ಮೈಸೂರು : ಭಾರತ್ ಜೋಡೊ ಯಾತ್ರಿಯು ಇಂದು ನಂಜನಗೂಡಿನ ಬದನವಾಳುವಿನಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಪ್ರಿಯಾಂಕ ಖರ್ಗೆ ಅವರು ಮಾತನಾಡಿ ಮಹಾತ್ಮ ಗಾಂಧಿ ಅವರು ಈ ಪವಿತ್ರ ಬದನವಾಳು ಗ್ರಾಮಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. 1927 ಹಾಗೂ 1938ರಲ್ಲಿ. ಅವರು ಈ ಭಾಗದಲ್ಲಿ ಖಾದಿ ಉದ್ಯಮ ಆರಂಭಿಸಬೇಕು ಎಂದು ಇಲ್ಲಿನ ಜನರಿಗೆ ಉತ್ತೇಜನ ನೀಡಿದ್ದು, ರಾಜ್ಯದ ಚರಿತ್ರೆಯಲ್ಲಿದೆ. ಅದಕ್ಕಾಗಿ ರಾಹುಲ್ ಗಾಂಧಿ ಅವರು ಅರ್ಧದಿನದ ಪಾದಯಾತ್ರೆ ಮೊಟಕು ಮಾಡಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಇಲ್ಲಿ ವಿಭಿನ್ನವಾಗಿ ಆಚರಿಸಿದರು.
ಈ ಐತಿಹಾಸಿಕ ದಿನದಂದು ಗಾಂಧಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಭಜನೆಯಲ್ಲಿ ಪಾಲ್ಗೊಂಡಿದ್ದರು. ಬದನವಾಳುವಿನಲ್ಲಿ 1993 ರಲ್ಲಿ ನಡೆದ ಹತ್ಯಾಕಾಂಡದ ಪರಿಣಾಮವಾಗಿ ಇಲ್ಲಿನ ಎರಡು ಸಮುದಾಯದ ಜನರು ಪರಸ್ಪರ ಬೆರೆತಿರಲಿಲ್ಲ. ಈ ಹೃದಯಗಳನ್ನು ಒಂದು ಮಾಡಬೇಕು ಎಂದು ಪ್ರಯತ್ನಿಸಿದ್ದೇವೆ. ಇಲ್ಲಿನ ರಸ್ತೆ ಅಭಿವೃದ್ಧಿ, ಮನೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದೇವೆ. 29 ವರ್ಷಗಳ ನಂತರ ಎರಡೂ ಸಮಾಜದವರನ್ನು ಮೊದಲ ಬಾರಿಗೆ ರಾಹುಲ್ ಗಾಂಧಿ ಅವರು ತಮ್ಮ ಜತೆ ಸೌಹಾರ್ದಯುತ ಭೋಜನ ಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಅವರ ಜತೆ ನಾನು, ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರು, ಶಾಸಕರು, ವೇಣುಗೋಪಾಲ್, ಸುರ್ಜೆವಾಲ ಅವರು ಕೂಡ ಈ ಭೋಜನ ಕೂಟದಲ್ಲಿ ಭಾಗವಹಿಸಿದ್ದೆವು.
ದೇಶದಲ್ಲಿ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಲಾಗಿದ್ದು, ಇದೇ ಭಾರತ ಜೋಡೋ ಅಥವಾ ಭಾರತ ಐಕ್ಯತಾ ಯಾತ್ರೆಯ ಮೂಲ ಉದ್ದೇಶ. ಎಲ್ಲಿ ನೋವು, ಶ್ರಮ ಇದೆಯೋ ಅಲ್ಲಿ ಫಲವಿದೆ ಎಂದು ನಂಬಿ ಯಾತ್ರೆ ಮುಂದುವರಿಸುತ್ತಿದ್ದೇವೆ. ಈ ಯಾತ್ರೆಗೆ ಎಲ್ಲ ಜಾತಿ, ಧರ್ಮದ ಜನರಿಂದ ಅಮೋಘ ಬೆಂಬಲ ವ್ಯಕ್ತವಾಗುತ್ತಿದೆ.
ಇಂದು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಅಲ್ಲಿನ ಸಿಬ್ಬಂದಿಗಳ ಜತೆ ಸುಮಾರು ಒಂದು ಗಂಟೆ ಚರ್ಚೆ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಾಯಿತು.
ಬಿಜೆಪಿ ನಾಯಕರು ನಾಳೆ ಬೆಳಗ್ಗೆ ಮೈಸೂರಿನಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಹಂಚಿಕೆ ಮಾಡಿರುವ ಮಾಹಿತಿ ಬಂದಿದೆ. ನಾನು ಪೊಲೀಸ್ ಆಯುಕ್ತರ ಜತೆ ಮಾತನಾಡುತ್ತೇನೆ. ಕಪ್ಪು ಬಾವುಟ, ಮೊಟ್ಟೆ, ಕಲ್ಲು, ಧಿಕ್ಕಾರ ಕೂಗುವುದು ಇದೆಲ್ಲ ಮಾಡಿದರೆ ಅದರ ಫಲವನ್ನು ಮುಂದೆ ಅವರೇ ಅನುಭವಿಸುತ್ತಾರೆ.
*ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ:*
ಬಿಜೆಪಿಯವರು ರಾಜ್ಯದಲ್ಲಿ ಸಂಪೂರ್ಣ ಹತಾಶರಾಗಿದ್ದಾರೆ. ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತಿದೆ. ಕೇಂದ್ರದಲ್ಲಿ ಅವರ ಸರ್ಕಾರ ಬಂದು 8 ರ್ಷವಾಗಿದೆ. ಇಲ್ಲಿ 3 ವರ್ಷದಿಂದ ಬಿಜೆಪಿ ಸರ್ಕಾರ ಇದೆ. ಇಷ್ಟಾದರೂ ಅವರಿಗೆ ಹೇಳಿಕೊಳ್ಳಲು ಸರಕಾರದ ಒಂದೂ ಯೋಜನೆ ಇಲ್ಲ. ಈಗಲೂ ದೇಶದಲ್ಲಿ ಏನೇ ನಡೆದರೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯವರು ನೆಹರೂ ಅವರನ್ನು ದೂರಿದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾರೆ.
ಭಾರತ ಜೋಡೋ ಯಾತ್ರೆ ಸರಿಯಿಲ್ಲ. ಇದಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದು ಟೀಕೆ ಮಾಡಿದ್ದರು. ಅವರು ಕೆಲವೊಮ್ಮೆ ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಬೇಕಾದ ರಾಜಕಾರಣಿ ಅಲ್ಲ ಎಂದು ಹೇಳುತ್ತಾರೆ. ಆದರೆ ಕಳೆದ 48 ಗಂಟೆಗಳಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರು ಸೇರಿಕೊಂಡು ರಾಹುಲ್ ಗಾಂಧಿ ಹಾಗೂ ಭಾರತ ಐಕ್ಯತಾ ಯಾತ್ರೆ ಬಗ್ಗೆ ಎಷ್ಟು ಹೇಳಿಕೆ ನೀಡಿದ್ದೀರಿ ಎಂದು ನೀವೇ ಲೆಕ್ಕ ಹಾಕಿ ನೋಡಿ.
ಈ ಯಾತ್ರೆಗೆ ಸಿಕ್ಕಿರುವ ಜನಬೆಂಬಲ ನೋಡಿ ನೀವು ಏನು ಮಾತನಾಡುತ್ತಿದ್ದೀರಾ ಎಂದು ನಿಮಗೇ ಅರಿವಿಲ್ಲ. ರಾಹುಲ್ ಗಾಂಧಿ ಅವರು ಬಂದ ನಂತರ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ, ತಲೆಬರಹಗಳನ್ನು ನೋಡಿದರೆ ಯಾವ ವಿಚಾರ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ ಎಂದು ತಿಳಿಯುತ್ತದೆ.
