‘ಆಂದೋಲನ’ ದಿನಪತ್ರಿಕೆ ನಡೆಸಿದ ಕಿರು ಸಂದರ್ಶನದಲ್ಲಿ ಇಲಾಖೆ ಕಾರ್ಯಕ್ರಮಗಳ ಮಾಹಿತಿ
ಕೆ.ಬಿ.ರಮೇಶನಾಯಕ
ಮೈಸೂರು: ಬಡವರು-ಶ್ರೀಮಂತರು ಎನ್ನುವ ತಾರತಮ್ಯ ಇಲ್ಲದೆ, ಸರ್ವರಿಗೂ ಆರೋಗ್ಯ ಸೇವೆ ನೀಡಬೇಕೆಂಬ ಮಹಾದಾಸೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಹಲವಾರು ಕಾರ್ಯಕ್ರಮಗಳನ್ನು ಮೈಸೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸಾ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕೆಂಬ ಕಾರಣಕ್ಕಾಗಿ ಹಲವು ಪಿಎಚ್‌ಸಿಗಳನ್ನು ಮೇಲ್ದರ್ಜೇಗೇರಿಸುವ ಮೂಲಕ ಮೂಲಸೌಕರ್ಯವನ್ನು ಒದಗಿಸಲಾಗಿದೆ.
‘ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಕಿರು ಸಂದರ್ಶನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಕೆ.ಎಚ್.ಪ್ರಸಾದ್ ಅವರು, ಆರೋಗ್ಯ ಇಲಾಖೆಯು ಸಾಧಿಸಿರುವ ಪ್ರಗತಿ, ಸರ್ಕಾರದ ಕಾರ್ಯಕ್ರಮಗಳು, ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಪ್ರಶ್ನೆ: ಜಿಲ್ಲೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆಯೇ?
ಡಾ.ಕೆ.ಎಚ್.ಪ್ರಸಾದ್: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಅನುಮತಿ ದೊರೆತ ಮೇಲೆ ಸಾಕಷ್ಟು ವೈದ್ಯರನ್ನು ನೇಮಕ ಮಾಡಿಕೊಂಡಿರುವ ಕಾರಣ ಈಗ ಯಾವುದೇ ಸಮಸ್ಯೆಗಳಿಲ್ಲ. ಸರ್ಕಾರದಿಂದ ೨೮ ವೈದ್ಯರ ನೇಮಕಾತಿಗೆ ಇತ್ತೀಚೆಗೆ ಅನುಮತಿ ದೊರೆತಿದೆ. ಫಾರ್ಮಾಸಿಸ್ಟ್‌ಗಳ ಕೊರತೆ ನೀಗಿಸಲು ೪೦ ಫಾರ್ಮಾಸಿಸ್ಟ್‌ಗಳು, ೧೦ ಲ್ಯಾಬ್ ಟೆಕ್ನಿಷಿಯನ್‌ಗಳ ನೇಮ ಕಕ್ಕೂ ಒಪ್ಪಿಗೆ ದೊರೆತಿರುವ ಕಾರಣ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲಾಗುವುದು. ಮೂರ್ನಾಲ್ಕು ವರ್ಷಗಳ ಹಿಂದೆ ವೈದ್ಯರ ಕೊರತೆ ಇದ್ದಿದ್ದು ನಿಜ. ಈಗ ಅಂತಹ ಸಮಸ್ಯೆ ಇಲ್ಲ.
ಪ್ರಶ್ನೆ: ಹೆಚ್ಚುವರಿ ಪಿಎಚ್‌ಸಿ, ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಾಪನೆ ಪ್ರಸ್ತಾವನೆ ಇದೆಯೇ?
