ಮೈಸೂರು

ನೀರಿನ ಕರ ಬಾಕಿ ಪಾವತಿಗೆ ಮೈಸೂರಿಗರ ನಿರಾಸಕ್ತಿ

ಬಡ್ಡಿ ಮನ್ನಾ ಮಾಡಿದರೂ ಅಸಲು ಪಾವತಿಸಲು ಹಿಂದೇಟು ; 4 ತಿಂಗಳಲ್ಲಿ 2.50 ಕೋಟಿ ರೂ. ಬಾಕಿ ಹಣ ಪಾವತಿ

ಎಚ್.ಎಸ್.ದಿನೇಶ್ ಕುಮಾರ್.

ಮೈಸೂರು: ಆರ್ಥಿಕವಾಗಿ ಹಿಂದುಳಿದವರ ಹಿತಾಸಕ್ತಿ ಕಾಯುವ ಉದ್ದೇಶದಿಂದ ನಗರಪಾಲಿಕೆ ಆಯುಕ್ತರು ನೀರಿನ ಕರ ಬಾಕಿಯ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದರೂ ಜನರು ಅಸಲು ಪಾವತಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 1731 ಮಂದಿ ಮಾತ್ರ ಬಡ್ಡಿ ಮನ್ನಾಯೋಜನೆಯಲ್ಲಿ ಅಸಲು ಪಾವತಿಸಿದ್ದಾರೆ.

ಜನರ ಒಳಿತಿಗಾಗಿ ರೂಪಿಸುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕಾದದು ನಾಗರಿಕರ ಕರ್ತವ್ಯ. ಆದರೆ, ಬಡವರು ನೀರಿನ ಕರ ಬಾಕಿಯ ಜೊತೆಗೆ ಬಡ್ಡಿಯನ್ನೂ ಕಟ್ಟಬೇಕಾದಲ್ಲಿ ಸಂಕಷ್ಟಕ್ಕೀಡಾಗುತ್ತಾರೆ ಎಂಬುದನ್ನು ಮನಗಂಡು ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೊಳಿಸಿದರೂ ಜನರು ನೀರಿನ ಕರ ಬಾಕಿಯ ಅಸಲು ಪಾವತಿಸಲು ಮನಸ್ಸು ಮಾಡುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

 

ನಗರದ ವಿವಿಧ ಬಡಾವಣೆಗಳು, ಆಶ್ರಯ  ಬಡಾವಣೆಗಳು, ನಗರಪಾಲಿಕೆ ವ್ಯಾಪ್ತಿಗೆ ಒಳಪಡುವ ಸಾಕಷ್ಟು ಬಡಾವಣೆಗಳಲ್ಲಿನ ಜನರು ಸಾಕಷ್ಟು ವರ್ಷಗಳಿಂದ ನೀರಿನ ಬಾಕಿ ಕಟ್ಟಲು ವಿಫಲರಾಗಿದ್ದಾರೆ. ಅವರಲ್ಲಿ ಬಡವರೇ ಹೆಚ್ಚು. ಇನ್ನು ಮಧ್ಯಮ ವರ್ಗ ಹಾಗೂ ಕೆಲ ಹಣವಂತರೂ ನೀರಿನ ಕರ ಪಾವತಿಸಿಲ್ಲ. ಹೀಗಾಗಿ ೨೨೦ ಕೋಟಿ ರೂ.ನಷ್ಟು ನೀರಿನ ಕರ ಬಾಕಿ ಉಳಿದಿದೆ. ಅದರಲ್ಲಿ ೭೦ ಕೋಟಿ ರೂ. ಬಡ್ಡಿಯೂ ಸೇರಿದೆ. ಹೀಗಾಗಿ ಕಳೆದ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ನೀರಿನ ಕರ ಬಾಕಿ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ನಗರಪಾಲಿಕೆ ಸದಸ್ಯರು ಒಕ್ಕೊರಲಿನಿಂದ ಮನವಿ ಮಾಡಿದ್ದರು.  ಹೀಗಾಗಿ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಈ ಮನವಿಗೆ ಸ್ಪಂದಿಸಿದ ಸರ್ಕಾರ, ನೀರಿನ ಕರ ಬಾಕಿ ಹಣ ಪೂರ್ಣ ಪಾವತಿಸುವವರಿಗೆ ಬಾಕಿ ಮೇಲಿನ ಬಡ್ಡಿ ಮನ್ನಾ ಮಾಡಲು ಆದೇಶ ಹೊರಡಿಸಿತು. ನಗರಪಾಲಿಕೆ ವತಿಯಿಂದ ಈ ಸಂಬಂಧ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಲಾಗಿತ್ತು. ಅದರಂತೆ ಮೊದಲಿಗೆ ಕೆಲವರು ಹಣ ಪಾವತಿಸಲು ಮುಂದಾದರು. ನಂತರ ಹಣ ಪಾವತಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ೨.೫೦ ಕೋಟಿ ರೂ. ಬಾಕಿ ಹಣವನ್ನು ನಗರಪಾಲಿಕೆಗೆ ಪಾವತಿಸಿದ್ದಾರೆ.