ವಿದ್ಯುತ್ ದರ ನಾಲ್ಕನೇ ಬಾರಿಗೆ ಹೆಚ್ಚಳ ಮಾಡಲಾಗುತ್ತಿದ್ದು, ಈ ಬಗ್ಗೆ ಸರ್ಕಾರದವರಿಂದ ಯಾವುದೇ ಹೇಳಿಕೆ ಬಂದಿಲ್ಲ. ನಿನ್ನೆ 79 ವರ್ಷದ ವೃದ್ಧೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೆಬ್ಬೆಟ್ಟು ಮುದ್ರೆ ನೀಡಲು ಸ್ಟ್ರೆಚರ್ ನಲ್ಲಿ ಕರೆದುಕೊಂಡು ಹೋಗಿದ್ದು, ಅಧಿಕಾರಿಗಳು ಅವರ ಮನೆಗೆ ಹೋಗಲು 2 ಲಕ್ಷ ಹಣ ಕೇಳಿದ್ದಾರೆ. ಹೀಗಾಗಿ ಅವರನ್ನು ಸ್ಟ್ರೆಚರ್ ನಲ್ಲಿ ಕರೆದೊಯ್ದಿದ್ದಾರೆ. ಅದರ ಬಗ್ಗೆ ಕಂದಾಯ ಸಚಿವರು ಮಾತನಾಡಿದರಾ? ಇಲ್ಲ. ಬದಲಿ ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ ಎಂದು ಸುದ್ದಿಯಾಗಿದೆ. ಅರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿ ನಾಯಕರ ಅಕ್ರಮ ಬೆಳಕಿಗೆ ಬಂದಿದೆ. ಕಳೆದೊಂದು ವರ್ಷದಲ್ಲಿ ಗೋಧಿ ಹಿಟ್ಟಿನ ಬೆಲೆ ಶೇ. 20 ರಷ್ಟು ಅಕ್ಕಿ ಬೆಲೆ ಶೇ.8 ರಷ್ಟು ಹೆಚ್ಚಾಗಿದೆ. ಇದರ ಬಗ್ಗೆ ಸರ್ಕಾರ ಮಾತನಾಡಿದೆಯಾ? ಹೈಕೋರ್ಟ್ ಬಿಬಿಎಂಪಿ ಅವ್ಯವಸ್ಥೆ ಕುರಿತು ರಾಜ್ಯ ಸರ್ಕಾರಕ್ಕೆ ಛಿಮಾರಿ ಹಾಕಿ ಡಿ. 31ರ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಿದೆ. ಸ್ವಚ್ಛತಾ ನಗರಗಳಲ್ಲಿ ಬೆಂಗಳೂರಿಗೆ 43 ನೇ ಸ್ಥಾನ ಸಿಕ್ಕಿದೆ. ಅದರ ಬಗ್ಗೆ ಯಾರಾದರೂ ಮಾತನಾಡಿದರಾ? ನೀಟ್ ಪರೀಕ್ಷೆಯಲ್ಲಿ ಹಾಲ್ ಟಿಕೆಟ್ ಸಿಗದೆ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಯಾರಾದರೂ ಮಾತನಾಡಿದ್ದಾರಾ?
ಇವರು ಮಾತೆತ್ತಿದರೆ ನೆಹರೂ, ದೇಶ ವಿಭಜನೆ ವಿಚಾರವಾಗಿ ಮಾತನಾಡುತ್ತಾರೆ. ನಿನ್ನೆ ಜಾಹೀರಾತುಗಳನ್ನು ನೀಡಿದ್ದಾರೆ. ನಾನು ಈಗಲೂ ಅವರಿಗೆ ಸವಾಲು ಹಾಕುತ್ತೇನೆ. ಅವರು ವಾಟ್ಸಾಪ್ ಯೂನಿವರ್ಸಿಟಿಯಿಂದ ಓದಿಕೊಂಡು ಬಂದು ಅಷ್ಟು ದೊಡ್ಡ ಜಾಹೀರಾತು ನೀಡಿದ್ದಾರೆ. ಮೊದಲ ಬಾರಿಗೆ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಬೇಕು ಎಂದು ಹೇಳಿದವರು ಸಾರ್ವಕರ್. 1937ರಲ್ಲಿ ಹಿಂದೂಮಹಾಸಭಾ ಅಧಿವೇಶನದ ಅಧ್ಯಕ್ಷೀಯ ಭಾಷಣದಲ್ಲಿ ಸಾರ್ವಕರ್ ಅವರು ಮೊದಲ ಬಾರಿಗೆ ದೇಶ ಧರ್ಮದ ಆಧಾರದ ಮೇಲೆ ಇಬ್ಭಾಗವಾಗಬೇಕು ಎಂದು ಹೇಳಿದ್ದರು.
