Categories: ಮಂಡ್ಯ

ಟಿಪ್ಪರ್ ಹರಿದು ರೈತ ಸಾವು; ಪರಿಹಾರಕ್ಕೆ ಆಗ್ರಹಿಸಿ ಮೃತ ಸಂಬಂಧಿಕರ ಪ್ರತಿಭಟನೆ

ಭಾರತೀನಗರ: ರಸ್ತೆ ಕಾಮಗಾರಿಗೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಹರಿದು ರೈತ ಸಂಘದ ಕಾರ್ಯಕರ್ತ ಮೃತಪಟ್ಟಿರುವ ಘಟನೆ ಕರಡಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ರೈತ ನಿಂಗೇಗೌಡ (೫೫) ಮೃತ ದುರ್ದೈವಿ. ಮಂಗಳವಾರ ಬೆಳಿಗ್ಗೆ ೧೦ರ ಸಮಯದಲ್ಲಿ ನಿಂಗೇಗೌಡ ಜಾನುವಾರುಗಳಿಗೆ ತನ್ನ ಟಿವಿಎಸ್ ಮೊಪೆಡ್‌ನಲ್ಲಿ ಮೇವನ್ನು ತೆಗೆದುಕೊಂಡು ಬಂದು ಮನೆಯ ಬಳಿ ಮೊಪೆಡ್ ನಿಲ್ಲಿಸಿ, ಮೇವು ಇಳಿಸುವ ಸಂದರ್ಭ ರಸ್ತೆ ಕಾಮಗಾರಿಗೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಜಲ್ಲಿಯನ್ನು ಕೆಳಗೆ ಸುರಿಯಲು ಹಿಂಬದಿಗೆ ಚಲಿಸುವಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ರೈತ ನಿಂಗೇಗೌಡನ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಅಧಿಕಾರಿ ಆನಂದ್ ಅವರು ರಜೆಯಲ್ಲಿದ್ದ ಕಾರಣ ಮದ್ದೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ವೆಂಕಟೇಗೌಡ ಹಾಗೂ ಶಶಿಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಪರಿಹಾರಕ್ಕಾಗಿ ಪ್ರತಿಭಟನೆ:
ಈ ಅವಘಡಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣವಾಗಿದ್ದು, ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಟಿಪ್ಪರ್ ಮಾಲೀಕ ಸ್ಥಳಕ್ಕೆ ಆಗಮಿಸಿ, ರೈತ ನಿಂಗೇಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಲ್ಲಿಯವರೆಗೂ ಮೃತ ನಿಂಗೇಗೌಡರ ದೇಹವನ್ನು ಸ್ಥಳದಿಂದ ತೆರವುಗೊಳಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಗುತ್ತಿಗೆದಾರರು ಹಾಗೂ ಟಿಪ್ಪರ್ ಮಾಲೀಕರಿಗೆ ದೂರವಾಣಿ ಮೂಲಕ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಗುತ್ತಿಗೆ ಪಡೆದಿದ್ದ ಎಸ್‌ಸಿಸಿ ಕಂಪನಿ ಅಧಿಕಾರಿ ಮೃತನ ಕುಟುಂಬಕ್ಕೆ ತಾತ್ಕಾಲಿಕವಾಗಿ ೨.೫ ಲಕ್ಷ ಪರಿಹಾರ ನೀಡುವುದಾಗಿ ಮತ್ತು ಉಳಿಕೆ ಹಣವನ್ನು ವಿಮೆ ಮೂಲಕ ಕೊಡಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು. ನಂತರ ಮೃತ ದೇಹವನ್ನು ಸ್ಥಳದಿಂದ ತೆರವುಗೊಳಿಸಿ ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಯಿತು.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಿ.ಟಿ. ಮೋಹನ್ ಕುಮಾರ್

ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು ಹೊಸಬೂದನೂರು ಗ್ರಾಮದ ನಾನು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ. (ಎಂಸಿಜೆ) ಮಾಡಿ, 1999ರಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. 1999ರಲ್ಲಿ `ಆಂದೋಲನ' ಪತ್ರಿಕೆಯಲ್ಲಿ ಮೊದಲು ಪೇಜ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದ ಅನುಭವ ಪಡೆದು, 2001ರಲ್ಲಿ `ಆಂದೋಲನ' ಪತ್ರಿಕೆಯಲ್ಲೇ ಜಿಲ್ಲಾ ವರದಿಗಾರನಾದೆ. 2001ರಿಂದ 2008ರವರೆಗೆ ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸಿದ ನಾನು, 2009ರಿಂದ `ಪ್ರಜಾನುಡಿ' ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸಿ, 2011ರಲ್ಲಿ `ವಿಜಯ ವಾಣಿ' ಪತ್ರಿಕೆಯ ಮೈಸೂರು ವಿಭಾಗದ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಿಸಿದೆ. ಸುಮಾರು ಮೂರೂವರೆ ವರ್ಷ ಕೆಲಸ ನಿರ್ವಹಿಸಿ, 2015ರಲ್ಲಿ `ರಾಜ್ಯ ಧರ್ಮ' ಪತ್ರಿಕೆಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸಿದೆ. 2019ರಲ್ಲಿ ಮತ್ತೆ `ಆಂದೋಲನ' ಪತ್ರಿಕೆಯ ಮಂಡ್ಯ ಜಿಲ್ಲಾ ಹಿರಿಯ ವರದಿಗಾರನಾಗಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸವಾಗಿದೆ.

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

8 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

9 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

10 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

10 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

10 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

11 hours ago