ಜಿಲ್ಲೆಗಳು

ವಿಷ್ಣು ನೆಚ್ಚಿನ ಕಡಗ ಮಾದರಿಯಲ್ಲೇ ನಿರ್ಮಾಣಗೊಂಡ ಸ್ಮಾರಕ

ಕಡಗದ ಬಳಿ ನಿಂತು ನೋಡಿದರೆ ಸುಂದರವಾಗಿ ಕಾಣುವ ವಿಷ್ಣು ಪ್ರತಿಮೆ

ಗಮನ ಸೆಳೆಯುವ ಕೊಳದ ಸುತ್ತಲಿನ ಗೋಡೆ ಮೇಲಿನ ಸಂಭಾಷಣೆ
ಪ್ರತಿಯೊಂದು ಕಡಗ ಮಾದರಿಯಲ್ಲೇ ನಿರ್ಮಿಸಿರುವುದು ಮತ್ತೊಂದು ವಿಶೇಷ

– ಕೆ.ಬಿ.ರಮೇಶನಾಯಕ

ಒಂದು ಕಾಲದಲ್ಲಿ ಯಾರಾದರೂ ಬಲಗೈಯಲ್ಲಿ ಕಡಗವನ್ನು ಹಾಕಿಕೊಂಡರೆ ತಕ್ಷಣವೇ ಆತನನ್ನು ನಟ ವಿಷ್ಣುವರ್ಧನ್ ಅಭಿಮಾನಿ ಎಂದೇ ಗುರುತಿಸುತ್ತಿದ್ದರು. ಯಾವುದೇ ಚಿತ್ರದಲ್ಲಿ ನಟ ವಿಷ್ಣುವರ್ಧನ್ ತನ್ನ ಬಲಗೈಯಲ್ಲಿರುವ ಬಳೆಯನ್ನು ಮುಟ್ಟಿ ಡೈಲಾಗ್ ಹೊಡೆಯುತ್ತಿದ್ದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದರು. ಅದಕ್ಕಾಗಿಯೇ ವಿಷ್ಣುವರ್ಧನ್ ಮತ್ತು ಅವರು ಧರಿಸಿದ್ದ ಕಡಗಕ್ಕೂ ಎಲ್ಲಿಲ್ಲದ ಬಾಂಧವ್ಯ. ಕಡಗ ಇಲ್ಲದ ದೃಶ್ಯವನ್ನು ಅವರ ಅಭಿನಯದ ಚಿತ್ರಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ನಾಡಿನೆಲ್ಲೆಡೆ ಪ್ರಸಿದ್ಧಿಯಾಗಿರುವ ಕಾರಣದಿಂದಾಗಿ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಡಗ ಮಾದರಿಯಲ್ಲೇ ನಿರ್ಮಾಣ ಮಾಡಿರುವುದು ವಿಶೇಷವಾಗಿದ್ದು, ಕನ್ನಡದ ಜನತೆಯನ್ನು ಆಕರ್ಷಿಸಲು ಅಣಿಯಾಗಿದೆ. ನಟ ವಿಷ್ಣುವರ್ಧನ್ ಅವರು ಬಯಸದೆ ಇರುವ ಜನರಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಹಾಗಾಗಿ ಸ್ಮಾರಕವನ್ನು ವೃತ್ತಾಕಾರದಲ್ಲಿ (ಕಡಗ)ನಿರ್ಮಿಸಲಾಗಿದೆ. ಒಂದು ಅಥವಾ ಎರಡು ಬಾಗಿಲುಗಳಿರುವ ಮಾಮೂಲಿ ಕಟ್ಟಡವಾಗಿರದೆ ನೋಡಿದವರಿಗೆ ಅದೊಂದು ಸ್ಮಾರಕ ಎಂದು ಕಣ್ಣಿಗೆ ಕಟ್ಟುವಂತೆ ನಿರ್ಮಾಣ ಮಾಡಿರುವುದು ನೋಡುಗರ ಗಮನ ಸೆಳೆಯಲಿದೆ. ಸ್ಮಾರಕ ಕಟ್ಟಡವನ್ನು ೩೫.೪೦ ಮೀಟರ್ ವೃತ್ತ್ತಾಕಾರದಲ್ಲಿ ನಿರ್ಮಿಸಲಾಗಿದ್ದು, ಗ್ಯಾಲರಿಯ ಒಳಭಾಗದಲ್ಲಿ ನಟ ವಿಷ್ಣುವರ್ಧನ್ ಅವರ ಹಳೆಯ ಮತ್ತು ಕಳೆದ ೩ ದಶಕಗಳಿಂದ ನಟಿಸಿರುವ ಚಿತ್ರಗಳು,ಚಿತ್ರರಂಗದ ಖ್ಯಾತನಾಮರ ಜೊತೆಗೆ ಇರುವ ಛಾಯಾಚಿತ್ರಗಳನ್ನು ಅಳವಡಿಸಲಾಗಿದೆ. ಚಿತ್ರರಂಗದಲ್ಲಿನ ಅವರ ನೆನಪುಗಳು ಮತ್ತು ಸಾಧನೆಗಳ ಕುರಿತ ವಿವರಗಳನ್ನು ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಅಳವಡಿಸಲಾಗಿದೆ. ಫೋಟೋ ಗ್ಯಾಲರಿಯಲ್ಲಿ ೬೭೬ ಫೋಟೋಗಳನ್ನು ಅಳವಡಿಸಲಾಗಿದ್ದು, ಪ್ರೇಮಲೋಕ, ನಿಷ್ಕರ್ಷ, ಆಪ್ತಮಿತ್ರ, ಒಂದಾಗಿ ಬಾಳು, ಜೀವನ ಜ್ಯೋತಿ ಸೇರಿದಂತೆ ಅಭಿಮಾನಿಗಳು ಈವರೆಗೆ ನೋಡಿರದ ಅಪರೂಪದ ಛಾಯಾಚಿತ್ರಗಳು ಗಮನ ಸೆಳೆಯುವಂತೆ ಹಾಕಲಾಗಿದೆ. ಗ್ಯಾಲರಿಯ ಕೇಂದ್ರ ಭಾಗದಲ್ಲಿ ತಾವರೆ ಹೂವಿನ ಕೊಳವನ್ನು ನಿರ್ಮಿಸಲಾಗಿದ್ದು, ಅದರ ಮುಂಭಾಗ ಡಾ.ವಿಷ್ಣುವರ್ಧನ್ ಅವರ ನೆನಪು ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಉದ್ದೇಶದಿಂದ ೭ ಅಡಿ ಎತ್ತರದ ಅಮೃತ ಶಿಲೆಯಲ್ಲಿ ಮಾಡಿದ ಸುಂದರ ಪ್ರತಿಮೆುಂನ್ನು ಸ್ಥಾಪಿಸಲಾಗಿದ್ದು, ಮೈಸೂರಿನ ಹೆಸರಾಂತ ಶಿಲ್ಪಕಲಾವಿದ ಅರುಣ್ಗಿ ಯೋರಾಜ್ ಪ್ರತಿಮೆಯನ್ನು ರೂಪಿಸಿದ್ದಾರೆ.

