ಡಿ.ಉಮಾಪತಿ

ದೆಹಲಿ ಧ್ಯಾನ : ಗುಜರಾತಿನಲ್ಲಿ ಮೋದಿ ವಿಜಯದ ಹೊಳಪು ಹೆಚ್ಚಿಸಿತೇ ಆಪ್‌ ?

ತನ್ನೆಲ್ಲ ಮಿತಿಗಳು, ತಿಕ್ಕಲುತನಗಳು ಹಾಗೂ ಸರ್ವಾಧಿಕಾರಿ ವರ್ತನೆಯ ನಡುವೆಯೂ ದೆಹಲಿಯ ಆಮ್ ಆದ್ಮಿ ಪಾರ್ಟಿಯ ರಾಜಕಾರಣ ಕೆಲ ಕಾಲವಾದರೂ ಹೊಸ ಗಾಳಿ ಮತ್ತು ಹೊಸ ಬೆಳಕಿನ ಅನುಭವ ನೀಡಿದ್ದು ಹೌದು. ಓರೆಕೋರೆಗಳನ್ನು ತಿದ್ದಿಕೊಂಡರೆ ಈಗಲೂ ಈ ಪ್ರಯೋಗ ಸತ್ವಭರಿತ ಎನಿಸಿಕೊಂಡಿತು. ೨೦೧೫ರಲ್ಲಿ ಪ್ರಚಂಡ ಬಹುಮತ ಗಳಿಸಿದ ಕೇಜ್ರಿವಾಲ್ ಮತ್ತು ಸಂಗಾತಿಗಳ ಚುನಾವಣಾ ಯಶಸ್ಸಿನ ಕುರಿತ ಕುತೂಹಲ ದಶದಿಕ್ಕುಗಳಿಗೆ ಹಬ್ಬಿತ್ತು. ಈ ಪಕ್ಷದ ಜನಪ್ರಿಯತೆ ದೆಹಲಿಯ ಗಡಿಗಳ ದಾಟಿ ದೇಶದ ಉದ್ದಗಲಕ್ಕೆ ಹಬ್ಬಿದರೆ ಗತಿಯೇನು ಎಂದು ಮೋದಿ-ಅಮಿತ್ ಶಾ ಜೋಡಿ ಕೂಡ ಚಿಂತಾಕ್ರಾಂತವಾಗಿದ್ದ ದಿನಗಳೂ ಇದ್ದವು. ಕೇಜ್ರಿವಾಲ್ ಪಾರ್ಟಿಯ ರೆಕ್ಕ ಪುಕ್ಕಗಳನ್ನು ಮೋದಿ ಸರ್ಕಾರ ಕತ್ತರಿಸಿ ಕುತ್ತಿಗೆಯನ್ನೂ ಅದುಮಿ ಇಟ್ಟದ್ದು ಅಂತಹ ಆ ದಿನಗಳಲ್ಲೇ.
ಆಮ್ ಆದ್ಮಿ ಪಾರ್ಟಿದು ವರ್ಷಗಳ ಕಾಲ ಆಡಳಿತ ನಡೆಸಿದ ನಂತರವೂ ಸರ್ಕಾರವೊಂದು ಆಡಳಿತಪರ ಅಲೆಯನ್ನು ಕಂಡಿರುವ ವಿರಳ ನಿದರ್ಶನವಿದು. ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ದೆಹಲಿಯ ಆಪ್ ಸರ್ಕಾರವನ್ನು ಬಗೆ ಬಗೆಯಾಗಿ ಕಾಡಿತು. ಕೆಡವುವ ಹುನ್ನಾರಗಳನ್ನು ನಡೆಸಿತು. ಆದರೂ ಜಗ್ಗದೆ ನಿಂತ ಕೀರ್ತಿ ಕೇಜ್ರಿವಾಲ್ ಸಂಗಾತಿಗಳದು.
ಆದರೆ ವರ್ಷಗಳು ಉರುಳಿದಂತೆ ತಾನು ಆರಂಭದಲ್ಲಿ ಆಡಿದ್ದ ಹೊಸ ರಾಜಕಾರಣದ ಪರಿಭಾಷೆಯನ್ನು ಹೆಚ್ಚು ಕಡಿಮೆ ಮರೆತೇ ಹೋಯಿತು. ಭಿನ್ನಮತವನ್ನು ಉಕ್ಕಿನ ಹಸ್ತಗಳಿಂದ ಹತ್ತಿಕ್ಕಿತು. ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಮುಂತಾದ ಸಂಗಾತಿಗಳನ್ನು ಹೊರಹಾಕಿತು. ಏಕವ್ಯಕ್ತಿ ಪಕ್ಷವಾಯಿತು. ಎಲ್ಲ ಅಧಿಕಾರಗಳನ್ನೂ ಕೇಜ್ರಿವಾಲ್ ಕೈಗಿಟ್ಟಿತು. ಅವರ ಸುತ್ತ ವರ್ಚಸ್ಸಿನ ಪ್ರಭಾವಳಿಯ ಕಟ್ಟಿ ಎಲ್ಲರಿಗಿಂತ ಮೇಲೆ ಕುಳ್ಳಿರಿಸಿತು.
ಕೇಜ್ರಿವಾಲ್ ಪಕ್ಷ ಮೆದು ಹಿಂದುತ್ವದ ಹಾದಿ ಹಿಡಿದು ಬಹಳ ಕಾಲವಾಯಿತು. ಬಿಜೆಪಿಯ ‘ಬಿ’ ಟೀಮ್ ಎಂಬುದಾಗಿ ಕೇಸರಿ ಪಕ್ಷದ ವಿರೋಧಿಗಳ ಟೀಕೆಗೆ ತುತ್ತಾಗಿರುವ ಪಕ್ಷ ಆಮ್ ಆದ್ಮಿ ಪಾರ್ಟಿ. ಗುಜರಾತಿನ ವಿಧಾನಸಭಾ ಚುನಾವಣೆಗಳ ಫಲಿತಾಂಶದ ವಿಶ್ಲೇಷಣೆಗಳು ಇಂತಹ ಟೀಕಾಕಾರರಿಗೆ ಮತ್ತಷ್ಟು ಮೇವು ಒದಗಿಸಿವೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಉಪಸ್ಥಿತಿ ಭಾರೀ ತಾರುವಾರನ್ನೇನೂ ಉಂಟು ಮಾಡದು ಎಂಬ ನಿರೀಕ್ಷೆ ಹುಸಿಯಾಗಿದೆ. ಖುದ್ದು ಬಿಜೆಪಿಯೇ ನಿರೀಕ್ಷಿಸದಿದ್ದ ಐತಿಹಾಸಿಕ ವಿಜಯ ಕೇಸರಿ ಪಕ್ಷದ ಪಾಲಾಗಿದೆ.
ಬಿಜೆಪಿಗೆ ದೊರೆತಿರುವ ಘನವಿಜಯದಲ್ಲಿ ಆಮ್ ಆದ್ಮಿ ಪಾರ್ಟಿಯ ಪರೋಕ್ಷ ಕೊಡುಗೆಯಿದೆ ಎಂದಿರುವ ಈ ವಿಶ್ಲೇಷಣೆಯು ಪೂರಕ ಅಂಕಿ- ಅಂಶಗಳನ್ನೂ ಒದಗಿಸಿದೆ. ೧೮೨ ಕ್ಷೇತ್ರಗಳ ಪೈಕಿ ಕೇಜ್ರಿವಾಲ್ ಪಕ್ಷ ಐದರಲ್ಲಿ ಗೆದ್ದಿದೆ. ಆದರೆ ಚಲಾವಣೆಯಾದ ಒಟ್ಟು ಮತಗಳ ಶೇ.೧೩ರಷ್ಟನ್ನು ಪಡೆದಿದೆ. ಬಹುತೇಕ ಕಾಂಗ್ರೆಸ್ಸಿನ ಮತಗಳಿಗೆ ‘ಕನ್ನ’ ಹಾಕಿದೆ ಎಂಬ ವ್ಯಾಖ್ಯಾನ ನಡೆದಿದೆ. ಈ ವಿಶ್ಲೇಷಣೆಯ ಪ್ರಕಾರ ಆಪ್ ಸ್ಪರ್ಧೆಯಿಂದ ಬಿಜೆಪಿಗೆ ಕನಿಷ್ಠ ೩೩ ಹೆಚ್ಚುವರಿ ಸೀಟುಗಳ ಲಾಭವಾಗಿದೆ.
