ಕೆ.ಬಿ.ರಮೇಶನಾಯಕ
ಮೈಸೂರು: ನಂದಿನಿ ಹಾಲಿನ ದರ ಏರಿಸಿ ಗ್ರಾಹಕರಿಗೆ ಬರೆ ಎಳೆದ ರಾಜ್ಯ ಸರ್ಕಾರ, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ನೀಡಬೇಕಾದ ೫ ರೂ. ಪ್ರೋತ್ಸಾಹಧನವನ್ನು ಮೂರು ತಿಂಗಳಿನಿಂದ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ.
ಜಿಲ್ಲೆಯಲ್ಲಿ ನಿತ್ಯ ೧೧೫೬ ಸಂಘಗಳಿಂದ ೯೬ ಸಾವಿರ ಹೈನುಗಾರರು ಡೇರಿಗೆ ಹಾಲು ಹಾಕುತ್ತಿದ್ದು, ನಿತ್ಯ ೬.೫೦ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮೈಸೂರು ಜಿಲ್ಲಾ ಹಾಲು ಒಕ್ಕೂಟ ಪ್ರತಿ ಲೀಟರ್‌ಗೆ ೩೦ ರೂ.ನಂತೆ ಹೈನುಗಾರರಿಂದ ಹಾಲು ಖರೀದಿಸುತ್ತಿತ್ತು. ಇದೀಗ ಸರ್ಕಾರ ನಂದಿನಿ ಹಾಲಿನ ದರವನ್ನು ೨ ರೂ. ಏರಿಸಿರುವುದರಿಂದ ಮೈಮುಲ್ ಕೂಡ ಪ್ರತಿ ಲೀಟರ್‌ಗೆ ೨ ರೂ. ಹೆಚ್ಚಿಸಿ ಹೈನುಗಾರರಿಂದ ೩೨ ರೂ.ಗೆ ಹಾಲು ಖರೀದಿಸುತ್ತಿದೆ. ಆದರೆ, ಹೈನುಗಾರರಿಗೆ ಬರಬೇಕಿರುವ ಬಾಕಿ ಮೊತ್ತವೇ ಬರೋಬ್ಬರಿ ೩೦ ಕೋಟಿ ರೂ. ಉಳಿಸಿದೆ.
ಚಳಿಗಾಲದಲ್ಲಿ ಸಂಗ್ರಹ ಕಡಿಮೆ: ಮೈಸೂರು ಜಿಲ್ಲೆಯಲ್ಲಿ ಪ್ರತಿನಿತ್ಯ ೬.೫೦ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಮಳೆಗಾಲದಲ್ಲಿ ೭.೫೦ರಿಂದ ೮ ಲಕ್ಷ ರೂ. ಸಂಗ್ರಹವಾಗಲಿದೆ. ಈಗ ಚಳಿಗಾಲವಾಗಿರುವ ಕಾರಣ ಸಹಜವಾಗಿ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಲ್ಲಿ ಇಳಿಮುಖವಾಗಿದೆ. ಏಪ್ರಿಲ್- ಮೇ ತಿಂಗಳಿನಲ್ಲಿ ಮತ್ತಷ್ಟು ಇಳಿಕೆಯಾಗಿ ೬ ಲಕ್ಷ ಲೀಟರ್ ಸಂಗ್ರಹವಾಗಲಿದೆ. ಹಾಲಿ ೬.೫೦ ಲಕ್ಷ ಲೀ. ಹಾಲು ಸಂಗ್ರಹದಲ್ಲಿ ೨.೮೦ ಲಕ್ಷ ಲೀಟರ್ ಮಾರಾಟ, ೬೦ ಸಾವಿರ ಲೀಟರ್ ಮೊಸರು, ೧೦ ಸಾವಿರ ಲೀಟರ್ ಉಪ ಉತ್ಪನ್ನಗಳಿಗೆ ಬಳಕೆ, ಮದರ್ ಡೇರಿ, ಚನ್ನರಾಯಪಟ್ಟಣ ಡೇರಿಗೆ ೧ ಲಕ್ಷ ಲೀಟರ್ ಕಳುಹಿಸಿದರೆ, ಉಳಿದ ಹಾಲನ್ನು ಶಾಲಾ ಮಕ್ಕಳ ಕ್ಷೀರಭಾಗ್ಯಕ್ಕಾಗಿ ಪೌಡರ್ ಆಗಿ ಪರಿವರ್ತನೆ ಮಾಡಲಾಗುತ್ತದೆ.
ಮೈಸೂರು ಜಿಲ್ಲೆಯ ಹಾಲು ಉತ್ಪಾದಕರಿಗೆ ಸರ್ಕಾರದಿಂದ ಪ್ರತಿ ಲೀಟರ್‌ಗೆ ಕೊಡುವ ೫ ರೂ. ಪ್ರೋತ್ಸಾಹಧನ ಮೂರು ತಿಂಗಳಿನಿಂದ ಬಿಡುಗಡೆಯಾಗಿಲ್ಲ. ಅಂದಾಜು ೩೦ ಕೋಟಿ ರೂ. ಬಿಡುಗಡೆಯಾಗಬೇಕಿದ್ದು, ಉತ್ಪಾದಕರ ಖಾತೆಗೆ ನೇರವಾಗಿ ಜಮಾವಣೆಯಾಗಲಿದೆ. ಇತ್ತೀಚೆಗೆ ಹೆಚ್ಚಿಸಿದ ಹಾಲಿನ ದರದಲ್ಲಿ ೨ ರೂ. ಸೇರಿ ಈಗ ಮೈಮುಲ್‌ನಿಂದ ೩೨ ರೂ. ಕೊಡಲಾಗುತ್ತಿದೆ. ಪ್ರೋತ್ಸಾಹಧನ ಸೇರಿದಂತೆ ಲೀಟರ್‌ಗೆ ೩೭ ರೂ. ದೊರೆಯಲಿದೆ.
-ವಿಜಯಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಮೈಮುಲ್.
————-
ಹಾಲಿನ ಖರೀದಿ ದರವನ್ನು ೪೦ ರೂ. ನಿಗದಿಪಡಿಸಿದರೂ ರೈತರಿಗೆ ನಷ್ಟವಾಗಲಿದೆ. ಹಸುಗಳಿಗೆ ಮೇವು, ಹಿಡಿಯ ಮೊದಲಾದ ತಿಂಡಿಗಳನ್ನು ಕೊಡುವುದರಿಂದ ಖರ್ಚು ಜಾಸ್ತಿಯಾಗಲಿದೆ. ಕೂಲಿ ಮಾಡುವವನಿ ಗೂ ದಿನಕ್ಕೆ ೬೦೦ ರೂ. ದೊರೆಯಲಿದೆ. ಐದು ಹಸುಗಳನ್ನು ಸಾಕಿ ಡೇರಿಗೆ ೨೦ ಲೀಟರ್ ಹಾಕಿದರೂ ಯಾವುದಕ್ಕೂ ಸಾಕಾಗುತ್ತಿಲ್ಲ.
-ಮಹದೇವಮ್ಮ, ಹಾಲು ಉತ್ಪಾದಕರು, ಜಯಪುರ.
ಮಂಡ್ಯದಲ್ಲೂ ಕಾಯುವ ಸಮಯ
ಹೇಮಂತ್‌ಕುಮಾರ್
ಮಂಡ್ಯ: ಜಿಲ್ಲೆಯ ೧೨೭೪ ಹಾಲು ಉತ್ಪಾದಕರ ಸಹಕಾರಸಂಘಗಳ(ಡೇರಿಗಳು) ಸುಮಾರು ೧,೦೨,೦೦೦ ಉತ್ಪಾದಕರ ಪ್ರೋತ್ಸಾಹ ಧನವೂ ೩೫ ಕೋಟಿ ರೂ.ಗಳಷ್ಟು ಬಾಕಿಯಿದೆ.
ಹಾಲು ಉತ್ಪಾದಕ ಸದಸ್ಯರಿಗೆ ಪ್ರತಿ ೧೦ ದಿನಗಳಿಗೊಮ್ಮೆ ಅವರು ಹಾಕಿದ ಹಾಲಿನ ಪ್ರಮಾಣಕ್ಕನುಗುಣವಾಗಿ ಪ್ರೋತ್ಸಾಹ ಧನ ಸುಮಾರು ೩೦ ಕೋಟಿ ರೂ.ಗಳನ್ನು ಪಾವತಿಸುತ್ತ ಬಂದಿದೆ. ರಾಜ್ಯದ ೧೬ ಹಾಲು ಒಕ್ಕೂಟಗಳಲ್ಲಿ ೪ನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ಮೈಸೂರು ವಿಭಾಗದಲ್ಲಿಯೇ ರೈತರ ಪೇಮೆಂಟ್ ಬಾಕಿ ಉಳಿಸಿಕೊಳ್ಳದೆ ಒಕ್ಕೂಟದಿಂದಲೇ ಸಕಾಲಕ್ಕೆ ಬಿಲ್ ಪಾವತಿಸುತ್ತಿರುವುದನ್ನು ಕಾಣಬಹುದು.
ಆದರೆ ಪ್ರಸ್ತುತ ಸರ್ಕಾರದ ಪ್ರೋತ್ಸಾಹ ಧನ ಸೇರಿ ಪ್ರತಿ ಹಾಲು ಉತ್ಪಾದಕರಿಗೆ ಸರಿಸುಮಾರು ಲೀ.ಹಾಲಿಗೆ ೩೨ ರೂ. ದೊರಕುತ್ತಿದ್ದು, ಇವರಿಗೆ ಸೆಪ್ಟಂಬರ್‌ನಿಂದ ಪ್ರೋತ್ಸಾಹಧನ ಬರಬೇಕಾಗಿದೆ.
ಮತ್ತೊಂದು ವಿಶೇಷವೆಂದರೆ ಗೆಜ್ಜಲಗೆರೆಯ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್) ಡೇರಿಯಲ್ಲಿ ಈ ಹಿಂದೆ ಟನ್‌ಗಳ ಲೆಕ್ಕದಲ್ಲಿ ಹಾಲಿನ ಪುಡಿ ಉಳಿದುಹೋಗಿತ್ತು. ಈಗ ಕೋವಿಡ್ ಕಾರ್ಮೋಡ ಕಳೆದ ಬಳಿಕ ಮನ್‌ಮುಲ್‌ನ ಹಾಲು, ತುಪ್ಪ, ಮೊಸರು, ಬೆಣ್ಣೆ ಸೇರಿದಂತೆ ಅನೇಕ ಉತ್ಪನ್ನಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚಾಗಿದೆ. ೮.೫ ಟನ್‌ನಷ್ಟು ಹಾಲಿನ ಪೌಡರ್ ನಮಗೇ ಸಾಲುತ್ತಿಲ್ಲ ಎನ್ನುವ ಮಟ್ಟಕ್ಕೆ ಬಂದಿರುವ ಮನ್‌ಮುಲ್, ಬರುವ ಆದಾಯದಲ್ಲಿ ಹೆಚ್ಚಿನ ಭಾಗವನ್ನು ಹಾಲು ಉತ್ಪಾದಕರಿಗೇ ಹಲವಾರು ರೀತಿಯಲ್ಲಿ ನೆರವಾಗುತ್ತಿರುವುದನ್ನು ಕಾಣಬಹುದು.
ಕೋವಿಡ್ ನಂತರದಲ್ಲಿ ಕ್ಷೀರೋದ್ಯಮ ಚೇತರಿಸಿಕೊಂಡಿದ್ದಲ್ಲದೆ, ಹೈನುಗಾರರಿಗೂ ಉತ್ತಮ ದರ ಸಿಗುತ್ತಿದೆ. ಬಾಕಿಯನ್ನೂ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. ಕೆಲವೊಮ್ಮೆ ಸರ್ಕಾರದಿಂದ ಬರುವ ಭಾಗದವರೆಗೆ ನಾವು ಕಾಯದೇ ಒಕ್ಕೂಟದಿಂದಲೇ ಬಾಕಿ ನೀಡಿ ನಂತರ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಪ್ರೋತ್ಸಾಹಧನವನ್ನು ನೇರವಾಗಿ ಉತ್ಪಾದಕರಿಗೆ ಹಾಕಲಿದೆ.
-ಬಿ.ಆರ್.ರಾಮಚಂದ್ರ, ಅಧ್ಯಕ್ಷರು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ.
ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುತ್ತ ಬಂದಿದ್ದೇವೆ. ಮನ್‌ಮುಲ್ ನಮಗೆ ಒಂದು ವಾರವೂ ಪೇಮೆಂಟ್ ಬಾಕಿ ಉಳಿಸಿಕೊಂಡಿಲ್ಲ. ಸರ್ಕಾರದ ಪ್ರೋತ್ಸಾಹ ಧನ ಮತ್ತು ಡೇರಿ ನೀಡುವ ದರ ಸೇರಿ ಸದ್ಯಕ್ಕೆ ಲೀಟರ್ ಹಾಲಿಗೆ ೩ ೨ ರೂ.ಗಳಿಗೂ ಹೆಚ್ಚಿನ ದರ ಸಿಗುತ್ತಿದೆ. ಹೈನುಗಾರಿಕೆ ಉಪಕಸುಬಾಗಿ ರೈತರ ಕೈ ಹಿಡಿದಿದೆ.
-ಕುಮಾರ, ಹೊಸಬೂದನೂರು. ಮಂಡ್ಯ ತಾಲ್ಲೂಕು.
ಚಾ.ನಗರದಲ್ಲೂ ೩ ತಿಂಗಳಿಂದ ಆಗಿಲ್ಲ
ಪ್ರಸಾದ್ ಲಕ್ಕೂರು
ಚಾಮರಾಜನಗರ: ಜಿಲ್ಲೆಯ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರವು ಸೆಪ್ಟೆಂಬರ್‌ನಿಂದ ಮೂರು ತಿಂಗಳ ನೀಡುವುದು ಬಾಕಿಯಿದೆ.
ಜಿಲ್ಲೆಯಲ್ಲಿ ಒಟ್ಟು ೪೬೫ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ೩೨ ಸಾವಿರ ಜನರು ಸಂಘಗಳಿಗೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಸರ್ಕಾರ ನೀಡುವ ಹಾಲಿನ ಪ್ರೋತ್ಸಾಹಧನ ೫ ರೂ. ಬಾಬ್ತು ಈ ಹಾಲು ಸರಬರಾಜುದಾರರಿಗೆ ಪ್ರತಿ ತಿಂಗಳು ೨.೮ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ನೀಡುತ್ತದೆ. ಪಶುಪಾಲನ ಇಲಾಖೆಯ ಮೂಲಕ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗುತ್ತಿದೆ. ಎಸ್‌ಎನ್‌ಎಫ್ ೮.೫ ಅಂಶವಿರುವ ಲೀಟರ್ ಹಾಲಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಜಿಲ್ಲೆಯ ೩೨ ಸಾವಿರ ಹಾಲು ಸರಬರಾಜುದಾರರು ಇದರ ಫಲಾನುಭವಿಗಳು. ೬೫ ಸಂಘಗಳಿಂದ ಪ್ರತಿದಿನ ೨.೧೦ ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿದಿನ ೪೦ ಸಾವಿರ ಲೀ. ಹಾಲು, ೯ ಸಾವಿರ ಲೀ. ಮೊಸರು ಹಾಗೂ ದೇಶದ ವಿವಿಧ ಭಾಗಗಳಿಗೆ ೮೦ ಸಾವಿರ ಲೀ. ಯುಎಚ್‌ಟಿ ಹಾಲು ಮಾರಾಟ ಮಾಡಲಾಗುತ್ತಿದೆ. ತಮಿಳುನಾಡಿನ ಕೊಯಮತ್ತೂರು, ನೀಲಗಿರಿ ಜಿಲ್ಲೆಗಳಲ್ಲಿ ೧೦ ಸಾವಿರ ಲೀ. ಮಾರಾಟ ಆಗುತ್ತಿದೆ. ಸರ್ಕಾರದ ಕ್ಷೀರಭಾಗ್ಯ ಯೋಜನೆಗೆ ಹಾಲಿನ ಪುಡಿ ತಯಾರಿಸಲಾಗುತ್ತಿದೆ.
ಚಾಮುಲ್ ೨ ತಿಂಗಳಲ್ಲಿ ೨ ಬಾರಿ ಲೀಟರ್ ಹಾಲಿನ ದರವನ್ನು ೪ ರೂ. ಹೆಚ್ಚಳ ಮಾಡಿದೆ. ಆ ಹಣವು ಹಾಲು ಸರಬರಾಜುದಾರರ ಖಾತೆ ಹೋಗುತ್ತಿದೆ. ಸರ್ಕಾರದಿಂದ ೧ ತಿಂಗಳ ಪ್ರೋತ್ಸಾಹಧನ ಮಾತ್ರ ಬಂದಿಲ್ಲ. ಅಕ್ಟೋಬರ್, ನವೆಂಬರ್ ತಿಂಗಳ ಬಾಕಿಯೂ ನೀಡಲಾಗುತ್ತದೆ.
– ರಾಜಶೇಖರಮೂರ್ತಿ, ಚಾಮುಲ್, ವ್ಯವಸ್ಥಾಪಕ ನಿರ್ದೇಶಕರು.
ರಾಜ್ಯ ಸರ್ಕಾರ ಮತ್ತು ಹಾಲು ಒಕ್ಕೂಟಗಳು ಸಮನ್ವಯತೆ ಸಾಧಿಸಿ ವಿಳಂಬ ಮಾಡದೆ ಕಾಲ ಕಾಲಕ್ಕೆ ಹಾಲಿನ ಪ್ರೋತ್ಸಾಹಧನ ನೀಡಬೇಕು. ತಾಂತ್ರಿಕ ಹಾಗೂ ಇತರೆ ಕುಂಟು ನೆಪಗಳನ್ನು ಹೇಳಬಾರದು. ವಿಳಂಬದಿಂದ ಹಾಲು ಸರಬರಾಜುದಾರರಿಗೆ ಜೀವನ ನಿರ್ವಹಣೆಗೆ ತೊಂದರೆಯಾಗಲಿದೆ.
-ಬಿ.ಕೆ.ರವಿಕುಮಾರ್, ಅಧ್ಯಕ್ಷರು, ಬಿ.ಜಿ.ಕಾಲೋನಿ ಹಾಲಿನ ಡೇರಿ.
ಕೊಡಗಿನಲ್ಲೂ ಕಾಯುವ ಸಮಯ
ಹಾಸನ ಜಿಲ್ಲಾ ಹಾಲು ಒಕ್ಕೂಟದ ಭಾಗವಾಗಿರುವ ಕೊಡಗು ಜಿಲ್ಲೆಯಲ್ಲೂ ಮೂರು ತಿಂಗಳ ಬಾಕಿಯಿದೆ. ಸೆಪ್ಟಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಬಾಕಿ ಸರ್ಕಾರದಿಂದ ಬರಬೇಕಾಗಿದೆ.
ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ೩೮. ಅಂದಾಜು ರೈತರ ಸಂಖ್ಯೆ ೨,೭೦೦. ನಿತ್ಯ ೫೦ ಸಾವಿರ ಲೀಟರ್ ಹಾಲು ಜಿಲ್ಲೆಯಿಂದ ಉತ್ಪಾದನೆಯಾಗುತ್ತಿದೆ, ಲೀಟರ್ ದರ ೩೨ ರೂ.ಗಳನ್ನು ನೀಡಲಾಗುತ್ತಿದ್ದು, ನಿತ್ಯದ ಪ್ರೋತ್ಸಾಹ ಧನ ೭.೫೦ ಲಕ್ಷ ರೂ.ವರೆಗೆ ಮೂರು ತಿಂಗಳಿಗೆ ೨೨ರಿಂದ ೨೩ ಲಕ್ಷ ರೂ. ಬಾಕಿಯಿದೆ ಎನ್ನುವುದು ಹಾಲು ಒಕ್ಕೂಟದ ನಿರ್ದೇಶಕ ಹೇಮಂತ್‌ಕುಮಾರ್ ವಿವರಣೆ.
ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…
ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…
ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…
ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…
ಪಂಜುಗಂಗೊಳ್ಳಿ ಸಮಾಜದಿಂದ ಪರಿತ್ಯಕ್ತರಾದ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ ಆನಂದ ಗ್ರಾಮ ಮಹಾರಾಷ್ಟ್ರದ ಬೀಡ್‌ನ ಜಿಲ್ಲಾ ಆಸ್ಪತ್ರೆಯ ರಕ್ತದ ಬ್ಯಾಂಕಿನಲ್ಲಿ…