ಜಿಲ್ಲೆಗಳು

ಬಾಳೆಲೆ ಕೈನಾಟಿಯಲ್ಲಿ 66 ಕೆ.ವಿ. ವಿದ್ಯುತ್ ಉಪಕೇಂದ್ರ..!

ಸುಮಾರು ೧೫ ವರ್ಷದ ಹೋರಾಟಕ್ಕೆ ದೊರೆತ ಫಲ: ಕೆಪಿಟಿಸಿಎಲ್‌ನಿಂದ ೧.೫೦ ಎಕರೆ ಜಾಗ ಖರೀದಿ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಗಡಿಭಾಗ ಬಾಳೆಲೆ ವ್ಯಾಪ್ತಿಯ ಸುಮಾರು ೧೫ ವರ್ಷಗಳ ವಿದ್ಯುತ್ ಸಮಸ್ಯೆಗೆ ಕಡೆಗೂ ಮುಕ್ತಿ ದೊರೆಯುವ ದಿನಗಳು ಹತ್ತಿರವಾಗಿದ್ದು, ಕೈನಾಟಿಯಲ್ಲಿ ೬೬ ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ನಿರ್ಧರಿಸಲಾಗಿದೆ.

ಬಾಳೆಲೆ ಕಳೆದ ಹಲವು ವರ್ಷಗಳಿಂದ ಬೇಸಿಗೆಯಲ್ಲಿಯೂ ನಿರಂತರ ವಿದ್ಯುತ್ ಕಡಿತದಿಂದ ಆ ಭಾಗದ ಸುಮಾರು ೭ ಸಾವಿರಕ್ಕೂ ಅಧಿಕ ವಿದ್ಯುತ್ ಗ್ರಾಹಕರು ತೊಂದರೆ ಅನುಭವಿಸುತ್ತಾ ಬಂದಿದ್ದರು. ಬೇಸಿಗೆಯಲ್ಲಿಯೂ ಓಲ್ಟೇಜ್ ಡ್ರಾಪ್ ಸಮಸ್ಯೆಯಿಂದಾಗಿ ಕಾಫಿ ತೋಟಕ್ಕೆ ಪಂಪ್‌ಸೆಟ್ ಮೂಲಕ ನೀರು ಹಾಯಿಸಲೂ ರೈತರು ಬವಣೆ ಅನುಭವಿಸುತ್ತಿದ್ದರು. ಬಾಳೆಲೆಗೆ ಪ್ರತ್ಯೇಕ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾದಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರಕಲಿದೆ ಎಂದು ಹೇಳಲಾಗಿತ್ತು. ಇದೀಗ ಬಾಳೆಲೆಯಲ್ಲಿ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಸುಮಾರು ೧.೫೦ ಎಕರೆ ನಿವೇಶನವನ್ನು ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಸುಮಾರು ರೂ.೬೦ ಲಕ್ಷ ಮೊತ್ತಕ್ಕೆ ಖರೀದಿಸಲಾಗಿದೆ.

ಸುದೀರ್ಘ ೧೫ ವರ್ಷದ ಹೋರಾಟದ ಫಲವಾಗಿ ಇದೀಗ ಮುಂದಿನ ಒಂದು ವರ್ಷ ಅವಧಿಗೂ ಮುನ್ನ ಕಾಮಗಾರಿ ಆರಂಭವಾಗಲಿದೆ. ಬಾಳೆಲೆ ಸಮೀಪ ಕೈನಾಟಿ ಎಂಬಲ್ಲಿ ಸಮಾಜಸೇವಕಿ ಸ್ವಾತಿ ಕುಟ್ಟಯ್ಯ ಅವರು ಸರ್ವೆ.ನಂ.೭೬/೧೭ರಲ್ಲಿ ಒಟ್ಟು ೪.೨೫ ಎಕರೆ ಕಾಫಿ ತೋಟದಲ್ಲಿ ಒಂದೂವರೆ ಎಕರೆ ಜಾಗವನ್ನು ಕೆಪಿಟಿಸಿಎಲ್‌ಗೆ ಮಾರಾಟ ಮಾಡಿದ್ದಾರೆ. ಕೈನಾಟಿ ಜಂಕ್ಷನ್‌ನಿಂದ ೩೦೦ ಮೀಟರ್ ಅಂತರದಲ್ಲಿ ರಸ್ತೆ ಬದಿಯ ಜಾಗದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಲಿದೆ.

