ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ
‘ಫಸ್ಟ್ , ಯು ಹ್ಯಾವ್ ಟು ಬಿಲೀವ್ ಇನ್ ಇಟ್, ದೆನ್ ದಿ ಹೋಲ್ ವರ್ಲ್ಡ್ ವಿಲ್ ಬಿಲೀವ್ ಇಟ್’ – ಇದು ನಟ ಯಶ್ ಅವರ ವೈಯಕ್ತಿಕ ಜಾಲತಾಣದಲ್ಲಿ ಕಾಣುವ ಮೊದಲ ಸಾಲು. ಮೊನ್ನೆ ಅವರು ನಟಿಸಿ, ಕೆ. ವೆಂಕಟನಾರಾಯಣ ಅವರೊಂದಿಗೆ ಸೇರಿ ನಿರ್ಮಿಸಿದ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅವರಾಡಿದ ಮಾತುಗಳು ಇದಕ್ಕೆ ಪೂರಕವಾಗಿದ್ದವು. ತಮ್ಮ ಗುರಿ ತಲುಪಲು ತಾವು ಕ್ರಮಿಸುವ ಮಾರ್ಗದ ಬಗೆಗೆ ಅವರು ಹೇಳಿದರು. ‘ಯಾವ ದಾರಿಯಾದರೂ ಸರಿ, ಗುರಿ ಮುಟ್ಟಬೇಕು. ಆ ದಾರಿಯಲ್ಲಿ ಹಲವು ಹೋರಾಟಗಳು ಇರುತ್ತವೆ ಮತ್ತು ಹೋರಾಡಿಕೊಂಡೇ ನಾವು ನಮ್ಮ ಗುರಿ ಮುಟ್ಟಬೇಕು. ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎನ್ನುವುದಾಗಿತ್ತು ಅವರ ಮಾತಿನ ಸಾರ.
ಯಾವುದೇ ಅನುಮಾನಗಳಿಲ್ಲದೆ, ಬಂಡೆಯಂತೆ ನಿಂತು ಯೋಜನೆ ಸಂಪೂರ್ಣವಾಗಲು ಸಹಕರಿಸಿದ ನಿರ್ಮಾಪಕ ವೆಂಕಟನಾರಾಯಣ್ ಕುರಿತಂತೆ ಅಪಾರ ಗೌರವ ಅವರ ಮಾತಲ್ಲಿತ್ತು. ದೇಶದ ಪ್ರತಿಭಾವಂತ ತಾರೆಯರನ್ನು ತಮ್ಮ ಚಿತ್ರದಲ್ಲಿ ಸೇರಿಸಿ, ಭಾರತೀಯ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಅವರ ಛಲ ಅಲ್ಲಿತ್ತು. ದೇಶ ಮಾತ್ರವಲ್ಲ, ಹಾಲಿವುಡ್ ತಂತ್ರಜ್ಞರೂ ಅಲ್ಲಿದ್ದರು. ಹ್ಞಾಂ, ‘ಟಾಕ್ಸಿಕ್’ ಕನ್ನಡದಲ್ಲಿ ಮಾತ್ರ ತಯಾರಾದ ಚಿತ್ರವಲ್ಲ. ಏಕಕಾಲದಲ್ಲಿ ಇಂಗ್ಲಿಷಿನಲ್ಲೂ ತಯಾರಾಗಿದೆ. ಕನ್ನಡದಲ್ಲಿ ತಯಾರಾಗಿ, ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಿಗೆ ಡಬ್ ಮಾಡಿ, ‘ಪ್ಯಾನ್ ಇಂಡಿಯಾ ಚಿತ್ರ’ ಎಂದು ನಿರ್ಮಾಪಕರು ವ್ಯವಹಾರ ಮಾಡುತ್ತಿದ್ದರು. ಆದರೆ ಈ ಬಾರಿ ಕನ್ನಡ ಮಾತ್ರವಲ್ಲದೆ, ಇಂಗ್ಲಿಷಿನಲ್ಲೂ ಚಿತ್ರೀಕರಿಸಿzರೆ. ಈ ಬೆಳವಣಿಗೆ ಇದೇ ಮೊದಲು.
