ಬೆಂಗಳೂರು : ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಭೂ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ವೆ ಮಾಡಿ ಈ ಕೂಡಲೇ ಒತ್ತುವರಿ ತೆರವುಗೊಳಿಸಿ, ಗಡಿ ಕಲ್ಲುಗಳನ್ನು ನೆಟ್ಟು ವರದಿ ನೀಡುವಂತೆ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಐಷಾರಾಮಿ ರೆಸಾರ್ಟ್ ಗಳ ನಿರ್ಮಾಣ ಹಾಗೂ ಭೂ ಒತ್ತುವರಿಯಿಂದಾಗಿ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಹೀಗಾಗಿ ಭೂ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರವರಿಗೆ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ ಹಾಗೂ ದಿನೇಶ್ ಗೂಳಿಗೌಡ ಅವರು ಒತ್ತಾಯಿಸಿದ್ದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮತ್ತು ಮೈಸೂರು ಜಿಲ್ಲೆಯ ಕೆ.ಆರ್.ನಗರ, ಮೈಸೂರು ಮತ್ತು ಹುಣಸೂರು ತಾಲೂಕಿನಲ್ಲಿ ಜಲಾಶಯದ ಹಿನ್ನೀರಿನ ಅಂಚಿನಲ್ಲಿರುವ ಭೂ ಮಾಲೀಕರು ಭೂ ಒತ್ತುವರಿ ಮಾಡುತ್ತಿರುವುದು ಮತ್ತು ಐಶಾರಾಮಿ ರೆಸಾರ್ಟ್ಗಗಳ ನಿರ್ಮಾಣ ಮಾಡುತ್ತಿದ್ದಾರೆ.
ಹಿನ್ನೀರಿನ ಪ್ರದೇಶದಲ್ಲಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಸಂಗ್ರಹಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ನಾಲಾ ಕೊನೆ ಭಾಗದ ಮಳವಳ್ಳಿ, ಮದ್ದೂರು ಭಾಗದ ಸಾವಿರಾರು ಅಚ್ಚುಕಟ್ಟು ಪ್ರದೇಶದ ರೈತರಿಗೆ ವ್ಯವಸಾಯಕ್ಕೆ ನೀರೊದಗಿಸಲು ಹಾಗೂ ಕುಡಿಯುವ ನೀರಿಗಾಗಿ ತೊಂದರೆ ಉಂಟಾಗುವ ಸಂಭವವಿರುತ್ತದೆ.
ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಪ್ರದೇಶವು 26640 ಎಕರೆಗಳಿದ್ದು, ಜಲಾಶಯದಿಂದ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಸುಮಾರು 2.76 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗುತ್ತಿದೆ. ಮೈಸೂರು ನಗರಕ್ಕೆ 1.579 ಟಿ.ಎಂ.ಸಿ ಹಾಗೂ ಬೆಂಗಳೂರು, ಇನ್ನಿತರ ನಗರ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಲಾಗುತ್ತಿದೆ ಮತ್ತು ವಿದ್ಯುತ್ ಉತ್ಪಾದನ ಘಟಕಗಳಿಗೆ ನೀರನ್ನು ಬಳಕೆ ಮಾಡಲಾಗುತ್ತದೆ.
ಇದನ್ನೂ ಓದಿ:-ಕೆಆರ್‌ಎಸ್ ಹಿನ್ನೀರಿನಲ್ಲಿ ಭೂ ಒತ್ತುವರಿ : ತೆರವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶ
ಆದರೆ ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿ ಆಗುತ್ತಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಂಠಿತವಾಗಲಿದ್ದು ಇದರಿಂದ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಹೀಗಾಗಿ ಜಲಾಶಯದ 130 ಅಡಿಗಳ (Contour) ನಕ್ಷೆಗಳನ್ನು ನೀರಾವರಿ ಇಲಾಖೆಯಿಂದ ಪಡೆದು ಈ ವಿಷಯದ ಕುರಿತಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ, ಕಂದಾಯ ಇಲಾಖೆ, ಭೂ ದಾಖಾಲಾತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಸರ್ವೆ ಕಾರ್ಯ ನಡೆಸಿ ಒತ್ತುವರಿ ಇದ್ದಲ್ಲಿ ಒತ್ತುವರಿಯನ್ನು ತೆರವುಗೊಳಿಸಲು, ಅಣೆಕಟ್ಟೆಯ 130 ಅಡಿಯ ಕಾಂಟೋರ್ ಗಡಿಭಾಗಕ್ಕೆ ಶಾಶ್ವತವಾಗಿ ಗಡಿ ಕಲ್ಲುಗಳನ್ನು, ಸೂಚನಾ ಫಲಕಗಳನ್ನು ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕು. ಹಿನ್ನೀರಿನ ಪ್ರದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಕಾವಲು ವ್ಯವಸ್ಥೆ (watch and ward) ನೋಡಲು ಪೋಲೀಸ್ ಇಲಾಖೆ ಮತ್ತು ಪರಿಸರ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಶಾಸಕರು ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಕೆ.ಶಿವಕುಮಾರ್ ಅವರು, ಕೆಆರ್ ಎಸ್ ಹಿನ್ನೀರಿನಲ್ಲಿ ಭೂ ಒತ್ತುವರಿ ತೆರವಿಗೆ ಆದೇಶಿಸಿದ್ದಾರೆ. ಇದರಿಂದ ಹಿನ್ನೀರಿನ ಪ್ರದೇಶದಲ್ಲಿ ತಲೆ ಎತ್ತಿರುವ ಹಾಗೂ ಎತ್ತಲಿರುವ ಅಕ್ರಮ ರೆಸಾರ್ಟ್ ಗಳಿಗೆ ಕಡಿವಾಣ ಬಿದ್ದಂತಾಗಲಿದೆ. ಜೊತೆಗೆ ನೀರು ಸಂಗ್ರಹಣ ಸಾಮರ್ಥ್ಯ ಹೆಚ್ಚಾಗಿ ನಾಲಾ ಕೊನೆ ಭಾಗಕ್ಕೂ ನೀರು ಹರಿಯುವುದರಿಂದ ರೈತರ ಸಮಸ್ಯೆ ಕೂಡ ಬಗೆಹರಿಯಲಿದೆ.
