ಅಂಕಣಗಳು

ರಾಜ್ಯದಲ್ಲಿ ಬಗೆಹರಿಯದ ಅಧಿಕಾರ ಹಂಚಿಕೆಯ ವಿವಾದ

ಬಿಹಾರ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸುನಾಮಿ ಸಾಧ್ಯತೆ 

ರಾಜ್ಯ ಕಾಂಗ್ರೆಸ್‌ನಲ್ಲಿ ಪುನಃ ಅಧಿಕಾರ ಹಂಚಿಕೆಯ ಮಾತು ಮೇಲೆದ್ದಿದೆ. ಇಂತಹ ಮಾತಿಗೆ ಮೂಲವಾಗಿದ್ದು ವಸತಿ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆ. ಕೆಲ ದಿನಗಳ ಹಿಂದೆ ಬಳ್ಳಾರಿಗೆ ಹೋಗಿದ್ದ ಅವರು ಮುಂದಿನ ಹತ್ತು ದಿನಗಳಲ್ಲಿ ಈ ಜಿಲ್ಲೆಯ ನಾಯಕ ಬಿ.ನಾಗೇಂದ್ರ ಮತ್ತೆ ಮಂತ್ರಿಯಾಗುತ್ತಾರೆ ಮತ್ತು ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.

ಜಮೀರ್ ಅಹ್ಮದ್ ಅವರ ಈ ಹೇಳಿಕೆ ಸಾರ್ವಜನಿಕವಾಗಿ ಹೆಚ್ಚು ಪ್ರಚಾರ ಪಡೆಯದಿದ್ದರೂ, ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾಳೆಯದ ಸಿಟ್ಟಿಗೆ ಕಾರಣವಾಯಿತು.

ಪರಿಣಾಮ ಡಿಕೆಶಿ ಪಾಳೆಯದಲ್ಲಿರುವ ಶಾಸಕ ಎಚ್.ಡಿ.ರಂಗನಾಥ್ ಅವರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ. ಪಕ್ಷ ನೂರಾ ಮೂವತ್ತಾರರಷ್ಟು ಕ್ಷೇತ್ರಗಳಲ್ಲಿ ಗೆಲ್ಲಲು ಅವರ ಪಾತ್ರ ಪ್ರಮುಖವಾಗಿರುವುದರಿಂದ, ಅವರು ಮುಖ್ಯಮಂತ್ರಿಯಾಗುವುದು ನ್ಯಾಯ ಎಂದರು.

ಹೀಗೆ ಉಭಯ ಪಾಳೆಯಗಳಿಂದ ಶುರುವಾದ ಅಧಿಕಾರ ಹಂಚಿಕೆಯ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವಧಿ ಪೂರ್ಣವಾಗುವ ವರೆಗೆ ನಾನೇ ಸಿಎಂ ಎಂದು ಕೌಂಟರ್ ಕೊಟ್ಟರು.

ಇದನ್ನು ಓದಿ : ಜಾನುವಾರುಗಳಿಗೆ ಬಹುವಾರ್ಷಿಕ ಮೇವಿನ ಬೆಳೆ ಬೆಳೆಯಿರಿ

ಯಾವಾಗ ಸಿದ್ದರಾಮಯ್ಯನವರು ಇಂತಹ ಹೇಳಿಕೆ ನೀಡಿದರೋ ಇದಾದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಟ್ಟಿ ಧ್ವನಿಯಲ್ಲಿ ಈ ವಿಷಯದ ಬಗ್ಗೆ ಯಾರೂ ಮಾತನಾಡಬಾರದು. ಹೈಕಮಾಂಡ್ ಏನು ಹೇಳುತ್ತದೋ ಅದನ್ನು ನಾನು ಕೇಳುತ್ತೇನೆ ಎಂದರು. ಅಷ್ಟೇ ಅಲ್ಲ, ಅಧಿಕಾರ ಹಂಚಿಕೆಯ ಕುರಿತು ಮಾತನಾಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇನೆ, ನೊಟೀಸ್ ಕೊಡುತ್ತೇನೆ ಎಂದರು.

ಹೀಗೆ ಶುರುವಾದ ಅಧಿಕಾರ ಹಂಚಿಕೆಯ ಮಾತಿಗೆ ಸಣ್ಣದೊಂದು ಬ್ರೇಕ್ ಕೊಟ್ಟವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ. ಅನಾರೋಗ್ಯಕ್ಕೊಳಗಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ವಿಚಾರಿಸಲು ಕಳೆದ ಶುಕ್ರವಾರ ಬೆಂಗಳೂರಿಗೆ ಬಂದಿದ್ದ ಸುರ್ಜೇವಾಲಾ ಅವರು, ಅಧಿಕಾರ ಹಂಚಿಕೆಯ ಬಗ್ಗೆ ಸದ್ಯ ಚರ್ಚೆ ನಡೆಯುತ್ತಿಲ್ಲ ಎಂದರಲ್ಲದೆ, ಈ ಕುರಿತ ಮಾತಿಗೆ ತಾತ್ಕಾಲಿಕ ಬ್ರೇಕ್ ಹಾಕಿದರು.

ಹೀಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚರ್ಚೆಗೆ ಬ್ರೇಕ್ ಹಾಕಿದರು ಎಂದ ಮಾತ್ರಕ್ಕೆ ಅಧಿಕಾರ ಹಂಚಿಕೆಯ ಮಾತು ಸಂಪೂರ್ಣ ನಿಲ್ಲುತ್ತದೆ ಎಂದಲ್ಲ. ಬದಲಿಗೆ, ಈ ಮಾತು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಲಿದೆ.

ಕಾರಣ ಅಧಿಕಾರ ಹಂಚಿಕೆ ಒಪ್ಪಂದ ಎಂದು ಆಗಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತುಂಬ ಸ್ಪಷ್ಟವಾಗಿ ಹೇಳಿದರೂ, ಅದನ್ನು ಒಪ್ಪಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಯಾರಿಲ್ಲ. ಹಾಗಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವೆ ಪೈಪೋಟಿ ನಡೆಯಿತಲ್ಲ , ಈ ಪೈಪೋಟಿ ಒಂದು ದಿನಕ್ಕೆ ಸೀಮಿತವಾಗದೆ ಹಲವು ದಿನಗಳ ಕಾಲ ಮುಂದುವರಿಯಿತು.

ಅಂತಿಮವಾಗಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಹೈಕಮಾಂಡ್ ತೀರ್ಮಾನಿಸಿದರೂ, ಹೈಕಮಾಂಡ್ ಮಟ್ಟದ ನಾಯಕರೊಬ್ಬರು ಭವಿಷ್ಯದಲ್ಲಿ ನೀವೂ ಸಿಎಂ ಆಗುತ್ತೀರಿ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಹೇಳಿದ್ದಾರೆ. ಆದರೆ ಆ ನಾಯಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಾಗಿರಲ್ಲ ಎಂಬುದು ನಿಜ. ಆದರೆ ಹೈಕಮಾಂಡ್ ಮಟ್ಟದ ನಾಯಕರೊಬ್ಬರು ಇಂತಹ ಭರವಸೆ ನೀಡಿದ್ದನ್ನು ಡಿ.ಕೆ.ಶಿವಕುಮಾರ್ ಎಷ್ಟು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಎಂದರೆ, ವರಿಷ್ಠರ ಮನಸ್ಸು ಗೊತ್ತಿಲ್ಲದೆ ಹೈಕಮಾಂಡ್ ಮಟ್ಟದ ನಾಯಕರು ತಮಗೆ ಹೇಗೆ ಭರವಸೆ ನೀಡಲು ಸಾಧ್ಯ ಎಂಬುದು ಈಗ ಡಿಕೆಶಿ ಅವರ ಯೋಚನೆ.

ಹೀಗಾಗಿ ಅಧಿಕಾರ ಹಂಚಿಕೆ ಒಪ್ಪಂದ ಎಂಬುದು ಆಗಿಯೇ ಇಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರೂ ಡಿಕೆಶಿ ಮಾತ್ರ ಅದನ್ನು ಒಪ್ಪುತ್ತಿಲ್ಲ. ಹಾಗಂತ ಅವರೇನೂ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ಹೊಡೆದಿಲ್ಲ. ಬದಲಿಗೆ ಸಿದ್ದರಾಮಯ್ಯನವರೇ ಹಾಗೆ ಹೇಳಿದ ಮೇಲೆ ನಾನು ಹೇಳುವುದೇನಿದೆ? ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದಾರೆ. ಆದರೆ ಹೀಗೆ ಡಿಕೆಶಿ ಬಿಳಿ ಬಾವುಟ ಹಾರಿಸಿದಂತೆ ಮಾತನಾಡುತ್ತಿದ್ದರೂ ಅವರ ಪಾಳೆಯದ ಶಾಸಕರು ಸುಮ್ಮನಿರುತ್ತಿಲ್ಲ. ಅದರಲ್ಲೂ ಸಿದ್ದರಾಮಯ್ಯ ಪಾಳೆಯದ ಒಬ್ಬ ಶಾಸಕ, ನಾಯಕ ಸಿದ್ದರಾಮಯ್ಯನವರೇ ಅವಧಿ ಪೂರೈಸುತ್ತಾರೆ ಎಂದರೆ ತಿರುಗಿ ಬೀಳುತ್ತಾರೆ.

