ಶಿಷ್ಟಾಚಾರ ಹೊರತುಪಡಿಸಿ ಉಳಿದವರು ಸರತಿ ಸಾಲಿನಲ್ಲಿ ಪ್ರವೇಶ
ಮೈಸೂರು : ಆಷಾಢ ಮಾಸದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಚಾಮುಂಡೇಶ್ವರಿದೇವಿ ದರ್ಶನಕ್ಕೆ ಭಕ್ತಾದಿಗಳು ಆಗಮಿಸುವ ಕಾರಣ ಮೊದಲ ಬಾರಿಗೆ 2 ಸಾವಿರ ರೂ.ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, 2 ಸಾವಿರ ರೂ. ನೀಡಿ ಪ್ರವೇಶ ಪಡೆದವರಿಗೆ ಗಿಫ್ಟ್ ಬಾಕ್ಸ್ ನೀಡಲಾಗುತ್ತದೆ.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಆಷಾಢ ಶುಕ್ರವಾರ ಮತ್ತು ಅಮ್ಮನವರ ವರ್ಧಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಆಷಾಢ ಮಾಸದಲ್ಲಿ ನೂಕುನುಗ್ಗಲು ತಡೆಯಲು ಮತ್ತು ನೇರವಾಗಿ ದರ್ಶನ ಪಡೆಯುವವರಿಗೆ ಅನುಕೂಲವಾಗುವಂತೆ ಪರಿಚಯಿಸಿರುವ 2 ಸಾವಿರ ರೂ.ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸುವ ಜತೆಗೆ,ಗಿಫ್ಟ್ ಬಾಕ್ಸ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆ ಮಾಡಿದರು.
ಆಷಾಢಮಾಸದ ಶುಕ್ರವಾರ ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಉಚಿತ ದರ್ಶನದ ಜತೆಗೆ 300 ರೂಪಾಯಿ ಟಿಕೆಟ್ ದರ್ಶನದ ವ್ಯವಸ್ಥೆ ಇತ್ತು. ಈ ಬಾರಿ ಹೆಚ್ಚುವರಿಯಾಗಿ 2 ಸಾವಿರ ರೂ. ಮುಖಬೆಲೆಯ ಟಿಕೆಟ್ ಪರಿಚಯಿಸಲಾಗಿದೆ. ಈ ಟಿಕೆಟ್ ಖರೀದಿ ಮಾಡಿದವರಿಗೆ ದರ್ಶನ ಜತೆಗೆ, ಕುಂಕುಮ, ಕೈಗೆ ಕಟ್ಟಿಕೊಳ್ಳುವ ದಾರ, ಚಾಮುಂಡೇಶ್ವರಿ ಫೋಟೋ, ಗಂಡಭೇರುಂಡ, ಅಂಬಾರಿ ಇರುವಂತಹ ಗಿಫ್ಟ್ ಬಾಕ್ಸ್‌ನ್ನು ಬಟ್ಟೆ ಬ್ಯಾಗ್‌ನಲ್ಲಿ ವಿತರಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ವಿಶೇಷ ಟಿಕೆಟ್ ಪಡೆದವರು ದರ್ಶನಕ್ಕಾಗಿ ಕಾಯುವ ಸಮಯ ಮೀರದಂತೆ ನೋಡಿಕೊಳ್ಳಲಾಗುವುದು. ಎರಡು ಸಾವಿರ ರೂ. ಕೊಟ್ಟು ದರ್ಶನ ನಿಧಾನವಾದರೆ ಸಮಸ್ಯೆಯಾಗಲಿದೆ. ಹಾಗಾಗಿ,ಅಗತ್ಯ ಕ್ರಮಕೈಗೊಳ್ಳುವಂತೆ ಹೇಳಲಾಗಿದೆ ಎಂದರು.
