ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ೧೪೦ ಕೈದಿಗಳಿಗೆ ಸುಧಾರಿತ ಕೌಶಲ ಕಲಿಕೆ
-ಬಿ.ಎನ್.ಧನಂಜಯಗೌಡ
ಮೈಸೂರು: ಜೈಲಿನಿಂದ ಬಂಧಮುಕ್ತರಾದ ನಂತರ ಸಾಮಾನ್ಯರಂತೆ ದುಡಿದು ಬದುಕಲು ಪೂರಕವಾಗುವಂತೆ ಸುಧಾರಿತ ಕೌಶಲ ತರಬೇತಿಯನ್ನು ೧೪೦ ಕೈದಿಗಳಿಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನೀಡಲಾಗುತ್ತಿದೆ.
ತಿಳಿದೋ, ತಿಳಿಯದೆಯೋ ನಾನಾ ತರದ ತಪ್ಪುಗಳನ್ನು ಮಾಡಿ, ಕಾರಾಗೃಹ ಸೇರುವ ಕೈದಿಗಳಿಗೆ ಬಂಧಮುಕ್ತರಾದ ನಂತರ ಎಲ್ಲರಂತೆ ನ್ಯಾಯಯುತ ಮಾರ್ಗದಲ್ಲಿ ಬದುಕಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆ ಜಂಟಿಯಾಗಿ ನಾನಾ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.
ಪುರುಷ, ಮಹಿಳಾ ಕಾರಾಗೃಹ ವಾಸಿಗಳಿಗೆ ಟೈಲರಿಂಗ್, ಎಲೆಕ್ಟ್ರಿಷಿಯನ್, ತೋಟಗಾರಿಕೆ, ಡೇಟಾ ಎಂಟ್ರಿ, ಬ್ಯೂಟಿಷಿಯನ್, ಕೇಶ ವಿನ್ಯಾಸದಂತಹ ಸುಧಾರಿತ ಕೌಶಲ ತರಬೇತಿಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು (ಕೆಎಸ್‌ಡಿಸಿ) ನೀಡಲಾಗುತ್ತಿದೆ.
ಸರ್ಟಿಫಿಕೇಟ್ ಕೋರ್ಸ್: ಈ ತರಬೇತಿಗಳನ್ನು ಸರ್ಟಿಫಿಕೇಟ್ ಕೋರ್ಸ್ ಆಧಾರದಲ್ಲಿ ಹಮ್ಮಿಕೊಂಡಿದ್ದು, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವೇ ತರಬೇತಿ ಪಡೆಯುವ ಕೈದಿಗಳ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಸರ್ಟಿಫಿಕೇಟ್ ನೀಡಲಿದೆ. ವಿದ್ಯಾರ್ಹತೆ ಮತ್ತು ಆಸಕ್ತಿಯನ್ನು ಆಧರಿಸಿ, ೧೪೦ ಕೈದಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.
ತರಬೇತಿಯ ವಿವರ: ಜನಶಿಕ್ಷಣ ಸಂಸ್ಥೆಯ ಎನ್‌ಎಸ್‌ಡಿಸಿ ಅಡಿಯಲ್ಲಿ ೨೦ ಪುರುಷ ಕೈದಿಗಳಿಗೆ ೧೦೫ದಿನಗಳ ಎಲೆಕ್ಟ್ರಿಷಿಯನ್ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗೆ ಎನ್‌ಎಸ್‌ಡಿಸಿಯಿಂದಲೇ ಸರ್ಟಿಫಿಕೇಟ್ ನೀಡಲಾಗುತ್ತದೆ.
ಇನ್ನು ಜೆಕೆ ಟೈರ್ಸ್ ಸಿಎಸ್‌ಆರ್ ಫಂಡ್‌ನಿಂದ ೨೦ ಮಹಿಳಾ ಕೈದಿಗಳಿಗೆ ೨೫೦ ಗಂಟೆಗಳ ಬ್ಯೂಟಿಷಿಯನ್, ೨೦ ಪುರುಷ ಕೈದಿಗಳಿಗೆ ೨೫೦ ಗಂಟೆಗಳ ಕೇಶ ವಿನ್ಯಾಸ, ೨೦ ಪುರುಷ ಕೈದಿಗಳಿಗೆ ೩೦೦ ಗಂಟೆಗಳ ಡೊಮೆಸ್ಟಿಕ್ ಹೆಲ್ಫ್ ಡೆಸ್ಕ್ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಗಳನ್ನು ಸಿಎಸ್‌ಆರ್ ಚಟುವಟಿಕೆಯಡಿ ಹಮ್ಮಿಕೊಂಡಿದ್ದರೂ ಕಲಿಕೆಯ ಮಟ್ಟವನ್ನು ನಿರ್ಧರಿಸಿ, ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.
