ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ರಾಷ್ಟ್ರದ ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಮೇಲೆ ೧೨ನೇ ಬಾರಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ಅವರು ಮಾತನಾಡಿದ್ದಾರೆ. ಇದು ಐತಿಹಾಸಿಕ ದಾಖಲೆಯೂ ಆಗಿದೆ. ಮೋದಿ ಅವರು ಈ ಬಾರಿ ಮಾಡಿದ ೧ ಗಂಟೆ ೨೧ ನಿಮಿಷಗಳ ಭಾಷಣದಲ್ಲಿ ರಾಷ್ಟ್ರದ ಭದ್ರತೆ, ಸ್ವಾವಲಂಬನೆ, ತಮ್ಮ ದೀರ್ಘಾವಧಿ ಕಾಲದ ಆಡಳಿತದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಪ್ರಗತಿ, ಸಾಧನೆಯನ್ನು ತಿಳಿಸಿದ್ದಾರೆ. ಹಾಗೆಯೇ ಪರೋಕ್ಷವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ವಿಽಸಿರುವ ಶೇ.೫೦ ರಷ್ಟು ತೆರಿಗೆ, ಪಾಕಿಸ್ತಾನದ ಜೊತೆ ಅಮೆರಿಕದ ಸಂಬಂಧ, ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ಬಳಸುವುದಾಗಿ ಬೆದರಿಕೆ ಒಡ್ಡಿರುವುದನ್ನು ಖಂಡಿಸಿದ್ದಾರೆ.
‘ಸುದರ್ಶನ್ ಚಕ್ರ’ ಹೆಸರಿನಲ್ಲಿ ಸ್ವದೇಶಿ ರಕ್ಷಣಾ ಸಾಮಗ್ರಿ ಮತ್ತು ಶಸಾಸ್ತ್ರ ನಿರ್ಮಿಸಿಕೊಳ್ಳುವ ಸ್ವದೇಶಿ ನೀತಿಯನ್ನು ಘೋಷಿಸುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪಾಕಿಸ್ತಾನದಿಂದ ನಿರಂತರವಾಗಿ ಗಡಿಯಲ್ಲಿ ಭಯೋತ್ಪಾದನೆ ಸೃಷ್ಟಿಸುವುದು, ಭಯೋತ್ಪಾದಕರನ್ನು ಉತ್ತೇಜಿಸುವುದು ನಡೆದು ಬಂದಿರುವ ಕಾರಣ ಹಿಂದಿನ ಪ್ರಧಾನಿಗಳು ಕೂಡ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಮತ್ತು ನೇರವಾಗಿಯೇ ಎಚ್ಚರಿಕೆ ನೀಡುತ್ತಾ ಬಂದಿದ್ದರು. ಈಗ ಅದನ್ನೇ ಮೋದಿ ಅವರು ಮುಂದುವರಿಸಿ ಪಾಕಿಸ್ತಾನದ ವಿರುದ್ಧ ಎಚ್ಚರಿಕೆಯ ಮಾತನ್ನಾಡಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್ ನಲ್ಲಿ ನಡೆದ ದಾಳಿಯನ್ನು ಪ್ರಸ್ತಾಪಿಸಿ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ ಎಂದು ಹೇಳುವುದನ್ನು ಮೋದಿ ಮರೆಯಲಿಲ್ಲ. ಪ್ರಧಾನಿ ಮೋದಿ ಅವರು ಹೆಚ್ಚಾಗಿ ವಿದೇಶಗಳನ್ನು ಸುತ್ತಿ, ಹೆಚ್ಚು ಸಾರ್ವಜನಿಕ ಭಾಷಣ ಮಾಡಿಕೊಂಡು ತಿರುಗಾಡಿದರೂ, ಅವರು ತಮ್ಮ ಕಾರ್ಯವೈಖರಿಯನ್ನು ಬಹಿರಂಗಗೊಳಿಸುವುದು ಅಪರೂಪ. ಅವರದೇ ಆದ ಅಜೆಂಡಾ ಇಟ್ಟುಕೊಂಡು ಮೌನವಾಗಿ ತಮ್ಮ ಯೋಜನೆಯನ್ನು ಸಾಽಸುವಲ್ಲಿ ಅವರು ಎತ್ತಿದ ಕೈ. ಅಷ್ಟರ ಮಟ್ಟಿಗೆ ಎಲ್ಲ ಇಲಾಖೆಗಳ ಕಾರ್ಯವನ್ನು ಚುರುಕುಗೊಳಿಸಿ ನಿಗದಿತ ಸಮಯಕ್ಕೆ ತಮಗೆ ನೀಡಿದ ಗುರಿಯನ್ನು ಮುಟ್ಟುವಂತೆ ಆಡಳಿತ ಮಾಡುತ್ತಿರುವುದು ಮೋದಿ ಅವರ ವಿಶಿಷ್ಟ ಶೈಲಿ. ಹಾಗಾಗಿ ಮೋದಿ ಅವರ ಆಡಳಿತದ ಹೆಜ್ಜೆಗಳನ್ನು ಗುರುತಿಸುವುದು ಕಷ್ಟ. ೨೦೩೫ರ ಹೊತ್ತಿಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ೨೦೪೭ರ ಹೊತ್ತಿಗೆ ಅಣ್ವಸ್ತ್ರ ಕ್ಷೇತ್ರದಲ್ಲಿ ಹಾಗೂ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸುವ ಗುರಿ ಹೊಂದಿರುವುದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸುವ ಮೂಲಕ ಜನತೆಗೆ ತಮ್ಮ ಆಡಳಿತ ಆತ್ಮನಿರ್ಭರ ದಿಕ್ಕಿನಲ್ಲಿ ಮುನ್ನಡೆಯುತ್ತಿರುವ ಸ್ಪಷ್ಟ ಸೂಚನೆಯನ್ನೂ ನೀಡಿದ್ದಾರೆ.
ಈ ಬಾರಿಯ ಭಾಷಣದಲ್ಲಿ ಅವರು ದೇಶದ ಜನತೆಗೆ ನೀಡಿರುವ ಆಶ್ವಾಸನೆ ಎಂದರೆ ದೀಪಾವಳಿ ಹಬ್ಬದ ಹೊತ್ತಿಗೆ ಜಿಎಸ್‌ಟಿಯಲ್ಲಿನ ಬದಲಾವಣೆ. ಅಂದರೆ ತೆರಿಗೆಯ ಭಾರವನ್ನು ಕಡಿಮೆ ಗೊಳಿಸುವ ದಿಕ್ಕಿನಲ್ಲಿ ಸುಧಾರಣೆ ತರುವ ಮೂಲಕ ನಿತ್ಯದ ಜೀವನ ದುಬಾರಿಯಾಗದಂತೆ ಮಾಡುವ ಭರವಸೆ ನೀಡಿರುವುದು. ಅದಕ್ಕಾಗಿ ಜನರು ದೀಪಾವಳಿವರೆಗೆ ಕಾಯಲೇಬೇಕಾಗಿದೆ. ಇದರಿಂದ ತೆರಿಗೆಯ ಭಾರವನ್ನು ಕಡಿತಗೊಳಿಸುವ ಮೂಲಕ ದೇಶೀಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬರುವ ಹಾಗೆ ಹಲವು ಉತ್ತೇಜನಾ ಕ್ರಮಗಳನ್ನು ಕೈಗೊಂಡು ಆಂತರಿಕವಾಗಿ ಮತ್ತಷ್ಟು ಆರ್ಥಿಕ ಸುಧಾರಣೆ ಮಾಡುವ ಮಾತನ್ನಾಡಿರುವುದು ಸಹಜವಾಗಿ ಜನರಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದೆ. ಇದೇ ವೇಳೆಗೆ ಬಿಹಾರದ ವಿಧಾನಸಭೆ ಚುನಾವಣೆಯೂ ನಡೆಯುವುದರಿಂದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಅನುಕೂಲವಾಗುವುದನ್ನು ಮೋದಿ ಅವರು ಈ ಘೋಷಣೆಯ ಉದ್ದೇಶವನ್ನು ಮನಸಿನಲ್ಲಿ ಇಟ್ಟುಕೊಂಡಂತೆ ಕಾಣುತ್ತದೆ. ಮೋದಿ ಅವರು ಏನೇ ಮಾಡಿದರೂ ಅದು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಮಾಡಿರುತ್ತಾರೆ ಎನ್ನುವುದನ್ನು ಈ ಬಾರಿಯ ಭಾಷಣದಲ್ಲೂ ಗಮನಿಸಬಹುದು.
