ಜಿಲ್ಲೆಗಳು

ದಸರೆ ಇವರ ಪಾಲಿಗೆ ಬದುಕು ಕಟ್ಟಿಕೊಳ್ಳುವ ಹಬ್ಬ… 

ಮೈಸೂರು: ಇವರೆಲ್ಲರೂ ಇಷ್ಟು ದಿನ ಎಲ್ಲಿಗೆ ಹೋಗಿದ್ದರು ? ಬೀದಿ ಬೀದಿಗಳಲ್ಲಿ ಮಕ್ಕಳ ಪೀಪಿ, ಬಲೂನು ಊದುತ್ತಾ, ಆಟಿಕೆ ವಸ್ತುಗಳನ್ನು ಪ್ರದರ್ಶಿಸುತ್ತಾ ಮಕ್ಕಳ ಮುಖದಲ್ಲಿ ಮಂದಹಾಸಕ್ಕೆ ಕಾರಣರಾಗುತ್ತಿದ್ದವರು ಕಳೆದ ಎರಡು ವರ್ಷಗಳಿಂದ ಕಾಣದೇ ಹೋಗಿದ್ದರು. ಚಿಕ್ಕವರ ನಗು, ದೊಡ್ಡವರ ಚೌಕಾಶಿಯ ನಡುವೆ ಸಣ್ಣಪುಟ್ಟ ವಸ್ತುಗಳನ್ನು ಮಾರುತ್ತಾ ತಮ್ಮ ಬದುಕಿನ ಬಂಡಿಯನ್ನು ಎಳೆಯುತ್ತಿದ್ದ ಇವರು ಈಗ ಮತ್ತೆ ಕಾಣಿಸಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ ಸಾವಿರಾರು ಸಂಖ್ಯೆಯಲ್ಲಿ.

ಕೊರೊನಾ ಎಂಬ ಮಾಹಾ ಮಾರಿ ಉಳ್ಳವರು,ಇಲ್ಲದವರು ಸೇರಿ ಎಲ್ಲರನ್ನೂ ಬಲಿ ಪಡೆಯುತ್ತಿದ್ದಾಗ ಸರಕಾರ ಬಾಗಿಲು ಮುಚ್ಚಿ ಮನೆಯಲ್ಲಿ ಕೂರಲು ತಿಳಿಸಿತ್ತು. ಆದರೆ ಮನೆಯೇ ಇಲ್ಲದ ಇವರಿಗೆ ಬದುಕಿನ ಬಾಗಿಲೇ ಮುಚ್ಚಿ ಹೋಗಿತ್ತು. ಆ ಕಷ್ಟದ ದಿನಗಳು ಸಾಗಿ ಈಗ ಮತ್ತೆ ಬಯಲಿಗೆ ಬರುವ ಅವಕಾಶ ಸಿಕ್ಕಿದೆ. ನಾಡ ಹಬ್ಬ ದಸರೆಯ ಬೆಳಕಿನಲ್ಲಿ ಕೂಳು ಹುಡುಕುತ್ತಾ ಇವರು ಮತ್ತೆ ಬೀದಿಗೆ ಬಂದಿದ್ದಾರೆ. ಬಲೂನು ಬೇಕೇ, ಆಟಿಕೆ ಬೇಕೇ, ಬಾಚಣಿಗೆ ಬೇಕೇ ಎಂದು ಕೇಳುತ್ತಾ ಮೈಸೂರಿನ ಬೀದಿ ಬೀದಿಗಳಲ್ಲಿ ಸಾಗುತ್ತಿದ್ದಾರೆ.