ಸದನದಲ್ಲಿ ಅತಿವೃಷ್ಟಿ ಬಗ್ಗೆ ಸರ್ಕಾರ ದೊಡ್ಡ ಭಾಷಣ ಮಾಡಿತು. ಆದರೆ ಇದುವರೆಗೂ ಒಬ್ಬ ರೈತರಿಗೆ ಪರಿಹಾರ ಕಲ್ಪಿಸಿಲ್ಲ. 131 ಕೋಟಿ ರು. ಬೆಳೆ ವಿಮೆ ಯೋಜನೆ ಪರಿಹಾರ ಸತ್ತವರು ಹಾಗೂ ಬೇರೆಯವರಿಗೆ ಹೋಗಿದೆ. ಅದರ ಬಗ್ಗೆ ಸರಕಾರದ ಯಾರೂ ಮಾತನಾಡುವುದಿಲ್ಲ. ನಮ್ಮದು 40% ಸರ್ಕಾರ ಅಲ್ಲ ಎಂದು ಹೇಳುತ್ತಾರೆ. ಆದರೆ ಅಮೃತ್ ಪೌಲ್ ಅವರು 1.67 ಕೋಟಿ ಹಣ ಪಡೆದಿದ್ದಾರೆ ಎಂದು ವರದಿ ಬಂದಿದೆ. ಪರಿಶಿಷ್ಟ ಪಂಗಡದ ಸ್ವಾಮಿಜಿಗಳು ಧರಣಿ ಕೂತು 200 ಕ್ಕೂ ಹೆಚ್ಚು ದಿನಗಳಾಗಿದ್ದು, ಇವುಗಳ ಬಗ್ಗೆ ಮಾತನಾಡಿದ್ದಾರಾ? ಕೇವಲ ಕಾಂಗ್ರೆಸ್ ತೋಡೋ, ಭಾರತ ತೋಡೋ ಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ನಿನ್ನೆ ಈಶ್ವರಪ್ಪನವರು ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಮದುವೆ ಗಂಡಾಗಿದ್ದಾನೆ, ಆದರೆ ಮದುವೆಗೆ ಯಾರೂ ಸಿದ್ಧರಿಲ್ಲ ಎಂದಿದ್ದಾರೆ.
ಇದೆಲ್ಲವೂ ಬಿಜೆಪಿ ಎಷ್ಟರ ಮಟ್ಟಿಗೆ ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲೆ ಗಮನ ಹರಿಸಿದ್ದಾರೆ ಎಂಬುದಕ್ಕೆ ಸಾಕ್ಷಿ. ಈ ಗಮನವನ್ನು ನಿಮ್ಮ ಪಕ್ಷ ಹಾಗೂ ಆಡಳಿತದ ಬಗ್ಗೆ ನೀಡಿ. ಇಲ್ಲಿ ದಸರಾ ನಡೆಯುತ್ತಿದ್ದು, ಇತ್ತೀಚೆಗೆ ಇಲ್ಲಿನ ಗುತ್ತಿಗೆದಾರ ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿಯವರಿಗೆ ಈ ಬಗ್ಗೆ ಆಸಕ್ತಿ ಇಲ್ಲ. ಕರ್ನಾಟಕ ರಾಜ್ಯಕ್ಕೆ ಒಳ್ಳೆಯದಾಗಬೇಕು, ಯುವಕರ ಭವಿಷ್ಯ ಸುಧಾರಿಸಬೇಕು ಎಂಬ ಇಚ್ಛೆ ಇಲ್ಲ.