 

ಅಸಲು ಮನ್ನಾ ಮಾಡಿ: ಇದು ಜನರ ಹೊಸ ಬೇಡಿಕೆ. ಕಳೆದ ಹತ್ತಾರು ವರ್ಷಗಳಿಂದ ನಾನಾ ಕಾರಣಗಳಿಗಾಗಿ ನೀರಿನ ಕರ ಪಾವತಿಸಲಾಗಿಲ್ಲ. ಇದೀಗ ದಿಢೀರ್ ಎಂದು ಸಂಪೂರ್ಣ ಬಾಕಿ ಪಾವತಿಸಿಯೆಂದರೆ ಹಣವನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಿದ್ದಾರೆ.

ಕೋವಿಡ್‌ನಿಂದಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇದೀಗ ಒಟ್ಟಿಗೆ ಸಾವಿರಾರು ರೂ. ಬಾಕಿ ಪಾವತಿಸಿ ಎಂದರೆ ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನೀರಿನ ಬಾಕಿಯ ಶೇ.೫೦ರಷ್ಟು ಹಣವನ್ನು ಮನ್ನಾ ಮಾಡಿ ಎಂದು ನಗರಪಾಲಿಕೆ ಅಧಿಕಾರಿಗಳಲ್ಲಿ ಹೊಸ ಬೇಡಿಕೆಯನ್ನು ಜನರು ಮುಂದಿಡುತ್ತಿದ್ದಾರೆ.

ಸಂಪರ್ಕ ಕಡಿತ: ಜನರ ಈ ಧೋರಣೆಯಿಂದ ಬೇಸತ್ತ ಅಧಿಕಾರಿಗಳು ಇದೀಗ ಕರ ಬಾಕಿ ಪಾವತಿಸದವರ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಆಯಾ ಬಡಾವಣೆಯ ಇಂಜಿನಿಯರ್‌ಗಳ ನೇತೃತ್ವದಲ್ಲಿ  ನೀರಿನ ಸಂಪರ್ಕ ಕಡಿತಗೊಳಿಸುವ ಕೆಲಸವನ್ನು ಮುಂದುವರಿಸಲಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ ಬಾಕಿ ಹಣವನ್ನು ಪಾವತಿಸಿದಲ್ಲಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಜನರಿಗೆ ನೀರಿನ ಕರ ಹೊರೆಯಾಬಾರದು ಎಂಬ ಉದ್ದೇಶದಿಂದ ಬಡ್ಡಿ ಮನ್ನಾ ಮಾಡಲಾಗಿದೆ. ಆದರೂ ಜನರು ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಕೆಲವರು ಅಸಲು ಪಾವತಿಸಲು ಐದು ಕಂತುಗಳ ಬೇಡಿಕೆ ಇಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗದ ಮಾತು. ಈಗಲಾದರೂ ಜನರು ಅಸಲು ಪಾವತಿಸಿ ಬಡ್ಡಿಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.

ಲಕ್ಷ್ಮೀಕಾಂತ ರೆಡ್ಡಿ, ಆಯುಕ್ತರು, ಮೈಸೂರು ಮಹಾನಗರಪಾಲಿಕೆ.


  • ಇಲ್ಲಿಯವರೆಗೆ ನೀರಿನ ಬಿಲ್ ಬಾಕಿ-೧೪೦ ಕೋಟಿ ರೂ.
  • ಬಾಕಿಯ ಮೇಲಿನ ಬಡ್ಡಿ – ೭೦ ಕೋಟಿ ರೂ.
  • ಬಡ್ಡಿ ಮನ್ನಾ ಘೋಷಣೆ: ಆಗಸ್ಟ್ ಮಾಹೆ
  • ೪ ತಿಂಗಳಿನಲ್ಲಿ ಸಂಗ್ರಹವಾದ ಮೊತ್ತ: ೨.೫೦ ಕೋಟಿ ರೂ.
andolana

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

14 hours ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

14 hours ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

14 hours ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

14 hours ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

14 hours ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

14 hours ago