ಮೈಸೂರು

ಬಾಲಕ ಮತ್ತು ಕಾರಂತಜ್ಜ

ಪ್ರಸನ್ನ ಸಂತೇಕಡೂರು
pksgoldenhelix@gmail.com

ಬಹಳಷ್ಟು ಸಲ ಲೇಖಕನ ಬರಹ ಮತ್ತು ಬದುಕು ಒಂದರ ಪ್ರತಿಬಿಂಬ ಇನ್ನೊಂದು ಅನ್ನುವಷ್ಟರ ಮಟ್ಟಿಗೆ ಬೇರ್ಪಡಿಸಲಾಗದಷ್ಟು ಸಯಾಮಿ ಅವಳಿಗಳ ರೀತಿ ಇರುವುದನ್ನ ಕಾಣಬಹುದು ಅಥವಾ ಗಂಡಭೇರುಂಡ ಪಕ್ಷಿಯ ರೀತಿ ಎರಡು ತಲೆ ಒಂದೇ ದೇಹವಾಗಿರಬಹುದು. ಇದು ಲೇಖಕನ ಸೃಜನಶೀಲ ಮತ್ತು ಕಲ್ಪನಾ ಶಕ್ತಿಯ ಮೇಲೂ ಕೆಲವೊಮ್ಮೆ ಅವಲಂಬಿತವಾಗಿ ಬರಹ ಮತ್ತು ಬದುಕು ಬೇರೆಯೇ ಆಗಿ ರೂಪುಗೊಳ್ಳಬಹುದು. ಸುಮಾರು ವರ್ಷಗಳ ಹಿಂದೆ ಡಾ. ಶಿವರಾಮ ಕಾರಂತರು ನಮ್ಮ ಶಾಲೆಗೆ ಬಂದಿದ್ದರು. ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ನನಗೆ ತುಂಬಾ ಇತ್ತು. ಅದು ಸಾಧ್ಯವಾಗಲಿಲ್ಲ. ಆಮೇಲೆ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿರುವಾಗ ನಮಗೆ ಅವರ ‘ಅರಸಿಕರಲ್ಲ’ ಕಾದಂಬರಿ ಪಠ್ಯದಲ್ಲಿತ್ತು. ನಾನು ಆ ಕಾದಂಬರಿ ಬಿಟ್ಟು ‘ಅಪೂರ್ವ ಪಶ್ಚಿಮ’ ಎಂಬ ಅವರ ಇನ್ನೊಂದು ಕಾದಂಬರಿ ಓದುತ್ತ ಅದರ ಶೀರ್ಷಿಕೆಗೆ ಸೋತು ಹೋದೆ.

