ಬೆಂಬಲ ಬೆಲೆಯಡಿ ಭತ್ತ, ರಾಗಿ ಖರೀದಿ ನೋಂದಣಿ ಮರೆತ ಆಡಳಿತ …
ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ೦ ಯೋಜನೆಯಡಿ ಭತ್ತ, ರಾಗಿ ಖರೀದಿಗಾಗಿ ಆರಂಭ ಗೊಳ್ಳಬೇಕಿದ್ದ ರೈತರ ಹೆಸರು ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಮೂರು ದಿನಗಳಾದರೂ ಇನ್ನೂ ಶುರುವಾಗಿಲ್ಲ!
ಸಾಫ್ಟ್ ವೇರ್ ಅಪ್‌ಡೇಟ್ ಸಮಸ್ಯೆ ಎದುರಾಗಿರುವುದು ಮಾತ್ರವಲ್ಲದೇ
ಖರೀದಿ ಏಜೆನ್ಸಿ ಪಡೆದಿರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ನಿಗದಿಯಂತೆ ಡಿ.೧೫ರಿಂದ ನೋಂದಣಿ ಪ್ರಾರಂಭಿಸಲಾಗಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಭತ್ತ , ರಾಗಿ ಖರೀದಿಗೆ ಸಂಬಂಧಿಸಿದ ನೊಂದಣಿ ಕೇಂದ್ರವನ್ನು ಗುರುವಾರದಿಂದಲೇ ತೆರೆಯುವುದಾಗಿ ಮಾಧ್ಯಮಗಳ ಮೂಲಕ ಜಿಲ್ಲಾಡಳಿತ ತಿಳಿಸಿತ್ತು.
ಹೀಗಾಗಿ ಜಿಲ್ಲೆಯ ಈ ಐದೂ ಕೇಂದ್ರಗಳಿಗೆ ರೈತರು ಬರತೊಡಗಿದ್ದು ನೊಂದಣಿ ಇನ್ನೂ ಆರಂಭ ಆಗದಿರುವುದನ್ನು ತಿಳಿದು ಅಸಮಾಧಾನ ಹೊರಹಾಕಿದ್ದಾರೆ.
ಗೊತ್ತುಪಡಿಸಿದ ದಿನದಿಂದ ಮಾಡಲಾಗದಿದ್ದರೆ ಯಾವಾಗಿನಿಂದ ನೋಂದಣಿ
ಮಾಡುತ್ತೇವೆ ಎಂಬುದನ್ನಾದರೂ ಕೊನೆ ಪಕ್ಷ ಪತ್ರಿಕೆಗಳ ಮೂಲಕ ಸಂಬಂಧಿ ಸಿದವರು ತಿಳಿಸಬೇಕಿತ್ತು. ಹಾಗೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಭತ್ತ, ರಾಗಿ ಮಾರಾಟ ಮಾಡುವ ರೈತರು ವಿನಾ ಕಾರಣ ಕೇಂದ್ರಗಳತ್ತ ಅಲೆದು ಬಂದು ಹೋಗುವಂತಾಗಿದೆ ಎಂದು ರೈತ ಜಯಣ್ಣ ತೀವ್ರ ಬೇಸರ ವ್ಯಕ್ತಪಡಿಸಿದರು.
೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ , ರಾಗಿಯ ಕೊಯ್ಲನ್ನು ರೈತರು ಅದಾಗಲೇ ಕೈಗೆತ್ತಿಕೊಂಡಿದ್ದು ಬೆಂಬಲ ಬೆಲೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ ೨೦೪೦ ರೂ., ಗ್ರೇಡ್-ಎ ಭತ್ತ ಕ್ಕೆ೨೦೬೦ ರೂ., ರಾಗಿಗೆ ೩೫೭೮ ರೂ. ನಿಗದಿ ಪಡಿಸಲಾಗಿದೆ.
ಮುಕ್ತ ಮಾರುಕಟ್ಟೆಯಲ್ಲೀಗ ಬೆಂಬಲ ಬೆಲೆಗಿಂತ ಧಾರಣೆ ಕಡಿಮೆ ಇದ್ದು ಖರೀದಿ ನೊಂದಣಿ ತಡ ಮಾಡಿದರೆ ರೈತರು ಕಾಯ್ದು ಕೂರುವ ಸಾಧ್ಯತೆ ತುಂಬಾ ಕಡಿಮೆ.
ಒಕ್ಕಣೆ ಸ್ಥಳದಲ್ಲೇ ಮಾರಾಟ ಮಾಡುವ ರೈತರೇ ಯಾವಾಗಲೂ ಹೆಚ್ಚು. ಸಾಕಷ್ಟು ಜಾಗ ಬೇಕಾಗುವುದರಿಂದ ಒಕ್ಕಣೆ ಮಾಡಿದ್ದನ್ನು ಸಂಗ್ರಹ ಮಾಡುವುದು ಕಷ್ಟದ ಕೆಲಸ. ಸಾಲಸೋಲದ ಹಂಗಿನಲ್ಲಿ ಇದ್ದ ರೈತರಂತೂ ಬೆಂಬಲ ಬೆಲೆ ಕಾಯ್ದು ಕೂರಲಾರರು. ಜಿಲ್ಲಾಡಳಿತ ಇದನ್ನರಿಯಬೇಕು.
ನೊಂದಣಿ ತಡವಾದಷ್ಟೂ ಈ ಉತ್ಪನ್ನಗಳು ಮಧ್ಯವರ್ತಿಗಳ ಪಾಲಾಗಿ ರೈತರಿಗೆ ನಷ್ಟ ಉಂಟಾಗುತ್ತದೆ ಎಂಬುದು ರೈತರ ಅನಿಸಿಕೆ.
ನೋಂದಣಿಯಾದ ಭತ್ತ, ರಾಗಿಯನ್ನು ಜ.೧ರಿಂದ ಮಾ. ೨೩ರವರೆಗೆ ಖರೀದಿಸುವುದಾಗಿ ಜಿಲ್ಲಾಧಿಕಾರಿಯವರು ಈಗಾಗಲೇ ತಿಳಿಸಿದ್ದು ನೋಂದಣಿಯನ್ನೇ ಹೀಗೆ ತಡ ಮಾಡಿದರೆ ಹೇಗೆ ಎಂಬುದು ಬೆಳೆಗಾರರ ಪ್ರಶ್ನೆ.
ತಾಂತ್ರಿಕ ಕಾರಣಗಳಿಂದ ಭತ್ತ, ರಾಗಿ ಖರೀದಿ ನೋಂದಣಿಯನ್ನು ನಿಗದಿಯಂತೆ ಡಿ.೧೫ರಿಂದ ಆರಂಭಿಸಲಾಗಿಲ್ಲ.ಡಿ.೧೯ರ ಸೋಮವಾರದಿಂದ ಜಿಲ್ಲೆಯ ಐದೂ ಕೇಂದ್ರಗಳಲ್ಲಿ ನೋಂದಣಿ ಆರಂಭಿಸಲಾಗುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
– ರವೀಂದ್ರ, ಜಿಲ್ಲಾ ವ್ಯವಸ್ಥಾಪಕರು, ಕ.ರಾ.ಸ.ಮಾ. ಮಂಡಳಿ.
ಭತ್ತ, ರಾಗಿಯನ್ನು ನೊಂದಣಿ ಮಾಡುತ್ತಿದ್ದಂತೆ ರೈತರಿಂದ ಖರೀದಿಸಬೇಕು. ಜ.೧ರಿಂದ ಖರೀದಿಸುವುದಾಗಿ ಜಿಲ್ಲಾಡಳಿತ ತಿಳಿಸಿದ್ದು ಕೊಯ್ಲು ಮಾಡಿರುವ ಉತ್ಪನ್ನವನ್ನು ಅಲ್ಲಿಯವರೆಗೆ ಸಂಗ್ರಹಿಸಿ ಇಟ್ಟುಕೊಳ್ಳುವುದು ಈಗಿನ ಅಕಾಲಿಕ ಮಳೆ ಪರಿಸ್ಥಿತಿಯಲ್ಲಿ ತುಂಬಾ ಕಷ್ಟದ ಕೆಲಸ.
-ಬಸವಣ್ಣ, ರೈತ ಮುಖಂಡರು, ಹೊನ್ನೂರು.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…