ಮೈಸೂರು

ದೇವನಹಳ್ಳಿ ಭೂಮಿ ಪ್ರಕರಣ : ರಾಜ್ಯ ಸರ್ಕಾರದ ನಡೆ ವಿರುದ್ಧ ಪ್ರಕಾಶ್‌ ರಾಜ್‌ ಕಿಡಿ

ಮೈಸೂರು : ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಮಾಡಿದ್ದ ಗಾಯ ವಾಸಿ ಮಾಡುವುದಾಗಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಈಗ ದ್ರೋಹ ಮಾಡುತ್ತಿದ್ದಾರೆ. ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಹಿಂದಕ್ಕೆ ಕೊಡುವವರೆಗೆ ನಾವು ಹೋರಾಟದಿಂದ ವಿರಮಿಸುವುದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಸರ್ಕಾರವನ್ನು ಎಚ್ಚರಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ರೈತ ಸಂಘಟನೆ, ದಲಿತ ಸಂಘಟನೆ ಜತೆಗೂಡಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜಮೀನನ್ನು ವಶಪಡಿಸಿಕೊಳ್ಳದಂತೆ ದೊಡ್ಡ ಹೋರಾಟ ನಡೆಯುತ್ತಿದೆ. ಈ ಸಂಬಂಧ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೊಟೀಫಿಕೇಷನ್ ರದ್ದುಪಡಿಸಲು ಕೆಲವು ತಾಂತ್ರಿಕ ಸಮಸ್ಯೆ ಇದೆ, 10 ದಿನ ಸಮಯ ಕೊಡಿ ಎಂದು ಕೇಳಿದ್ದಾರೆ. ಆದರೆ, ಈಗ ಸರ್ಕಾರ ಮಾಡುತ್ತಿರುವುದೇನು ಎಂದು ನೇರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲ್ನೋಟಕ್ಕೆ ರೈತರ ಪರವೆಂದು ಹೇಳಿ ಒಳಗೊಳಗೆ ರೈತ ವಿರೋಧಿ ಕೆಲಸ ಮಾಡಬಾರದು. ಹೇಳಿದಂತೆ ತಕ್ಷಣವೇ ಭೂಮಿ ವಾಪಸ್ ಕೊಡಲು ಮುಂದಾಗಬೇಕು. ಇಲ್ಲದಿದ್ದರೆ ನಿಮ್ಮ ಮೇಲೂ ಅಪನಂಬಿಕೆ ಬರಲಿದೆ ಎಂದರು.

ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ನೀವು ಅಂತಿಮ ನೋಟಿಫಿಕೇಷನ್ ಆಗುವತನಕ ಯಾಕೆ ಬಿಟ್ಟಿದ್ದು? ಪಿ. ಲಂಕೇಶ್ ಅವರು ಹೇಳುವಂತೆ ನಮಗೆ ನಾಯಕರ ಮೇಲೆ ನಂಬಿಕೆ ಇಲ್ಲ. ರಾಜ್ಯದಲ್ಲಿರುವ ಮೂರು ಪಕ್ಷಗಳ ನಾಯಕರೂ ಕಳ್ಳರೆ? ಯಾವ ನಾಯಕರು ಜನಪರವಾಗಿ ಮಾತನಾಡುತ್ತಿದ್ದೀರಿ ಹೇಳಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯವರು ಹತ್ತು ದಿನ ಕಾಲಾವಕಾಶ ಕೇಳಿದರೆ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ದೇವನಹಳ್ಳಿ ಸಮೀಪದ ಜಮೀನನ್ನು ಅಭಿವೃದ್ಧಿ ಮಾಡುವ ತನಕ ಬಿಡುವುದಿಲ್ಲ ಎನ್ನುತ್ತಾರೆ. ಅಂದರೆ ಮುಖ್ಯಮಂತ್ರಿಯವರಿಗೆ ಸಚಿವರ ಮೇಲೆ ಹಿಡಿತವಿಲ್ಲವೇ? ಅನುಮತಿ ಪಡೆಯದೇ ಬಲವಂತದಿಂದ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಹೀಗೆ ಮಾಡಿ ಕೊನೆಗೆ ನಮ್ಮನ್ನು ರಸ್ತೆಗೆ ಬಿಡೋದು ತಾನೆ ನಿಮ್ಮ ಉದ್ದೇಶ. ಆದರೆ ಈ ಹೋರಾಟ ನಿಲ್ಲುವುದಿಲ್ಲ ಎಂದರು.

ಒಂದೆಡೆ ದೇವನಹಳ್ಳಿಯಲ್ಲಿ ರೈತರು ಭೂಮಿ ವಶಪಡಿಸಿಕೊಳ್ಳದಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದರೆ, ಈ ಪೈಕಿ ಕೆಲವರನ್ನು ಇಲ್ಲಿಗೆ ಕರೆತಂದು ಪರಿಹಾರ ಕೇಳಿಸಿದ್ದಾರೆ. ಇದು ಹೋರಾಟವನ್ನು ಒಡೆಯುವ ಪ್ರಯತ್ನವಲ್ಲವೇ? ಈ ನಾಟಕ ಹೆಚ್ಚು ದಿನ ಮಾಡಬೇಡಿ. ಟೈಮ್ ತೆಗೆದುಕೊಂಡು ಮತ್ತೆ ಹಾಗೆಯೇ ಮಾಡುತ್ತೀರಿ. ನೀವು ಮಾಡುತ್ತಿರುವ ನಾಟಕ ನಮ್ಮ ಕಣ್ಣಿಗೆ ಕಾಣಿಸುತ್ತಿದೆ ಎಂದು ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮಗೆ ಬೇಕಾಗಿರುವುದು ಸುಮಾರು 100 ಎಕರೆ ಇರಬೇಕು. ಅದಕ್ಕಾಗಿ 1700 ಎಕರೆ ಜಮೀನು ಯಾಕೆ ಬೇಕು? ನಾಳೆ ದಿನ ರಿಯಲ್‌ಎಸ್ಟೇಟ್ ವ್ಯವಹಾರ ನಡೆಸುತ್ತೀರಿ. ಫೈವ್‌ಸ್ಟಾರ್‌ಹೊಟೇಲ್ ನಿರ್ಮಿಸಿ, ರೈತರ ಮಕ್ಕಳನ್ನು ಕಾರು ಹೊರೆಸಲು ಇಟ್ಟುಕೊಳ್ಳುತ್ತೀರಿ. ನಿಮ್ಮ ಮೇಲೆ ನಮಗೆ ಅನುಮಾನ ಮೂಡುವುದು ಸಹಜ ಎಂದು ಹೇಳಿದರು. ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ಹಿಂದೆ ಭೂ ಮಾಫಿಯಾ ಕೆಲಸ ಮಾಡುತ್ತಿದೆ. ಭೂ ಮಾಫಿಯಾದವರ ತಾಳಕ್ಕೆ ಕುಣಿಯುತ್ತಿರುವುದನ್ನು ನೋಡಿದರೆ ಬೇರೆ ವಾಸನೆ ಬರಲು ಶುರುವಾಗಿದೆ ಎಂದರು.

ಸಚಿವ ಎಂ.ಬಿ. ಪಾಟೀಲರು ಪ್ರಶ್ನೆ ಮಾಡುವುದನ್ನಾದರೂ ಸರಿಯಾಗಿ ಕಲಿಯಬೇಕು. ದೇವನಹಳ್ಳಿ ಇರುವುದು ಕರ್ನಾಟಕದಲ್ಲಿ ಅನ್ಯಾಯವಾಗುತ್ತಿರುವುದು ದೇವನಹಳ್ಳಿ ಜನಕ್ಕೆ. ನಾನು ಹೋರಾಟ ಮಾಡುತ್ತೇನೆ. ಒಬ್ಬ ಪ್ರಜೆಯಾಗಿ ಅದು ನನ್ನ ಕರ್ತವ್ಯವಾಗಿದೆ ಎಂದು ತಿರುಗೇಟು ನೀಡಿದರು.

ಮಣ್ಣಿನ ಮಗನೂ ಮಾತನಾಡಲಿಲ್ಲ: ಹೊಸದಿಲ್ಲಿಯಲ್ಲಿ ಸಂಸದೀಯ ಸಮಿತಿ ಸಭೆ ಇತ್ತೀಚೆಗೆ ನಡೆಯಿತು. ಅದರಲ್ಲಿ ಎಲ್ಲಾ ಪಕ್ಷದ ಸಂಸದರು, ಹೋರಾಟಗಾರರು ಪಾಲ್ಗೊಂಡಿದ್ದರು. ಇದರಲ್ಲಿ ಮೇಧಾ ಪಾಟ್ಕರ್, ನಾನು ಪಾಲ್ಗೊಂಡಿದ್ದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಇದ್ದರು. ಆದರೆ, ಬಿಜೆಪಿ ಸಂಸದರು ಇಲ್ಲಿ ಪಾಕಿಸ್ತಾನಿಗಳು ಬಂದಿದ್ದಾರೆ ಎಂದು ಆರೋಪಿಸಿ ಸಭೆಯಿಂದ ಓಡಿ ಹೋದರು. ಕಡೆಗೆ ಸಭೆಯನ್ನೇ ರದ್ದುಪಡಿಸಿದರು. ಈ ಸಭೆಯಲ್ಲಿ ದೇವನಹಳ್ಳಿ ರೈತರ ಜಮೀನು ವಶಕ್ಕೆ ಪಡೆಯುವ ಕುರಿತು ಚರ್ಚಿಸಬೇಕಿತ್ತು. ಎಚ್.ಡಿ.ದೇವೇಗೌಡರನ್ನು ಕೇಳಿದರೆ ಕೈ ಅಲ್ಲಾಡಿಸಿ ಹೋಗಿದ್ದಾಗಿ ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ನಾಯಕರಾದ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಡಿಎಸ್‌ಎಸ್ ಹೋರಾಟಗಾರರಾದ ಗುರುಪ್ರಸಾದ್ ಕೆರಗೂಡು, ಬೆಟ್ಟಯ್ಯಕೋಟೆ ಮೊದಲಾದವರು ಹಾಜರಿದ್ದರು.‌

ಆಂದೋಲನ ಡೆಸ್ಕ್

Recent Posts

ಸಿಎಂಗೆ ವಿದ್ಯಾರ್ಥಿಗಳು ಪತ್ರ ಬರೆದ ಪ್ರಕರಣ: ಪಚ್ಚೆದೊಡ್ಡಿ ಸರ್ಕಾರಿ ಶಾಲೆಗೆ ಬಿಇಒ ಭೇಟಿ

ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…

39 mins ago

ಕೋಟೆ ಪುರಸಭೆ ಪೌರಕಾರ್ಮಿಕರು, ನೌಕರರಿಗೆ ೫ ತಿಂಗಳಿಂದ ಸಂಬಳವಿಲ್ಲ

ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…

44 mins ago

ಕೈಬೀಸಿ ಕರೆಯುತ್ತಿದೆ ‘ಪ್ರಸಾರಾಂಗ ಪುಸ್ತಕೋತ್ಸವ’

ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…

49 mins ago

ನಗರಪಾಲಿಕೆ ಆರ್ಥಿಕ ಬರ ನೀಗಿಸಿದ ತೆರಿಗೆ ಸಂಗ್ರಹ

ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…

55 mins ago

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

12 hours ago