ಮೈಸೂರು : ಕಿವುಡು ಮತ್ತು ಮೂಕರ ಆರೋಗ್ಯ ಚಿಕಿತ್ಸೆ, ಶಿಕ್ಷಣ, ವೈದ್ಯಕೀಯ ಮತ್ತು ಸಂಶೋಧನೆ ಕಾರ್ಯದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯು ಇಡೀ ದೇಶದ ಹೆಮ್ಮೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದ್ದಾರೆ.
ಮಾನಸ ಗಂಗೊತ್ರಿಯಲ್ಲಿರುವ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದೊಂದು ಐತಿಹಾಸಿಕ ಸಂದರ್ಭ. 1965 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಕಳೆದ 6 ದಶಕಗಳಲ್ಲಿ ಸಂವಹನ ಅಸಮರ್ಥತೆ( communication disorders ) ಪರಿಹಾರಕ್ಕಾಗಿ ತಜ್ಞ ಮಾನವ ಸಂಪನ್ಮೂಲಗಳ ಸಹಾಯದಿಂದ ಅಪ್ರತಿಮ ಸೇವೆ ಸಲ್ಲಿಸುತ್ತಿದೆ ಎಂದರು.
ಎಲ್ಲಾ ವಯೋಮಾನದವರಿಗೂ ಬಹುಮುಖಿ ಚಿಕಿತ್ಸೆ ಮೂಲಕ ಸೇವೆ ಒದಗಿಸುತ್ತಿರುವುದು ಅಭಿನಂದನೀಯ. ಸಮುದಾಯ ಸೇವಾ ಕೇಂದ್ರಗಳು, ಟೆಲಿ ಸರ್ವೆಕ್ಷಣೆ ಇನ್ನಿತರ ಸೇವೆಗಳ ಮೂಲಕ ದೇಶದಾದ್ಯಂತ ಜನತೆಗೆ ನೆರವಾಗುತ್ತಿದೆ ಎಂದು ದ್ರೌಪದಿ ಮರ್ಮು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಈ ಸಂಸ್ಥೆಯ ನಾಯಕತ್ವವನ್ನು ಮಹಿಳೆಯರು ವಹಿಸಿರುವುದು ವಿಶೇಷವಾಗಿದೆ. ಈಗಿನ ನಿರ್ದೇಶಕಿ ಡಾ. ಪುಷ್ಪಲತಾ ಎಸ್ ಅವರು ನೀಡುತ್ತಿರುವ ಸೇವೆಯೂ ಪ್ರಶಂಸನೀಯ. ಈ ಸಂಸ್ಥೆ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
ಆಯುಷ್ ಸಂಸ್ಥೆ ಪ್ರಾರಂಭಕ್ಕೆ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಭೂಮಿ ದಾನ ಮಾಡಿರುವುದು ಸ್ಮರಣೀಯ. ಇಂದು ಅವರ ಕುಟುಂಬದ ಯದಯವೀರ್ ಒಡೆಯರ್ ಅವರು ಉಪಸ್ಥಿತರಿರುವುದು ಖುಷಿ ತಂದಿದೆ ಎಂದರು.
ಅಂದಾಜಿನ ಪ್ರಕಾರ 2023ರಲ್ಲಿ ಭಾರತದಲ್ಲಿ 6 ಕೋಟಿ ಜನರು ವಾಕ್ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಂಬಂಧ, ಕಿವುಡುತನ ತಡೆ ಮತ್ತು ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಆಯುಷ್‌ನ ಹೊಣೆಗಾರಿಕೆ ಬಹಳ ಹೆಚ್ಚಾಗಿದೆ ಎಂದು ದ್ರೌಪದಿ ಮುರ್ಮು ಹೇಳಿದರು.
ಇತರೆ ಸಮಸ್ಯೆಗಳಂತೆ ವಾಕ್ ಮತ್ತು ಶ್ರವಣ ಸಂಬಂಧಿತ ತೊಂದರೆಗಳಲ್ಲಿ ಕೂಡ ಪ್ರಾಥಮಿಕ ಹಂತದಲ್ಲಿಯೇ ಲಕ್ಷಣಗಳನ್ನು ಗುರುತಿಸುವುದು ಮತ್ತು ಚಿಕಿತ್ಸೆ ನೀಡಲು ತಜ್ಞರ ಅವಶ್ಯಕತೆ ಇದೆ ಅವರು ಅಭಿಪ್ರಾಯಪಟ್ಟರು.
ಆದರ್ಶ ಸಂಸ್ಥೆಯ ರೂಪದಲ್ಲಿ ಆಯುಷ್ ನಿರಂತರವಾಗಿ ಶ್ರಮಿಸಬೇಕು. ಇದು ದೇಶದ ಇತರ ಸಂಸ್ಥೆಗಳಿಗೂ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.
ಈ ಸಂಸ್ಥೆಯ ಮೂಲಕ ಸ್ಥಾಪಿಸಲ್ಪಟ್ಟ Inclusive Therapy Park ದೇಶದ ಮೊದಲ ಮಾದರಿಯಾಗಿದ್ದು, ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಂವಹನ ಅಸಮರ್ಥತೆ ಯಿಂದ ಬಳಲುತ್ತಿರುವವರಿಗೆ ಉಪಯುಕ್ತವಾಗಿದೆ ಎಂದು ರಾಷ್ಟ್ರಪತಿಯವರು ತಿಳಿಸಿದರು.
ಆಯುಷ್ ಆರೊಗ್ಯ ವಾಣಿ ಒಂದು ಉತ್ತಮ ಯೋಜನೆ ಆಗಿದ್ದು, ಸಂವಹನ ಅಸಮರ್ಥತೆ ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಸರಳವಾಗಿ ಮಾಹಿತಿ ಲಭ್ಯವಾಗುತ್ತಿದೆ. ಈ ಮೂಲಕ ಆಯುಷ್ ಸಂಸ್ಥೆ ರಾಷ್ಟ್ರೀಯ ನೀತಿ ರೂಪಿಸಲು ಸಹ ಸಲಹೆ ನೀಡಬಹುದು ಎಂದು ದ್ರೌಪದಿ ಮುರ್ಮು ತಿಳಿಸಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ, ವಾಕ್ ಮತ್ತು ಶ್ರವಣ ತೊಂದರೆಗಳನ್ನು ನಿವಾರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಹಳ ಮುಖ್ಯ. ಇವುಗಳ ಬಳಕೆಯಿಂದ ಸಾಮಾನ್ಯ ಜನರು ಶ್ರವಣ ಸಹಾಯಕ ಸಾಧನಗಳು ಮತ್ತು ಸಾಧನೋಪಕರಣಗಳನ್ನು ಸುಲಭವಾಗಿ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
Cochlear Implants ಗಳಂತಹ ಸಾಧನಗಳು ಈಗ ಲಭ್ಯವಾಗುತ್ತಿವೆ. ಇಂತಹ ಸಾಧನಗಳ ತಯಾರಿಕೆಯಲ್ಲಿ ಸ್ವಾವಲಂಬಿ ಆಗಲು ಆಯುಷ್ ನಂತಹ ಸಂಸ್ಥೆಗಳು ಪ್ರಮುಖ ಪಾತ್ರವಹಿಸಬೇಕು. ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ದೇಶವನ್ನು ಆತ್ಮನಿರ್ಭರವಾಗಿಸಲು ಸಹಕಾರಿಯಾಗಬೇಕು ಎಂದು ಅವರು ಕರೆ ನೀಡಿದರು.
ಆಯುಷ್ ದೇಶದಲ್ಲಿ ದಿವ್ಯಾಂಗ ಮಾನವ ಸಂಪನ್ಮೂಲಗಳನ್ನು ಶಕ್ತಗೊಳಿಸುವ ಪ್ರಮುಖ ಸಂಸ್ಥೆಯಾಗಿದೆ. ಇಲ್ಲಿ ಸ್ಥಾಪಿಸಲ್ಪಟ್ಟ ಉತ್ಕೃಷ್ಟತಾ ಕೇಂದ್ರವು ಶಿಕ್ಷಣ, ವೈದ್ಯಕೀಯ, ತಾಂತ್ರಿಕ ತಜ್ಞತೆ ಹಾಗೂ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಇದು ದಿವ್ಯಾಂಗ ಜನರ ಸಬಲೀಕರಣಕ್ಕೆ ಪ್ರಮುಖ ಹೆಜ್ಜೆಯಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ದೇಶ-ವಿದೇಶಗಳಲ್ಲಿ ಸೇವೆ ನೀಡುತ್ತಿರುವವರು ಕೂಡ ಸಹಭಾಗಿಯಾಗಿರುವುದು ಶ್ಲಾಘನೀಯವಾಗಿದೆ ಎಂದರು.
ಸರ್ಕಾರ, ತಾಂತ್ರಿಕ ಹಾಗೂ ಸಾಮಾಜಿಕ ಕಾರ್ಯಕರ್ತರ ಸಹಯೋಗದ ಮೂಲಕ, ದಿವ್ಯಾಂಗ ಜನರಿಗಾಗಿ ಮುಕ್ತ ಪರಿಸರವನ್ನು ನಿರ್ಮಿಸಬೇಕು. ಇದರಿಂದ ಅವರು ಯಾವುದೇ ಅಡಚಣೆಯಿಲ್ಲದೆ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. “ಸುಗಮ್ಯ ಭಾರತ ಅಭಿಯಾನ” ಅಡಿಯಲ್ಲಿ ದಿವ್ಯಾಂಗ ಜನರ ಒಳಗೊಳ್ಳುವಿಕೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳು, ಸೌಕರ್ಯಗಳು ಹಾಗೂ ಸೇವೆಗಳು ದಿವ್ಯಾಂಗ ಅನುಗುಣವಾಗಿರಬೇಕು. ಅವು ದಿವ್ಯಾಂಗರಿಗೆ ಮಾತ್ರ ಪ್ರವೇಶ ನೀಡುವುದಲ್ಲದೆ, ಅವರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ದ್ರೌಪದಿ ಮರ್ಮು ಹೇಳಿದರು.
ವಿಶ್ವ ಸಂಜ್ಞಾ ಭಾಷಾ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 23ರಂದು ಆಚರಿಸಲಾಗುತ್ತದೆ. ಸಂಜ್ಞಾ ಭಾಷೆ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಸಂಜ್ಞಾ ಭಾಷೆಯ ಬಳಕೆಯಿಂದ ಸಮಾನತೆ ಹಾಗೂ ಸಮಾವೇಶವನ್ನು ಬಲಪಡಿಸಲು ಇಂದು ನಾವು ಸಂಕಲ್ಪ ಮಾಡಬೇಕಿದೆ ಎಂದು ಅವರು ಹೇಳಿದರು.
ಆಯುಷ್‌ನ ಸಹಾನುಭೂತಿಯೊಂದಿಗೆ ನವೀನತೆಯ ಧೋರಣೆಯಿಂದ ವಾಕ್ ಮತ್ತು ಶ್ರವಣ ತೊಂದರೆಗಳಿಂದ ಬಳಲುತ್ತಿರುವ ಜನರ ಜೀವನವನ್ನು ಸುಲಭಗೊಳಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತದೆ. ಇವು ಅವರ ಸಾಮಾನ್ಯ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಸಮಾಜ ಮತ್ತು ಆರ್ಥಿಕತೆಯಲ್ಲಿಯೂ ಅವರು ತಮ್ಮ ಉತ್ತಮ ಕೊಡುಗೆಯನ್ನು ನೀಡಲು ಸಹಾಯ ಮಾಡುತ್ತದೆ ಎಂದು ದ್ರೌಪದಿ ಮುರ್ಮು ತಿಳಿಸಿದರು.