ಕೆಲವೊಮ್ಮೆ ಶಿವಮೊಗ್ಗದ ಗೋಪಾಳ, ಅನುಪಿನಕಟ್ಟೆಯ ಕೆರೆಯ ಹತ್ತಿರ ಕುಳಿತು ಪಶ್ಚಿಮದಲ್ಲಿ ಸೂರ್ಯ ಮುಳುಗುವುದನ್ನ ನೋಡುತ್ತ ಪಾಶ್ಚಾತ್ಯ ದೇಶಗಳು ಅದೆಷ್ಟೂ ಅಪೂರ್ವವಾಗಿರಬಹುದು ಎಂದು ಯೋಚಿಸುತ್ತಿದ್ದೆ. ಇನ್ನು ಕೆಲವೊಮ್ಮೆ ಶಿವಮೊಗ್ಗದ ಗುಡ್ಡೆ ಮರಡಿಯ ಮೇಲೆ ಕುಳಿತು ಶಾಂತವಾಗಿ ಹರಿಯುವ ತುಂಗಾ ನದಿಯನ್ನ ನೋಡುತ್ತ ಪಾಶ್ಚಾತ್ಯ ದೇಶಗಳ ಸೌಂದರ್ಯವನ್ನ ಕಲ್ಪಿಸಿಕೊಳ್ಳುತ್ತಿದ್ದೆ. ಅಲ್ಲಿ ನದಿಯ ತಿರುವಿನಲ್ಲಿ ಹಾರುವ ಬೆಳ್ಳಕ್ಕಿಗಳ ಸಾಲು ರಾಷ್ಟ್ರಕವಿ ಕುವೆಂಪುರವರ ‘ದೇವರು ರುಜು ಮಾಡಿದನು’ ಕವಿತೆಯನ್ನು ಜ್ಞಾಪಕಕ್ಕೆ ತರುತಿತ್ತು. ಕೆಲವು ಸಲ ನಮ್ಮ ಸಂತೇಕಡೂರಿನ ಕೆರೆಯ ಹತ್ತಿರ ಇರುವ ಹಳೆಯ ಈಶ್ವರನ ಗುಡಿಯ ಹಿಂದೆ ಅಡಿಕೆ ಮರಗಳ ಸಂದಿಯಲ್ಲಿ ಮುಳುಗುವ ಕೆಂಪಾದ ಸೂರ್ಯನ ಕಿರಣಗಳನ್ನು ನೋಡುತ್ತ ಅಮೇರಿಕಾದ ಬಗ್ಗೆ ಯೋಚಿಸುತ್ತಿದ್ದೆ.
ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ, ಪಿಎಚ್.ಡಿ. ಮುಗಿಸಿಕೊಂಡು ಉನ್ನತ ಸಂಶೋಧನೆಗೆ ಅಮೆರಿಕಾಗೆ ಹೋದಾಗ ಅಲ್ಲಿ ವರ್ಜಿನೀಯಾ ಸಂಸ್ಥಾನದ ರಿಚ್ಮಂಡ್ ನಗರದಲ್ಲಿ ಸಹೋದ್ಯೋಗಿ ಆಗಿ ಸಿಕ್ಕವನೇ ನನ್ನ ಕಾದಂಬರಿಯ ಕಥಾನಾಯಕ ‘ಸು’. ಇಲ್ಲಿ ‘ಸು’ ನನ್ನ ಬದುಕಿನಲ್ಲಿ ಬಂದು ಹೋದವನು. ಅದೇ ರಿಚ್ಮಂಡ್ ನಗರದ ಮಾನ್ಯುಮೆಂಟ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ ಅರ್ಥರ್ ಆಶ್ ಎಂಬ ಜಗದ್ವಿಖ್ಯಾತ ಟೆನಿಸ್ ಆಟಗಾರನ ಪ್ರತಿಮೆ ನನ್ನ ಅಸ್ಥಿಪಂಜರದ ಬಾಲಕ ಕತೆಗೆ ಪ್ರೇರಣೆಯಾಯಿತು. ಟೆಕ್ಸಾಸ್ ಸಂಸ್ಥಾನದ ಡಲ್ಲಾಸ್ ನಗರದಲ್ಲಿ ಒಂದು ವರ್ಷ ಇದ್ದೆ. ಅಲ್ಲಿ ನನ್ನ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿದ್ದ ಇನ್ನೊಬ್ಬ ಪರಿಚಿತ ವ್ಯಕ್ತಿ ನನ್ನ ಒಲವೇ ಜೀವನ ಸಾಕ್ಷಾತ್ಕಾರ ಕತೆಯ ನಾಯಕನಾದ. ಅದಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಸ್ವರ್ಣಸೇತು ಕನ್ನಡ ಬಳಗದ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೂಡ ಬಂತು.
ನಾನು ಅಮೆರಿಕಾದಿಂದ ವಾಪಸು ಮೈಸೂರಿಗೆ ಬಂದ ಮೇಲೆ ಬಾಲ್ಯದಲ್ಲಿ ಕಾರಂತರ ಜೊತೆ ಫೋಟೋ ತೆಗೆಸಿಕೊಳ್ಳಲಾಗದ ವಿಷಯ ನನ್ನನ್ನು ತುಂಬಾ ಕಾಡುತಿತ್ತು. ಅದೇ ಸಮಯದಲ್ಲಿ ನನ್ನ ಬಾಲ್ಯದ ಗೆಳತಿಯೊಬ್ಬಳು ಕಾರಂತರು ನಮ್ಮ ಶಾಲೆಗೆ ಬಂದಾಗ ತೆಗೆಸಿಕೊಂಡಿದ್ದ ಆ ಫೋಟೋವನ್ನು ಕಳಿಸದಳು. ಆ ಫೋಟೋದಲ್ಲಿ ಅವಳನ್ನು ಸೇರಿ ನನ್ನ ಕೆಲವು ಸಹಪಾಠಿಗಳು, ಶಿಕ್ಷಕಿಯರು ಇದ್ದರು. ನಾನಿಲ್ಲದ ಆ ಫೋಟೋವನ್ನ ನೋಡುತ್ತ ‘ಬಾಲಕ ಮತ್ತು ಕಾರಂತಜ್ಜ’ ಕತೆ ಬರೆದು ಫೇಸ್ಬುಕ್ ಗೋಡೆಗೆ ಹಾಕಿದೆ. ತಕ್ಷಣವೇ ಆ ಕತೆಯನ್ನ ಓದಿ ಹಲವಾರು ಜನ ಕರೆ ಮಾಡಲು ಆರಂಭಿಸಿದರು. ಆ ಬಾಲಕ ಯಾರು? ಎಂದು ಕೇಳಲು ಶುರು ಮಾಡಿದರು. ಚಾಮರಾಜನಗರದ ಸಹೃದಯ ಸಮಾಜಮುಖಿ ಹಿರಿಯರಾದ ವೆಂಕಟರಾಜು ಕೃಷ್ಣಮೂರ್ತಿಯವರು ಈ ಕತೆಯನ್ನ ಚಲನಚಿತ್ರ ಮಾಡಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ತಿಳಿಸಿ ತಮ್ಮ ರಂಗವಾಹಿನಿ ಪತ್ರಿಕೆಯಲ್ಲಿ ಅದನ್ನ ಪ್ರಕಟಿಸಿದರು. ಈಗ ಆ ಬಾಲಕ ಬೆಳೆದು ದೊಡ್ಡವನಾಗಿದ್ದಾನೆ. ಕಾರಂತಜ್ಜ ಮಣ್ಣಿಗೆ ಮರಳಿದ್ದಾರೆ. ಇಲ್ಲಿ ಬರಹ ಮತ್ತು ಬದುಕು ಬೇರೆಯಲ್ಲ ಎಂಬುದು ತಿಳಿಯುತ್ತದೆ.

