ತನ್ನ ಪ್ರೇಮವನ್ನು ತ್ಯಾಗ ಮಾಡುವ ಪಾತ್ರಗಳಲ್ಲೇ ಹೆಚ್ಚು ಮಿಂಚಿದ ತ್ಯಾಗರಾಜ ವೃತ್ತಿಬದುಕಿನಲ್ಲೆಂದೂ ಸಜ್ಜನಿಕೆ, ತಾಳ್ಮೆಯನ್ನು ತ್ಯಾಗಮಾಡಿಲ್ಲ!
‘ರಮೇಶ್‌ಅರವಿಂದ್ ಅವರ ಜೊತೆಗೆ ಸಾಕಷ್ಟು ಚರ್ಚೆ ನಡೆಸಿದ ನಂತರ ‘ಶಿವಾಜಿ ಸುರತ್ಕಲ್ ೨’ ಚಿತ್ರಕ್ಕೆ ಚಾಲನೆ ದೊರೆಯಿತು. ಅವರ ಹುಟ್ಟುಹಬ್ಬಕ್ಕೆ ಈ ಟೀಸರ್ ಬಿಡುಗಡೆ ಮಾಡಿದ್ದೀವಿ’ – ಇದು ಆ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಮಾತು. ರಮೇಶ್ ಅರವಿಂದ್ ನಿರ್ದೇಶಿಸಿದ ‘ಆಕ್ಸಿಡೆಂಟ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಆಕಾಶ್ ಶ್ರೀವತ್ಸ, ತಮ್ಮ ನಿರ್ದೇಶನದ ಮೊದಲ ಚಿತ್ರದ ಮುಖ್ಯ ಭೂಮಿಕೆಗೆ ಆರಿಸಿದ್ದು, ತಮ್ಮ ಗುರುಗಳನ್ನೇ. ರಮೇಶ್ ಮೊದಲ ಬಾರಿಗೆ ಶಿವಾಜಿ ಪಾತ್ರದ ವಿಸ್ತರಣೆಗೆ ಒಪ್ಪಿಕೊಂಡಿದ್ದರು. ಹ್ಞಾಂ, ಈ ‘ಆಕ್ಸಿಡೆಂಟ್’ ಚಿತ್ರದ ಮೂಲಕವೇ ರಮೇಶ್ ಅವರು, ಈಗ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಸಂಗೀತಜ್ಞ, ಗ್ರ್ಯಾಮಿ ಪ್ರಶಸ್ತಿಯನ್ನು ಎರಡು ಬಾರಿ ಪಡೆದಿರುವ ರಿಕ್ಕಿಕೇಜ್‌ರನ್ನು ಸಂಗೀತ ಸಂಯೋಜಕರಾಗಿ ಪರಿಚಯಿಸಿದ್ದರು.
ಶಿವಾಜಿ ಸುರತ್ಕಲ್ ಟೀಸರ್ ಬಿಡುಗಡೆಯ ಮಾರನೇ ದಿನ ಅವರ ಜನ್ಮದಿನ. ತಮ್ಮ ಅಭಿಮಾನಿಗಳನ್ನು ವಾಟ್ಸ್‌ಆಪ್ ಮೂಲಕ ಸಂಪರ್ಕಿಸುವಂತೆ ಕೋರಿದ್ದರು ರಮೇಶ್. ಮೂರನೇ ದಿನ ಅವರಕೃತಿ ‘ಪ್ರೀತಿಯಿಂದ ರಮೇಶ್’ ಬಿಡುಗಡೆ. ಹಿರಿಯ ನಟ ಅನಂತನಾಗ್ ಅದನ್ನು ಬಿಡುಗಡೆ ಮಾಡಿದ್ದರು. ತಾವು ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಈ ಕೃತಿಯ ಕುರಿತಂತೆ, ‘ಯಾವುದೇ ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರ ಜೊತೆ ತಕ್ಷಣವೇ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜಗುಣ. ಮಾತು ಕರಗತವಾಗಿರದಿದ್ದ ಕಾಲದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮಾಹಿತಿಯನ್ನು ಮನುಷ್ಯ ತಿಳಿಸುತ್ತಿದ್ದ. ನಡೆದ ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಹೇಳುವ ಸಂದರ್ಭದಲ್ಲಿ ತನ್ನನ್ನು ಸೇರಿಸಿಕೊಂಡು ವಿವರಿಸುತ್ತಿದ್ದ. ಇಂತಹ ಮಾನವ ಸಹಜಗುಣದ ಮುಂದುವರಿದ ಭಾಗವೇ ಬರವಣಿಗೆ. ನಾನು ನನ್ನಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ’ ಎಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅವರ ಓರಗೆಯ ನಟರಾದ ಶಿವರಾಜಕುಮಾರ್ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ, ರವಿಚಂದ್ರನ್ ಅವರಿಗೆ ಸಿಎಂಆರ್ ವಿವಿ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಗೌರವ ಡಾಕ್ಟೊರೇಟ್ ನೀಡಿ ಪುರಸ್ಕರಿಸಿವೆ. ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡ ಮೊದಲ ಚಿತ್ರ ‘ಸುಂದರ ಸ್ವಪ್ನಗಳು’ ಚಿತ್ರದ ಶ್ರೀಧರ್ ಅವರು ನೃತ್ಯದ ಮೇಲಿನ ತಮ್ಮ ಸಂಶೋಧನಾ ಪ್ರಬಂಧಕ್ಕಾಗಿ ಡಾಕ್ಟೊರೇಟ್ ಪಡೆದರು. ಇದೀಗ ರಮೇಶ್ ಅರವಿಂದ್ ಅವರಿಗೆ ಚಿತ್ರರಂಗದಲ್ಲಿನ ಸಾಧನೆ, ಕೊಡುಗೆಗಾಗಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಗೌರವ ಡಾಕ್ಟೊರೇಟ್ ನೀಡಿದೆ. ಮೊನ್ನೆ ಬುಧವಾರ ನಡೆದ ಘಟಿಕೋತ್ಸವದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.
