ವರದಿ: ಎಂ ಡಿ ಯುನುಸ್
ಮೈಸೂರು: ನಮ್ಮ ಸಂವಿಧಾನದ 21-ಎ ವಿಧಿ ಪ್ರಕಾರ ಶಿಕ್ಷಣ ಮೂಲಭೂತ ಹಕ್ಕು ಆದರೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಹೆಸರು ಹೊತ್ತ ಈ ಬಡಾವಣೆಯ ಮಕ್ಕಳಿಗೆ ಕಲಿಯಲು ಶಾಲೆಯೇ ಇಲ್ಲ. ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆ ಇಲ್ಲ. ಶುದ್ದ ಕುಡಿಯುವ ನೀರಿಲ್ಲ, ರಸ್ತೆಯಂತೂ ಇಲ್ಲವೇ ಇಲ್ಲ, ದಿನವೆಲ್ಲಾ ಹಂದಿಗಳ ಕಾಟ, ರಾತ್ರಿಯಾದರೆ ಚಿರತೆ, ನರಿ ಭೀತಿ. ಈ ಪರಿಸ್ಥಿತಿ ಇರೋದು ಯಾವುದೋ ಕಾಡಂಚಿನ ಗ್ರಾಮದಲ್ಲಲ್ಲ. ಸ್ವಚ್ಛನಗರಿ ಮೈಸೂರಿನ ಬಡಾವಣೆಯೊಂದರ ವ್ಯಥೆಯ ಕಥೆ ಇದು.
ಮೈಸೂರು ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ, ಕಡಕೊಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಾಮುಂಡೇಶ್ವರಿ ನಗರದ ಜೈಭೀಮ್ ಬಡಾವಣೆ ನಿಜಕ್ಕೂ ಜನವಾಸಕ್ಕೆ ಯೋಗ್ಯವಲ್ಲ ಎನ್ನುವಂತಿದೆ. ನಗರದ ಸ್ವಚ್ಛತೆಯನ್ನು ನೋಡಿಕೊಳ್ಳುವ ಪೌರಕಾರ್ಮಿಕರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ದೀಪದ ಬುಡದಲ್ಲಿಯೇ ಕತ್ತಲು ಎಂಬಂತೆ ಈ ಬಡಾವಣೆಯ ಸುತ್ತ ಮುತ್ತ ಬಿಡಾಡಿ ಹಂದಿಗಳೇ ಸ್ವಚ್ಛತೆಯ ಹೊಣೆ ಹೊತ್ತಿವೆ. ಇಲ್ಲಿನ 150ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗದೆ ಚಿಂದಿ ಆಯುತ್ತಿ ದ್ದಾರೆ. ಬಡಾವಣೆಯ ಸುಮಾರು ಐದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಯಾಗಲಿ, ಆಸ್ಪತ್ರೆ ಯಾಗಲಿ ಇಲ್ಲ. ಇಲ್ಲಿಗೆ ಕುಡಿಯಲು ಶುದ್ಧ ನೀರಿಲ್ಲ. ಸಾರಿಗೆ ಸೌಲಭ್ಯವೂ ಸಮರ್ಪಕ ವಾಗಿಲ್ಲ. ಖಾಸಗಿ ವಾಹನದಲ್ಲಿ ಬರ ಬೇಕೆಂದರೂ ಕಚ್ಚಾ ರಸ್ತೆಯಲ್ಲಿಯೇ ಸಾಗಿ ಬರಬೇಕು.
ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ 10 ವರ್ಷಗಳ ಹಿಂದೆ(2013) ಕೊಳಚೆ ನಿರ್ಮೂಲನಾ ಮಂಡಳಿ ಮೂಲಕ ಹಂಚಿಕೆಯಾಗಿರುವ ಇಲ್ಲಿನ ಜಿ-2 ನಮೂನೆಯ ವಸತಿಗೃಹಗಳಲ್ಲಿ ಒಟ್ಟು 576 ಮನೆಗಳಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಈ ಪೈಕಿ 500ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಕಡಕೊಳ ಗ್ರಾಮಪಂಚಾಯಿತಿಯಾಗಿತ್ತು.