ಶಿಷ್ಠಾಚಾರ (ಪ್ರೊಟೋಕಾಲ್) ಇದ್ದವರನ್ನು ಹೊರತುಪಡಿಸಿ ಉಳಿದವರಿಗೆ ಪಾಸ್ ವ್ಯವಸ್ಥೆ ಇಲ್ಲದೆ ಸರತಿ ಸಾಲಿನಲ್ಲಿ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಿವಿಐಪಿ, ವಿಐಪಿ ಪಾಸ್‌ಗಳನ್ನು ವಿತರಿಸುವುದರಿಂದ ಗೊಂದಲ ಉಂಟಾಗಿ ಸರತಿ ಸಾಲಿನಲ್ಲಿ, ಟಿಕೆಟ್ ಪಡೆದುಕೊಂಡು ದರ್ಶನ ಪಡೆಯುವವರಿಗೂ ತೊಂದರೆಯಾಗುವ ಕಾರಣ ಶಿಷ್ಠಾಚಾರ ವ್ಯವಸ್ಥೆ ಹೊಂದಿದವರನ್ನು ಬಿಟ್ಟು ಉಳಿದವರು ಸರತಿ ಸಾಲಿನಲ್ಲೇ ತೆರಳಬೇಕಾಗಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಇಲಾಖೆ ಮೇಲೆ ಉಂಟಾಗುತ್ತಿದ್ದ ಒತ್ತಡಕ್ಕೂ ಕಡಿವಾಣ ಹಾಕಲಾಗಿದೆ.
ಈ ಬಾರಿ ವಿವಿಐಪಿ, ವಿಐಪಿ ಪಾಸ್‌ಗಳು ಅಥವಾ ವಾಹನದ ಪಾಸ್‌ಗಳು ಇರುವುದಿಲ್ಲ. ಸರ್ಕಾರದ ಶಿಷ್ಠಾಚಾರವನ್ನು ಹೊಂದಿರುವವರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅಂತಹವರಿಗೆ ವಿನಾಯಿತಿ ಇರುತ್ತದೆ. ಉಳಿದಂತೆ ಬೇರೆ ಯಾವುದೇ ಪಾಸ್ ವ್ಯವಸ್ಥೆಗಳು ಇರುವುದಿಲ್ಲ ಎಂದರು.
ಸಾರ್ವಜನಿಕರ ಸಾಲು, ಟಿಕೆಟ್ ಸಾಲು, ವಿಐಪಿ ಸಾಲಿನಲ್ಲಿ ಗೊಂದಲವಾಗದಂತೆ, ಟಿಕೆಟ್ ಕೌಂಟರ್, ಸಾರಿಗೆ ಬಸ್‌ಗಳ ನಿರ್ಗಮನದ ಸ್ಥಳದಲ್ಲಿ ಉಸ್ತುವಾರಿ ನೋಡಿಕೊಳ್ಳಲು ಮೂವರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಇವರೆಲ್ಲರೂ ಸಂಪೂರ್ಣ ನಿಗಾವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಧಾರ್ಮಿಕ ಆಚರಣೆಗೆ ಧಕ್ಕೆಯಾಗದಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಆಗದಂತೆ ನೋಡಿಕೊಳ್ಳಲಾಗುವುದು. ಪೊಲೀಸರು, ಅರ್ಚಕರ ಶಿ-ರಸ್ಸಿನಿಂದ ಒಳನುಗ್ಗುವ ಜನರ ಬಗ್ಗೆ ಕಡಿವಾಣ ಹಾಕಲಾಗುವುದು. ಪೊಲೀಸ್ ಇಲಾಖೆ,ಶ್ರೀ ಚಾಮುಂಡಿಬೆಟ್ಟ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ,ಅರ್ಚಕರು ಪರಸ್ಪರ ಸಮನ್ವತೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗುವುದು ಎಂದರು.
ಶಾಸಕ ಜಿ.ಟಿ.ದೇವೇಗೌಡ,ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ,ಜಿಲ್ಲಾಽಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಪ್ರಾಽಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ಮತ್ತಿತರರು ಹಾಜರಿದ್ದರು.
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…