ರಾಹುಲ್ ಗಾಂಧಿ ಬಂದರೆ ರಾಹುಕಾಲ ಆರಂಭ, ಇದು ಹಿಂದೂ ವಿರೋಧಿ ಯಾತ್ರೆ ಎಂದು ಹೇಳುತ್ತಾರೆ. ಜನರಿಗೆ ಬೇಕಾಗಿರುವುದು ಇದೇನಾ? ಇದು ನೈಜ್ಯ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ. ಈ ನೈಜ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ, ನ್ಯಾಯಾಂಗ ತನಿಖೆ ಮಾಡಿಸಿ, ನಿಮ್ಮ ಪ್ರಾಮಾಣಿಕತೆ ತೋರಿಸಿ. ನಿಮ್ಮ ನೇಮಕಾತಿ ಹಗರಣ, ಬೆಲೆ ಏರಿಕೆ, ನಾನಾ ಇಲಾಖೆಗಳ ಅಕ್ರಮದ ಬಗ್ಗೆ ಮಾತನಾಡುವುದಿಲ್ಲ. ಆದರೆ ರಾಹುಲ್ ಗಾಂಧಿ ಯಾವ ಬಟ್ಟೆ ಹಾಕುತ್ತಾರೆ, ಡಿ.ಕೆ. ಶಿವಕುಮಾರ್ ಹೇಗೆ ನಡೆಯುತ್ತಾರೆ, ಸಿದ್ದರಾಮಯ್ಯ ಅವರು ಹೇಗೆ ಕೂತಿದ್ದರು ಎಂದು ಮಾತನಾಡುತ್ತಾರೆ. ಇದಕ್ಕೆ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರಾ?
ದೇಶದಾದ್ಯಂತ ಹೆಸರು ಮಾಡಿರುವ ಕರ್ನಾಟಕ ಮಾದರಿಯನ್ನು ಬಿಟ್ಟು ಯುಪಿ ಮಾಡೆಲ್ ತರುತ್ತೇವೆ ಎಂದು ಹೇಳುವ ನಿಮಗೆ ನಾಚಿಕೆಯಾಗಬೇಕು. ಇಂದು ನಾವು ಮಾಡಿರುವ 170 ಮೀ. ಸಣ್ಣ ರಸ್ತೆ, ಅದು ಸಾಧಾರಣವಲ್ಲ. ಕೋಮುಗಲಭೆ ನಂತರ 1983ಯಿಂದ ಬಂದ್ ಆಗಿದ್ದ ರಸ್ತೆಯನ್ನು ಮಾತ್ರವಲ್ಲ ಒಡೆದು ಹೋಗಿದ್ದ ಅವರ ಮನಸ್ಸುಗಳನ್ನು ಒಗ್ಗೂಡಿಸಿ ಭ್ರಾತೃತ್ವ, ಸೌಹಾರ್ದತೆ ತಂದಿದ್ದೇವೆ. ಇದು ಭಾರತ ಜೋಡೋ ಯಾತ್ರೆ. ಇಂದು ನಡೆದ ಸೌಹಾರ್ದತೆ ಕೂಟದಲ್ಲಿ ಜನ ಅನ್ನ ಹಂಚಿಕೊಂಡು ಒಂದಾಗಿದ್ದಾರೆ. ಇದು ರಾಹುಲ್ ಗಾಂಧಿ ಅವರ ಯಾತ್ರೆಯ ಪ್ರಾಮಾಣಿಕ ಪ್ರಯತ್ನ. ಇದು ದೇಶವನ್ನು ಒಗ್ಗೂಡಿಸಿ, ಸಂವಿಧಾನ ಎತ್ತಿಹಿಡಿಯುವ ಯಾತ್ರೆಯಾಗಿದೆ. ಬಿಜೆಪಿ ಇದನ್ನು ಅರ್ಥಮಾಡಿಕೊಳ್ಳಬೇಕು.
ಬಿಜೆಪಿಯವರಿಗೆ ಇದು ಅರ್ಥವಾಗುವುದಿಲ್ಲ. ಕಾರಣ ಅವರು ಇದುವರೆಗೂ ಏನನ್ನೂ ಕಟ್ಟಿಲ್ಲ. ಅವರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ, ಸಮಾಜ ಕಟ್ಟಿಲ್ಲ. ಬಿಜೆಪಿಗೂ ಕಾಂಗ್ರೆಸ್ ಗೂ ಇರುವ ವ್ಯತ್ಯಾಸ ಎಂದರೆ ನಾವು ಭಾರತ ಜೋಡೋ ಎಂದರೆ ಅವರು ಭಾರತ ತೋಡೋ ಎನ್ನುತ್ತಾರೆ. ಅವರ ಜೀವನದಲ್ಲಿ ಒಂದು ಪಾದಯಾತ್ರೆ ಮಾಡಿಲ್ಲ. ಅವರು ಕೇವಲ ಒಂದು ರಥಯಾತ್ರೆ ಮಾಡಿದ್ದು, ಅದರಿಂದ ಭಾರತ ವಿಭಜನೆ ಆಯಿತು.