ಕೆಆರ್‌ಎಸ್ ಹಿನ್ನೆಲೆ
ಕೃಷ್ಣರಾಜಸಾಗರ ಜಲಾಶಯವನ್ನು ಶ್ರೀಮಾನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ರವರ ಕೃಪಾ ಕೈಂಕರ್ಯದಿಂದ ಸರ್.ಎಂ.ವಿಶ್ವೇಶ್ವರಯ್ಯ ರವರ ತಾಂತ್ರಿಕ ನೈಪುಣ್ಯದಿಂದ 1911 ನೇ ಇಸವಿಯಿಂದ 1931 ನೇ ಇಸವಿಯವರೆಗೆ ನಿರ್ಮಿಸಲ್ಪಟ್ಟಿದೆ. ಜಲಾಶಯವು 2.621 ಕಿ.ಮೀ. ಉದ್ದವಿದ್ದು, ತಳಪಾಯದಲ್ಲಿ 111 ಅಡಿಗಳಷ್ಟು ಅಗಲವಿದ್ದು, ತಳಮಟ್ಟದಿಂದ 130 ಅಡಿ ಎತ್ತರವಿದ್ದು, ಇದನ್ನು ಸಂಪೂರ್ಣವಾಗಿ ಕಲ್ಲುಕಟ್ಟಡ ಹಾಗೂ ಸುರ್ಕಿ ಗಾರೆಯಲ್ಲಿ ನಿರ್ಮಿಸಲಾಗಿದೆ. ಜಲಾಶಯದ ಶೇಖರಣೆಯ ಒಟ್ಟು ಸಾಮರ್ಥ್ಯ (49.452 ಟಿ.ಎಂ.ಸಿ) ಮತ್ತು ನೀರು ವ್ಯಾಪಿಸುವ ವಿಸ್ತೀರ್ಣ 130.00 ಚ.ಕಿ.ಮೀ ಹಾಗೂ ಸುತ್ತಳತೆ 320 ಕಿ.ಮೀ. ಹೊಂದಿದೆ.
ಕೆಆರ್ ಎಸ್ ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿ ಆಗುತ್ತಿರುವುದು ಕಂಡುಬಂದಿದೆ. ಭೂ ಒತ್ತುವರಿ ತೆರವುಗೊಳಿಸುವುದರಿಂದ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ. ಭೂ ಒತ್ತುವರಿ ತೆರವಿಗೆ ಉಪಮುಖ್ಯಮಂತ್ರಿಗಳು ಆದೇಶಿಸಿರುವುದು ನಿಜಕ್ಕೂ ಶ್ಲಾಘನೀಯ.
-ರಮೇಶ್ ಬಾಬು ಬಂಡಿಸಿದ್ದೇಗೌಡ
ಅಧ್ಯಕ್ಷರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ಶಾಸಕರು, ಶ್ರೀರಂಗಪಟ್ಟಣ
ಕೆಆರ್ ಎಸ್ ಜಲಾಶಯಕ್ಕೆ 94 ವರ್ಷಗಳ ಇತಿಹಾಸವಿದೆ. ಬೆಂಗಳೂರು ಸೇರಿದಂತೆ ಮೈಸೂರು ಭಾಗದ ಜನತೆಗೆ ಕುಡಿಯುವ ನೀರಿನ ಜೊತೆಗೆ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಜಲಾಶಯದ ನೀರನ್ನು ಬಳಕೆ ಮಾಡಲಾಗುತ್ತಿದೆ. ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿ ಆದರೆ ನೀರಿನ ಸಂಗ್ರಹ ಕಡಿಮೆಯಾಗಿ ನೀರಾವರಿ ಸಮಸ್ಯೆ ಉದ್ಬವಿಸಲಿದೆ. ಭೂ ಒತ್ತುವರಿ ತೆರವಿನ ಜೊತೆಗೆ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಬೀಳಬೇಕು. ಈ ಸಂಬಂಧ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಹೊರಡಿಸಿರುವ ಆದೇಶದಿಂದ ರೈತರಿಗೆ ಅನುಕೂಲವಾಗಲಿದೆ.
-ದಿನೇಶ್ ಗೂಳಿಗೌಡ
ಉಪಾಧ್ಯಕ್ಷರು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಶಾಸಕರು, ಕರ್ನಾಟಕ ವಿಧಾನಪರಿಷತ್
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…