ವಿಷ್ಣುವರ್ಧನ್ ಅವರು ಆಪ್ತ ರಕ್ಷಕ ಸಿನಿಮಾದಲ್ಲಿ ಪೇಟ ಧರಿಸಿ ನಿಂತ ಭಂಗಿಯ ಮಾದರಿಯಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಕೊಳದ ಮಧ್ಯಭಾಗದಲ್ಲಿ ವಿಷ್ಣು ಧರಿಸುತ್ತಿದ್ದ ಕಡಗವನ್ನು ನಿರ್ಮಿಸಿದ್ದು ಕಡಗದ ಬಳಿ ನಿಂತು ನೋಡಿದರೆ ಪ್ರತಿಮೆ ಕಾಣಲಿದೆ. ಕೊಳದ ಸುತ್ತಲಿನ ಗೋಡೆಯ ಮೇಲೆ ಡಾ.ವಿಷ್ಣು ಅವರ ಚಿತ್ರರಂಗದ ಸಂಭಾಷಣೆಗಳನ್ನು ಸಾಂಕೇತಿಕವಾಗಿ ರೂಪಿಸಲಾಗಿದೆ. ಪ್ರಮುಖವಾಗಿ ‘‘ ಕದಂಬ ಚಿತ್ರದ… ಈ ಕೈ ಕರ್ನಾಟಕದ ಆಸ್ತಿ. ಈ ಐದು ಬೆರಳಲ್ಲಿರೋದು ಐದು ಕೋಟಿ ಕನ್ನಡಿಗರ ಶಕ್ತಿ.ಮುಷ್ಠಿ ಮಾಡಿ ಹೊಡೆದ್ರೆ ಮತ್ತೆ ಆ ವ್ಯಕ್ತಿ ಎದ್ದು ಬಂದಿದ್ದು ಚರಿತ್ರೇಲಿ ಇಲ್ಲ’’, ಹಲೋಡ್ಯಾಡಿ ಚಿತ್ರದ ‘‘ನಾವು ಕೊಟ್ಟ ಮಾತು.ಇಟ್ಟ ಬಾಣ ಯಾವೊತ್ತೂ ಗುರಿ ತಪ್ಪೋದಿಲ್ಲ.ಮನುಷ್ಯನಿಗೆ ಜೀವನದಲ್ಲಿ ಮುಂದೆ ಯಾವಾಗಲೂ ಗುರಿ ಇರಬೇಕು.ಹಿಂದೆ ಯಾವಾಗಲೂ ಗುರು ಇರಬೇಕು’’. ‘‘ ಕೋಟಿಗೊಬ್ಬ ಚಿತ್ರದ ದೇವರು ಒಳ್ಳೆಯವರಿಗೆ ತುಂಬ ಕಷ್ಟ ಕೊಡುತ್ತಾನೆ,ಆದರೆ,ಕೊನೆಯಲ್ಲಿ ಕೈ ಹಿಡಿತಾನೆ,ಕೆಟ್ಟವರಿಗೆ ಒಳ್ಳೆ ಸುಖ ಕೊಡ್ತಾನೆ,ಆದರೆ,ಕೊನೆಯಲ್ಲಿ ಕೈಬಿಟ್ಟು ಬಿಡ್ತಾನೆ’’ಎನ್ನುವ ಸಂಭಾಷಣೆ ಗಮನ ಸೆಳೆಯುತ್ತಿದೆ. ಮೆಮೋರಿಯಲ್ ಕಟ್ಟಡದ ಮೇಲ್ಛಾವಣಿಯಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದೆ ಹಾಗೂ ಕಟ್ಟಡದ ಸುತ್ತಲೂ ವೃತ್ತಾಕಾರದಲ್ಲಿ ಪ್ಲಾಂಟರ್ ಬಾಕ್ಸ್‌ಗಳನ್ನು ನಿರ್ಮಿಸಿ ಹೂವಿನ ಗಿಡ ಮತ್ತು ಮರಗಳನ್ನು ನೆಡಲಾಗಿದೆ. ೫೦ರಿಂದ ೬೦ರೀತಿಯ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ನೆಡಲಾಗಿದ್ದು,ರಾತ್ರಿ ಸಮಯದಲ್ಲಿ ಆಕರ್ಷಕವಾಗಿ ಕಾಣಲು ಬಣ್ಣದ ದೀಪಾಲಂಕಾರ ಮಾಡಲಾಗಿದೆ. ಸ್ಮಾರಕದ ಮುಂದೆ ನಿಂತು ಅಥವಾ ಯಾವುದೇ ಭಾಗದಲ್ಲೂ ಅರೆಕ್ಷಣ ನಿಂತು ನೋಡಿದಾಗ ಕೊಳದ ಒಳಗಿರುವ ವಿಷ್ಣು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಭಾವನೆ ಮೂಡಿಸಲಿದೆ. ಮತ್ತೊಂದು ವಿಶೇಷವೆಂದರೆ ಸ್ಮಾರಕದ ಸುತ್ತಲೂ ಪ್ರತಿಷ್ಠಿತ ರೆಸಾರ್ಟ್‌ಗಳಲ್ಲಿ ಅಳವಡಿಸಿರುವ ದೀಪಗಳಂತೆ ಇದ್ದು, ಒಂದೊಂದು ದೀಪವು ಒಂದೊಂದು ಬಣ್ಣದಿಂದ ಕೂಡಿರುವುದು ಆಕರ್ಷಣೆಯಾಗಿದೆ. ಬೆಂಗಳೂರಿನ ಮೆ.ಎಂ-೦೯ ಡಿಸೈನ್ ಸ್ಟುಡಿಯೋ ಅವರು ಭಾರತೀ ವಿಷ್ಣುವರ್ಧನ್ ಅವರ ಕಂಡ ಕನಸಿನ ರೂಪದಂತೆ ಸ್ಮಾರಕವನ್ನು ವಿನ್ಯಾಸಗೊಳಿಸಿದ್ದು,ಅದೇ ರೀತಿಯಲ್ಲಿ ಸ್ಮಾರಕ ತಲೆ ಎತ್ತಿದೆ.

ಅತ್ಯಾಕರ್ಷಕ ಮಾದರಿಯಲ್ಲಿ ಥಿಯೇಟರ್: ಸ್ಮಾರಕದ ಹಿಂಭಾಗದಲ್ಲಿ ಅತ್ಯಾಕರ್ಷಕ ವಿನ್ಯಾಸದ ಶೈಲಿಯಲ್ಲಿ ಥಿಯೇಟರ್ ನಿರ್ಮಾಣ ಮಾಡಲಾಗಿದ್ದು, ೪೫೭.೭೦ ಚ.ಮೀಟರ್‌ನಲ್ಲಿ ತಳಮಹಡಿ ಇದ್ದು, ೨೪೦ಮಂದಿ ಕೂರುವ ಆಸನಗಳ ಸಭಾಂಗಣವಿದೆ. ಕಲಾವಿದರ ಕೊಠಡಿ ಮತ್ತು ಶೌಚಾಲಯಗಳಿವೆ. ೯೯೭ ಚದರ ಮೀಟರ್‌ನಲ್ಲಿ ಕಲಾವಿದರ ಕೊಠಡಿ ಮತ್ತು ಶೌಚಾಲಯದ ಕೊಠಡಿಗಳು, ಲಾಬಿ, ಎರಡು ತರಗತಿಗಳ ಕೊಠಡಿ, ಡೈರೆಕ್ಟರ್ ಕ್ಯಾಬಿನ್, ಆಫೀಸ್ ಸ್ಟಾಫ್ ಕೊಠಡಿ, ಪುರುಷರ ಶೌಚಾಲಯ, ಮಹಿಳೆಯರ ಶೌಚಾಲಯ, ಮರದ ನೆಲಹಾಸಿನ ವೇದಿಕೆ, ವಿವಿಧ ಹಂತಗಳ ಪರದೆಗಳು,ಮಾಲ್ ಪ್ಯಾನಲಿಂಗ್, ಧ್ವನಿ ಮತ್ತು ಬೆಳಕಿನ ಉಪಕರಣಗಳು, ಧ್ವನಿವರ್ಧಕಗಳು ಮತ್ತು ಆಡಿಯೋ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ಸುತ್ತಲೂ ವೃತ್ತಾಕಾರದಲ್ಲಿ ಪ್ಲಾಂಟರ್ ಬಾಕ್ಸ್‌ಗಳನ್ನು ನಿರ್ಮಿಸಿ ಹೂವಿನ ಗಿಡಗಳು ಮತ್ತು ಮರಗಳು, ಆಡಿಟೋರಿಯಂ ಕಟ್ಟಡದ ಜಾಲಿವಾಲ್‌ನ ಮುಂಭಾಗ ಗಿಡಗಳನ್ನು ನೆಟ್ಟಿರುವುದರಿಂದ ಮನಮೋಹಕವಾಗಿ ಕಾಣಿಸಲಿದೆ.