ಮೋದಿ ಅವರು ತಮ್ಮ ಭಾಷಣದಲ್ಲಿ ಬಹುತೇಕ ಎಲ್ಲ ಸಮಸ್ಯೆ ಮತ್ತು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಆದರೆ ೧೦೦ ವರ್ಷ ತುಂಬುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಹಾಡಿ ಹೊಗಳಿರುವುದು ಪ್ರತಿಪಕ್ಷಗಳ ಕಟು ಟೀಕೆಗೆ ಗುರಿ ಮಾಡಿದೆ. ಆರ್‌ಎಸ್‌ಎಸ್ ನಾಯಕರಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಪಾತ್ರವೇನೂ ಇಲ್ಲ ಎನ್ನುವುದು ವಿರೋಧ ಪಕ್ಷಗಳ ಟೀಕೆ. ಆರ್‌ಎಸ್‌ಎಸ್ ಸಂಘಟನೆಯನ್ನು ಹೊಗಳುವುದಾದರೂ ಏಕೆ ಬೇಕಿತ್ತು ಎನ್ನುವ ಪ್ರಶ್ನೆ ಪ್ರತಿಪಕ್ಷಗಳದ್ದು. ಆದರೆ ಬಿಜೆಪಿ ಮತ್ತು ಬಿಜೆಪಿ ಸರ್ಕಾರದ ಆಡಳಿತದ ಮೇಲೆ ಈ ಸಂಘಟನೆ ಪರೋಕ್ಷವಾಗಿ ನಿಯಂತ್ರಣವನ್ನು ಇಟ್ಟುಕೊಂಡಿರುವುದು ರಹಸ್ಯವೇನಲ್ಲ. ಚುನಾವಣೆ ದಿನಗಳಲ್ಲಿ ಬಿಜೆಪಿಯು ಆರ್‌ಎಸ್‌ಎಸ್ ಬೆಂಬಲವಿಲ್ಲದೆ ಗೆಲ್ಲುವುದು ಕಷ್ಟ ಎನ್ನುವುದನ್ನು ಇತ್ತೀಚೆಗೆ ನಡೆದ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳು ಸಾಬೀತುಪಡಿಸಿವೆ.
ಈ ಮಧ್ಯೆ ಸಂಘದ ಸರಸಂಘಚಾಲಕ ಮೋಹನ್ ಭಾಗ್ವತ್ ಅವರು ಇತ್ತೀಚೆಗೆ ೭೫ ವರ್ಷ ತುಂಬಿದವರು ತಮ್ಮ ಸ್ಥಾನ ತ್ಯಜಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂದು ಪರೋಕ್ಷವಾಗಿ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ್ದು ಸಹಜವಾಗಿಯೇ ವಿವಾದವನ್ನು ಹುಟ್ಟು ಹಾಕಿತ್ತು. ಮೋದಿ ಅವರಿಗೆ ಮುಂದಿನ ತಿಂಗಳು ೭೫ ವರ್ಷಗಳು ತುಂಬಲಿವೆ. ಬಿಜೆಪಿಯು ಕೂಡ ೭೫ ವರ್ಷ ತುಂಬಿದವರನ್ನು ವಿಶೇಷವಾಗಿ ಪಕ್ಷವನ್ನು ಕಟ್ಟಿ ರಾಮ ಮಂದಿರ ನಿರ್ಮಾಣದ ಚಳವಳಿಯನ್ನು ಹುಟ್ಟುಹಾಕಿದ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಹಲವು ನಾಯಕರನ್ನು ಮೋದಿ- ಶಾ ನಾಯಕತ್ವ ಮೂಲೆಗುಂಪು ಮಾಡಿದ್ದು ಈಗ ಇತಿಹಾಸ. ಆದರೆ ಈ ನಿಯಮ ಈಗ ಮೋದಿ ಅವರಿಗೆ ಅನ್ವಯಿಸುವುದಿಲ್ಲ ಎನ್ನುವ ವಾದ ಅಲ್ಲಲ್ಲಿ ಹುಟ್ಟಿಕೊಂಡಿದೆ. ಮೋದಿ ಅವರ ನಾಯಕತ್ವ ಇನ್ನೂ ಹತ್ತಾರು ವರ್ಷ ದೇಶಕ್ಕೆ ಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಸದ್ಯಕ್ಕೆ ಮೋದಿ ಅವರ ಕುರ್ಚಿಗೆ ಯಾವ ತೊಂದರೆಯೂ ಆಗಲಾರದು ಎನ್ನುವುದು ಸತ್ಯ. ಇದೇ ನಿಯಮವನ್ನು ಆರ್‌ಎಸ್‌ಎಸ್‌ಗೂ ಅನ್ವಯ ಮಾಡುವುದಾದರೆ ಮೋಹನ್ ಭಾಗ್ವತ್ ಅವರಿಗೂ ಈಗ ೭೫ ವರ್ಷಗಳು ತುಂಬುತ್ತಿರುವುದರಿಂದ ಈ ವಯೋಮಾನದ ಮಾನದಂಡ ಯಾರಿಗೆ ಯಾವಾಗ ಅನ್ವಯವಾಗುತ್ತದೆ ಎನ್ನುವುದು ಚರ್ಚೆಯ ವಿಷಯವಾಗಿಯೇ ಉಳಿದಿದೆ.
