• ಶ್ರೀಧರ್ ಆರ್.ಭಟ್
ನಂಜನಗೂಡು: 13 ವರ್ಷಗಳ ಹಿಂದೆ ಮೈಸೂರು ವಿಭಾಗದಿಂದ ಚಾಮರಾಜ ನಗರದ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ವಲಸೆ ಹೋಗಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ನಂಜನಗೂಡು ಘಟಕ ಇದೀಗ ಮತ್ತೆ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರೊಂದಿಗೆ ತವರಿಗೆ ಮರಳಿದಂತಾಗಿದೆ.
2011ರಲ್ಲಿ ಚಾಮರಾಜನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಾರ್ಯಾಲಯ ಹೊಸದಾಗಿ ಆರಂಭವಾದಾಗ ಮೈಸೂರು ಜಿಲ್ಲೆಯ ನಂಜನಗೂಡಿನ ಸಾರಿಗೆ ಡಿಪೊವನ್ನು ಅಲ್ಲಿಗೆ ಸೇರಿಸಲಾಗಿತ್ತು. ಆ ದಿನದಿಂದಲೂ ‘ಜಿಲ್ಲೆ ಮೈಸೂರು, ಸಾರಿಗೆ ಘಟಕ ಮಾತ್ರ ಚಾಮರಾಜನಗರಕ್ಕೆ ಏಕೆ? ನಮ್ಮನ್ನು ಮೈಸೂರು ವಿಭಾಗಕ್ಕೆ ಸೇರಿಸಿ’ ಎಂಬ ಕೂಗು ಪ್ರಯಾಣಿಕರಿಂದ ಕೇಳಿಬರುತ್ತಲೇ ಇತ್ತು.
ಹೊಸ ಬಸ್ ಬಾರದೆಯೇ ಹಳೆ ಬಸ್ ಗಳಿಂದಲೇ ಸ್ಥಾಪಿತವಾದ ರಾಜ್ಯದ ಏಕೈಕ ಸಾರಿಗೆ ಡಿಪೋ ಎಂಬ ಹಣೆಪಟ್ಟಿ ಹೊಂದಿದ್ದ ಇಲ್ಲಿನ ಡಿಪೊ ಚಾಮರಾಜನಗರ ವಿಭಾಗಕ್ಕೆ ಸೇರ್ಪಡೆಯಾದ ನಂತರವೂ ಹೊಸ ಬಸ್ ಇಲ್ಲದೆಯೇ ಪ್ರಯಾಣಿಕರ ಸೇವೆಯಲ್ಲಿ ಸಾಕಷ್ಟು ಸೊರಗಿತ್ತು.
ತಾಲ್ಲೂಕಿನ ಕೊರೊನಾ ನಂತರವಂತೂ ಕೆಟ್ಟು ಹೋದ ಬಸ್‌ಗಳು ಗುಜರಿಗೆ ಹರಾಜಾಗುವುದರೊಂದಿಗೆ ಶೇ.50ರಷ್ಟು ಬಸ್ ಗಳು ಇಲ್ಲಿ ಕಡಿಮೆಯಾಗಿ ಜಿಲ್ಲಾ ಕೇಂದ್ರ ಮೈಸೂರು ಹಾಗೂ ಗ್ರಾಮೀಣ ಭಾಗಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗದೆ ಸ್ಥಳೀಯ ಸಾರಿಗೆ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಜನಪ್ರತಿನಿಧಿಗಳು ಸಿಕ್ಕಾಗಲೆಲ್ಲಾ ‘ನಮ್ಮೂರಿಗೆ ಬಸ್ ಬರುತ್ತಿಲ್ಲ ಬಸ್
ಕಳಿಸಿ’ ಎಂಬಬೇಡಿಕೆ ಮುಖ್ಯಮಂತ್ರಿಗಳು ಪ್ರತಿನಿಧಿಸುವ ವರುಣ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದಾ ದ್ಯಂತ ಕೇಳಿ ಬರುತ್ತಿದ್ದರೂ ಬಸ್‌ಗಳ ಕೊರತೆಯಿಂದಾಗಿ ಜನಪ್ರತಿನಿಧಿಗಳು ಸೌಕರ್ಯಕಲ್ಪಿಸಲಾಗದೆ ಮೌನವಾಗಿದ್ದರು.
ಇದೀಗ ಜನವರಿ 1ರಿಂದ ನಂಜನಗೂಡು ಸಾರಿಗೆ ಡಿಪೊ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವುದರೊಂದಿಗೆ ಹೊಸ ಬಸ್‌ಗಳು ಮತ್ತು ಮೈಸೂರು ನಗರದ ವಿವಿಧ ಡಿಪೊಗಳಿಂದ ನಂಜನಗೂಡಿಗೆ ಬಸ್ ಸೌಲಭ್ಯ ನೀಡಲು ಚಿಂತಿಸಲಾಗಿದೆ. ಸದ್ಯದಲ್ಲೇ ಮೈಸೂರಿಗೆ ದಾಂಗುಡಿ ಇಡುವ ವಿದ್ಯುತ್ ಚಾಲಿತ ಬಸ್‌ಗಳ ಸೇವೆಯೂ ನಂಜನಗೂಡು ಪ್ರಯಾಣಿಕರಿಗೆ ದೊರೆಯಲಿದ್ದು, ನಂಜನಗೂಡು-ಮೈಸೂರು ಮಧ್ಯದ ಪ್ರಯಾಣಿಕರ ಗೋಳು ನಿವಾರಣೆಯಾಗಲಿದೆ ಎನ್ನಲಾಗಿದೆ.