ಈ ಹಿಂದೆ ನಿಟ್ಟೂರು ಹಾಗೂ ಬಾಳೆಲೆ-ಗೋಣಿಕೊಪ್ಪಲು ಮುಖ್ಯರಸ್ತೆಯ ಬದಿಯಲ್ಲಿಯೇ ನಿವೇಶನ ಗುರುತಿಸಲಾಗಿತ್ತಾದರೂ ತಾಂತ್ರಿಕ ಕಾರಣದಿಂದ ತಿರಸ್ಕ್ರತಗೊಂಡಿತ್ತು. ಪ್ರಮುಖವಾಗಿ ಇಬ್ಬರು ಗ್ರಾಮಸ್ಥರ ನಿರಂತರ ಪರಿಶ್ರಮದಿಂದ ಉಪಕೇಂದ್ರಕ್ಕೆ ಸ್ಥಳ ಲಭ್ಯವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಇಲ್ಲದೆ ಗ್ರಾಮಸ್ಥರೇ ಹೋರಾಟದ ಮೂಲಕ ಬಾಳೆಲೆ ಹೋಬಳಿಯ ವಿದ್ಯುತ್ ಅಭಾವ ನೀಗಲು ಪಣತೊಟ್ಟು ಯಶಸ್ವಿಯಾಗಿದ್ದಾರೆ.

ಬಾಳೆಲೆಯ ಬೆಳೆಗಾರರಾದ ಮಲ್ಚೀರ ವಿಠಲ್ ಹಾಗೂ ಅರಮಣಮಾಡ ಜೀವನ್ ಸತತ ಪ್ರಯತ್ನ ಇದರ ಹಿಂದೆ ಇದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರ ಮೂಲಕ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಂಜುಳಾ ಅವರಿಗೆ ಪತ್ರ ಬರೆದು ಒತ್ತಡ ಹಾಕಿದ ನಂತರ ಜಾಗ ಖರೀದಿಗೆ ನಿರ್ಧರಿಸಲಾಯಿತು. ಇದೇ ಜಾಗ ಈ ಹಿಂದೆ ಕೆಪಿಟಿಸಿಎಲ್ ನಿಂದ ನಿರಾಕರಣೆಯಾಗಿತ್ತು.

ನಂತರ ವಿದ್ಯುತ್ ಮಂತ್ರಿ ಸುನಿಲ್‌ಕುಮಾರ್ ಅವರನ್ನು ವಿಠಲ್ ಹಾಗೂ ಜೀವನ್ ಖುದ್ದು ಭೇಟಿ ಮಾಡಿ ಉಪಕೇಂದ್ರದ ಅಗತ್ಯವನ್ನು ಮನವರಿಕೆ ಮಾಡಲಾಯಿತು. ಕರ್ನಾಟಕ ಕೃಷಿ ಮೋರ್ಚಾದ ಅಧ್ಯಕ್ಷ ನಾರಾಯಣ ಸ್ವಾಮಿ ವಿದ್ಯುತ್ ಮಂತ್ರಿಯನ್ನು ಭೇಟಿ ಮಾಡಲು ಸಹಕರಿಸಿದ್ದರು. ಕೆಪಿಟಿಸಿಎಲ್ ಜಾಗ ಖರೀದಿಸಬೇಕಾದರೆ ಸುಮಾರು ೧೪ ಭೂ ದಾಖಲೆ ಇತ್ಯಾದಿಯನ್ನು ಒದಗಿಸಬೇಕಿತ್ತು. ವಿಠಲ್ ಹಾಗೂ ಜೀವನ್ ಶ್ರಮವಹಿಸಿ ಭೂ ದಾಖಲೆಯನ್ನೂ ಒದಗಿಸಿದ್ದೇ ಅಲ್ಲದೆ ಸ್ವಾತಿ ಕುಟ್ಟಯ್ಯ ಅವರ ಇಬ್ಬರು ಪುತ್ರರಿಗೆ ಮನವರಿಕೆ ಮಾಡುವ ಮೂಲಕ ರೂ.೬೦ ಲಕ್ಷ ಮೊತ್ತಕ್ಕೆ ಒಂದೂವರೆ ಎಕರೆ ಆಸ್ತಿ ಮಾರಾಟ ಮಾಡಲು ಒಪ್ಪಿಸಲಾಯಿತು.

ಯೋಜನಾ ವೆಚ್ಚದ ಅಂದಾಜು ಪಟ್ಟಿ(ಡಿಪಿಆರ್) ಇನ್ನಷ್ಟೇ ಸಿದ್ಧವಾಗಬೇಕಿದೆ. ಸರ್ವೆ ಕಾರ್ಯ ನಡೆದು ಇ ಟೆಂಡರ್ ಮೂಲಕ ಗುತ್ತಿಗೆದಾರನಿಗೆ ಕಾಮಗಾರಿ ವಹಿಸಲು ೬ ತಿಂಗಳಿಗೂ ಹೆಚ್ಚು ಸಮಯಾವಕಾಶ ತೆಗೆದುಕೊಳ್ಳಬಹುದು ಎನ್ನಲಾಗಿದೆ.