ಅಮೆರಿಕದಲ್ಲಿ ಈಗಾಗಲೇ ಆನ್‌ಲೈನ್ ಮುಂಗಡ ಬುಕಿಂಗ್ ಆರಂಭವಾಗಿದೆ. ಅಲ್ಲಿ ಇದೇ ೨೫ರಿಂದ ಪ್ರದರ್ಶನ. ಅಲ್ಲಿನ ಒಂದು ಪ್ರದೇಶದಲ್ಲಿ ಕನ್ನಡ ಮತ್ತು ತೆಲುಗು ಚಿತ್ರಗಳ ಬುಕಿಂಗ್ ಆರಂಭವಾಗಿದೆ. ಆ ಪ್ರದೇಶದಲ್ಲಿ ಕನ್ನಡಿಗರ ಸಂಖ್ಯೆಗಿಂತ ತೆಲುಗರ ಸಂಖ್ಯೆ ಹೆಚ್ಚಿರುವ ಕಾರಣಕ್ಕೋ ಏನೋ, ತೆಲುಗು ಪ್ರದರ್ಶನಕ್ಕೆ ಹೆಚ್ಚು ಬೇಡಿಕೆ ಇದ್ದಂತಿತ್ತು. ಕನ್ನಡ ಚಿತ್ರಕ್ಕಿಂತ ತೆಲುಗು ಚಿತ್ರ ನೋಡುವವರ ಸಂಖ್ಯೆ ಈ ಹೊತ್ತಿಗೆ ಹೆಚ್ಚಿತ್ತು.
ಅಮೆರಿಕದಲ್ಲಿ ಇಂಗ್ಲಿಷ್ ಆವೃತ್ತಿಯ ಬಿಡುಗಡೆ, ಮುಂಗಡ ಬುಕ್ಕಿಂಗ್ ವಿವರ ಇನ್ನೂ ಲಭ್ಯವಿಲ್ಲ. ಹಾಲಿವುಡ್ ಸಂಸ್ಥೆ ಲಯನ್ಸ್ ಗೇಟ್ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದು ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧವಾಗಿರುವ ಹಾಲಿವುಡ್‌ನ ಪ್ರಮುಖ ಚಲನಚಿತ್ರ ನಿರ್ಮಾಣ ಮತ್ತು ವಿತರಣಾ ಸಂಸ್ಥೆಗಳಲ್ಲಿ ಒಂದು. ಭಾರತೀಯ ಚಿತ್ರವೊಂದರ ಮೂಲ ಇಂಗ್ಲಿಷ್ ಆವೃತ್ತಿಯೊಂದನ್ನು ಜಗತಿಕವಾಗಿ ಬಹಳ ದೊಡ್ಡ ಮಟ್ಟದಲ್ಲಿ ಲಯನ್ಸ್ ಗೇಟ್ ಸಂಸ್ಥೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಮೂಲಗಳ ಪ್ರಕಾರ ಅಮೆರಿಕಾದಲ್ಲಿ ಮಾತ್ರ ಸುಮಾರು ೩,೦೦೦ ಪರದೆಗಳಲ್ಲಿ ಇದು ತೆರೆಗೆ ಬರಲಿದೆ (ಭಾರತೀಯ ಭಾಷಾ ಅವತರಣಿಕೆಗಳೂ ಸೇರಿದಂತೆ) ಸಾಮಾನ್ಯವಾಗಿ ಆನ್‌ಲೈನ್ ಬುಕ್ಕಿಂಗ್ ತೆರೆದಾಗ, ಜಲತಾಣದಲ್ಲಿ, ಚಿತ್ರದ ಕಥಾಸಾರ, ತಂತ್ರಜ್ಞರು ಮತ್ತು ಕಲಾವಿದರ ವಿವರ ನೀಡಲಾಗುತ್ತದೆ. ಅಲ್ಲಿ ನೀಡಿದ ಕಥಾಸಾರ ಹೀಗಿದೆ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾಲಘಟ್ಟ. ಆದರೆ ಗೋವಾ ಇನ್ನೂ ಪೋರ್ಚುಗೀಸರ ಆಡಳಿತದಲ್ಲಿದೆ. ಗೋವಾ ವಿಮೋಚನೆಯ ಹಿಂದಿನ ಅಹಿತಕರ ವರ್ಷಗಳಲ್ಲಿ, ಅಧಿಕಾರ, ದ್ರೋಹ ಮತ್ತು ಹಿಂಸಾಚಾರಗಳ ಘರ್ಷಣೆಗಳಾಗುವ ನಗರದಲ್ಲಿ, ರಾಯ ನಿಷ್ಠೆ ಮತ್ತು ನೈತಿಕತೆಯ ಸಂಕೀರ್ಣತೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲಿನ ವಾತಾವರಣದ ಸೆಟ್ಟಿಂಗ್‌ಗಳು, ತೀವ್ರ ಸಾಹಸ ಸನ್ನಿವೇಶಗಳು ಮತ್ತು ನೈತಿಕ ಸಂಘರ್ಷದ ಪಾತ್ರಗಳೊಂದಿಗೆ, ಚಿತ್ರವು ಒಬ್ಬರು ಮಾಡುವ ಆಯ್ಕೆಗಳಿಗೆ ಕೊಡಬೇಕಾದ ಬೆಲೆಯನ್ನು ಮತ್ತು ಅವ್ಯ ವಸ್ಥೆಯ ನಡುವೆ ವಿಮೋಚನೆಯನ್ನು ಕಂಡುಕೊಳ್ಳುವ ಸಾಧ್ಯತೆಯನ್ನು ಹುಡುಕುತ್ತದೆ.
ಚಿತ್ರದ ಕುರಿತಂತೆ, ಯಶ್ ಕೂಡಾ, ಇವತ್ತಿನ ಯುವ ಪೀಳಿಗೆ, ಇವತ್ತಿನ ಗೊಂದಲಗಳನ್ನು ಈ ಚಿತ್ರದಲ್ಲಿ ನೋಡಬಹುದು. ಮನುಷ್ಯರಿಗೆ ಬೇಕಾದ ಹಲವು ವಿಷಯಗಳು ಈ ಚಿತ್ರದಲ್ಲಿರುತ್ತವೆ ಎಂದು ಹೇಳಿದರು. ಚಿತ್ರ ಏನು ಹೇಳುತ್ತದೆ ಎನ್ನುವುದು ಒತ್ತಟ್ಟಿಗಿರಲಿ, ‘ನಮ್ಮ ಗುರಿ ಮುಟ್ಟಲು ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂದ ಯಶ್ ಮಾತಿನ ಹಿಂದೆ, ತಾವು ಕನ್ನಡ ಚಿತ್ರದ ಮೂಲಕ ಮಾತ್ರ ಜಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಕಷ್ಟ, ಅದಕ್ಕೆ ಇಂಗ್ಲಿಷ್ ಅವತರಣಿಕೆ ಕೂಡಾ ಮಾಡಿದೆ ಎನ್ನುವುದಿತ್ತೇ? ಹಾಲಿವುಡ್ ಮಂದಿಯ ಜೊತೆ ವ್ಯವಹರಿಸಲು ಭಾರತೀಯ ಭಾಷಾ ಚಿತ್ರಗಳಾದರೆ ಸಾಲದು, ಇಂಗ್ಲಿಷ್ ಅವತರಣಿಕೆ ಕೂಡಾ ಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿರಬೇಕು. ಅದರಿಂದಲೇ, ಲಯನ್ಸ್ ಗೇಟ್‌ನಂತಹ ಸಂಸ್ಥೆ ಈ ಚಿತ್ರದ ಜೊತೆ ಕೈಜೋಡಿಸಲು ಸಾಧ್ಯವಾಗಿದ್ದಿರಬೇಕು. ಹಿಂದೆ ಯಾವ ಭಾರತೀಯ ಚಿತ್ರಗಳೂ ಹಾಲಿವುಡ್ ವಿತರಣಾ ಸಂಸ್ಥೆಗಳ ಮೂಲಕ ಅಮೆರಿಕದಲ್ಲಿ ತೆರೆಗೆ ಬಂದ ಉದಾಹರಣೆ ಇದ್ದಂತಿಲ್ಲ. ಇದೇ ಮೊದಲು. ‘ಟಾಕ್ಸಿಕ್’ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರ ‘ಲೈಯರ್ಸ್ ಡೈಸ್’ ಚಿತ್ರ ೨೦೧೪ರ ಆಸ್ಕರ್ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಗೆ ಭಾರತದಿಂದ ಶಿಫಾರಸು ಪಡೆದ ಚಿತ್ರವಾಗಿತ್ತು. ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಗೆ ಪ್ರತಿ ದೇಶದಿಂದ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಭಾರತದಲ್ಲಿ ಈ ಆಯ್ಕೆಯ ಹೊಣೆ ಫಿಲಂ ಫೆಡರೇಶನ್ ಆಫ್ ಇಂಡಿಯಾದ್ದು. ಈ ಚಿತ್ರ ಅಲ್ಲಿ ಅಂತಿಮ ಆಯ್ಕೆಯ ಚಿತ್ರಗಳ ಯಾದಿಯಲ್ಲಿ ಸೇರಲಿಲ್ಲ. ಈ ತನಕ ಒಂದೆರಡು ವೈಯಕ್ತಿಕ ಪ್ರಶಸ್ತಿಗಳ ಹೊರತಾಗಿ, ಭಾರತದ ಯಾವ ಚಿತ್ರಗಳೂ ಆಸ್ಕರ್ ಪ್ರಶಸ್ತಿ ಪಡೆದದ್ದಿಲ್ಲ. ಅದೇನಿದ್ದರೂ, ಬಹುತೇಕ ಹಾಲಿವುಡ್ ಚಿತ್ರಲೋಕದ ಕನಸುಗಳು.
ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರಗಳ ಸ್ಪರ್ಧೆಗೆ ಬೇರೆ ಬೇರೆ ದೇಶಗಳು ಒಂದೊಂದು ಚಿತ್ರಗಳನ್ನು ಕಳುಹಿಸುತ್ತವೆ. ಅಮೆರಿಕದಲ್ಲಿ ತೆರೆಕಂಡು ಕನಿಷ್ಠ ಒಂದು ವಾರ, ೨೮ ಪ್ರದರ್ಶನ ಕಂಡ ಯಾವುದೇ ದೇಶದ ಯಾವುದೇ ಭಾಷೆಯ ಚಿತ್ರ ಆಸ್ಕರ ಪ್ರಶಸ್ತಿಗೆ, ಹಾಲಿವುಡ್ ಚಿತ್ರಗಳ ಜೊತೆ ಸ್ಪರ್ಧಿಸಲು ಅರ್ಹತೆ ಪಡೆಯುತ್ತದೆ. ಭಾರತದಿಂದ ಅಂತಹ ಹಲವು ಚಿತ್ರಗಳು ಆಸ್ಕರ್ ಕಣಕ್ಕಿಳಿದಿವೆ. ಹಿಂದಿನ ವರ್ಷ ‘ಉತ್ತಮ ಮೂಲ ಗೀತೆ’ ಪ್ರಶಸ್ತಿ ಪಡೆದ ತೆಲುಗು ಚಿತ್ರ ಆರ್‌ಆರ್‌ಆರ್, ಅಮೆರಿಕದಲ್ಲಿ ತೆರೆಕಂಡು ಸ್ಪರ್ಧೆಗೆ ಅರ್ಹತೆ ಗಳಿಸಿತ್ತು. ಹಿಂದೆ ಆಸ್ಕರ್ ಪ್ರಶಸ್ತಿಗಳು ಕೇವಲ ಹಾಲಿವುಡ್ ಅಥವಾ ಇಂಗ್ಲಿಷ್ ಸಿನಿಮಾಗಳಿಗಷ್ಟೇ ಸೀಮಿತವಾಗಿತ್ತು. ಈಗ ಪ್ರಾದೇಶಿಕ ಮತ್ತು ವಿದೇಶಿ ಭಾಷೆಯ ಚಿತ್ರಗಳಿಗೂ ಅತ್ಯುನ್ನತ ಪುರಸ್ಕಾರಗಳು ಲಭಿಸುತ್ತಿವೆ.