ಡಾ.ಕೆ.ಎಚ್.ಪ್ರಸಾದ್: ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ೩೦ ಸಾವಿರ ಜನಸಂಖ್ಯೆಗೆ ಒಂದು ಪಿಎಚ್‌ಸಿ ಇರುವುದು ಮಾನದಂಡವಾಗಿದೆ. ಆದರೆ, ಜಿಲ್ಲೆಯಲ್ಲಿ ೧೪೮ ಪ್ರಾಥಮಿಕ ಅರೋಗ್ಯ ಕೇಂದ್ರಗಳು, ೧೦ ಸಮುದಾಯ ಆರೋಗ್ಯ ಕೇಂದ್ರಗಳು, ಆರು ತಾಲ್ಲೂಕು ಆಸ್ಪತ್ರೆಗಳು, ಒಂದು ಜಿಲ್ಲಾ ಆಸ್ಪತ್ರೆ ಇದೆ. ಈಗ ಸರ್ಕಾರದಿಂದ ಆರು ನಮ್ಮ ಕ್ಲಿನಿಕ್‌ಗಳು ಮಂಜೂ ರಾಗಿದ್ದು, ಈಗಾಗಲೇ ನಾಲ್ಕು ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ಶ್ರೀರಾಂಪುರ, ಆಲನಹಳ್ಳಿಯಲ್ಲಿ ಪ್ರಾರಂಭಿಸಲು ಸಿದ್ಧತೆ ಮಾಡಲಾಗಿದೆ. ಹಾಗಾಗಿ, ಹೊಸದಾಗಿ ಪಿಎಚ್‌ಸಿಗಳ ಸ್ಥಾಪನೆ ಅಗತ್ಯವಿಲ್ಲ.
ಪ್ರಶ್ನೆ: ಸಮಗ್ರ ಆರೋಗ್ಯ ತಪಾಸಣೆ ಕಾರ್ಯ ಕುಂಠಿತವಾಗಿದೆಯೇ?
ಡಾ.ಕೆ.ಎಚ್.ಪ್ರಸಾದ್: ಜಿಲ್ಲೆಯಲ್ಲಿ ಸಮಗ್ರ ಆರೋಗ್ಯ ತಪಾಸಣೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮೊದಲಾದ ಸಮಸ್ಯೆಗಳು ಇರುವವರನ್ನು ನೋಂದಣಿ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ೧೬ ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸರ್ಕಾರ ನೀಡಿದ್ದ ಗುರಿಯಲ್ಲಿ ೧೨ ಸಾವಿರ ಜನರಿಗೆ ಮಾಡಲಾಗಿದೆ. ಗರ್ಭಿಣಿಯರು, ಬಾಣಂತಿಯರ ತಪಾಸಣೆ ಕಾರ್ಯ ನಡೆಯುತ್ತಿದೆ. ೧೨ ಅಂಶಗಳ ಆರೋಗ್ಯ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆಯುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗಿದೆ.
ಪ್ರಶ್ನೆ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕೊರತೆ ಇರುವ ಬಗ್ಗೆ ದೂರು ಇದೆಯಲ್ಲಾ?
ಡಾ.ಕೆ.ಎಚ್.ಪ್ರಸಾದ್: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲವು ಕಡೆಗಳಲ್ಲಿ ಕೊಠಡಿಗಳ ಕೊರತೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಇರುವುದರ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದರು. ಕೆಲವು ಪಿಎಚ್‌ಸಿಗಳನ್ನು ಮೇಲ್ದರ್ಜೇಗೇರಿಸಲು ಮತ್ತು ಮೂಲ ಸೌಕರ್ಯ ಒದಗಿಸಲು ತಲಾ ೨೦ ಲಕ್ಷ ರೂ.ನಂತೆ ಅನುದಾನ ಬಿಡುಗಡೆಯಾಗಿದೆ. ಪ್ರಯೋಗಾಲಯದ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕೆಲವು ಕಡೆ ಹೊಸ ಕೊಠಡಿಗಳ ನಿರ್ಮಾಣ ನಡೆಯುತ್ತಿರುವುದರಿಂದ ಶೀಘ್ರದಲ್ಲೇ ಈ ಕೊರತೆ ನೀಗಲಿದೆ.