ಎಂಜಿನಿಯರಿಂಗ್ ಪದವೀಧರರಾದ ರಮೇಶ್ ಅವರು ದೂರದರ್ಶನದಲ್ಲಿ ಶಂಕರನಾಗ್ ಮೊದಲು ನಡೆಸಿಕೊಡುತ್ತಿದ್ದ ‘ಪರಿಚಯ’ ಕಾರ್ಯಕ್ರಮ ನಡೆಸುವುದರೊಂದಿಗೆ ಪರಿಚಯವಾದವರು. ಬೆಳ್ಳಿತೆರೆಗೆ ಗೀತಪ್ರಿಯ ಅವರ ‘ಮೌನಗೀತೆ’ಗಾಗಿ ಮೊದಲು ಬಣ್ಣ ಹಚ್ಚಿದರೂ ಮೊದಲು ತೆರೆ ಕಂಡದ್ದು ಬಾಲಚಂದರ್ ನಿರ್ದೇಶನದ ‘ಸುಂದರ ಸ್ವಪ್ನಗಳು’.
ಅಲ್ಲಿಂದಾಚೆ ಅವರು ತಿರುಗಿ ನೋಡಲಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳ, ತುಳು ಚಿತ್ರಗಳಲ್ಲಿ ನಟಿಸಿದರು. ಕನ್ನಡದಲ್ಲಿ ಶತಚಿತ್ರಗಳನ್ನು ಪೂರೈಸಿರುವ ಅವರು ನಟಿಸಿದ ಚಿತ್ರಗಳು ನೂರ ಮೂವತ್ತಕ್ಕೂ ಹೆಚ್ಚು.
ಅಭಿನಯ ಮಾತ್ರವಲ್ಲ, ಅವರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ ‘ಹೂಮಳೆ’, ‘ಅಮೃತಧಾರೆ’ ಚಿತ್ರಗಳಿಗೆ ಸಾಹಿತ್ಯ ಒದಗಿಸಿದರು. ಕಮಲಹಾಸನ್ ಅವರೊಂದಿಗೆ ಪಾತ್ರವಹಿಸಿದ ‘ರಾಮ, ಶಾಮ ಭಾಮ’ ಚಿತ್ರದ ಮೂಲಕ ನಿರ್ದೇಶಕರೂ ಆದರು.
ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ನಟರಾಗಿ, ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದರು.
ಕಿರುತೆರೆಯ ‘ಪರಿಚಯ’ದ ಮೂಲಕ ಬಂದ ರಮೇಶ್ ಅರವಿಂದ್ ಕಸ್ತೂರಿ ವಾಹಿನಿಗಾಗಿ ನಡೆಸಿಕೊಟ್ಟ ಕಾರ್ಯಕ್ರಮ ‘ಪ್ರೀತಿಯಿಂದ ರಮೇಶ್’ ಆ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿತ್ತು. ಕನ್ನಡ ಚಿತ್ರೋದ್ಯಮದ ನಟ ನಟಿಯರು, ಸೃಜನಶೀಲರು ಪಾಲ್ಗೊಳ್ಳುತ್ತಿದ್ದ ಆ ಕಾರ್ಯಕ್ರಮದಲ್ಲಿ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಅನಾವರಣದ ಜೊತೆಗೆ ಚಿತ್ರರಂಗದ ಒಳಹೊರಗಿನ ಮುಖದ ಪರಿಚಯವೂ ಆಗುತ್ತಿತ್ತು. ರಮೇಶ್ ಅವರು ತಮ್ಮ ಅನುಭವದ ಬುತ್ತಿಯನ್ನು ಅಕ್ಷರಕ್ಕಿಳಿಸಿದ ಕೃತಿಗೆ ಇಟ್ಟಿರುವ ಹೆಸರೂ ‘ಪ್ರೀತಿಯಿಂದ ರಮೇಶ್’. ಅವರು ಅಭಿನಯಿಸಿದ ಒಂದು ಚಿತ್ರದ ಹೆಸರೂ ‘ಪ್ರೀತಿಯಿಂದ ರಮೇಶ್’.