ಕೆಎಸ್‌ಡಿಸಿ, ಕಾರಾಗೃಹ ಇಲಾಖೆಯ ತರಬೇತಿ: ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಮತ್ತು ಕಾರಾಗೃಹ ಇಲಾಖೆಯಿಂದ ೩೦ ಕೈದಿಗಳಿಗೆ ೨೭೦ ಗಂಟೆಗಳ ಟೈಲರಿಂಗ್, ೩೦ ಕೈದಿಗಳಿಗೆ ೩೦೦ ತೋಟಗಾರಿಕೆ ತರಬೇತಿ ನೀಡಲಾಗುತ್ತಿದೆ. ಈ ೬೦ ಮಂದಿಯೂ ಪುರುಷ ಕೈದಿಗಳಾಗಿದ್ದಾರೆ. ಇದಕ್ಕೂ ಕೆಎಸ್‌ಡಿಸಿ ಸರ್ಟಿಫಿಕೇಟ್ ನೀಡಲಿದೆ.
ವೆಚ್ಚ: ಈ ಎಲ್ಲ ತರಬೇತಿಗಳು ಪ್ರತಿದಿನ ೩ರಿಂದ ೪ ಗಂಟೆಗಳ ಕಾಲ ನಡೆಯಲಿದೆ. ಜನಶಿಕ್ಷಣ ಸಂಸ್ಥೆಯು ತರಬೇತಿ ನೀಡಲು ಒಬ್ಬರನ್ನು ನಿಯೋಜಿಸಿದ್ದು, ಬಹಳ ಹಿಂದಿನಿಂದಲೂ ಸಂಸ್ಥೆ ತರಬೇತಿ ನೀಡುತ್ತಾ ಬರುತ್ತಿದೆ. ಇನ್ನುಳಿದ ಎಲ್ಲ ತರಬೇತಿ ಕಾರ್ಯಕ್ರಮಗಳಿಗೂ ತರಬೇತಿ ನೀಡಲು ತಲಾ ಇಬ್ಬರನ್ನು ನಿಯೋಜಿಸಲಾಗಿದೆ. ಜೆಕೆ ಟೈರ್ಸ್‌ನಿಂದ ಹಮ್ಮಿಕೊಂಡಿರುವ ಮೂರು ತರಬೇತಿ ಕಾರ್ಯಕ್ರಮಗಳಿಗೆ ೬.೬೨ ಲಕ್ಷ ರೂ., ಕೆಎಸ್‌ಡಿಸಿ, ಕಾರಾಗೃಹ ಇಲಾಖೆ ಮತ್ತು ಕಾರಾಗೃಹ ಇಲಾಖೆ ಸಹಯೋಗದ ಎರಡು ತರಬೇತಿ ಕಾರ್ಯಕ್ರಮಗಳಿಗೆ ೭.೦೪ ಲಕ್ಷ ರೂ. ವೆಚ್ಚವಾಗಲಿದೆ.
ಈ ಎಲ್ಲ ತರಬೇತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಟಿಫಿಕೇಟ್ ಕೋರ್ಸ್‌ಗಳಾಗಿವೆ. ಈ ಪ್ರಮಾಣ ಪತ್ರಗಳಿಗೆ ಲೈಫ್ ಟೈಮ್ ವಾರಂಟಿ ಇರಲಿದೆ. ಬಂಧಮುಕ್ತವಾದ ನಂತರ ಇದರ ಆಧಾರದಲ್ಲಿ ಸಾಲ ಸೌಲಭ್ಯ ಪಡೆದು ಉದ್ಯಮ ನಡೆಸಬಹುದು. ಕೈದಿಗಳ ಮನಃಪರಿವರ್ತನೆ ಜೊತೆಗೆ ಕ್ರಿಯಾಶೀಲವಾಗಿಟ್ಟು, ಅವರ ಜೀವನೋಪಾಯಕ್ಕೂ ನೆರವಾಗುವ ಕೌಶಲ ತರಬೇತಿ ನೀಡಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಈ ಮೂಲಕ ನೆರವು ನೀಡಲಾಗುತ್ತಿದೆ. – ದಿವ್ಯಶ್ರೀ, ಮುಖ್ಯ ಅಧೀಕ್ಷಕರು, ಮೈಸೂರು ಕೇಂದ್ರ ಕಾರಾಗೃಹ
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…