ದಕ್ಷಿಣ ಕೊರಿಯಾದ ಪ್ಯಾರಾಸೈಟ್ ೨೦೨೦ರಲ್ಲಿ ಆಸ್ಕರ್ ಇತಿಹಾಸದ ‘ಉತ್ತಮ ಚಿತ್ರ’ ಪ್ರಶಸ್ತಿ ಗೆದ್ದ ಮೊದಲ ಇಂಗ್ಲಿಷೇತರ ಭಾಷೆಯ ಚಿತ್ರ. ಆ ಚಿತ್ರಕ್ಕೆ ಉತ್ತಮ ನಿರ್ದೇಶಕ ಮತ್ತು ಉತ್ತಮ ಮೂಲ ಚಿತ್ರಕಥೆ ಪ್ರಶಸ್ತಿಯೂ ಸಂದಿತ್ತು. ೨೦೨೩ರಲ್ಲಿ ಜರ್ಮನಿಯ ‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’ ಚಿತ್ರ ಉತ್ತಮ ಅಂತಾರಾಷ್ಟ್ರೀಯ ಚಲನಚಿತ್ರ, ಉತ್ತಮ ಛಾಯಾಗ್ರಹಣ, ಉತ್ತಮ ಸಂಗೀತ ಹಾಗೂ ಶ್ರೇಷ್ಠ ಪ್ರೊಡಕ್ಷನ್ ಡಿಸೈನ್ ಸೇರಿ ಒಟ್ಟು ೪ ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿತು. -ನ್ಸ್‌ನ ‘ಅನಟಮಿ ಆಫ್ ಎ ಫಾಲ್’ ಜಪಾನ್‌ನ ‘ಡ್ರೈವ್ ಮೈ ಕಾರ್’, ಮೆಕ್ಸಿಕೊದ ‘ರೋಮಾ’, ಜಪಾನ್‌ನ ಗೊಡ್ಜಿ ಮೈನಸ್ ಒನ್’ ಮುಂತಾದ ಇಂಗ್ಲಿಷೇತರ ಚಿತ್ರಗಳು ಹಲವು ಪ್ರಶಸ್ತಿಗಳನ್ನು ತಮ್ಮ ದಾಗಿಸಿಕೊಂಡಿವೆ. ದೇಶ, ಭಾಷೆಗಳ ಗಡಿ ಮೀರಿ ವಿಶ್ವದಾದ್ಯಂತ ಇರುವ ಚಿತ್ರಗಳಿಗೆ ಅಕಾಡೆಮಿ ಬಾಗಿಲು ತೆರೆದಿದೆ.
ನಾಲ್ಕು ವರ್ಷಗಳ ನಂತರ ಯಶ್ ಅಭಿನಯ, ನಿರ್ಮಾಣದ ಎರಡು ಚಿತ್ರಗಳು ಈ ವರ್ಷ ತೆರೆಗೆ ಬರುತ್ತಿವೆ. ‘ಟಾಕ್ಸಿಕ್’ ಮತ್ತು ‘ರಾಮಾಯಣ’. ‘ರಾಮಾಯಣ’ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರು ನಿರ್ಮಿಸುತ್ತಿದ್ದು, ಯಶ್ ಅದರಲ್ಲೂ ನಿರ್ಮಾಣಕ್ಕೆ ಕೈಜೋಡಿಸಿದ್ಧಾರೆ. ಈಗಾಗಲೇ ಹೇಳಿದಂತೆ. ಹಲವು ಬಾರಿ ವಿಎಫ್ಎಕ್ಸ್‌ಗಾಗಿ ಆಸ್ಕರ್ ಪ್ರಶಸ್ತಿ ಪಡೆದ ನಮಿತ್ ಮಲ್ಹೋತ್ರಾ ಅವರ, ಡಿಎನ್‌ಇಜಿ ಸಂಸ್ಥೆಯೇ ‘ರಾಮಾಯಣ’ಕ್ಕೂ ಆ ಕೆಲಸ ಮಾಡುತ್ತಿದೆ. ಅವರೇ ಹೇಳಿದ ಪ್ರಕಾರ, ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಈಗ ಈ ಕೆಲಸದಲ್ಲಿ ತೊಡಗಿದ್ದಾರೆ.
