ಚಾಮರಾಜನಗರ

ಆಧುನಿಕ ಭಾರತದ ಪರಂಜ್ಯೋತಿ ಬಾಬಾಸಾಹೇಬ್ ಅಂಬೇಡ್ಕರ್: ಯುವವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯ

ಕೊಳ್ಳೇಗಾಲ: “ಜಾನಪದ ಲೋಕದಲ್ಲಿ ಧರೆಗೆ ದೊಡ್ಡವರಾಗಿ ಸರ್ವಜನಾಂಗದ ಪಾಲಿನ ಪರಂಜ್ಯೋತಿಯಾದ ಮಂಟೇಸ್ವಾಮಿಯವರಂತೆ ಬಹು ಜನರಿಗೆ ಭಾರತ ಸಂವಿಧಾನವೆಂಬ ಮಹಾಬೆಳಕನ್ನಿತ್ತ ಆಧುನಿಕ ಭಾರತದ ಪರಂಜ್ಯೋತಿ ಬಾಬಾಸಾಹೇಬ್ ಅಂಬೇಡ್ಕರ್” ಎಂದು ಷ್ಟ್ರಪತಿ ಪ್ರಶಸ್ತಿ-ಮಹರ್ಷಿ ವ್ಯಾಸ್ ಸಮ್ಮಾನ್ ಪುರಸ್ಕೃತ ಯುವ ವಿದ್ವಾಂಸ ಹಾಗೂ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ಅಭಿಪ್ರಾಯಪಟ್ಟರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಭಾರತ ಸಂವಿಧಾನ ದಿನ ಹಾಗೂ ಸಮಾನತೆಯ ಸಾಲುದೀಪ ನಮನ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಂಸ್ಕೃತಿಯ ಮಹಾಸಂತರಾದ ಪರಂಜ್ಯೋತಿ ಮಂಟೇಸ್ವಾಮಿ ಅವರನ್ನು ಕುರಿತು ಜನಪದರು ಹಾಡಿರುವ ಮಹಾಕಾವ್ಯವು ಪ್ರಾತಃಸ್ಮರಣೀಯ. ಆ ಕಾವ್ಯದಲ್ಲಿ ಬರುವ ‘ತಿಪ್ಪೆ ಮೇಲೆ ಕಸಮಡಗಿದರೆ ಭಿನ್ನಭೇದವಿಲ್ಲದಂತೆ ಏಕವಾಗಿ ಉರಿವ ಪರಂಜ್ಯೋತಿ” ಎಂಬ ಜನನುಡಿಯು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚನೆಗೊಂಡ ಭಾರತ ಸಂವಿಧಾನಕ್ಕೆ ಅರ್ಥಪೂರ್ಣವಾಗಿ ಅನ್ವಯವಾಗುವಂಥದು. ಸಮಸ್ತ ಭಾರತೀಯರಿಗೂ ಯಾವುದೇ ಭೇದವಿಲ್ಲದೆ ಒಂದೇ ಸಮನಾದ ಹಕ್ಕು, ಬಾಧ್ಯತೆ, ಅವಕಾಶಗಳನ್ನು ನೀಡಿ ಸಹಭಾಗಿತ್ವ ಹಾಗೂ ಸಾಮರಸ್ಯದ ಬದುಕನ್ನಿತ್ತಿರುವುದು ನಮ್ಮ ಹೆಮ್ಮೆಯ ಸಂವಿಧಾನ. ಇದು ಏಕನೆಲೆಗೆ ಎಂದೂ ಸೀಮಿತವಾದುದಲ್ಲ. ಭಾರತದ ಬಹುನೆಲೆಗಳಲ್ಲಿ ಏಕವಾಗಿ ಉರಿವ ಪರಂಜ್ಯೋತಿಯೇ ಆಗಿದೆ ಎಂದು ಬಣ್ಣಿಸಿದರು.

ಅಂಬೇಡ್ಕರ್ ಅವರು ತಳನೆಲೆಯಿಂದ ಅಸಂಖ್ಯ ನೋವು, ಅವಮಾನಗಳನ್ನು ಅನುಭವಿಸಿ ಬಂದವರಾದರೂ ತಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಂಡವರು. ಅವರ ಜ್ಞಾನವಾಗಲೀ ಕಾಯಕವಾಗಲೀ ಏಕಕೋನೀಯವಾಗಿರಲಿಲ್ಲ, ಬಹುಕೋನೀಯವಾಗಿತ್ತು. ೩೬೦ ಡಿಗ್ರಿಯಷ್ಟು ವಿಶಾಲವೂ ಆಳವೂ ಆಗಿದ್ದ ಅಂಬೇಡ್ಕರ್ ದೃಷ್ಟಿಕೋನದಿಂದಲೇ ಭಾರತ ಸಂವಿಧಾನವು ಸರ್ವಜನಾಂಗದ ಬದುಕುಗಳನ್ನು ನಿತ್ಯವೂ ಬೆಳಗುವಂತಾಗಿರುವುದು. ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವೆಂಬ ಪ್ರಸಿದ್ಧಿಗೆ ಪಾತ್ರವಾಗಿರುವುದು. ಇಂತಹ ಸಂವಿಧಾನದ ಬೆಳಕನ್ನು ಆರಿಸಿ ಸರ್ವಾಧಿಕಾರದ ಏಕಮತೀಯ ಸಂವಿಧಾನ ತರ್ತೀವಿ ಅನ್ನೋಸು ಜನದ್ರೋಹಿ, ದೇಶದ್ರೋಹದ ಕೃತ್ಯವಲ್ಲವೆ ಎಂದು ತಿಳಿಸಿದರು.

ಭಾರತ ಸಂವಿಧಾನಕ್ಕೆ ಕನ್ನಡ ನೆಲದ ಸೃಜನಶೀಲ ಮನಸ್ಸು ನೀಡಿದ ಹೃದಯಸಂವಾದದ ಸಾಕ್ಷಿಯಾಗಿ ಮಹಾಕವಿ ಕುವೆಂಪು ವಿರಚಿತ ‘ ಶ್ರೀಸಾಮಾನ್ಯರ ದೀಕ್ಷಾಗೀತೆ’ ಕವಿತೆ ಕಾಣುತ್ತದೆ. ೧೯೫೦ರ ಜನವರಿ ೩೬ರಂದು ಮೈಸೂರಿನಲ್ಲಿ ಕುವೆಂಪು ಬರೆದ ಈ ಕವಿತೆಯು, ಕೊನೆಗೊಂಡಿತು ಓರೋರ್ವರ ಗರ್ವದ ಕಾಲ, ಇದು ಸರ್ವರ ಕಾಲ, ಶ್ರೀಸಾಮಾನ್ಯನೇ ಭಗವನ್ ಮಾನ್ಯಂ, ಶ್ರೀಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿರಿ ಎಂದು ಸಾರುತ್ತದೆ. ಸಂವಿಧಾನ ರಚನಾ ಸಮಯದ ಚರ್ಚೆಯಲ್ಲಿ “ಶ್ರೀಸಾಮಾನ್ಯರೇ ನನ್ನ ದೇವರು” ಎಂದಿದ್ದ ಅಂಬೇಡ್ಕರ್ ಅವರ ಮಹದಾಶಯವನ್ನು ಹೃದಯಗಿವಿಯಿಂದ ಆಲಿಸಿ, ಆಲಂಗಿಸಿಕೊಂಡ ಮಹಾಕವಿಯ ಉಲಿಯಂತೆ ಕಾಣುತ್ತದೆ ಎಂದರು.

ಶೋಷಣೆ ಮಾಡಿದವರನ್ನು ದ್ವೇಷ ಮಾಡುತ್ತಲೋ ಅಥವಾ ಅಧಿಕಾರ ಸಿಕ್ಕಾಗ ಮರುಶೋಷಣೆ ಮಾಡುವುದರಿಂದಲೋ ಭಾರತ ಬೆಳಗುವುದಿಲ್ಲ, ಅಸಮಾನತೆ ಅಳಿಯುವುದಿಲ್ಲ. ದ್ವೇಷಿಸುವವರು ಹಾಗೂ ಶೋಷಿಸುವವರೇ ನಮ್ಮನ್ನು ಗೌರವಿಸುವಂಥ ಸಾಧನೆ ಬದುಕು ನಮ್ಮದಾಗಬೇಕು. ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರೇ ನಮಗೆ ಬಹುದೊಡ್ಡ ಮಾದರಿ ಮತ್ತು ಮಾರ್ಗದಾತರಾಗಿದ್ದಾರೆ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸಮಾನತೆಯ ಅಸ್ಪೃಶ್ಯಭಾರತ ಭೂಗರ್ಭದಿಂದ ಪುಟಿದೆದ್ದ ಕ್ರಾಂತಿವಜ್ರ. ಅವರ ಜ್ಞಾನ, ಶೀಲ ಹಾಗೂ ಕ್ರಾಂತಿಯಾನವು ವಜ್ರದಷ್ಟೇ ಹೊಳಪುಳ್ಳದ್ದು ಹಾಗೂ ಮೌಲ್ಯಯುತವಾದದ್ದು. ಇಂತಹ ವಜ್ರದೀಪ್ತಿಯುಳ್ಳ ಡೈಮಂಡ್ ಸ್ಟಾರ್ ಆದ ಅಂಬೇಡ್ಕರ್ ಅವರನದನು ನಮ್ಮೆಲ್ಲರ ಎದೆಗಳಲ್ಲಿ ಬೆಳಗಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಅಂತರಾಷ್ಟ್ರೀಯ ಜಾನಪದ ಕಲಾವಿದರೂ ದಲಿತ ಸಾಹಿತ್ಯ ಪರಿಷತ್ತಿನ ಚಾಮರಾಜನಗರ ಜಿಲ್ಲಾಧ್ಯಕ್ಷರೂ ಆದ ಸಿ.ಎಂ.ನರಸಿಂಹಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾನತೆಯ ಸಾಲುದೀಪಗಳು ಕುರಿತಾದ ಉಪನ್ಯಾಸದಲ್ಲಿ ‘ಮಾನವತೆಯ ಕ್ರಾಂತಿಜ್ಯೋತಿ ಸಾವಿತ್ರಿ ಬಾಫುಲೆ’ ಕುರಿತು ಚಾಮರಾಜನಗರ ವಿವಿಯ ಕನ್ನಡ ಅಧ್ಯಾಪಕಿ ಡಾ.ಆರ್.ಶಶಿಕಲಾ ಅವರು ಮಾತನಾಡಿದರು. ‘ಬಾಬಾಸಾಹೇಬರ ಭೀಮಬಲ ರಮಾಬಾಯಿ ಅಂಬೇಡ್ಕರ್’ ಕುರಿತು ನಿವೃತ್ತ ಉಪನ್ಯಾಸಕಿಯಾದ ಡಾ.ಸರಸ್ವತಿ ಹೊನ್ನಪ್ಪ ಅವರು ವಿಚಾರ ಮಂಡಿಸಿದರು. ಕೊಳ್ಳೇಗಾಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜು ಕೊಂಗರಹಳ್ಳಿ ಹಾಗೂ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷರಾದ ದೊರೆಸ್ವಾಮಿ ಅವರು ಮುಖ್ಯ ಅತಿಥಿಗಳಾಗಿದ್ದರು. ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಡಾ.ಕವಿತಾ ಡಿ.ಎಲ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ಪದಾಧಿಕಾರಿ ನಾಗರಾಜ್ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ಪ್ರೇಮಕುಮಾರಿ ಅವರು ನಿರೂಪಿಸಿದರು. ಗಮಕಿಗಳಾದ ಶಿವಣ್ಣ ಇಂದ್ವಾಡಿ, ವಿದ್ವಾಂಸರಾದ ಡಾ.ಆದೆಪ್ಪ ಕೆ.ಹಂದಿಹಾಳ್, ದಸಾಪ ತಾಲ್ಲೂಕು ಕಾರ್ಯದರ್ಶಿ ಡಾ.ದಿಲಿಪ್ ಎನ್.ಕೆ, ಹಿರಿಯರಾದ ಪುಟ್ಟ ಅರಸ ಶೆಟ್ಟಿ, ರಾಜಪ್ಪಾಜಿ, ರಾಮಣ್ಣ, ಭಾಗ್ಯಮ್ಮ, ಆನಂದರಾಜ್, ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ತಮಿಳುನಾಡು ನೂತನ ಸಿಎಂ ವಿಜಯ್‌ ಮುಂದಿವೆ ಬೆಟ್ಟದಂತಹ ಸವಾಲುಗಳು! ಮೆಟ್ಟಿ ನಿಲ್ಲುತ್ತಾರಾ ದಳಪತಿ?

ಚೆನ್ನೈ : ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ 60 ವರ್ಷಗಳ ದ್ರಾವಿಡ ಯುಗಕ್ಕೆ ತೆರೆ ಎಳೆದು, ಮೊದಲ ಬಾರಿಗೆ ಸಿನಿತಾರೆ-ರಾಜಕಾರಣಿ ಸಿ.ಜೋಸೆಫ್…

11 mins ago

ಹಣಕ್ಕಾಗಿ ವೃದ್ದೆ ಕೊಲೆ ; ಶವವನ್ನು ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಕಿರಾತಕ

ಕೆ.ಆರ್.ನಗರ : ಹಣದಾಸಗೆ ವೃದ್ದೆಯನ್ನು ಕೊಲೆಗೈದು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.…

2 days ago

ಪಶ್ಚಿಮ ಬಂಗಾಳ | ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿ

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತಕ್ಕೆ ತೆರೆ ಎಳೆದು ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ, ಮೇ…

2 days ago

ಟಿವಿಕೆಗೆ ಎಡಪಕ್ಷಗಳ ಬೆಂಬಲ : ಬಹುಮತದ ಸೀಟಿ ಊದಿಯೇ ಬಿಟ್ಟ ದಳಪತಿ ವಿಜಯ್‌

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ ಸರ್ಕಾರ ರಚಿಸಲು…

2 days ago

ತಮಿಳುನಾಡಿನಲ್ಲಿ ವಿಜಯ್‌ ಸಾಧನೆ ಎಲ್ಲರಿಗೂ ಅಚ್ಚರಿ ತಂದಿದೆ : ಕೇಂದ್ರ ಸಚಿವ ಎಚ್‌ಡಿಕೆ

ಹಾಸನ : ಮಾಧ್ಯಮಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವರದಿಗಳು ಹರಿದಾಡುತ್ತಿದ್ದವು. ಆದರೆ ವಿಜಯ್‌ ಅವರ ಈಗಿನ ಸಾಧನೆಯನ್ನು…

2 days ago

ಹೊರ್ಮುಜ್‌ ಜಲಸಂಧಿಯಿಂದ ನುಗ್ಗಿಬಂದ ಅಮೆರಿಕದ ಯುದ್ಧನೌಕೆಗಳು : ಇರಾನ್‌ನಿಂದ ದಾಳಿ

ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮೂರು ಯುದ್ಧನೌಕೆಗಳ ಮೇಲೆ ಇರಾನ್ ಕ್ಷಿಪಣಿ, ಡ್ರೋನ್ ಮತ್ತು ಸಣ್ಣ ದೋಣಿಗಳ ಮೂಲಕ…

2 days ago