ಪ್ರಶ್ನೆ: ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಜನರಿಂದ ದೂರು ಬರುತ್ತಿರುವ ಬಗ್ಗೆ ಏನು ಹೇಳ್ತೀರಾ?
ಡಾ.ಕೆ.ಎಚ್.ಪ್ರಸಾದ್: ಸರ್ಕಾರ ವೈದ್ಯರಿಗೆ ಸಂಬಳ ಕೊಡುತ್ತದೆ. ಯಾವುದೇ ವೈದ್ಯರಾಗಲಿ ಉಚಿತ ಸೇವೆ ಮಾಡಬೇಕು. ಯಾರೇ ಆಗಿದ್ದರೂ ರೋಗಿಗಳಿಂದ ಹಣ ವಸೂಲಿ ಮಾಡುವ ಬಗ್ಗೆ ದೂರು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಚಿಕಿತ್ಸೆಗೆ ವಿಳಂಬ ಮಾಡಿದರೆ ನೇರವಾಗಿ ದೂರು ಕೊಡಬಹುದು.
ಪ್ರಶ್ನೆ: ಜಿಲ್ಲೆಯಲ್ಲಿ ಆರೋಗ್ಯ ಕರ್ನಾಟಕ ಕಾರ್ಡ್‌ಗಳ ಪ್ರಗತಿ ಹೇಗಿದೆ?
ಡಾ.ಕೆ.ಎಚ್.ಪ್ರಸಾದ್: ಗ್ರಾಮ ಒನ್ ಸೆಂಟರ್‌ಗಳ ಮೂಲಕ ಪ್ರಧಾನಮಂತ್ರಿ ಜನ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸುವ ಕೆಲಸ ನಡೆಯುತ್ತಿದ್ದು, ಈವರೆಗೆ ೬ ಲಕ್ಷ ಕಾರ್ಡ್‌ಗಳನ್ನು ವಿತರಿಸಲಾ ಗಿದೆ. ಜಿಲ್ಲೆಯಲ್ಲಿ ೨೪ ಲಕ್ಷ ಬಿಪಿಎಲ್ ಕಾರ್ಡ್‌ಗಳಿದ್ದು, ಇವರೆಲ್ಲರಿಗೂ ವಿತರಿಸಲಾಗುತ್ತದೆ. ಆಯುಷ್ಮಾನ್ ಕಾರ್ಡ್ ಪಡೆದುಕೊಂಡಿದ್ದವರಿಗೂ ಕೇಂದ್ರ ಸರ್ಕಾರದ ಆದೇಶದಂತೆ ಪಿಎಂಜೆಎವೈ ಕಾರ್ಡ್ ನೀಡುತ್ತಿದ್ದೇವೆ. ಗ್ರಾಮ ಒನ್ ಸೆಂಟರ್‌ನಲ್ಲಿ ಯಾರೇ ಅರ್ಜಿ ಸಲ್ಲಿಸಿದರೂ ವಿಳಂಬ ಮಾಡದೆ ನೋಂದಣಿ ಮಾಡಿಸಿಕೊಂಡು ಕೊಡಲಾಗುತ್ತದೆ.
ಮಂಡ್ಯ: ಪಾರ್ಸೆಲ್ ಕೊಡುವ ನೆಪದಲ್ಲಿ ಬಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ್…
ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿದೆ. ಗ್ರಾಚ್ಯುಟಿ ಮತ್ತು ಗಳಿಕೆ…
ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯನ್ನು ಸಿಎಂ ಸಿದ್ದರಾಮಯ್ಯ ದುರುಪಯೋಗಪಡಿಸಿಕೊಂಡಿದ್ದಾರೆ…
ಹೈದರಾಬಾದ್: ಡಿಸೆಂಬರ್.4ರಂದು ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಬೇಸರ…
ಬೆಂಗಳೂರು: ಎರಡು ಕಾರು, ಎರಡು ಲಾರಿ ಹಾಗೂ ಶಾಲಾ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ…
ಬೆಂಗಳೂರು: ವಕ್ಫ್ ಮಂಡಳಿಯು ಹಿಂದೂ ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ…