ಜಿಲ್ಲೆಗಳು

ಹಲ ತಂಗುದಾಣಗಳಿಗೆ ನಿರ್ವಹಣೆ ಕೊರತೆ

ಬಸ್‌ಗಳೇ ಕೆಲವೆಡೆ ನಿಲ್ಲೋಲ್ಲ: ಕಸದಿಂದ ಜನರೂ ಬಹಳ ಕಡೆ ಬರೋಲ್ಲ !

ವರದಿ: ಗಿರೀಶ್ ಹುಣಸೂರು

ಮೈಸೂರು: ನಗರದ ಊಟಿ ರಸ್ತೆಯಲ್ಲಿ ಜೆಎಸ್‌ಎಸ್ ಕಾಲೇಜು ಬಳಿ ನಿರ್ಮಿಸಿದ್ದ ಬಸ್ ತಂಗುದಾಣದ ಗೋಪುರ ಶೈಲಿ ವಿವಾದಕ್ಕೀಡಾಗಿ ಬಿಜೆಪಿಯ ಸಂಸದ-ಶಾಸಕರ ನಡುವೆಯೇ ತೀವ್ರ ತಿಕ್ಕಾಟ ನಡೆದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಬಸ್ ತಂಗುದಾಣಗಳು ಜನ ಬಳಕೆಗೆ ಯೋಗ್ಯವಾಗಿವೆಯೇ ಎಂದು ಹುಡುಕಲು ಹೊರಟಾಗ ನಗರದ ಬಹಳಷ್ಟು ಬಸ್ ತಂಗುದಾಣಗಳು ಅವ್ಯವಸ್ಥೆಯ ಆಗರವಾಗಿರುವುದು ಕಂಡುಬಂದಿದೆ. ಬಹುತೇಕ ಬಸ್ ತಂಗುದಾಣಗಳಲ್ಲಿ ಜನರು ಮೂಗು ಮುಚ್ಚಿಕೊಂಡು ನಿಲ್ಲಲಾಗದೆ, ಈ ತಂಗುದಾಣಗಳನ್ನೇ ತ್ಯಜಿಸಿ ಅನತಿ ದೂರದಲ್ಲಿ ನಿಂತು ಬಸ್ ಹತ್ತಿ-ಇಳಿಯುವುದನ್ನು ಕಾಣಬಹುದು.

ಮೈಸೂರು-ಮಾನಂದವಾಡಿ ರಸ್ತೆಯ ಎನ್‌ಐಇ ಕಾಲೇಜು ಬಳಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವತಿಯಿಂದ ನಿರ್ಮಿಸಲಾಗಿರುವ ಬಸ್ ತಂಗುದಾಣದ ಬಳಿ ನಗರ ಸಾರಿಗೆ ಬಸ್‌ಗಳು ನಿಲ್ಲುವುದೇ ಇಲ್ಲ. ಸಿಲ್ಕ್ ಫ್ಯಾಕ್ಟರಿ ಬಳಿ ನಿಲ್ಲುವ ನಗರ ಸಾರಿಗೆ ಬಸ್ ಇಲ್ಲಿ ನಿಲುಗಡೆ ಕೊಡದೆ ಮುಂದೆ ಹೋಗಿ ಅಂಚೆ ಕಚೇರಿ ಬಳಿ ನಿಲುಗಡೆ ಕೊಡಲಾಗುತ್ತಿದೆ. ಹೀಗಾಗಿ ಈ ಬಸ್ ತಂಗುದಾಣ ಜನ ಬಳಕೆಗೆ ಇಲ್ಲದಂತಾಗಿದೆ. ಜನ ಕೂರಲು ಹಾಕಿದ್ದ ಗ್ರಾನೈಟ್ ಕಲ್ಲುಗಳು ಮಾಯವಾಗಿದೆ. ವಿದ್ಯುತ್ ದೀಪಗಳ ಸಂಪರ್ಕಕ್ಕಾಗಿ ಅಳವಡಿಸಿರುವ ಬೋರ್ಡ್ ಕಿತ್ತು ಬಂದಿದ್ದು, ವೈರ್‌ಗಳು ಅಪಾಯಕ್ಕೆ ಆಹ್ವಾನ ಕೊಡುತ್ತಿವೆ.

ವಿದ್ಯುತ್ ಸಂಪರ್ಕದ ವೈಯರ್‌ಗಳು ಆಚೆ ಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಕೃಷ್ಣಮೂರ್ತಿಪುರಂನ ಅಂಬೇಡ್ಕರ್ ರಸ್ತೆಯ ೬ನೇ ಅಡ್ಡರಸ್ತೆ ಬಳಿ ಮುಡಾ ನಿರ್ಮಿಸಿರುವ ಬಸ್ ತಂಗುದಾಣದಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಇಲ್ಲಿ ಸ್ವಚ್ಛತೆಯೂ ಇಲ್ಲ. ಜನ ಕುಳಿತು ಕೊಳ್ಳಲು ಹಾಕಿದ್ದ ಗ್ರಾನೈಟ್ ಕಲ್ಲುಗಳೂ ಇಲ್ಲ. ಹೀಗಾಗಿ ಇಲ್ಲಿಗೆ ಜನರು ಬರುವುದೇ ಇಲ್ಲ. ತಂಗುದಾಣಕ್ಕೆ ಹಾಕಿದ್ದ ಫಲಕಗಳೆಲ್ಲ ಕಿತ್ತು ಹೋಗಿ ಅಸ್ತಿಪಂಜರದಂತೆ ಕಾಣಿಸುತ್ತಿದೆ.

ಶ್ರೀರಾಂಪುರ ೨ನೇ ಹಂತದ ಕಾವೇರಿ ವೃತ್ತದ ಬಳಿ ನಗರಪಾಲಿಕೆ ವತಿಯಿಂದ ನಿರ್ಮಿಸಲಾಗಿರುವ ಬಸ್ ತಂಗುದಾಣ ಹೊರಗಿನಿಂದ ನೋಡಲು ಚೆನ್ನಾಗಿ ಕಂಡರೂ ಒಳಹೊಕ್ಕರೆ ಕಾಲಿಡಲು ಜಾಗವಿಲ್ಲದಂತೆ ಅಲ್ಲಲ್ಲಿ ಕಸದ ರಾಶಿಯೇ ಬಿದ್ದಿದೆ. ಹೀಗಾಗಿ ಜನರು ಬಸ್ ತಂಗುದಾಣದ ಅನತಿ ದೂರದಲ್ಲಿರುವ ಮರದ ಕೆಳಗೆ ನಿಂತು ಬಸ್‌ಗಾಗಿ ಕಾಯುತ್ತಾರೆ.

ಮೈಸೂರಿನ ವಿವೇಕಾನಂದ ನಗರದ ವಿವೇಕಾನಂದ ವೃತ್ತದಲ್ಲಿನ ಬಸ್ ತಂಗುದಾಣ ಕೆಡವಿ ೩ ತಿಂಗಳಾದರೂ ನಿರ್ಮಾಣ ಕಾರ್ಯ ಆರಂಭಿಸಿಲ್ಲ. ಕೆಡವಿದ ಅವಶೇಷಗಳು ಅಲ್ಲೇ ಬಿದ್ದಿವೆ.

ಚಾಮರಾಜ ಜೋಡಿ ರಸ್ತೆಯ ಲಕ್ಷ್ಮೀ ಚಿತ್ರಮಂದಿರ ಎದುರಿನ ತಂಗುದಾಣ ಕೂಡ ಅವ್ಯವಸ್ಥೆಯ ಆಗರವಾಗಿದೆ. ಕ್ಷೇತ್ರದ ಅಲ್ಲಲ್ಲಿ ಬೆರಳೆಣಿಕೆಯ ತಂಗುದಾಣಗಳು ಉತ್ತಮ ನಿರ್ವಹಣೆಯಿಂದ ಜನ ಬಳಕೆಗೆ ಯೋಗ್ಯವಾಗಿದ್ದು, ಬಹುತೇಕ ತಂಗುದಾಣಗಳು ಅವ್ಯವಸ್ಥೆಯಿಂದ ಕೂಡಿವೆ.

ಹೊಸ ತಾಣ ಯಾವಾಗ?

ಮೈಸೂರು: ವಿವೇಕಾನಂದ ನಗರದ ವಿವೇಕಾನಂದ ವೃತ್ತದಲ್ಲಿ ೩ ತಿಂಗಳ ಹಿಂದೆ ಬಸ್ ತಂಗುದಾಣವನ್ನು ಒಡೆದು ಹಾಕಿ ಹೊಸದಾಗಿ ಕಟ್ಟುವ ಕೆಲಸವಾಗಿಲ್ಲ. ಬಲ್ಲಾಳ್ ವೃತ್ತದ ಬುದ್ಧ ಸ್ತೂಪದ ಬಳಿಯ ಹಾಪ್‌ಕಾಮ್ಸ್ ಎದುರು ಇದ್ದ ಬಸ್ ತಂಗುದಾಣವನ್ನು ಒಡೆದು ಹಾಕಲಾಗಿದೆ. ಆದರೆ, ಮತ್ತೆ ಅಲ್ಲಿ ತಂಗುದಾಣ ನಿರ್ಮಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಜನರು ಅಲ್ಲಿನ ಮರದ ಕೆಳಗೆ ಬಸ್‌ಗಾಗಿ ಕಾಯಬೇಕಾಗಿದೆ.

