‘ಆಂದೋಲನ’ ಸಂದರ್ಶನದಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ
ಬಿ.ಎನ್.ಧನಂಜಯಗೌಡ
ಮೈಸೂರು: ನಿವೃತ್ತರ ಸ್ವರ್ಗ ಎಂದೇ ಖ್ಯಾತಿವೆತ್ತ, ಶಾಂತಿ ಪ್ರಿಯ, ಕಲೆ ಮತ್ತು ಸಂಸ್ಕೃತಿ ಪ್ರಿಯ ನಗರದಲ್ಲಿ ಆಗಾಗ ಬೆಚ್ಚಿ ಬೀಳಿಸುವಂತಹ ಅಪರಾಧ ಪ್ರಕರಣಗಳು ನಡೆಯುತ್ತಿರುತ್ತವೆ. ಇಂತಹ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ನಗರ ಪೊಲೀಸ್ ನೂತನ ಆಯುಕ್ತರಾದ ರಮೇಶ್ ಬಾನೋತ್ ಅವರು ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ, ಭದ್ರತೆ, ಸುಗಮ ಸಂಚಾರ, ಅಪರಾಧಗಳ ನಿಯಂತ್ರಣ ಸಂಬಂಧ ಮಾತನಾಡಿದ್ದಾರೆ.
ಆಂದೋಲನ: ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಇದರ ನಿಯಂತ್ರಣ ಹೇಗೆ?
ಆಯುಕ್ತ: ಸೈಬರ್ ಅಪರಾಧ ಪ್ರಕರಣಗಳು ಪತ್ತೆ ಮಾಡುವುದು ಸ್ವಲ್ಪ ಕಷ್ಟವೇ. ಆದರೆ, ಮೈಸೂರು ಸೆನ್ ಠಾಣೆ ಶೇ.೩೦ರಿಂದ ೪೦ ಪ್ರಕರಣಗಳಲ್ಲಿ ರಿಕವರಿ ಮಾಡಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಡಿಜಿಟಲ್ ಜಾಹೀರಾತುಗಳನ್ನು ಕಂಡು ಮೋಸ ಹೋಗಬಾರದು. ಅಪರಿಚಿತ ಸಂಖ್ಯೆಗಳಿಂದ ಬರುವ ಮೆಸೇಜ್ ಮತ್ತು ವಾಟ್ಸ್ ಆ್ಯಪ್ ಕಾಲ್‌ಗಳನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ಇರಬೇಕು. ಈ ರೀತಿಯ ಅಪರಾಧಗಳು ಆದ ತಕ್ಷಣ ಬಂದು ದೂರು ನೀಡಿದರೆ, ಟೋಲ್ ಫ್ರೀ ಸಂಖ್ಯೆ೧೧೨ಕ್ಕೆ ಕರೆ ಮಾಡಿ ತಿಳಿಸಿದರೆ ವರ್ಗಾವಣೆಯಾಗುವ ಹಣವನ್ನು ಬ್ಯಾಂಕ್ ನವರಿಗೆ ಹೇಳಿ ಹೋಲ್ಡ್ ಮಾಡಿಸುವ ಪ್ರಯತ್ನ ಮಾಡಬಹುದು.
ಆಂದೋಲನ: ನಗರದಲ್ಲಿನ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಏನಾದರೂ ಹೊಸ ಕ್ರಮಗಳನ್ನು ಕೈಗೊಂಡಿದ್ದೀರಾ?
ಆಯುಕ್ತ: ತ್ರಿಬಲ್ ರೈಡಿಂಗ್ ತಡೆಗೆ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದೇವೆ. ಇದು ನಿರಂತರವಾಗಿ ನಡೆಯಲಿದೆ. ಸಂಜೆ ೬ರಿಂದ ರಾತ್ರಿ ೯ ಗಂಟೆಯವರೆಗೂ ರ್ಯಾಂಡಮ್ ಆಗಿ ಎಲ್ಲ ವಾಹನಗಳನ್ನು ಪರಿಶೀಲನೆ ಮಾಡಲಾಗುವುದು. ವಾಹನ ದಟ್ಟಣೆ ಮತ್ತು ಮಾರುಕಟ್ಟೆಗಳು ಇರುವ ಕಡೆ ಸುವ್ಯವಸ್ಥಿತ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲು ಸಂಚಾರ ವಿಭಾಗದ ಎಸಿಪಿ ಅವರಿಗೆ ಹೇಗೆ ಮಾಡಬಹುದು ಎಂದು ಪ್ರಸ್ತಾವನೆ ನೀಡಲು ಹೇಳಿದ್ದೇನೆ. ಇದನ್ನು ನೋಡಿ ಆ ನಂತರ ವ್ಯವಸ್ಥಿತ ಪಾರ್ಕಿಂಗ್ ಕಲ್ಪಿಸಲು ಯೋಜನೆ ಕೈಗೊಳ್ಳಲಾಗುವುದು.
ಆಂದೋಲನ: ನಗರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಏನೆಲ್ಲ ನೂತನ ಕ್ರಮ ಕೈಗೊಂಡಿದ್ದೀರಿ?