ದಸರಾ ಕೇವಲ ಸಂಭ್ರಮದ ಗೂಡಾಗದೇ ರಾಜ್ಯ ಮತ್ತು ಹೊರರಾಜ್ಯದ ಸಾವಿರಾರು ಬೀದಿ ವ್ಯಾಪಾರಿಗಳಿಗೆ ಎಷ್ಟೋ ವರ್ಷಗಳಿಂದ ಆಸರೆಯಾಗಿದೆ. ಎರಡು ವರ್ಷಗಳ ಕಾಲ ದಸರೆಯ ತೇರು ಸ್ಥಗಿತಗೊಂಡಾಗ ಎಲ್ಲರಿಗಿಂತ ಹೆಚ್ಚು ಪರಿತಪಿಸಿದ ಇವರು ಇದೀಗ ತಮ್ಮದೇ ಊರಿನ ಜಾತ್ರೆಗೆ ಬರುವಂತೆ ಸಂಸಾರದ ಸಮೇತವಾಗಿ ಮೈಸೂರಿಗೆ ಬಂದಿದ್ದಾರೆ. ಇನ್ನೊಂದಿಷ್ಟು ಆಟದ ಸಾಮಾನುಗಳನ್ನು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇವರಲ್ಲಿ ಅವರಿವರು ಎನ್ನುವ ಪ್ರಶ್ನೆ ಇಲ್ಲ. ಕನ್ನಡಿಗರು, ತಮಿಳರು, ತೆಲುಗರು, ಮಲಯಾಳಿಗಳು, ಉತ್ತರದವರಾದರೆ “ಹಿಂದಿʼಯವರು. ಭಾಷಾ ಭಿನ್ನತೆಯೊಂದೇ ಇವರ ಐಡೆಂಟಿಟಿ. “ನಾವು ಕನ್ನಡದವ್ರುʼ ಎಂದರೆ ಹೆಚ್ಚಿನವರು ಉತ್ತರ ಕರ್ನಾಟಕದ ಮಂದಿ. ಬೀದರ್‌, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ ಹೀಗೆ ಬಿಸಿಲ ನಾಡಿನ ನೂರಾರು ಮಂದಿ ಮೈಸೂರಿನ ದಸರೆಗೆ ಬಂದಿದ್ದಾರೆ. ಇವರ ಗಮ್ಯ ದಸರೆಯ ವೈಭವವಲ್ಲ. ಇಲ್ಲಿಗೆ ಬರುವ ಕೊಳ್ಳುವ ಜನರ ಮೇಲಷ್ಟೇ ಇವರ ಕಣ್ಣು.

ಇನ್ನು ದೂರದ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ಒರಿಸ್ಸಾ ಮುಂತಾದ ಉತ್ತರದ ರಾಜ್ಯಗಳಿಂದ ಹಿಡಿದು ದಕ್ಷಿಣದ ತಮಿಳುನಾಡು, ಆಂಧ್ರ, ತೆಲಂಗಾಣದಿಂದಲೂ ದಸರೆಯ ನಡುವೆ ಬದುಕು ಅರಸಿ ಸಾವಿರಾರು ಮಂದಿ ಬಂದಿದ್ದಾರೆ. ಕೊಳ್ಳುವವರ ಜತೆ ತಿನ್ನುವವರು ಇವರಿಗೆ ಇಷ್ಟ. ಪಾನಿಪುರಿ, ಜರ್ದಾ, ಸುಪಾರಿ, ಒಣ ಹಣ್ಣುಗಳ ಜತೆ ಕಂಬಳಿ, ಹಾಸುಗಂಬಳಿ, ಬಟ್ಟೆ ಬರೆ.. ಇತ್ಯಾದಿ ವಸ್ತುಗಳು ಇವರ ಮಾರಾಟದ ಸರಕುಗಳು. ಈ ಸರಕುಗಳ ಜತೆ ಎಷ್ಟೋ ವರ್ಷಗಳಿಂದ ಇವರು ದಸರೆಯ ಭಾಗವಾಗಿದ್ದಾರೆ.

ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ದಸರಾ ಆಚರಣೆ ತಮ್ಮ ಪಾಲಿಗೆ ಸಂಜೀವಿನಿಯಾಗಬಹುದೆನ್ನುವ ನಿರೀಕ್ಷೆ ಇವರದು. ದೀಪಾಲಂಕೃತ ನಗರದಲ್ಲಿ ಅರೆಗತ್ತಲಿನ ಮೂಲೆ ಹುಡುಕುತ್ತಾ ಇವರು ತಮ್ಮ ಉತ್ಪನ್ನಗಳನ್ನು ಮಾರಲು ಪ್ರಯತ್ನಿಸುತ್ತಾರೆ. ಅಧಿಕಾರಿಗಳು ಮತ್ತು ಪೊಲೀಸರ ನಿರ್ಬಂಧದ ನಡುವೆ, ಸಿರಿವಂತ ಜನರ ಕೆಂಗಣ್ಣಿನ ನಡುವೆ ಇವರ ಜೋಳಿಗೆ ತುಂಬಿಸುವ ಕಾಯಕ ಮುಂದುವರಿಯುತ್ತದೆ.

ಇವರ ಗ್ರಾಹಕರಾರೂ ಶ್ರೀಮಂತರಲ್ಲ. ಇವರದ್ದೇ ಓರಗೆಯ ಸಣ್ಣ ಜೇಬಿನ ಜನ ಇವರ ಪಾಲಿನ ದೇವರು. ಆದರೆ ಇತ್ತೀಚೆಗೆ ಈ ಜನರೂ ಮಾಲ್‌ ಗಳ ಬೆನ್ನು ಬಿದ್ದಿದ್ದಾರೆ. ಮಾಲ್‌ ಗಳಲ್ಲಿ ಸಿಗುವ ವೆರೈಟಿ, ಆಕರ್ಷಣೆ ಇವರ ಮಾಲಿಗಿಲ್ಲ ಎನ್ನುವುದು ಕೆಲವರ ಕಂಪ್ಲೇಂಟು. ಆದರೂ ಸಾವಿರಾರು ಜನರ ಪೈಕಿ ಕೆಲವು ಜನರಾದರೂ ತಮ್ಮ ಕೈಯಲ್ಲಿರುವ ಉತ್ಪನ್ನಗಳಿಗೆ ಗ್ರಾಹಕರಾದಾರು ಎನ್ನುವುದು ನಂಬಿಕೆ.

ನಗರದ ಹಾರ್ಡಿಂಜ್‌ ಸರ್ಕಲ್, ಕೋಟೆ ಆಂಜನೇಯ ದೇವಸ್ಥಾನದ ಎದುರಿನ ಭಾಗ, ದೇವರಾಜು ಅರಸು ರಸ್ತೆ, ಚಿಕ್ಕ ಗಡಿಯಾರ ವೃತ್ತ ಸೇರಿ ಎಲ್ಲ ಕಡೆಗಳಲ್ಲಿ ಪಳ ಪಳ ಹೊಳೆಯುವ ಬಲೂನುಗಳು ಪ್ಲಾಸ್ಟಿಕ್ ಬೊಂಬೆಗಳು, ಪ್ರಾಣಿಗಳ ಮುಖವಾಡ, ಬಣ್ಣ ಬಣ್ಣದ ಆಟಿಕೆಗಳು, ಸದ್ದುಮಾಡುತ್ತಿವೆ. ಸಂಜೆಯ ಹೊತ್ತಿಗೆ ಮಹಾರಾಜ ಮೈದಾನ, ವಸ್ತುಪ್ರದರ್ಶನ ಆವರಣ ಇವರ ಪಾಲಿಗೆ ನೆಚ್ಚಿನ ತಾಣಗಳು.