ಹುಣಸೂರು ಮಾರ್ಗ ಪೊನ್ನಂಪೇಟೆ ಉಪಕೇಂದ್ರಕ್ಕೆ ಇದೀಗ ಸರಬರಾಜಾಗುತ್ತಿರುವ ೬೬ ಕೆ.ವಿ. ವಿದ್ಯುತ್ ಲೈನ್‌ನನ್ನು ಬಾಳೆಲೆಗೆ ಸಮೀಪ ಅಂದರೆ ಕೋಣನಕಟ್ಟೆ ಅಥವಾ ಮಾಯಮುಡಿಯಲ್ಲಿ ವಿಭಜಿಸಲಾಗುತ್ತದೆ. ಇದೀಗ ಕೈನಾಟಿ ಗುಂಡಿಗದ್ದೆ ಬಳಿ ನೂತನ ಉಪಕೇಂದ್ರ ಸ್ಥಾಪಿಸಿ ೬೬ ಕೆ.ವಿ. ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸಲಾಗುವುದು. -ಮಾದೇಶ್, ಕಾರ್ಯಪಾಲಕ ಅಭಿಯಂತರರು, ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗ

ರಾಜಕೀಯ ರಹಿತವಾಗಿ ಗ್ರಾಮಗಳ ಏಳಿಗೆಗೆಗಾಗಿ ಶ್ರಮವಹಿಸಿದ್ದೇವೆ. ಉದ್ದೇಶಿತ ಉಪಕೇಂದ್ರ ಸ್ಥಾಪನೆಯಾದರೆ ಯಾವುದೇ ವಿದ್ಯುತ್ ಸಮಸ್ಯೆ ಉಂಟಾಗದೆ ಬಾಳೆಲೆ ಹೋಬಳಿ, ಕಾನೂರು, ಪೊನ್ನಪ್ಪಸಂತೆ, ನಲ್ಲೂರು, ಬಿಳೂರು, ಬೆಕ್ಕೆಸೊಡ್ಲೂರು ಮುಂತಾದ ಗ್ರಾಮಗಳ ಅಂದಾಜು ೮೦೦೦ ಗ್ರಾಹಕರಿಗೆ ವಿದ್ಯುತ್ ಅಭಾವ ನೀಗಲಿದೆ. -ಮಲ್ಚೀರ ವಿಠಲ್, ಅರಮಣಮಾಡ ಜೀವನ್, ಉಪಕೇಂದ್ರ ಸ್ಥಾಪನೆಗೆ ಶ್ರಮಿಸಿದವರು

 

 

andolana

Recent Posts

ಜೆಡಿಎಸ್‌ ಬಿಟ್ಟಿದ್ದು ದ್ರೋಹ ಹೇಗಾಗುತ್ತೆ: ಶಾಸಕ ಶಿವಲಿಂಗೇಗೌಡ

ಹಾಸನ: ನಾನು ಜೆಡಿಎಸ್‌ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್‌ ಜಾಸ್ತಿ ಆಗೋದು ಅಷ್ಟೇ. ಏನು…

28 mins ago

ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲರಿಗೆ ಅಡ್ಡಿಪಡಿಸಿದ ವಿಚಾರ: ರಾಷ್ಟ್ರಪತಿಗೆ ವರದಿ ರವಾನಿಸಿದ ಲೋಕಭವನ

ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಕಾಂಗ್ರೆಸ್‌ ಸದಸ್ಯರು…

37 mins ago

ಮಳವಳ್ಳಿ: ಈಜಲು ಹೋಗಿದ್ದ ಯುವಕ ಸಾವು

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…

43 mins ago

ಮಂಡ್ಯದಲ್ಲಿ 3 ಕೋಟಿ ವೆಚ್ಚದಲ್ಲಿ ಗಾಂಧಿಭವನ ನಿರ್ಮಾಣ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…

45 mins ago

ಗ್ರಾಮ ಪಂಚಾಯತ್‌ಗಳ 590 ಸಿಬ್ಬಂದಿಗಳಿಗೆ ಅನುಮೋದನೆ: ಆದೇಶ ಪ್ರತಿ ವಿತರಿಸಿದ ಸಚಿವ ಎನ್‌.ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…

48 mins ago

ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್‌ ಗೌಡ ಅರೆಸ್ಟ್‌

ಚಿಕ್ಕಬಳ್ಳಾಪುರ: ನಗರಸಭೆ ಪೌರಾಯುಕ್ತೆಗೆ ನಿಂದನೆ, ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.…

1 hour ago