ಕಿರುತೆರೆಯ ನಂಟನ್ನು ಅವರು ಬಿಡಲಿಲ್ಲ. ‘ಪ್ರೀತಿಯಿಂದ ರಮೇಶ್’ ಮಾದರಿಯಲ್ಲೇ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮವನ್ನು ಜೀ ಟಿವಿಗಾಗಿ ನಡೆಸಿಕೊಟ್ಟರು. ಮೊದಲನೆಯದು ಚಿತ್ರರಂಗದ ಮಂದಿಗೆ ಸೀಮಿತವಾದರೆ, ‘ವೀಕೆಂಡ್ ವಿತ್ ರಮೇಶ್’ ನಾಡಿನ ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮವಾಯಿತು, ಆ ಮೂಲಕ ಜನತೆಗೆ, ವಿಶೇಷವಾಗಿ ಯುವ, ವಿದ್ಯಾರ್ಥಿ ಸಮೂಹಕ್ಕೆ ಸ್ಫೂರ್ತಿ ತುಂಬುವ ಕೆಲಸವೂ ಪರೋಕ್ಷವಾಗಿ ಆಯಿತು. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟ ಅವರು ಧಾರಾವಾಹಿಗಳ ನಿರ್ಮಾಣದತ್ತಲೂ ಗಮನಹರಿಸಿದರು.
ಅವರು ಅಭಿನಯಿಸಿದ ಚಿತ್ರಗಳು ಸದಭಿರುಚಿಯವು. ಮನೆಮಂದಿಯೆಲ್ಲ ಜೊತೆಯಾಗಿ ಕುಳಿತು ನೋಡಬಹುದಾದವುಗಳು.
ಅವರಿಗೆ ಹೆಸರು ತಂದುಕೊಟ್ಟ, ಜನಪ್ರೀತಿ ತಂದುಕೊಟ್ಟ ಚಿತ್ರಗಳೇ ಹೆಚ್ಚು. ಪಂಚಮವೇದ, ಅರಗಿಣಿ, ಶ್ರೀಗಂಧ, ಅನುರಾಗಸಂಗಮ, ಕರ್ಪೂರದಗೊಂಬೆ, ನಮ್ಮೂರ ಮಂದಾರ ಹೂವೆ, ಅಮೆರಿಕ ಅಮೆರಿಕ, ಅಮೃತವರ್ಷಿಣಿ, ಓಮಲ್ಲಿಗೆ, ‘ಮುಂಗಾರಿನಮಿಂಚು’, ಹೂಮಳೆ, ಭೂಮಿ ತಾಯಿಯ ಚೊಚ್ಚಲಮಗ, ಚಂದ್ರಮುಖಿ ಪ್ರಾಣಸಖಿ ಅವುಗಳಲ್ಲಿ ಕೆಲವು.
ವೃತ್ತಿಜೀವನದಲ್ಲಿ ಎಲ್ಲಿಯೂ ವಿವಾದದ ಲವಲೇಶವೂ ಅಂಟದಂತೆ ನಡೆದುಕೊಂಡು ಬಂದ ಅವರ ಹಾದಿ ಕಲಾವಿದರಿಗೆ ಮಾದರಿ. ಸರಳತೆ, ಸಜ್ಜನಿಕೆಯ ಇನ್ನೊಂದು ರೂಪ. ಯುವ ಜನರಿಗೆ, ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿಯ ಚಿಲುಮೆಯಾಗಿರುವ ರಮೇಶ್, ಅವರನ್ನು ಸಕಾರಾತ್ಮಕವಾಗಿ ಚಿಂತಿಸುವಂತೆ ತಮ್ಮ ಮಾತುಗಳ ಮೂಲಕ ಪ್ರೇರೇಪಿಸುತ್ತಾರೆ.
ಮೊನ್ನೆ ಅವರ ‘ಪ್ರೀತಿಯಿಂದ ರಮೇಶ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಜೋಗಿ, ‘ರಮೇಶ್ ಆವರಿಂದ ಒಂದು ಕೆಟ್ಟಮಾತು ಬರಬಹುದು ಎಂದು ಕಳೆದ ೨೫ ವರ್ಷಗಳಿಂದ ಪತ್ರಕರ್ತರಾಗಿ ನಾವು ಕಾಯುತ್ತಿದ್ದೇವೆ. ಆದರೆ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲತೆ, ಹುಡುಕಾಟ, ಹೊಸತನದ ವ್ಯಕ್ತಿತ್ವವನ್ನು ಹೊಂದಿದ್ದಾರೆ’ ಎಂದ ಮಾತು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ!
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…
ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ ಎಂದು…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ…
ಮಂಡ್ಯ: ಸಕ್ಕರೆ ನಾಡು ಮಂಡ್ಯ ನಗರಿಯಲ್ಲಿ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು,…