ಮೈಸೂರಿನ ದಸರೆ ಎಂದರೆ ಸಂಗೀತ, ಕಲೆ, ಪರಂಪರೆ, ಮೋಜು,ಮಸ್ತಿ ಎಲ್ಲವೂ ಹೌದು. ಹಲವರಿಗೆ ಇದು ಸಂಭ್ರಮದ ಗೂಡಾದರೆ ಕೆಲವರಿಗೆ ಬದುಕಿನ ಗೂಡು ಅರಸುವ ತಾಣ. ಬದುಕು ಕಟ್ಟಿಕೊಳ್ಳುವ ಹಬ್ಬ…

andolana

Recent Posts

ಅಮೆರಿಕ ಎದುರು 10ಷರತ್ತು ಮುಂದಿಟ್ಟಿ ಇರಾನ್ ; ಷರತ್ತು ಒಪ್ಪಿಕೊಳ್ಳುತ್ತಾ ಟ್ರಂಪ್‌ ಆಡಳಿತ?

ಟೆಹ್ರಾನ್‌ : ಅಮೆರಿಕಾ ಮತ್ತು ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಸಮರ ವಿರಾಮಕ್ಕೆ ಒಪ್ಪಂದವಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್…

51 mins ago

ಓದುಗರ ಪತ್ರ | ಬಸವರಾಜ ಬೊಮ್ಮಾಯಿ ನಿರ್ಧಾರ ಸ್ವಾಗತಾರ್ಹ

ಹಾವೇರಿ ವಿಶ್ವವಿದ್ಯಾಲಯವು ತಮಗೆ ಪ್ರಕಟಿಸಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ…

1 hour ago

ಓದುಗರ ಪತ್ರ | ಅಮಾನವೀಯ ಲಿಫ್ಟ್ ಸಂಸ್ಕೃತಿ ಅಂತ್ಯವಾಗಲಿ

ನಗರಗಳಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿರುವ ಶ್ರೀಮಂತರು ಸ್ವಿಗ್ಗಿ, ಜೊಮ್ಯಾಟೋ ಮೊದಲಾದ ಆನ್‌ಲೈನ್ ಮೂಲಕ ಆಹಾರ ವಿತರಿಸುವ ಕಂಪೆನಿಗಳ ಡೆಲಿವರಿ ಬಾಯ್ಸ್‌ಗೆ ಲಿಫ್ಟ್…

1 hour ago

ಓದುಗರ ಪತ್ರ | ಅಂಚೆ ಕಚೇರಿಗಳು ಜನ ಸ್ನೇಹಿಯಾಗಲಿ

ಅಂಚೆ ಕಚೇರಿಯಲ್ಲಿ ಸಾಮಾನ್ಯ ಜನರು ೫ ವರ್ಷಗಳ ಅವಧಿಗೆ, ಸಣ್ಣ ಉಳಿತಾಯ ಪ್ರತಿನಿಧಿಗಳ ಮೂಲಕ ಆರ್‌ಡಿ (ರಿಕರಿಂಗ್ ಡಿಪಾಸಿಟ್), ಮಾಡಿರುತ್ತಾರೆ.…

1 hour ago

ಜಾನಪದ ಸಿರಿ ಅನಾವರಣಗೊಳಿಸಿದ ಗ್ರಾಮೀಣ ಕಲೆಗಳ ಪ್ರದರ್ಶನ

ಬಟಿಗನಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಓಕುಳಿ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮ ಭೇರ್ಯ: ಸಮೀಪದ ಬಟಿಗನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಓಕುಳಿ…

1 hour ago

ʻಜಗುಲಿಯಿಂದ ಜಗತ್ತಿನೆಡೆಗೆʼ ಕನಸು ಕಂಡ ಬಿ.ರಾಮಕೃಷ್ಣ

ಪ್ರೊ.ಬಿ.ಜಯಪ್ರಕಾಶಗೌಡ ಮಂಡ್ಯ ಜಿಲ್ಲೆಯ ಈ ಹೊತ್ತಿನ ರಾಜಕಾರಣದಲ್ಲಿ ಒಂದು ಪ್ರಮುಖವಾದ ಹೆಸರು ಬಿ.ರಾಮಕೃಷ್ಣ ಅವರದು. ಅವರು ಒಮ್ಮೆ ಸ್ಥಳೀಯ ಸಂಸ್ಥೆಗಳ…

2 hours ago