ಆಯುಕ್ತ: ನಗರಕ್ಕೆ ಪ್ರವೇಶಿಸುವ ಎಲ್ಲ ಭಾಗದ ಗಡಿಯಲ್ಲಿ ಇನ್ ಅಂಡ್ ಔಟ್ ಆಗುವವರ ಬಗ್ಗೆ ನಮ್ಮ ಸಿಬ್ಬಂದಿ ಪರಿಶೀಲಿಸಿ, ವಿಳಾಸ ನಮೂದಿಸಿಕೊಳ್ಳುತ್ತಾರೆ. ನಗರದ ಒಳಗೆ ೨೩ ಪಾಯಿಂಟ್‌ಗಳನ್ನು ಮಾಡಿದ್ದು, ನಮ್ಮ ಸಿಬ್ಬಂದಿ ಅನುಮಾನಸ್ಪದವಾಗಿ ಕಂಡು ಬಂದವರನ್ನು ಪರಿಶೀಲಿಸುವರು. ಇನ್ನು ರೌಡಿಶೀಟರ್‌ಗಳ ಪೆರೇಡ್ ಅನ್ನು ಹಿಂದಿಗಿಂತಲೂ ಹೆಚ್ಚು ಬಾರಿ ಮಾಡಲು ಮತ್ತು ಶಾಂತಿಭಂಗ ಮಾಡುವವರನ್ನು ಗುರುತಿಸಲು ಸೂಚಿಸಿದ್ದೇನೆ. ನಗರ ಪಾಲಿಕೆಯಿಂದ ರಾತ್ರಿ ೧೧ ಗಂಟೆಯ ನಂತರವೂ ತೆರೆದಿರಬಹುದಾದ ಅಂಗಡಿಗಳನ್ನು ಬಿಟ್ಟು, ಉಳಿದ ಎಲ್ಲ ಅಂಗಡಿಗಳನ್ನೂ ರಾತ್ರಿ ೧೧ಗಂಟೆಯ ಹೊತ್ತಿಗೆ ಮುಚ್ಚಬೇಕು. ಇಲ್ಲವಾದರೆ, ಕ್ರಮ ಕೈಗೊಳ್ಳಲು ಎಲ್ಲ ಠಾಣೆಗಳ ಪೊಲೀಸರಿಗೆ ತಿಳಿಸಿದ್ದೇನೆ.
ಆಂದೋಲನ: ಭಯೋತ್ಪಾದನೆ ಚಟುವಟಿಕೆಗಳಿಗೆ ಮೈಸೂರು ಸೂಕ್ತ ಎಂಬ ಭಾವನೆ ಕಿಡಿಗೇಡಿಗಳಲ್ಲಿ ಇದೆ. ಈ ಆತಂಕ ದೂರು ಮಾಡುವುದು ಹೇಗೆ?
ಆಯುಕ್ತ: ಬಾಡಿಗೆ ನೀಡುವ ಮುನ್ನ ಮನೆ ಮಾಲೀಕರು ಎಚ್ಚರಿಕೆ ವಹಿಸಬೇಕು. ನಗರದಲ್ಲಿ ಬಾಡಿಗೆ ಇರುವ ಕುಟುಂಬಗಳು, ಬ್ಯಾಚುಲರ್‌ಗಳು ಮತ್ತು ಪಿಜಿಯಲ್ಲಿ ಇರುವವರ ಪೂರ್ವಾಪರ ಮಾಹಿತಿಯನ್ನು ಒಂದು ತಿಂಗಳ ಒಳಗೆ ಆಯಾ ಪೊಲೀಸ್ ಠಾಣೆಗೆ ನೀಡಬೇಕು. ಇದಕ್ಕಾಗಿ ಮೂರು ರೀತಿಯ ನಮೂನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಆಯಾ ಠಾಣೆಗಳಲ್ಲಿ ನಮೂನೆ ಪಡೆದು ನಾವು ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಠಾಣೆಗಳಿಗೆ ನೀಡಬೇಕು. ಈ ಬಗ್ಗೆ ಈಗಾಗಲೇ ಎಸಿಪಿಗಳಿಗೆ, ಇನ್ಸ್‌ಪೆಕ್ಟರ್‌ಗಳಿಗೂ ಸೂಚನೆ ನೀಡಲಾಗಿದೆ.
ಆಂದೋಲನ: ನಗರದಲ್ಲಿ ಹೆಚ್ಚುತ್ತಿರುವ ಸರಗಳವು ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ?
ಆಯುಕ್ತ: ಈ ವರ್ಷ ಇಲ್ಲಿಯವರೆಗೂ ದಾಖಲಾಗಿರುವ ೬೪ ಪ್ರಕರಣಗಳ ಪೈಕಿ ೫೯ ಪ್ರಕರಣಗಳು ಪತ್ತೆಯಾಗಿವೆ. ಸೂಕ್ಷ್ಮ ಮತ್ತು ಈ ರೀತಿಯ ಘಟನೆಗಳು ನಡೆಯುವ ಕೆಲವು ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜಿಸಲು ಮತ್ತು ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ. ವಿಜಯನಗರ ಮತ್ತು ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ ಸರಗಳವು ಪ್ರಕರಣಗಳು ಹೆಚ್ಚು ಇರುವುದು ಕಂಡು ಬಂದಿದ್ದು, ಬೀಟ್ ಹೆಚ್ಚು ಮಾಡಲು ವಾಹನವನ್ನು ನೀಡಲಾಗಿದೆ. ಸರಗಳವು ಆದಾಗ ತಡವಾಗಿ ಬಂದು ದೂರು ದಾಖಲಿಸುವುದನ್ನು ಬಿಟ್ಟು, ತಕ್ಷಣ ಟೋಲ್ ಫ್ರೀ ಸಂಖ್ಯೆ ೧೧೨ಕ್ಕೆ ಕಾಲ್ ಮಾಡಿ ಹೇಳಿದರೆ, ಆದಷ್ಟು ಬೇಗೆ ಖದೀಮರನ್ನು ಹಿಡಿಯಲು ಸಾಧ್ಯವಾಗುತ್ತದೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…