ಮೂರುವರೆ ಕೋಟಿ ರೂ.ಹೆಚ್ಚುವರಿ ಖರ್ಚು

ಮೈಸೂರು ತಾಲ್ಲೂಕಿನ ಹಾಲಾಳು ಗ್ರಾಮದ ಉದ್ಬೂರು ಕ್ರಾಸ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ ಸಂಪೂರ್ಣ ಹೊಣೆ ಹೊತ್ತು ಸ್ಮಾರಕ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ವಿಷ್ಣುವರ್ಧನ್ ಸ್ಮಾರಕ್ಕೆ ಸರ್ಕಾರ ೫ ಎಕರೆ ಜಾಗವನ್ನು ನೀಡಿದ್ದು, ಮೊದಲ ಹಂತದಲ್ಲಿ ೨.೫೦ ಎಕರೆ ಪ್ರದೇಶದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲಾಗಿದೆ. ೨.೫ ಎಕರೆಯಲ್ಲಿ ಪುಣೆಯಲ್ಲಿರುವ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಶಾಖೆಯನ್ನು ‘ಅಪ್ಪಾಜಿ’ ಹೆಸರಿನಲ್ಲಿ ತೆರೆಯುವ ಆಲೋಚನೆ ಇದೆ. ೨೦೦೯ರ ಡಿಸೆಂಬರ್ ತಿಂಗಳಿನಲ್ಲಿ ಮೈಸೂರಿನ ಬಿಎಂ ಆಸ್ಪತ್ರೆಯಲ್ಲಿ ಡಾ. ವಿಷ್ಣುವರ್ಧನ್ ನಿಧನರಾದರು. ಮೈಸೂರಿನಿಂದ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ದು ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಅವರ ಸ್ಮಾರಕ ನಿರ್ಮಾಣವಾಗುತ್ತದೆ. ಎಂಬ ಮಾತುಗಳು ಕೇಳಿ ಬಂದಿತ್ತು. ನಾನಾ ಕಾರಣಗಳಿಂದ ಅದು ಆಗಲಿಲ್ಲ. ೨೦೧೬ ರಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣವಾಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ೨೦೧೭ ರಲ್ಲಿ ಮೈಸೂರಿನಲ್ಲಿ ಭೂಮಿ ಮಂಜೂರಾಯಿತು. ಆದರೆ, ಭೂಮಿಯ ವಿಚಾರದಲ್ಲಿ ಹಲವು ರೈತರು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋಗಿದ್ದರು. ನಂತರ ಅರ್ಜಿ ವಜಾ ಆಗಿ ಸ್ಮಾರಕ ಕೆಲಸ ಸುಗಮವಾಯಿತು. ೨೦೨೦ರ ಸೆಪ್ಟಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಯೋಜನೆ ಮುಗಿಸಲು ೧೬ ತಿಂಗಳು ಗಡುವು ನೀಡಲಾಗಿತ್ತಾದರೂ ಕೊರೊನಾ ಕಾರಣದಿಂದಾಗಿ ೧೧ ತಿಂಗಳು ವಿಳಂಬವಾಯಿತು. ಇದರಿಂದಾಗಿ ಹನ್ನೊಂದು ಕೋಟಿ ರೂ.ಗೆ ಮುಗಿಯಬೇಕಿದ್ದ ಸ್ಮಾರಕ ನಿರ್ಮಾಣದ ಕೆಲಸಕ್ಕೆ ಮೂರೂವರೆ ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಿದೆ. ಸ್ಮಾರಕಕ್ಕೆ ನೀಡಿದ್ದ ಜಾಗವು ಹಳ್ಳವಾಗಿದ್ದರಿಂದ ರಿಟೈನಿಂಗ್ ಮಾಲ್ ಮಾಡಲಾಗಿದ್ದು, ಸುತ್ತಲೂ ರಸ್ತೆಯನ್ನು ಮಾಡಲಾಗಿದೆ. ಮೊದಲು ಕಪ್ಪುಶಿಲೆ ಪ್ರತಿಮೆ ನಿರ್ಮಾಣಕ್ಕೆ ೯.೫ ಲಕ್ಷ ರೂ.ನಿಗದಿಯಾಗಿದ್ದರೆ,ನಂತರದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಿದ್ದರಿಂದ ೧೪ ಲಕ್ಷ ರೂ.ಆಗಿದೆ. ಕತ್ತಲೆಯಾಗುತ್ತಿದ್ದಂತೆ ವೃತ್ತಾಕಾರದ ಸ್ಮಾರಕ ನೋಡಲು ಅಳವಡಿಸಿರುವ ದೀಪಾಲಂಕಾರದ ಖರ್ಚು ಕೂಡ ಜಾಸ್ತಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