ವಿದ್ಯಾರ್ಥಿಗಳಿಗಾಗಿ ಇಲ್ಲಿ ಬಸ್ ಶೆಲ್ಟರ್ ಕಟ್ಟಿದ್ದಾರೆ. ಆದರೆ, ಬಸ್‌ಗಳೂ ನಿಲ್ಲಿಸಲ್ಲ. ನಿರ್ವಹಣೆಯೂ ಸರಿ ಇಲ್ಲದ ಕಾರಣ ಪಾಳು ಬಿದ್ದಿದೆ. -ವಿಷಕಂಠಪ್ಪ, ಹಣ್ಣು ವ್ಯಾಪಾರಿ

ಇಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ. ಮುಖ್ಯವಾಗಿ ಇಲ್ಲಿ ಕುಳಿತು ಕೊಳ್ಳಲು ಆಸನಗಳೇ ಇಲ್ಲ. ಕಸ ತುಂಬಿರುವುದರಿಂದ ಇಲ್ಲಿಗೆ ಬರಲು ಜನ ಹಿಂದೇಟು ಹಾಕುತ್ತಾರೆ. -ಯಶವಂತ್, ವಿದ್ಯಾರ್ಥಿ

ಇಲ್ಲಿ ಕ್ಲೀನ್ ಇಲ್ದಿರೋದ್ರಿಂದ ಜನರು ಇಲ್ಲಿ ಕೂರಲ್ಲ. ದೂರದಲ್ಲಿರುವ ಮರದ ಕೆಳಗೆ ನಿಂತು ಬಸ್‌ಗಾಗಿ ಕಾಯಬೇಕಾಗಿದೆ. -ಗದಿಗೆಪ್ಪ, ಕೂಲಿ ಕಾರ್ಮಿಕ

ಹಿರಿಯ ನಾಗರಿಕರು ಇಲ್ಲಿ ಒಂದಷ್ಟು ಹೊತ್ತು ಕುಳಿತು ವಿರಮಿಸುತ್ತಿದ್ದೊ. ಆದರೆ, ೩ ತಿಂಗಳ ಹಿಂದೆ ತಂಗುದಾಣ ಒಡೆದು ಹಾಕಿ ಇನ್ನೂ ಕಟ್ಟಿಲ್ಲ. -ಜೆ.ಶೇಖರ್, ಶ್ರೀರಾಂಪುರ ನಿವಾಸಿ

 

 

 

 

 

 

 

 

 

andolana

Recent Posts

ಸಫಾರಿ ಬಂದ್; ವರ್ಷಾಂತ್ಯದಲ್ಲಿ ರೆಸಾರ್ಟ್‌ಗಳಿಗೆ ನಷ್ಟ

ಮಂಜು ಕೋಟೆ ಹೊಸ ವರ್ಷದ ಸನಿಹದಲ್ಲಿ ತುಂಬಿ ತುಳುಕುತ್ತಿದ್ದ ರೆಸಾರ್ಟ್‌ಗಳು ಖಾಲಿ ಖಾಲಿ ಎಚ್.ಡಿ.ಕೋಟೆ: ರೈತರ ಮೇಲೆ ನಿರಂತರ ಹುಲಿ…

4 mins ago

ಅಂಧ ವಿದ್ಯಾರ್ಥಿಗಳಿಗೆ ಡಿಜಿಟಲ್ ದೊಂದಿ!

ಗಿರೀಶ್ ಹುಣಸೂರು ಮೈಸೂರು: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಬ್ಬಾಗಿಲು ತೆರೆಯುವ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆ-೧ ೨೦೨೬ರ -ಬ್ರವರಿ…

8 mins ago

ಮೈಸೂರು ಸೇರಿದಂತೆ 4ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮೂನ್ಸೂಚನೆ

ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…

8 hours ago

ಕೇಂದ್ರ ಬಜೆಟ್‌ | ನಾಳೆ ಆರ್ಥಿಕ ತಜ್ಞರ ಭೇಟಿ ಮಾಡಲಿರುವ ಮೋದಿ

ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…

9 hours ago

ಗಗನಚುಕ್ಕಿ | ಕಾಡಾನೆ ದಾಳಿಗೆ ಸ್ಟೀಲ್‌ ಕಂಬಿಗಳು ನಾಶ

ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…

9 hours ago