ಈಗ ಪಟ್ಟಣ ಪಂಚಾಯಿತಿ ಆಗಿದೆ. ಆದರೆ ಮನೆ ಕಟ್ಟಿಕೊಟ್ಟ ಬಳಿಕ ಇಲ್ಲಿ ಮೂಲ ಸೌಕಯ್ಯ ಕಲ್ಪಿಸಲು ಯಾರೂ ಮುಂದಾಗಲಿಲ್ಲ. 10 ವರ್ಷಗಳ ಹಿಂದೆ ಇವರು ಮನೆ ಸೇರಿಕೊಂಡಾಗ ಇಲ್ಲಿನ ಪರಿಸರ ಹೇಗಿತ್ತೋ ಈಗ ಅದಕ್ಕಿಂತಲೂ ಹೆಚ್ಚು ದಯನೀಯವಾಗಿದೆ. ಇಲ್ಲಿನ ಮಕ್ಕಳು ಕಲಿಯಲು ನಿತ್ಯ ಕನಿಷ್ಠ ಐದು ಕಿಮೀ ಹೋಗಬೇಕು. ಅದು ಕೂಡ ಖಾಸಗಿ ಶಾಲೆಗಳಿಗೆ, ಆದರೆ ಇಲ್ಲಿ ಬಸ್ ವ್ಯವಸ್ಥೆ ತೀರಾ ಕಡಿಮೆ. ಆಟೋಗಳಲ್ಲಿ
ಮಕ್ಕಳನ್ನು ಕಳುಹಿಸಲು ಪ್ರತಿ ತಿಂಗಳು ಸಾವಿರಾರು ರೂ. ಖರ್ಚು ಮಾಡಬೇಕು.
ಹಣವಿದ್ದವರ ಮಕ್ಕಳು ನಿಯಮಿತವಾಗಿ ಶಾಲೆಗೆ ಹೋಗುತ್ತಾರೆ. ಇಲ್ಲದವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೆಚ್ಚಿನವರು ಪೌರಕಾರ್ಮಿಕ ರಾಗಿರುವುದರಿಂದ ಬೆಳ್ಳಂಬೆಳಿಗ್ಗೆ ಕರ್ತವ್ಯಕ್ಕೆ ತೆರಳುತ್ತಾರೆ. ಬಸ್ ಸಿಗದ ಕಾರಣಕ್ಕೆ ಅದೆಷ್ಟೋ ಮಕ್ಕಳು ಶಾಲೆಗೆ ಹೋಗದೆ ಚಿಂದಿ ಆಯುವ ಕೆಲಸಕ್ಕೆ ಹೋಗುತ್ತಾರೆ. ‘ಇದು ನಮ್ಮ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಅಣಕಿಸುವಂತಿದೆ. ಸುಮಾರು 150 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ’ ಎಂದು ಸ್ಥಳೀಯ ಮುಖಂಡರು ‘ಆಂದೋಲನ’ಕ್ಕೆ ತಿಳಿಸಿದ್ದಾರೆ.
ಆಸ್ಪತ್ರೆಯೂ ಇಲ್ಲ: ಶಾಲೆಯೊಂದೇ ಅಲ್ಲ, ಇಲ್ಲಿ ಆಸ್ಪತ್ರೆಯೂ ಇಲ್ಲ. ರಾತ್ರಿ ಸಮಯ ಏನಾದರೂ ಹೆಚ್ಚು ಕಡಿಮೆಯಾದರೆ ತಕ್ಷಣ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ವ್ಯವಸ್ಥೆಯಿಲ್ಲ. ವಯಸ್ಸಾದವರು, ಗರ್ಭಿಣಿಯರು, ದೀರ್ಘ ಕಾಲದ ರೋಗಿಗಳು ಹಾಗೂ ನಿರಂತರ ಚಿಕಿತ್ಸೆ ಅಗತ್ಯವಿರುವ ರೋಗಿಗಳಂತೂ ನರಕಯಾತನೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಮತ್ತೆ ಹೆಚ್ಚಾಗುತ್ತಿರುವ ಕೊರೊನಾ ಸಾಂಕ್ರಾಮಿಕ ಇಲ್ಲಿನ ನಿವಾಸಿಗಳಲ್ಲಿ ಆತಂಕ ತಂದಿದೆ.
ಪೌರಕಾರ್ಮಿಕ ಸಂಘದ ಅಧ್ಯಕ್ಷ ಹೇಳೋದೇನು?
ಶಾಲೆ ಇಲ್ಲದೆ ಶಿಕ್ಷಣದಿಂದ ವಂಚಿತರಾಗಿರುವ ಸುಮಾರು 150 ಮಕ್ಕಳು ಚಿಂದಿ ಆಯಲು ಹೋಗುತ್ತಾರೆ. ಇನ್ನು ಕೆಲವು ಮಕ್ಕಳು ತಮ್ಮ ತಂದೆ ತಾಯಿ ಬೆಳಗಿನ ಜಾವ ಕೆಲಸಕ್ಕೆ ಹೊರಟು ಹೋದರೆ ದೂರ ಹೋಗಬೇಕಾದ ಕಾರಣಕ್ಕೆ ಶಾಲೆಗೆ ಹೋಗದೆ ಅಲ್ಲಿ ಇಲ್ಲಿ ಸುತ್ತಾಡುತ್ತಾರೆ. ಹತ್ತಿರದಲ್ಲಿ ಆಸ್ಪತ್ರೆಯೂ ಇಲ್ಲದೇ ಏನೇ ಅನಾಹುತವಾದರೂ ಬಹಳಷ್ಟು ತೊಂದರೆಯಾಗುತ್ತಿದೆ. ನಮಗೆ ಶಾಲೆ ಮತ್ತು ಆಸ್ಪತ್ರೆ ಬೇಕೇ ಬೇಕು. – ಆರ್.ಹರೀಶ್, ಅಧ್ಯಕ್ಷ, ಪೌರಕಾರ್ಮಿಕರ ಮಹಾಸಂಘ, ಮೈಸೂರು
ಇತಿಹಾಸ ತಜ್ಞ ಪಿ.ವಿ. ನಂಜರಾಜ ಅರಸ್ ಹೇಳಿದ್ದೇನು?
ಇಲ್ಲಿ ಅವ್ಯವಸ್ಥೆ ನೋಡಿ ಅಳು ಬರುತ್ತದೆ… ನಾನು ಮತ್ತು ಕನ್ನಡಪರ ಹೋರಾಟಗಾರ ಅರವಿಂದ್ ಶರ್ಮ ಸ್ಥಳಕ್ಕೆ ಹೋಗಿದ್ದೆವು. ಅಲ್ಲಿನ ಅವ್ಯವಸ್ಥೆ ನೋಡಿದರೆ ಅಳು ಬರುತ್ತದೆ. ಶಾಲೆ, ಆಸ್ಪತ್ರೆ, ನೀರು, ರಸ್ತೆ ಏನೂ ಇಲ್ಲದೇ ಕೆಲವರು ಮನೆ ಖಾಲಿ ಮಾಡಿ ಬೇರೆ ಕಡೆ ಬಾಡಿಗೆಗೆ ಹೋಗಿದ್ದಾರೆ. ಈ ಬಗ್ಗೆ ಜಿಲ್ಲಾ ಮಂತ್ರಿ ಎಚ್.ಸಿ.ಮಹದೇವಪ್ಪ ಅವರ ಜತೆ ಮಾತನಾಡಿದ್ದೇವೆ. ಶಾಸಕ ಜಿ.ಟಿ.ದೇವೇಗೌಡರನ್ನು, ಸಚಿವ ಮಧು ಬಂಗಾರಪ್ಪರನ್ನು ಸಹ ಭೇಟಿ ಮಾಡಿ ಮನವಿ ಪತ್ರ ಕೊಡುತ್ತೇವೆ. ಅಲ್ಲಿನ ಸಮುದಾಯ ಭವನ ಖಾಲಿ ಬಿದ್ದಿದೆ. ಅದೇ ಕಟ್ಟಡದಲ್ಲಿ ಮಾರ್ಚ್ ಒಳಗೆ ಶಾಲೆ ಮತ್ತು ಆರೋಗ್ಯ ಕೇಂದ್ರ ಆರಂಭವಾಗಬೇಕು ಎಂಬುದು ನಮ್ಮ ಪ್ರಯತ್ನ, ಹಿಡಿದ ಕೆಲಸ ಮುಗಿಸುವವರೆಗೂ ಕೈಬಿಡಲ್ಲ.
– ಪ್ರೊ.ಪಿ.ವಿ.ನಂಜರಾಜ ಅರಸ್, ಇತಿಹಾಸ ತಜ್ಞ
ವಿಡಿಯೊ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://youtu.be/kKDVBP6sle8
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…