ಗುಣಮಟ್ಟದಲ್ಲಿ, ವ್ಯವಹಾರದಲ್ಲಿ ಹಾಲಿವುಡ್ ಚಿತ್ರಗಳಿಗೆ ಸರಿಸಾಟಿಯಾಗಿ ನಾವು ನಿಲ್ಲಬವು ಎನ್ನುವುದನ್ನು ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಹೇಳುತ್ತವೆಯೇ? ಅವೆರಡು ಚಿತ್ರಗಳು ತೆರೆಕಂಡ ನಂತರದ ದಿನಗಳು ಅವನ್ನು ಹೇಳಲಿವೆ. ಗಳಿಕೆಯಲ್ಲಿ ಮಾತ್ರವಲ್ಲ, ಆಸ್ಕರ್ ಅಂಗಳಕ್ಕೆ ಹೋಗುವ ಸಾಧ್ಯತೆಯನ್ನು ಕೂಡಾ ಈ ವರ್ಷಾಂತ್ಯ ಹೇಳಲಿದೆ. ೨೦೨೮ರಲ್ಲಿ ಆಸ್ಕರ್ ಪ್ರಶಸ್ತಿಯ ನೂರನೇ ಆವೃತ್ತಿ. ಮುಂದಿನ ವರ್ಷ ೯೯ನೆಯದು.
” ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾಲಘಟ್ಟ. ಆದರೆ ಗೋವಾ ಇನ್ನೂ ಪೋರ್ಚುಗೀಸರ ಆಡಳಿತದಲ್ಲಿದೆ. ಗೋವಾ ವಿಮೋಚನೆಯ ಹಿಂದಿನ ಅಹಿತಕರ ವರ್ಷಗಳಲ್ಲಿ, ಅಧಿಕಾರ, ದ್ರೋಹ ಮತ್ತು ಹಿಂಸಾಚಾರಗಳ ಘರ್ಷಣೆಗಳಾಗುವ ನಗರದಲ್ಲಿ, ರಾಯ ನಿಷ್ಠೆ ಮತ್ತು ನೈತಿಕತೆಯ ಸಂಕೀರ್ಣತೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲಿನ ವಾತಾವರಣದ ಸೆಟ್ಟಿಂಗ್‌ಗಳು, ತೀವ್ರ ಸಾಹಸ ಸನ್ನಿವೇಶಗಳು ಮತ್ತು ನೈತಿಕ ಸಂಘರ್ಷದ ಪಾತ್ರಗಳೊಂದಿಗೆ, ಚಿತ್ರವು ಒಬ್ಬರು ಮಾಡುವ ಆಯ್ಕೆಗಳಿಗೆ ಕೊಡಬೇಕಾದ ಬೆಲೆಯನ್ನು ಮತ್ತು ಅವ್ಯವಸ್ಥೆಯ ನಡುವೆ ವಿಮೋಚನೆಯನ್ನು ಕಂಡುಕೊಳ್ಳುವ ಸಾಧ್ಯತೆಯನ್ನು ಹುಡುಕುತ್ತದೆ.”
ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…
ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…
ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…
ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ…
ದಾ.ರಾ.ಮಹೇಶ್ ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು…
ಎಂ.ಬಿ.ರಂಗಸ್ವಾಮಿ ಮೂಗೂರು: ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರ ಶಾಲೆಯಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರ…