ಚಾಮರಾಜನಗರ

ಮಾದಪ್ಪನ ಪ್ರತಿಮೆ: ಬೆಟ್ಟದ ಹೊಸ ಆಕರ್ಷಣೆ

ಮಹದೇಶ್ವರಬೆಟ್ಟ: ದೇಶವಿದೇಶಗಳಿಂದ ಭಕ್ತರನ್ನು ಕೈ ಬೀಸಿ ಕರೆಯುತ್ತಿರುವ ಮಲೆ ಮಹದೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ಇನ್ನು 108 ಎತ್ತರದ ಮಹದೇಶ್ವರ ಸ್ವಾಮಿಯ ಪ್ರತಿಮೆ ವಿಶೇಷ ಆಕರ್ಷಣೆಯಾಗಲಿದೆ.  ಇಲ್ಲಿನ ದೀಪದಗಿರಿ ಒಡ್ಡುವಿನಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಮೆ ಕಾಮಗಾರಿ ಪೂರ್ಣಗೊಂಡಿದ್ದು, ಇದೇ 18ರಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಲಿದ್ದಾರೆ.

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮುಖ್ಯಮಂತ್ರಿ ಅವರ ಭೇಟಿಯನ್ನು ದೃಢಪಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು 17ರಂದೇ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಇದೇ ವೇಳೆ ಬೆಳ್ಳಿ ರಥದ ಅನಾವರಣವೂ ನಡೆಯಲಿದೆ.

₹ 20 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿವೆ.

ತರಾತುರಿಯಲ್ಲಿ ಪ್ರತಿಮೆ ಉದ್ಘಾಟನೆ ಮಾಡುತ್ತಿರುವುದಕ್ಕೆ ಸ್ಥಳೀಯ ಕೆಲವು ಭಕ್ತರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಶೌಚಾಲಯದಂತಹ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿದೆ ಪ್ರತಿಮೆ ಉದ್ಘಾಟನೆ ಮಾಡಿದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಶಿವರಾತ್ರಿ ಜಾತ್ರೆಯ ದಿನ ಬೆಟ್ಟಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪ್ರತಿಮೆ ಕಾಮಗಾರಿಯನ್ನು ಪರಿಶೀಲಿಸಿ, ಮಾರ್ಚ್‌ 10ರೊಳಗಾಗಿ ಪ್ರತಿಮೆ ಹಸ್ತಾಂತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಸದ್ಯ, ಮಹದೇಶ್ವರಸ್ವಾಮಿ ದೇವಾಲಯದಿಂದ ಪ್ರತಿಮೆ ಇರುವ ಜಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಮೆಟ್ಟಿಲು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.

ಯೋಜನೆ ಅನುಷ್ಠಾನ ವಿಳಂಬ: ಮಹದೇಶ್ವರಬೆಟ್ಟದಲ್ಲಿ ಮಾದಪ್ಪನ ಬೃಹತ್‌ ಪ್ರತಿಮೆ ನಿರ್ಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಕನಸಾಗಿತ್ತು. 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರ ಸೆಪ್ಟೆಂಬರ್‌ನಲ್ಲಿ ಯೋಜನೆ ಘೋಷಿಸಿದ್ದರು. ₹ 20 ಕೋಟಿ ವೆಚ್ಚದ ಈ ಯೋಜನೆ ಜಮೀನು ಸ್ವಾಧೀನ ವಿಳಂಬದಿಂದಾಗಿ ತಡವಾಗಿತ್ತು.

2019ರ ಫೆಬ್ರುವರಿಯಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. 2021ರ ಮಾರ್ಚ್ ತಿಂಗಳಲ್ಲಿ ಮೊದಲ ಹಂತದ ನೆಲಮಹಡಿಯ (ಕಲ್ಲು ಬಂಡೆಯ ರಚನೆ) ಕಾಮಗಾರಿ ಮುಕ್ತಾಯವಾಗಿತ್ತು. ಈಗ ಪ್ರತಿಮೆಯೂ ಸಿದ್ಧವಾಗಿದ್ದು, ಸ್ಥಳೀಯರು ಸೇರಿದಂತೆ ಪ್ರವಾಸಿಗರು ಹಾಗೂ ಭಕ್ತರು ಸ್ಥಳಕ್ಕೆ ಭೇಟಿ ನೀಡಿ ಪವಾಡ ಪುರುಷನ ಬೃಹತ್‌ ಪ್ರತಿಮೆ ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ರತಿಮೆ ಹೇಗಿದೆ? ಏನೇನಿದೆ?

ಗದಗದ ಸಿಎಸ್‌ಎಪಿ ಆರ್ಕಿಟೆಕ್ಟ್‌ ಸಂಸ್ಥೆಯು ಪ್ರತಿಮೆ ನಿರ್ಮಿಸಿದೆ. ಶ್ರೀಧರ್ ಎಂಬುವವರು ಪ್ರತಿಮೆಯ ಶಿಲ್ಪಿಯಾಗಿದ್ದು, ಮುರ್ಡೇಶ್ವರದ ಶಿವನ ಮೂರ್ತಿ, ಬಸವ ಕಲ್ಯಾಣದದಲ್ಲಿ ಬೃಹತ್‌ ಬಸವಣ್ಣನ ಪ್ರತಿಮೆಗಳ ರೂವಾರಿ ಇವರು.

ಹನೂರು ಭಾಗದಿಂದ ಬೆಟ್ಟಕ್ಕೆ ಬರುವವರು ಆನೆದಿಂಬ ತಲುಪುತ್ತಿದ್ದಂತೆಯೇ ಹುಲಿ ಮೇಲೆ ಕುಳಿತ ಮಾದಪ್ಪನ ಪ್ರತಿಮೆಯ ಸೊಬಗು ಕಾಣಬಹುದು. ತಮಿಳುನಾಡಿನಿಂದ ಬಂದರೆ ಗರಿಕೆಕಂಡಿ ಸಿಗುತ್ತಿದ್ದಂತೆ ಮಾದಪ್ಪನನ್ನು ಕಣ್ತುಂಬಿಕೊಳ್ಳಬಹುದು. 108 ಅಡಿ ಎತ್ತರ ‌ಪ್ರತಿಮೆಯು ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯ ರಚನೆಯ ಮೇಲೆ ವ್ಯಾಘ್ರನ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ರೂಪಿಸಲಾಗಿದೆ.

ಕಲ್ಲುಬಂಡೆಯಾಕೃತಿಯ ರಚನೆಯಲ್ಲಿ ಗುಹೆಯ ಮಾದರಿಯಲ್ಲಿ ಎರಡು ಮಹಡಿಗಳಿವೆ. ತಳಭಾಗದಲ್ಲಿ ಮಹದೇಶ್ವರ ಬೆಟ್ಟದ ಚಾರಿತ್ರಿಕ ಹಿನ್ನಲೆ ಸಾರುವ ಕಲಾಕೃತಿ ಚಿತ್ರಗಳ ರಚನೆ, ಭಕ್ತರ ವಿಶ್ರಾಂತಿ ಸ್ಥಳಾವಕಾಶ ಸೇರಿದಂತೆ ಭಕ್ತರು, ಪ್ರವಾಸಿಗರಿಗೆ ಮಹದೇಶ್ವರ ಚರಿತ್ರೆ, ಪರಂಪರೆ ಸಾರುವ ಮ್ಯೂಸಿಯಂ ನಿರ್ಮಾಣವಾಗಲಿದೆ.

ಪ್ರತಿಮೆ ಜೊತೆಗೆ ಬೆಳ್ಳಿ ರಥ ಅನಾವರಣ

‘ಪ್ರತಿಮೆ ನಿರ್ಮಾಣ ಕೆಲಸ ಮುಗಿದಿದೆ. 18ರಂದು ಮುಖ್ಯಮಂತ್ರಿಯವರು ಕ್ಷೇತ್ರಕ್ಕೆ ಬಂದು ಪ್ರತಿಮೆ ಅನಾವರಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಳ್ಳಿ ರಥವನ್ನೂ ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ಬಳಿಕ ಮಹದೇಶ್ವರರ ಚರಿತ್ರೆ ಸಾರುವ ಮ್ಯೂಸಿಯಂ ಸ್ಥಾಪಿಸಲಾಗುವುದು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ತಿಳಿಸಿದ್ದಾರೆ.

andolanait

Recent Posts

ಓದುಗರ ಪತ್ರ: ಇಸ್ಕಾನ್ ಕೃಷ್ಣ ದೇವಾಲಯದ ಬಳಿಯಿದ್ದ ಕಸ ತೆರವು

ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…

9 mins ago

ಓದುಗರ ಪತ್ರ: ಪ್ರಮುಖ ವೃತ್ತಗಳಲ್ಲಿ ಭಿಕ್ಷುಕರ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…

11 mins ago

ಓದುಗರ ಪತ್ರ: ರಸ್ತೆಗೆ ಡಾಂಬರೀಕರಣ ಮಾಡಿ, ಯುಜಿಡಿ ಪೈಪ್ ಬದಲಿಸಿ

ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…

14 mins ago

ಓದುಗರ ಪತ್ರ: ಹೊಸ ವರ್ಷದ ಸಂಕಲ್ಪ

ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…

16 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎಚ್‌ಐವಿ ಮಕ್ಕಳಿಗಾಗಿ ಉದ್ಯೋಗ ಬಿಟ್ಟ ದತ್ತಾ-ಸಂಧ್ಯಾ ದಂಪತಿ

ಪಂಜುಗಂಗೊಳ್ಳಿ  ಸಮಾಜದಿಂದ ಪರಿತ್ಯಕ್ತರಾದ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ ಆನಂದ ಗ್ರಾಮ ಮಹಾರಾಷ್ಟ್ರದ ಬೀಡ್‌ನ ಜಿಲ್ಲಾ ಆಸ್ಪತ್ರೆಯ ರಕ್ತದ ಬ್ಯಾಂಕಿನಲ್ಲಿ…

18 mins ago

ಕೊಡಗು ಜಿಲ್ಲೆಯತ್ತ ಪ್ರವಾಸಿಗರ ದಂಡು..!

ಪುನೀತ್ ಮಡಿಕೇರಿ ಹೊಸ ವರ್ಷಾಚರಣೆಗೆ ಕೊಡಗಿನತ್ತ ಮುಖ ಮಾಡಿದ ಜನರು; ಜಿಲ್ಲೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ ಮಡಿಕೇರಿ: ಹೊಸ ವರ್ಷವನ್ನು…

25 mins ago