ಭಾಗ್ವತ್ ಅವರನ್ನು ಸಂಪ್ರೀತಿಗೊಳಿಸಲೆಂದೇ ಮೋದಿ ಅವರು ಆರ್‌ಎಸ್‌ಎಸ್ ಸಂಘಟನೆಯನ್ನು ಶ್ಲಾಘಿಸಿದ್ದಾರೆ ಎನ್ನುವುದನ್ನು ಮುಖ್ಯವಾಗಿ ಕಾಂಗ್ರೆಸ್ ಟೀಕಿಸಿದೆ. ನೂರು ವರ್ಷ ತುಂಬಿದ ಸರ್ಕಾರೇತರ ಸಂಸ್ಥೆಯೊಂದು ದೇಶದ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂಬ ಹೊಗಳಿಕೆಯ ಮಾತು ಈಗ ರಾಜಕೀಯ ವಲಯದಲ್ಲಿ ವಿವಾದವನ್ನು ಸೃಷ್ಟಿಸಿದೆ. ಸಂಘಟನೆಯಲ್ಲದೆ ಅದನ್ನು ಹುಟ್ಟುಹಾಕಿ ಬೆಳೆಸಿಕೊಂಡು ಬಂದ ನಾಯಕರು ಮತ್ತು ಅದರ ಕಾರ್ಯಚಟುವಟಿಕೆಯನ್ನು ಪ್ರಧಾನಿ ಮೋದಿ ಸ್ಮರಿಸಿರುವುದು ಸಹಜವಾಗಿಯೇ ಬಿಜೆಪಿ ಮುಖ್ಯವಾಗಿ ಆರ್‌ಎಸ್‌ಎಸ್ ಸಂಘಟಕರನ್ನು ಓಲೈಸಲು ಎಂಬುದನ್ನು ತಳ್ಳಿಹಾಕಲಾಗದು. ಹೀಗೆ ಮಾಡುವ ಮೂಲಕ ಮೋದಿ ಅವರು ಭಾಗ್ವತ್ ಅವರ ವಿಶ್ವಾಸವನ್ನೂ ಗಳಿಸುವ ತಂತ್ರಗಾರಿಕೆಯ ಸಾಧ್ಯತೆಯನ್ನು ತಮ್ಮ ಭಾಷಣದ ಮೂಲಕ ಮಾಡಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿ ಅವರು ತಾವು ಗಳಿಸಿರುವ ವರ್ಚಸ್ಸನ್ನು ಬಳಸಿಕೊಂಡು ಚುನಾವಣೆಯ ಮೂಲಕ ಇಡೀ ದೇಶವನ್ನು ಕೇಸರಿಮಯ ಮಾಡುವ ಉದ್ದೇಶ ಹೊಂದಿರುವುದು ಹೊಸದೇನೂ ಅಲ್ಲ. ಅದು ಅವರು ಅನುಸರಿಸಿಕೊಂಡು ಬಂದಿರುವ ರಾಜಕೀಯ ನೀತಿ ಮತ್ತು ಗುರಿ. ಇಷ್ಟಾದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಾದ ೨೭೧ ಸ್ಥಾನವನ್ನು ಗಳಿಸಲಾಗದೇ ಹೋದುದು ವಿಪರ್ಯಾಸ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ನಾಲ್ಕೂ ದಿಕ್ಕುಗಳಿಂದ ಭಾರತ ಜೋಡೊ ಯಾತ್ರೆ ಮಾಡುವ ಮೂಲಕ ಬಿಜೆಪಿಯ ಶಕ್ತಿಯನ್ನು ಕುಂದಿಸಿದ್ದನ್ನು ಕಳೆದ ಲೋಕಸಭೆ ಚುನಾವಣೆ ಸಾಬೀತುಪಡಿಸಿತು. ಆದರೂ ಮೋದಿ ಅವರು ಬಿಹಾರದ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಮತ್ತು ಆಂಧ್ರ ಪ್ರದೇಶದ ತೆಲುಗುದೇಶಂ ನಾಯಕ ಎನ್.