ಜನ ನಿಮಗೆ ಮತ ನೀಡಿರುವುದು ಉತ್ತಮ ಆಡಳಿತ ನೀಡಲು. ಇಂದು ಯುವಕರು ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರು ದಿಕ್ಕುತಪ್ಪಿದ್ದಾರೆ. ಉತ್ತಮ ಆಡಳಿತ ನೀಡುವತ್ತ ನೀವು ಗಮನಹರಿಸಬೇಕೇ ಹೊರತು, ನಮ್ಮ ಪೋಸ್ಟರ್ ಹರಿಯುವುದು, ಪೇಸಿಎಂ ಟೀಶರ್ಟ್ ಧರಿಸಿದ ಕಾರ್ಯಕರ್ತರ ಬಂಧನ, ಕಪ್ಪು ಬಾವುಟ ಪ್ರದರ್ಶನ ನೀಡುವುದು ನಿಲ್ಲಿಸಿ. ಇದಕ್ಕೆ ನಾವು ಹೆದರುತ್ತೇವೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಹಗಲುಗನಸು. ಈಗಾಗಲೇ ನಮ್ಮ ಅಧ್ಯಕ್ಷರು ಹಾಗೂ ಸಿಎಲ್ ಪಿ ನಾಯಕರು ಬಹಳ ಸ್ಪಷ್ಟವಾಗಿ ತಿಳಿಸಿದ್ದು, ನೀವು ನಮ್ಮ ಶಾಂತಿಯುತ ಯಾತ್ರೆಗೆ ಅಡ್ಡಿ ಪಡಿಸಿದರೆ ನಾವು ಸುಮ್ಮನೆ ಕೂರುವುದಿಲ್ಲ. ಇದು ಸಂವಿಧಾನ ಉಳಿಸಲು ನಮ್ಮ ಕೊನೆಯ ಹೋರಾಟ. ನಾವು ಬುದ್ಧ, ಬಸವ ಹಾಗೂ ಅಂಬೇಡ್ಕರ್ ತತ್ವದ ಮೇಲೆ ನಡೆಯುವವರು, ನೀವು ಅನಿವಾರ್ಯವಾಗಿ ಅದನ್ನು ಬಿಡುವಂತೆ ಮಾಡಿದರೆ, ನಿಮಗೆ ಅದೇ ಧಾಟಿಯಲ್ಲೇ ಅರ್ಥಮಾಡಿಸಬೇಕಾದರೆ, ಅದಕ್ಕೂ ನಾವು ಸಿದ್ಧವಿದ್ದೇವೆ.
*ಪ್ರಶ್ನೋತ್ತರ:*
ನೀವು ಕಣ್ಣೀರು ಹಾಕಿರುವುದಕ್ಕೆ ಸಿ.ಟಿ ರವಿ ವ್ಯಂಗ್ಯ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ನಾನು ಕಣ್ಣೀರು ಹಾಕಿದ್ದಕ್ಕೆ ಅವನು ವ್ಯಂಗ್ಯ ಮಾಡಲಿ. ಅವನಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ. ಅವರ ಮಂತ್ರಿಗಳು ಸೌಜನ್ಯಕ್ಕೂ ಹೋಗಿ ಆ ಮೃತರ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಲಿಲ್ಲ. ನಾನು ಸಿದ್ದರಾಮಯ್ಯನವರು ಬಂದು ಅವರನ್ನು ಭೇಟಿ ಮಾಡಿ ತನಿಖೆ ಮಾಡಿದ ನಂತರ 36 ಜನ ಸತ್ತಿರುವ ಮಾಹಿತಿ ಬಹಿರಂಗವಾಯಿತು. ನಂತರ ನ್ಯಾಯಾಲಯದ ಸಮಿತಿ ಕೂಡ ಇದನ್ನು ತಿಳಿಸಿತು. ನಂತರ ನಾನು ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಅವರ ಪರಿಸ್ಥಿತಿ ನನ್ನ ಮನೆಯಲ್ಲೋ , ನನ್ನ ತಂಗಿ ಮನೆಯಲ್ಲೋ ಅಥವಾ ರವಿ ಮನೆಯಲ್ಲೋ ಆದರೆ ಏನು ಗತಿ? ಎಂದು ಪ್ರತಿ ಮನೆಯಲ್ಲಿ ಕೂತು ಮಾತನಾಡಿದ್ದೇನೆ. ಆ ಮಕ್ಕಳು, ತಾಯಿ ಕಾಣುತ್ತಿದ್ದ ಕನಸು ಏನು ಎಂದು ನಮಗೆ ಗೊತ್ತಿದೆ. ರವಿ ಹಾಗೂ ಬಿಜೆಪಿಯವರಿಗೆ ಕಣ್ಣು, ಹೃದಯ ಏನೂ ಇಲ್ಲ’ ಎಂದು ಹರಿಹಾಯ್ದರು.
