ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಉತ್ಸವಾದಿಗಳು ಸಂಪ್ರದಾಯದಂತೆ ಜರುಗಿದವು.
ಮುಂಜಾನೆಯಿಂದಲೇ ಮಹದೇಶ್ವರ ಸ್ವಾಮಿ ಮೂರ್ತಿಗೆ ಎಳನೀರು, ಹಾಲು ಹಾಗೂ ಪಂಚಾಮೃತದಿಂದ ಮಹಾ ಅಭಿಷೇಕ ನೆರವೇರಿಸಲಾಯಿತು. ಬಳಿಕ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ಮಾದಪ್ಪನ ದರ್ಶನ ಪಡೆದರು. ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ಬಸವ ವಾಹನ, ಹುಲಿ ವಾಹನ ಮತ್ತು ರುದ್ರಾಕ್ಷಿ ಮಂಟಪ ಸೇವೆ ಸಲ್ಲಿಸುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿಕೊಂಡರು.
ಬೆಂಗಳೂರು, ರಾಮನಗರ, ಕನಕಪುರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ನಂಜನಗೂಡು, ತುಮಕೂರು, ಕೋಲಾರ ಹಾಗೂ ತಮಿಳುನಾಡಿನ ವಿವಿಧ ಗ್ರಾಮಗಳಿಂದ ಭಕ್ತರು ಕುಟುಂಬ ಸಮೇತ ಆಗಮಿಸಿದ್ದರು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜಗೋಪುರದ ಮುಖ್ಯ ದ್ವಾರದಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ದೇಗುಲ ವಿವಿಧ ಪುಷ್ಪಗಳಿಂದ ಅಲಂಕಾರ: ಬೆನಕನ ಅಮಾವಾಸ್ಯೆ ಪ್ರಯುಕ್ತ ಗರ್ಭಗುಡಿ ಹಾಗೂ ದೇಗುಲದ ಒಳಾಂಗಣವನ್ನು ವಿವಿಧ ತಾಜಾ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇಗುಲದ ಸುತ್ತಲೂ ಬಣ್ಣದ ದೀಪಾಲಂಕಾರ ಹಾಗೂ ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು.
ಎಣ್ಣೆ ಮಜ್ಜನ ಸೇವೆ: ಶುಕ್ರವಾರ ಸಂಜೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನೆರವೇರಿಸಿದರು. ನಂತರ ಸ್ವಾಮೀಜಿ ಸನ್ನಿಧಿಯಲ್ಲಿ ಉಚ್ಚಳೆಣ್ಣೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ, ಹಾಲಿನ ಅಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯನ್ನು ನೆರವೇರಿಸಲಾಯಿತು.
ನೂಕುನುಗ್ಗಲು: ಮಹಾಲಯ ಅಮಾವಾಸ್ಯೆ ಹಾಗೂ ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ವಿಶೇಷ ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು ಉಂಟಾಯಿತು. ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. 60 ವರ್ಷ ಮೇಲ್ಪಟ್ಟ ವಯೋವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪಾಸ್ ಪಡೆದು ನೇರ ದರ್ಶನ ಪಡೆದರು.
ಟ್ರಾಫಿಕ್ ಜಾಮ್: ಅಮಾವಾಸ್ಯೆ ಪ್ರಯುಕ್ತ ಲಕ್ಷಾಂತರ ಭಕ್ತರು ಸ್ವಂತ ವಾಹನ, ಬಸ್ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದ್ದರಿಂದ ಆನೆತಲೆ ದಿಂಬದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಾರ್ಗ ಮಧ್ಯೆ ಕೆಟ್ಟು ನಿಂತ ಬಸ್‌ಗಳು: ಅಮಾವಾಸ್ಯೆ ಪ್ರಯುಕ್ತ ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಡಿಪೋಗಳಿಂದ 250ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಮೂರಕ್ಕೂ ಹೆಚ್ಚು ಬಸ್‌ಗಳು ಕೆಟ್ಟು ರಸ್ತೆ ಮಧ್ಯೆ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
ಮಾಜಿ ಶಾಸಕರಿಂದ ಭಕ್ತಾದಿಗಳಿಗೆ ಸೇಬು ವಿತರಣೆ : ವಿಧಾನ ಪರಿಷತ್ ಮಾಜಿ ಸದಸ್ಯ ಬೆಂಗಳೂರು ಮೂಲದ ಮಲ್ಲಿಕಾರ್ಜುನ್ ರವರು ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ 3000ಕ್ಕೂ ಹೆಚ್ಚು ಭಕ್ತಾದಿಗಳಿಗೆ ಸೇಬು ಹಾಗೂ ಮೂಸಂಬಿ ವಿತರಣೆ ಮಾಡಿದರು.
ಭಕ್ತರ ಸುರಕ್ಷತೆ ದೃಷ್ಟಿಯಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಮಾರ್ಗದರ್ಶನದಲ್ಲಿ ಮಲೆ ಮಹದೇಶ್ವರ ಬೆಟ್ಟ ಪ್ರಭಾರ ಇನ್ಸ್‌ಪೆಕ್ಟರ್ ಆನಂದಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦…
ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು,…