ಚಂದ್ರಬಾಬು ನಾಯ್ಡು ಅವರ ಬೆಂಬಲ ಗಳಿಸಿ ಮತ್ತೆ ತಮ್ಮ ರಾಜಕೀಯ ಪ್ರಭಾವಳಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ಈಗ ಬಿಹಾರ ವಿಧಾನಸಭೆ ಚುನಾವಣೆ ಹತ್ತಿರ ಬಂದಿರುವುದರಿಂದ ಎನ್‌ಡಿಎ ಮತ್ತೆ ತನ್ನ ಸರ್ಕಾರವನ್ನು ರಚಿಸಬೇಕೆನ್ನುವ ಛಲವನ್ನು ಇಟ್ಟುಕೊಂಡಿದ್ದಾರೆ. ಆದರೆ ಅಲ್ಲಿ ಈಗ ಭುಗಿಲೆದ್ದಿರುವ ಮತದಾರರ ಪಟ್ಟಿ ಪರಿಷ್ಕರಣೆಯ ವಿವಾದ ಮತ್ತು ಬಿಕ್ಕಟ್ಟು ಯಾವ ರೀತಿಯಲ್ಲಿ ಬಿಜೆಪಿಗೆ ಸವಾಲನ್ನು ಒಡ್ಡಲಿದೆ ಎನ್ನುವುದನ್ನು ಬರಲಿರುವ ಚುನಾವಣಾ ದಿನಗಳು ನಿರ್ಧರಿಸಲಿದೆ.
” ಭಾಗ್ವತ್ ಅವರನ್ನು ಸಂಪ್ರೀತಿಗೊಳಿಸಲೆಂದೇ ಮೋದಿ ಅವರು ಆರ್‌ಎಸ್‌ಎಸ್ ಸಂಘಟನೆಯನ್ನು ಶ್ಲಾಘಿಸಿದ್ದಾರೆ ಎನ್ನುವುದನ್ನು ಮುಖ್ಯವಾಗಿ ಕಾಂಗ್ರೆಸ್ ಟೀಕಿಸಿದೆ. ನೂರು ವರ್ಷ ತುಂಬಿದ ಸರ್ಕಾರೇತರ ಸಂಸ್ಥೆಯೊಂದು ದೇಶದ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂಬ ಹೊಗಳಿಕೆಯ ಮಾತು ಈಗ ರಾಜಕೀಯ ವಲಯದಲ್ಲಿ ವಿವಾದವನ್ನು ಸೃಷ್ಟಿಸಿದೆ.”
ಬೆಂಗಳೂರು : ಇ-ಸ್ವತ್ತು 2.0 ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ…
ಮೈಸೂರು : ಡ್ರಗ್ಸ್ ಮುಕ್ತ ಮೈಸೂರು ಮಾಡಲು ಮುಂದಾಗಿರುವ ಮೈಸೂರು ನಗರ ಪೊಲೀಸರು ‘ವಿಮುಕ್ತಿ’ ಮಾದಕ ವಸ್ತು ಮುಕ್ತ ಮೈಸೂರಿನತ್ತ…
ಮಂಡ್ಯ : ಮೈಸೂರು ಬೈಪಾಸ್ ಮಾಡುವ ಗುರಿಯನ್ನು ಹೊಂದಿರುವ ಎನ್‌ಎಚ್ 275ರ ವಿಸ್ತೃತ ಮಾರ್ಗವಾದ ಬೆಂಗಳೂರು-ಕುಶಾಲನಗರ ಹೆದ್ದಾರಿಯು ರಂಗನತಿಟ್ಟು ಪಕ್ಷಿಧಾಮದ…
ಹಲಗೂರು : ಪ್ರತ್ಯೇಕ ಎರಡು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಐದಾರು ಎಕರೆ ಭೂ ಪ್ರದೇಶದಲ್ಲಿ ಸಣ್ಣಪುಟ್ಟ ಗಿಡಗಳು ಸುಟ್ಟು…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ ‘ಪ್ರಾಚಿ’ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಸಾವನ್ನಪ್ಪಿದೆ. ಅದಕ್ಕೆ…
ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ತಲುಪಿವೆ ಎಂದು ಘೋಷಿಸಿವೆ. ಇದರ ಅಡಿಯಲ್ಲಿ ಭಾರತ…