿಂದ ಕೊಳೆಯುತ್ತಿರುವ ಕಡತ: ಜಿಲ್ಲಾಧಿಕಾರಿಗಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಎರಡು ವರ್ಷಗಳಾಗಿದೆ. ಈ ಪತ್ರಕ್ಕೆ ಕಾನೂನು ಇಲಾಖೆ ಅಭಿಪ್ರಾಯ ಪಡೆದು ಯಾವ ರೀತಿಯಲ್ಲಿ ಇತ್ಯರ್ಥಪಡಿಸಬೇಕು ಎನ್ನುವಂತೆ ಪ್ರತ್ಯುತ್ತರ ರೂಪದಲ್ಲಿ ಸಲಹೆ ನೀಡದೆ ಬಾಕಿ ಉಳಿಸಿಕೊಂಡಿರುವ ಕಾರಣ ಹಲವರು ಅಲೆದಾಡುತ್ತಿ ದ್ದಾರೆ. ಸರ್ಕಾರ ಸ್ಪಷ್ಟ ತೀರ್ಮಾನಕ್ಕೆ ಬಾರದಿರುವ ಕಾರಣ ಜಿಲ್ಲಾಧಿಕಾರಿಗಳೂ ಯಾವ ತೀರ್ಮಾನ್ಕೂ ಬರಲು ಸಾಧ್ಯವಾಗಿಲ್ಲ.
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಆರ್‌ಇ ಸೆಲ್‌ನಲ್ಲಿರುವ ಪ್ರಕರಣಗಳನ್ನು ರದ್ದುಪಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಬೇಕಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ನೇರವಾಗಿ ರದ್ದುಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದು ರದ್ದತಿಯ ನಿರ್ಣಯ ಮಾಡಿದರಷ್ಟೇ ಪರಿಹಾರವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಕಾನೂನಿನ ಸಂಕಷ್ಟಕ್ಕೆ ಸಿಲುಕಿರುವ ಪ್ರಮುಖರು!
ಕಾನೂನಿನ ಸಂಕಷ್ಟಕ್ಕೆ ಸಿಲುಕಿರುವ 54 ಮಂದಿಯಲ್ಲಿ ಜನಪ್ರತಿನಿಧಿಗಳು,ಅಧಿಕಾರಿಗಳೂ ಸಿಲುಕಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು, ಮಹಾಪೌರ ಶಿವಕುಮಾರ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ, ವಾಣಿಜ್ಯ ತೆರಿಗೆ ಇಲಾಖೆ ಸಹಾಯುಕ ಆಯುಕ್ತ ಎಚ್.ಎಸ್.ಮಂಜುನಾಥ್, ಕೆಎಎಸ್ ಅಧಿಕಾರಿ ಕೆ.ಜೆ.ಶ್ರೀಧರನಾಯಕ, ಸಹಾಯಕ ಕೃಷಿ ಅಧಿಕಾರಿ ಎಂ.ಕೆ.ಶಿವಶಂಕರಮೂರ್ತಿ, ವಕೀಲ ಎಂ.ರಾಮಕೃಷ್ಣ, ಜಿಪಂ ಮಾಜಿ ಸದಸ್ಯ ಕೆ.ಎಂ.ಮಂಜು, ಚಿಕ್ಕಮಾದು ಅವರ ಪುತ್ರಿ ಸಿ.ಮಮತ ಮೊದಲಾದವರು ಈಗ ಜಾತಿ ಪ್ರಮಾಣ ಪತ್ರದ ಗೊಂದಲದಲ್ಲಿ ಸಿಲುಕಿದ್ದಾರೆ.
ಜಾತಿ ಪ್ರಮಾಣ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕೇಳಿರುವ ಸ್ಪಷ್ಟೀಕರಣ ಪತ್ರಕ್ಕೆ ಯಾವುದೇ ಉತ್ತರ ಬಂದಿಲ್ಲ. ಸರ್ಕಾರದ ತೀರ್ಮಾನವನ್ನು ಎದುರು ನೋಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿರುವ ಕಾರಣ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಸೂಚನೆಯನ್ನು ಕಾಯುತ್ತಿದ್ದಾರೆ.
–ಮಾಲತಿ, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.
ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಒಳಗೊಂಡ…
ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ…
ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…