ರಾಹುಲ್ ಗಾಂಧಿ ಅವರಿಗೆ ಸಿ.ಟಿ ರವಿ ಅವರು ಪ್ರಶ್ನೆ ಮಾಡಿರುವ ಬಗ್ಗೆ ಕೇಳಿದಾಗ, ‘ಹತಾಶನಾದ ರವಿ ನಾಲಿಗೆಗೆ ಮೂಳೆ ಇಲ್ಲ. ಮುಖ್ಯಮಂತ್ರಿ ಮಾತನಾಡಲಿ ನಾವು ಉತ್ತರ ನೀಡುತ್ತೇವೆ. ನಾವು ದಿನನಿತ್ಯ ಅವರ ಪ್ರಣಾಳಿಕೆ ಬಗ್ಗೆ ಕೇಳುತ್ತಿರುವ ಪ್ರಶ್ನೆಗೆ ಅವರು ಉತ್ತರ ನೀಡಲಿ. ನಂತರ ನಾವು ಉತ್ತರ ನೀಡುತ್ತೇವೆ. ಅಸೂಯೆಗೆ ಮದ್ದಿಲ್ಲ. ಈ ದೇಶದ ಜನರು ನಮ್ಮ ಯಾತ್ರೆಗೆ ನೀಡುತ್ತಿರುವ ಬೆಂಬಲವನ್ನು ಕಂಡು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸವನ್ನು ಸಹಿಸದೆ ಗಮನ ಬೇರೆಡೆ ಸೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರು ಏನಾದರೂ ಪ್ರಯತ್ನಿಸಲಿ, ಜನ ಅವರಿಗೆ ತಕ್ಕ ಉತ್ತರ ನೀಡುತ್ತಾರೆ’ ಎಂದು ತಿಳಿಸಿದರು.’
ವಕ್ಫ್ ನಲ್ಲಿ ಜಮೀನು ಲೂಟಿಯಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ: ಪ್ರತಿಪಕ್ಷ ನಾಯಕ ಕೋಲಾರ: ವಕ್ಫ್ ಅಧಿಕಾರಿಗಳು ರೈತರ ಬಳಿ ಬಂದರೆ…
ಮಂಡ್ಯ: ಇಲ್ಲಿನ ಬೂದನೂರು ಗ್ರಾಮದ ಬಳಿ ಅನ್ಯಕ್ರಾಂತವಾಗದ ಜಮೀನಿನಲ್ಲಿ ಹುಕ್ಕಾ ಬಾರ್ ನಡೆಸಲು ಅನಧಿಕೃತ ಲೈಸೆನ್ಸ್ ನೀಡಿದ ಪಿಡಿಓ ವಿನಯ್‌ಕುಮಾರ್‌ನನ್ನು…
ಮಡಿಕೇರಿ: ಶನಿವಾರಸಂತೆಯ ವಿಜಯ ವಿನಾಯಕ ದೇವಾಲಯದಲ್ಲಿ ಭಾನುವಾರ ರಾತ್ರಿ ಬಾಗಿಲು ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿ ಹೊತ್ತು ಕಳ್ಳರು…
ಬೆಂಗಳೂರು: ಇನ್ನೂ ತಮ್ಮ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡದ ವಾಹನ ಸವಾರರಿಗೆ ರಾಜ್ಯ ಸರ್ಕಾರ…
ಮೈಸೂರು : ಸಾಂಸ್ಕೃತಿಕ ನಗರದಲ್ಲಿ ಇದೀಗ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು ಯುವತಿಯ ಸ್ನೇಹಿತರಿಬ್ಬರು ವಿಜಯನಗರದ ಖಾಸಗಿ ಹೋಟೆಲ್…
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.…