ಅಲ್ಲಲ್ಲಿ ನಿಂತು ದುರಸ್ತಿಯಾಗುತ್ತಲೇ ಸಂಚರಿಸುವ 130 ಬಸ್ ಗಳು, 400ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದ್ದ ಈ ಡಿಪೊದಲ್ಲಿ 60ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, 20 ಮೆಕ್ಯಾನಿಕ್, 30ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದ್ದು, ಅದು ಭರ್ತಿಯಾಗಿ ಹೊಸ ಬಸ್‌ಗಳು ಬಂದರೆ ನಂಜನಗೂಡು ಡಿಪೊ ಪರಿಪೂರ್ಣವಾಗಲಿದೆ ಎಂದು ಮಂಜುನಾಥ ನಿವೃತ್ತ ಸಾರಿಗೆ ನಿಗಮ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.
6 ತಿಂಗಳ ಸತತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಚಾಮರಾಜನಗರ ಸಾರಿಗೆ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಯಾಗುವ ಸಾರಿಗೆ ಡಿಪೊದಿಂದಾಗಿ ಹೊಸ ಬಸ್‌ಗಳ ಸೇವೆ ತಾಲ್ಲೂಕಿನ ಜನತೆಗೆ ಸಿಗಲಿದೆ. ವಿದ್ಯುತ್ ಚಾಲಿತ ಬಸ್‌ಗಳು ದಕ್ಷಿಣ ಕಾಶಿಗೆ ಬರುವುದರಿಂದ ನಮ್ಮ ಜನರ ಬಹುಕಾಲದ ಬೇಡಿಕೆ ಈಡೇರಿಂದಂತಾಗಿದೆ. ನಮ್ಮ ಆರು ತಿಂಗಳ ಪ್ರಯತ್ನದ ಫಲವಿದು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೆ ಆಭಾರಿಯಾಗಿದ್ದೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಿತ್ಯ 130 ಬಸ್‌ಗಳು 124 ಶೆಡ್ಯೂಲ್‌ಗಳಲ್ಲಿ ಸಂಚರಿಸುತ್ತಿರುವುದರಿಂದ ಸಾರಿಗೆ ನಿಗಮಕ್ಕೆ ಪ್ರತಿನಿತ್ಯ ಸರಾಸರಿ 19 ಲಕ್ಷ ರೂ. ಆದಾಯವಿದೆ. ದೈನಂದಿನ ಪಾಸುಗಳಿಂದಲೇ ದಿನಕ್ಕೆ 20 ಸಾವಿರ ರೂ. ಸಂದಾಯವಾಗುತ್ತಿದೆ. ಹೊಸ ಬಸ್‌ಗಳ ಆಗಮನದೊಂದಿಗೆ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯುವುದರಿಂದ ಆದಾಯದಲ್ಲಿ ಏರಿಕೆಯಾಗಲಿದೆ ಎಂದು ನಂಜನಗೂಡು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಪಿ.ತ್ಯಾಗರಾಜ್ ಹೇಳಿದ್ದಾರೆ.
ಚಾಮರಾಜನಗರ : ಅಗ್ನಿ ಅವಘಡ ಸಂಭವಿಸಿ ಹತ್ತಾರು ಅಂಗಡಿ ಮಳಿಗೆಗಳು ಸುಟ್ಟು ಭಸ್ಮ ಆಗಿರುವ ಘಟನೆ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ…
ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುವುದು ೨೦೨೮ ಏಪ್ರಿಲ್/ಮೇ ತಿಂಗಳಲ್ಲಿ, ಅಂದರೆ ಸುಮಾರು, ಇನ್ನು ಎರಡೂವರೆ ವರ್ಷಗಳ ಬಳಿಕ. ಆದರೆ…
ರಾಜ್ಯದಲ್ಲಿ ಪರೀಕ್ಷೆಗಳೆಂದರೆ ಸೋರಿಕೆಗಳ ಸರಣಿ ಎಂಬಂತಾಗಿರುವುದು ದುರದೃಷ್ಟಕರ. ಈ ಬಾರಿ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ೮೦ ಅಂಕಗಳ…
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…
ಮಹೇಶ್ ಕರೋಟಿ ಇದ್ದೂ ಇಲ್ಲದಂತಾಗಿರುವ ಟ್ರಸ್ಟ್ , ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಿಕ್ಕೇರಿ: ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ (ಕೆ.ಎಸ್.ನರಸಿಂಹಸ್ವಾಮಿ) ಅವರು…