ಚಾಮರಾಜನಗರ

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ ಪರಿಹಾರ ಕೊಡಿಸುವುದಾಗಿ ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಆಗಸ್ಟ್ 15ರ ಮುಂಜಾನೆ ಅರಣ್ಯ ಇಲಾಖೆ ಅಧಿಕಾರಿಗಳ ಶೂಟ್ ಔಟ್‌ನಲ್ಲಿ ತೋಮಿಯರ್ ಪಾಳ್ಯ ಸಮೀಪದ ಮರಿಯಮಂಗಲ ಗ್ರಾಮದ ಮೂವರು ಮೃತಪಟ್ಟಿದ್ದರು.

ಈ ಸಂಬಂಧ ಮೃತ ಕುಟುಂಬಸ್ಥರು, ಗ್ರಾಮಸ್ಥರು, ಬಿಜೆಪಿ ಒಬಿಸಿ ಮೋರ್ಚ ಜಿಲ್ಲಾಧ್ಯಕ್ಷ ಜನದ್ವನಿ ಬಿ ವೆಂಕಟೇಶ್, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಕನ್ನಡಿಗರ ವಿಜಯ ಸೇನೆ, ಕನ್ನಡಪರ ಸಂಘಟನೆಗಳು, ಎಸ್.ಡಿ.ಪಿ.ಐ, ಬಿಎಸ್ಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆಗೆ ಸಾಥ್ ನೀಡಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೂವರು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಶನಿವಾರ ಮೃತ ಕುಟುಂಬಸ್ಥರು ಶಾಗ್ಯ ಗ್ರಾಮದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಿ, ಕಚೇರಿಯಲ್ಲಿದ್ದ ಪೀಠೋಪಕರಣ, ದ್ವಿಚಕ್ರ ವಾಹನ ಹಾಗೂ ಸಾಮಗ್ರಿಗಳನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದರು.

ಮೃತರ ಪತ್ನಿ, ಮಕ್ಕಳು, ಕುಟುಂಬಸ್ಥರು ಹಾಗೂ ಸಂಬಂಧಿಕರು ಸಾವಿರಾರು ಸಂಖ್ಯೆಯಲ್ಲಿ ಹನೂರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಭಾನುವಾರ ಮುಂಜಾನೆ 2 ಗಂಟೆಯವರೆಗೆ ರಸ್ತೆಯನ್ನು ಬಂದ್ ಮಾಡಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಅವರು ಪ್ರತಿಭಟನಾಕಾರರನ್ನು ಮನವೊಲಿಸಿ ಭಾನುವಾರ ಮುಂಜಾನೆ ಎರಡು ಗಂಟೆಯ ನಂತರ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದರು.

ಮೃತರ ಸಂಬಂಧಿಕರು ಭಾನುವಾರವೂ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಿದ್ದರು. ಆದರೆ ಕೆಲವು ಕಿಡಿಗೇಡಿಗಳು ಕೆಲ ಹೊತ್ತು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿ ಐವರನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು. ಆದರೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿದ್ದವು.

ಈ ವೇಳೆ ಶಾಸಕ ಎಂ.ಆರ್. ಮಂಜುನಾಥ್ ಮೃತ ಕುಟುಂಬಸ್ಥರು ಹಾಗೂ ಗ್ರಾಮದ ಹಿರಿಯ ಮುಖಂಡರು, ಫಾದರ್‌ಗಳ ಸಮ್ಮುಖದಲ್ಲಿ ಚರ್ಚೆ ನಡೆಸಿದರು. ಮೃತ ಕುಟುಂಬಗಳಿಗೆ ವೈಯಕ್ತಿಕವಾಗಿ 8 ಲಕ್ಷ, ಸಚಿವ ಪುಟ್ಟರಂಗಶೆಟ್ಟಿ ಅವರು 2 ಲಕ್ಷ ಹಾಗೂ ಸರ್ಕಾರದ ವತಿಯಿಂದ 5 ಲಕ್ಷ, ಒಟ್ಟು 15 ಲಕ್ಷ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು.

“ಕೇವಲ ಪ್ರತಿಭಟನೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ವಿಧಾನಮಂಡಲ ಅಧಿವೇಶನದಲ್ಲಿ ಅಗತ್ಯ ಚರ್ಚೆ ನಡೆಸಿ, ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೀವು ಸಹಕಾರ ನೀಡಬೇಕು” ಎಂದು ಅವರು ಮನವಿ ಮಾಡಿದರು.

ಗ್ರಾಮಸ್ಥರು ಹಾಗೂ ಚರ್ಚ್ ಫಾದರ್‌ಗಳು ಶಾಸಕರ ಮಾತಿಗೆ ಮನ್ನಣೆ ನೀಡಿ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು. “ನೀವು ನೀಡಿರುವ ಭರವಸೆಯಂತೆ ನಮಗೆ ಸರ್ಕಾರದಿಂದ ಸಕಲ ಸವಲತ್ತುಗಳನ್ನು ಕೊಡಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ಕೊಡಿಸಬೇಕು” ಎಂದು ಮನವಿ ಮಾಡಿದರು. ತದನಂತರ ಶಾಸಕರು “ನಾನು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇನೆ, ನೀವು ಪ್ರತಿಭಟನೆ ಕೈಬಿಡಿ” ಎಂದು ಮನವೊಲಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ಗ್ರಾಮಗಳಿಗೆ ವಾಪಸ್ ತೆರಳಿದರು.

ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ. ಎನ್. ಬಾಲದಂಡಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

5 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

5 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

5 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

6 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

7 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

13 hours ago