 

andolanait

Recent Posts

ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

7 mins ago

ಚಿತ್ರದುರ್ಗ ಬಸ್‌ ದುರಂತ ಪ್ರಕರಣ: ಮತ್ತೋರ್ವ ಗಾಯಾಳು ಸಾವು

ಚಿತ್ರದುರ್ಗ: ಚಿತ್ರದುರ್ಗ ಬಸ್‌ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8ಕ್ಕೇ ಏರಿಕೆಯಾಗಿದೆ. ಮೃತರನ್ನು…

10 mins ago

ವಿಬಿ-ಜೀ ರಾಮ್‌ ಜೀ ಹೆಸರಿನಲ್ಲಿ ರಾಜ್ಯ ಸರ್ಕಾರಗಳ ಮೇಲೆ ಹೊರೆ: ವಿ.ಶಿವದಾಸನ್‌

ಮಂಡ್ಯ: ದೇಶದ ಗ್ರಾಮೀಣ ಭಾಗದ ಜನರ ಜೀವನಾಡಿ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಬಿ ಜೀ ರಾಮ್‌…

48 mins ago

ಸಿರಿ ಧಾನ್ಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವುದು ಆದ್ಯ ಕರ್ತವ್ಯ: ಕೆ.ಆರ್.‌ನಂದಿನಿ

ಮಂಡ್ಯ: ಸಿರಿಧಾನ್ಯಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.‌ನಂದಿನಿ…

1 hour ago

ಹೊಸ ವರ್ಷಾಚರಣೆಗೆ ಕೊಡಗಿನಲ್ಲೂ ಕಟ್ಟೆಚ್ಚರ

ಕೊಡಗು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಕೊಡಗಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇನ ಡೋರ್‌ನಲ್ಲಿ ಮಾತ್ರ ಹೆಚ್ಚಿನ ಸೌಂಡ್‌ ಬಳಸಲು ಅವಕಾಶವಿದೆ.…

1 hour ago

ಅಶ್ಲೀಲ ಕಮೆಂಟ್‌ ಬಗ್ಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ದೂರು: ಸೀಮಂತ್‌ ಕುಮಾರ್‌ ಹೇಳಿದ್ದಿಷ್ಟು.!

ಬೆಂಗಳೂರು: ಅಶ್ಲೀಲ ಕಮೆಂಟ್‌ ಬಗ್ಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಆಯುಕ್ತ ಸೀಮಂತ್‌…

2 hours ago