ಆಮ್ ಆದ್ಮಿ ಪಾರ್ಟಿ ಈ ಸಲ ಚುನಾವಣೆ ಕಣದಲ್ಲಿ ಇಲ್ಲದೆ ಹೋಗಿದ್ದರೂ ಬಿಜೆಪಿಯ ಗುಜರಾತ್ ಗೆಲುವನ್ನು ತಪ್ಪಿಸುವುದು ಸಾಧ್ಯವಿರಲಿಲ್ಲ. ಘನ ಗೆಲುವಿನ ಮುಕುಟವನ್ನೂ ಭುಜಕೀರ್ತಿಗಳನ್ನೂ ಮೋದಿಯವರಿಂದ ಕಿತ್ತುಕೊಳ್ಳುವುದು ಸಾಧ್ಯವಿರಲಿಲ್ಲ. ಆದರೆ ಈಗಿನ ದೈತ್ಯ ಗೆಲುವು ಬಿಜೆಪಿಗೆ ದಕ್ಕುತ್ತಿರಲಿಲ್ಲ. ೧೫೬ ಸೀಟುಗಳಿಗೆ ಬದಲಿಗೆ ೧೨೩ಕ್ಕೇ ತೃಪ್ತಿಪಡಬೇಕಾಗುತ್ತಿತ್ತು. ಕಾಂಗ್ರೆಸ್ಸಿನ ಸೋಲು ಈಗಿನಷ್ಟು ಹೀನಾಯ ಆಗುತ್ತಿರಲಿಲ್ಲ.
ಮೂವತ್ತಮೂರು ಕ್ಷೇತ್ರಗಳ ಪೈಕಿ ಪ್ರತಿಯೊಂದರಲ್ಲಿ  ಕಾಂಗ್ರೆಸ್ ಮತ್ತು ಆಪ್ ಅಭ್ಯರ್ಥಿಗಳು ಗಳಿಸಿರುವ ಮತಗಳನ್ನು ಕೂಡಿದರೆ ದೊರೆಯುವ ಒಟ್ಟು ಮತಗಳ ಮೊತ್ತವು ಅದೇ ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿಯ ಅಭ್ಯರ್ಥಿ ಪಡೆದಿರುವ ಮತಗಳಿಗಿಂತ ಹೆಚ್ಚು ಎಂದು ಫಲಿತಾಂಶಗಳ ವಿಶ್ಲೇಷಣೆಯು ತಿಳಿಯಪಡಿಸುತ್ತದೆ. ಈ ೩೩ ಸೀಟುಗಳ ಪೈಕಿ ೧೭ ಕ್ಷೇತ್ರಗಳು ಸೌರಾಷ್ಟ್ರ ಸೀಮೆಗೆ ಸೇರಿವೆ. ೨೦೧೭ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆ ಉತ್ತಮವಾಗಿದ್ದ ಸೀಮೆಯಿದು. ೪೮ ಸೀಟುಗಳ ಪೈಕಿ ೨೮ನ್ನು ಗೆದ್ದುಕೊಂಡಿತ್ತು. ಈ ಸಾಧನೆ ಹಾಲಿ ಚುನಾವಣೆಯಲ್ಲಿ ಕೇವಲ ಮೂರಕ್ಕೆ ಕುಸಿದಿದೆ.
೧೮೨ರ ಪೈಕಿ ಕಾಂಗ್ರೆಸ್ ಪಾರ್ಟಿ ೧೧೯ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾನದಲ್ಲಿದ್ದರೆ, ಆಮ್ ಆದ್ಮಿ ಪಾರ್ಟಿ ೩೫ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾನ ತಲುಪಿದೆ. ಆದಿವಾಸಿ ಸೀಮೆಗೆ ಕಾಲಿಟ್ಟಿರುವ ಆಪ್ ಎಂಬ ಆದಿವಾಸಿ ಕ್ಷೇತ್ರವನ್ನು ಭಾರತೀಯ ಟ್ರ್ತ್ಯೈಬಲ್ ಪಾರ್ಟಿಯಿಂದ ಕಿತ್ತುಕೊಂಡಿದೆ. ಉಳಿದ ನಾಲ್ಕು ಸೀಟುಗಳು ಸೌರಾಷ್ಟ್ರ ಸೀಮೆಯಿಂದ ದಕ್ಕಿವೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮತ್ತು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಜಯ ಸಾಧಿಸಿದೆ. ಗುಜರಾತಿನ ಈ ಅತಿ ದೊಡ್ಡ ಸೀಮೆಯಲ್ಲಿ ೪೮ ವಿಧಾನಸಭಾ ಕ್ಷೇತ್ರಗಳಿವೆ. ಬೋಟದ್, ಭಾವನಗರ, ಪೋರಬಂದರ, ದ್ವಾರಕಾ, ಜಾಮನಗರ್, ಸುರೇಂದ್ರ ನಗರ್, ರಾಜಕೋಟ್, ಮೋರ್ಬಿ, ಅಮ್ರೇಲಿ, ಗಿರ್ ಸೋಮನಾಥ್, ಜುನಾಗಢ ಎಂಬ ಹನ್ನೊಂದು ಜಿಲ್ಲೆಗಳನ್ನು ಒಳಗೊಂಡಿರುವ ಸೀಮೆಯಿದು. ಇದೇ ಲೆಕ್ಕಾಚಾರದ ಪ್ರಕಾರ ಆದಿವಾಸಿ ಸೀಮೆಯ ಹದಿಮೂರು ಸೀಟುಗಳಲ್ಲಿ ಕಾಂಗ್ರೆಸ್ಸಿನ ಗೆಲುವಿನ ಅವಕಾಶವನ್ನು ಆಮ್ ಆದ್ಮಿ ಪಾರ್ಟಿಯ ವೋಟು ಗಳಿಕೆಯು ಕಸಿದಿದೆ.
೨೦೧೨ರಲ್ಲಿ ಜರುಗಿದ ಸೂರತ್ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಗಳಲ್ಲಿ ೧೨೦ರ ಪೈಕಿ ೨೭ ವಾರ್ಡ್‌ಗಳನ್ನು ಗೆದ್ದ ನಂತರ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸುವ ಆಪ್ ಉತ್ಸಾಹ ನೂರ್ಮಡಿಯಾಗಿತ್ತು. ಸೂರತ್ ಪಾಟೀದಾರ ಸಮುದಾಯದ ಭದ್ರಕೋಟೆಯಾಗಿರುವುದೂ ಈ ಉತ್ಸಾಹಕ್ಕೆ ಕಾರಣವಾಗಿತ್ತು. ಆದರೆ ವಿಧಾನಸಭಾ ಚುನಾವಣೆಗಳಲ್ಲಿ ಸೂರತ್‌ನ ೧೬ ಸೀಟುಗಳ ಪೈಕಿ ಆಪ್ ಒಂದನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಎಲ್ಲ ೧೬ ಸೀಟುಗಳೂ ಬಿಜೆಪಿ ಪಾಲಾಗಿವೆ. ಒಂಬತ್ತು ಸೀಟುಗಳಲ್ಲಿ ಎರಡನೆಯ ಪಕ್ಷವಾಗಿ ಹೊರಹೊಮ್ಮಿದೆ. ಎರಡನೆಯ  ಪಕ್ಷದ ಈ ಮರ್ಯಾದೆ  ಕಾಂಗ್ರೆಸ್ ಗೆ ಏಳು ಕ್ಷೇತ್ರಗಳಲ್ಲಿ ಮಾತ್ರ ದಕ್ಕಿತು.