andolanait

Recent Posts

‘ಮೈಸೂರು ಮತ್ತೆ ಸ್ವಚ್ಛ ನಗರಿ ಗರಿ ಧರಿಸಬೇಕು’

ಪ್ರಶಾಂತ್ ಎನ್.ಮಲ್ಲಿಕ್ ಸ್ವಚ್ಛತಾ ರಾಯಭಾರಿಗಳ ಆಶಯ ; ‘ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ, ಅನನ್ಯಾ ಭಟ್…

17 mins ago

ಸಫಾರಿ ಕಾಡಿನ ನಾಶಕ್ಕೆ ರಹದಾರಿ: ರೈತರ ಆರೋಪ

ಗಿರೀಶ್ ಹುಣಸೂರು ರೆಸಾರ್ಟ್‌ಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ಹುನ್ನಾರ ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ನೆಪ ಇಂದು ಸಫಾರಿ ವಿರೋಧಿಸಿ ಪ್ರತಿಭಟನೆ …

22 mins ago

ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರೆ

ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 51ನೇ ವರ್ಷದ ಹಾಗೂ ಭಗವತಿ ದೇವಾಲಯದ 25ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ…

14 hours ago

ಹನೂರು| ಆಕಸ್ಮಿಕ ಬೆಂಕಿ ತಗುಲಿ ಜೋಳದ ಮೆದೆ ಸಂಪೂರ್ಣ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲ್ಲೂಕಿನ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಜೋಳದ ಮೆದೆ…

14 hours ago

ಗಾಂಜಾ ಮಾರಾಟ, ಸೇವನೆ: ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ಬಂಧನ

ಸಿದ್ದಾಪುರ: ನಿಷೇದಿತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

14 hours ago