ಮಂಡ್ಯ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ ನಾಳೆ, ನಾಡಿದ್ದು 2 ದಿನಗಳ ಬೃಹತ್ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ಸುಮಾರು 150ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಭಾಗಿಯಾಗಲಿವೆ.

ಈ ಬಗ್ಗೆ ಸ್ವತಃ ಕೇಂದ್ರ ಸಚಿವರೇ ಮಾಹಿತಿ ನೀಡಿದ್ದು; ದೇಶದ ಉದ್ದಗಲಕ್ಕೂ ಇರುವ 150ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳಕ್ಕೆ ಬರಲಿದ್ದು, ಈ ಭಾಗದ ಮೂರು ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಕೊಡಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಮಂಡ್ಯ ಟೂ ಇಂಡಿಯಾ ಎನ್ನುವ ಘೋಷವಾಕ್ಯದೊಂದಿಗೆ ಉದ್ಯೋಗ ಮೇಳ ನಡೆಯುತ್ತಿದ್ದು, ಮಂಡ್ಯದ ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು ಆಗಲಿದೆ. ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವುದು ನನ್ನ ಮಹದಾಸೆ ಆಗಿದ್ದು, ಈ ಮೂಲಕ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ನಾಳೆ ಹಾಗೂ ನಾಡಿದ್ದು (ಅಕ್ಟೋಬರ್ 18-19) ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಆಸಕ್ತ ಯುವಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.

ಪ್ರತಿದಿನವೂ ನನ್ನ ಮನೆಗೆ ಬರುವ ಅಸಂಖ್ಯಾತ ನಿರುದ್ಯೋಗಿ ಯುವ ಜನರು ಉದ್ಯೋಗ ಕೊಡಿಸಿ ಎಂದು ಕೇಳುತ್ತಾರೆ. ಅವರ ತಂದೆತಾಯಿ ಮಕ್ಕಳ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಂಡಿದ್ದಾರೆ. ನಿತ್ಯವೂ ನೂರಾರು ಜನರು ನನ್ನ ಮನೆಯ ಬಳಿಗೆ ಬಂದಾಗ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಆದರೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಉದ್ಯೋಗ ಮೇಳದ ಮೂಲಕ ಸಾವಿರಾರು ಸಂಖ್ಯೆಯಷ್ಟು ಯುವ ಜನರಿಗೆ ಕೆಲಸ ಸಿಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಾನ್ವಿತ ಯುವ ಜನರಿಗೆ ಕೊರತೆ ಇಲ್ಲ. ಉತ್ತಮ ವಿದ್ಯಾ ಸಂಸ್ಥೆಗಳು ಇದ್ದು, ಪ್ರತಿವರ್ಷ ಸಾಕಷ್ಟು ಯುವಜನರು ಉತ್ತೀರ್ಣರಾಗಿ ಕಾಲೇಜುಗಳಿಂದ ಹೊರಗೆ ಬರುತ್ತಿದ್ದಾರೆ. ಇವರಿಗೆ ಆದಷ್ಟು ಉದ್ಯೋಗಾವಕಾಶ ಕಲ್ಪಿಸಬೇಕು ಎನ್ನುವುದು ನನ್ನ ಸಂಕಲ್ಪವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ (BHEL), ಜಿಂದಾಲ್ ಸ್ಟೀಲ್ ಸೇರಿದಂತೆ 150ಕ್ಕೂ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ನೇರ ನೇಮಕಾತಿ ಮಾಡಿಕೊಳ್ಳುತ್ತಿವೆ. ದೇಶಾದ್ಯಂತ ಉದ್ಯೋಗ ಅವಕಾಶಗಳು ಲಭ್ಯ ಇದ್ದು, ಈ ಅವಕಾಶವನ್ನು ಯುವ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಕೋರಿದ್ದಾರೆ.

ನನ್ನ ಸಚಿವಾಲಯದ ಉನ್ನತ ಅಧಿಕಾರಿಗಳು, ಮಂಡ್ಯ ಜಿಲ್ಲೆಯ ಉನ್ನತ ಹಾಗೂ ಎಲ್ಲಾ ಶ್ರೇಣಿಯ ಅಧಿಕಾರಿಗಳು ಉದ್ಯೋಗ ಮೇಳ ಯಶಸ್ಸಿಗೆ ಕೆಲಸ ಮಾಡುತ್ತಿದ್ದು, ಉದ್ಯೋಗ ಅರಸಿ ಬರುವ ಅಭ್ಯರ್ಥಿಗಳಿಗೆ ನಮ್ಮ ಸ್ವಯಂ ಸೇವಕರು, ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಂಪನಿಗಳ ಅಧಿಕಾರಿಗಳು ಅಭ್ಯರ್ಥಿಗಳ ವಿವರಗಳನ್ನು ಗಮನಿಸಿದ ನಂತರ ಅವರಿಗೆ ಸೂಕ್ತವಾದ, ಅರ್ಹವಾದ ಹುದ್ದೆಯನ್ನು ನೀಡುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಈ…

9 mins ago

ಚಾ. ಬೆಟ್ಟಕ್ಕೆ ಗಂಡಾಂತರ ತರುವ ಕಟ್ಟಡಗಳ ನಿರ್ಮಾಣ ನಿಲ್ಲಿಸಿ

ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…

19 mins ago

ಚಲನಚಿತ್ರ ವಿಮರ್ಶೆಗಳ ಹೆಸರಿನ ಅನಿಸಿಕೆಗಳೂ ಚಿತ್ರೋದ್ಯಮವೂ

ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…

43 mins ago

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

1 hour ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

3 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

3 hours ago