ಇತ್ತೀಚಿನ ವರ್ಷಗಳ ದೆಹಲಿ ಚುನಾವಣಾ ರಾಜಕಾರಣ ಕೂಡ ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ… ಮೂರೂ ಮುಖ್ಯ ಪಕ್ಷಗಳ ಏಳು ಬೀಳುಗಳನ್ನು ಕಂಡಿದೆ. ೨೦೧೩ರಲ್ಲಿ ರಂಗಪ್ರವೇಶ ಮಾಡಿದ ಆಮ್ ಆದ್ಮಿ ಪಾರ್ಟಿ ಈ ಏಳು ಬೀಳುಗಳ ಹಿಂದಿನ ಮುಖ್ಯ ಕಾರಣ. ೨೦೧೩ರ ವಿಧಾನಸಭಾ ಚುನಾವಣೆಗಳಲ್ಲಿ ಮೂರೂ ಪಕ್ಷಗಳ ಜೋಳಿಗೆಗೆ ತಲಾ ನಾಲ್ಕನೆಯ ಒಂದರಷ್ಟು ಮತಗಳು ಬಿದ್ದಿದ್ದವು. ೨೦೧೪ರಲ್ಲಿ ಕಾಂಗ್ರೆಸ್ ಧೂಳೀಪಟವಾದ ಲಾಭವನ್ನು ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಹಂಚಿಕೊಂಡವು. ಕಾಂಗ್ರೆಸ್ ಪತನದ ಲಾಭದ ದೊಡ್ಡ ಪಾಲನ್ನು ಬಾಚಿಕೊಂಡದ್ದು ಬಿಜೆಪಿಯೇ. ದೆಹಲಿಯ ಏಳೂ ಲೋಕಸಭಾ ಸೀಟುಗಳನ್ನು ಗೆದ್ದಿತ್ತು. ಆಮ್ ಆದ್ಮಿ ಪಾರ್ಟಿಗೆ ಶೇ.೩೩ರಷ್ಟು ವೋಟುಗಳು ಸಿಕ್ಕರೂ ಸೀಟುಗಳು ಕೈ ತಪ್ಪಿದ್ದವು. ಎಲ್ಲ ಏಳು ಸೀಟುಗಳಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಎರಡನೆಯ ಸ್ಥಾನದಲ್ಲಿದ್ದರು. ಕಾಂಗ್ರೆಸ್ ದೂರ ದೂರದ ಮೂರನೆಯ ಸ್ಥಾನದಲ್ಲಿತ್ತು. ಬಿಜೆಪಿ ವಿರೋಧಿ ಮತಗಳು ಹೀಗೆ ಹಂಚಿ ಹೋಗದಿದ್ದರೆ ಆಮ್ ಆದ್ಮಿ ಪಾರ್ಟಿ ಬರಿಗೈ ಆಗುತ್ತಿರಲಿಲ್ಲ. ೨೦೧೫ರಲ್ಲಿ ಪುನಃ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಯಶಸ್ಸಿನ ಭಾರೀ ಅಲೆಯನ್ನು ಏರಿತ್ತು.

andolanait

Recent Posts

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

2 mins ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

19 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

32 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

9 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

10 hours ago