ಇದನ್ನು ಓದಿ : ಗ್ರಾಮೀಣ ಭಾಗಗಳಲ್ಲಿ ನಿಲ್ಲದ ವನ್ಯಮೃಗಗಳ ಹಾವಳಿ 

ಅರ್ಥಾತ್, ಬಿಹಾರ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಮಾತು ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸಲಿದೆ. ಇವತ್ತು ಶಾಸಕ ಬಲದ ದೃಷ್ಟಿಯಿಂದ ನೋಡಿದರೆ ಸಿದ್ದರಾಮಯ್ಯ ಅವರು ನಿರ್ವಿವಾದವಾಗಿ ಹೆಚ್ಚು ಬಲ ಹೊಂದಿದ್ದಾರೆ. ಇದಕ್ಕೆ ಕಾರಣ, ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರಿಗೆ ಸಿದ್ದರಾಮಯ್ಯ ಅವರೇ ತಮ್ಮ ಭವಿಷ್ಯ ಎಂಬ ಲೆಕ್ಕಾಚಾರವಿದೆ. ಯಾರೇನೇ ಹೇಳಿದರೂ ಕರ್ನಾಟಕದ ಅಹಿಂದ ವರ್ಗಗಳನ್ನು ಸಿದ್ದರಾಮಯ್ಯನವರು ಎಷ್ಟು ಚೆನ್ನಾಗಿ ಕ್ರೋಢೀಕರಿಸಿದ್ದಾರೆ ಎಂದರೆ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಅದನ್ನು ದಕ್ಕಿಸಿಕೊಳ್ಳಲು ಕಾಂಗ್ರೆಸ್ ವರಿಷ್ಠರಿಗೆ ಸಾಧ್ಯವೇ ಇಲ್ಲ.

ಒಂದು ಕಾಲದಲ್ಲಿ ದೇವರಾಜ ಅರಸು, ವೀರೇಂದ್ರ ಪಾಟೀಲ್, ಸಾರೆಕೊಪ್ಪ ಬಂಗಾರಪ್ಪ ಅವರಂತಹ ನಾಯಕರನ್ನು ಸಿಎಂ ಪಟ್ಟದಿಂದ ಕಿತ್ತು ಹಾಕಿ ದಕ್ಕಿಸಿಕೊಂಡ ಪಕ್ಷ ಅದು. ಆದರೆ ಈಗ ಅದಕ್ಕೆ ಒಂದು ನಾಯಕತ್ವವನ್ನು ಕಿತ್ತೆಸೆಯುವುದು ಸರಳವಾಗಿಲ್ಲ. ಏಕೆಂದರೆ ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯ ಅವರಷ್ಟು ಭದ್ರ ನೆಲೆಗಟ್ಟಿನ ಮತ್ತೊಬ್ಬ ನಾಯಕರಿಲ್ಲ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ತಾವು ಸಿದ್ದರಾಮಯ್ಯನವರ ನಾಯಕತ್ವದಡಿ ಹೋಗಬೇಕು. ಅಹಿಂದ ವರ್ಗಗಳ ಸಾಲಿಡ್ಡು ಬೆಂಬಲ ಪಡೆಯಬೇಕು ಎಂಬ ಇಚ್ಛೆ ಬಹುತೇಕ ಶಾಸಕರಿಗಿದೆ. ಇದು ಡಿಕೆಶಿಗೂ ಗೊತ್ತು.

ಹೀಗಾಗಿಯೇ ಅವರು ಶಾಸಕ ಬಲದ ಜತೆ ಆಟವಾಡುವ ಬದಲು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎನ್ನುತ್ತಿರುವುದು. ಆದರೆ ಅವರು ಯಾವ ಪಟ್ಟನ್ನೇ ಹಾಕಲಿ, ಸಿದ್ದರಾಮಯ್ಯ ಮಾತ್ರ ಜಗ್ಗುವ ಲಕ್ಷಣಗಳೇ ಕಾಣುತ್ತಿಲ್ಲ. ಎಷ್ಟೇ ಆದರೂ ತಮ್ಮ ವರ್ಚಸ್ಸಿನ ಮೂಲಕ ಪಕ್ಷ ಅಧಿಕಾರಕ್ಕೆ ಬಂದಿದೆ, ಹೀಗಾಗಿ ಅವಧಿ ಮುಗಿಯುವವರೆಗೆ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದು ಅವರ ವಾದ. ಪರಿಣಾಮ ಬಿಹಾರ ವಿಧಾನಸಭಾ ಚುನಾವಣೆ ಮುಗಿದ ಕೂಡಲೇ ಅಧಿಕಾರ ಹಂಚಿಕೆಯ ಮಾತು ಮತ್ತೆ ಸುನಾಮಿಯಂತೆ ಏಳಲಿದೆ ಮತ್ತು ಅದರ ಹೊಡೆತಕ್ಕೆ ರಾಜ್ಯ ಕಾಂಗ್ರೆಸ್ ತಲ್ಲಣಗೊಳ್ಳಲಿದೆ.

” ಬಿಹಾರ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಮಾತು ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸಲಿದೆ. ಇವತ್ತು ಶಾಸಕ ಬಲದ ದೃಷ್ಟಿಯಿಂದ ನೋಡಿದರೆ ಸಿದ್ದರಾಮಯ್ಯ ಅವರು ನಿರ್ವಿವಾದವಾಗಿ ಹೆಚ್ಚು ಬಲ ಹೊಂದಿದ್ದಾರೆ.”

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

 

ಆಂದೋಲನ ಡೆಸ್ಕ್

Recent Posts

ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ ಒಪ್ಪಂದ : ಎಚ್‌ಡಿಕೆ ನೇತೃತ್ವದಲ್ಲಿ ದ್ವಿಪಕ್ಷೀಯ ಚರ್ಚೆ

ಹೊಸದಿಲ್ಲಿ : ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸಲು…

47 mins ago

ಮುಡಾ ಕೇಸ್‌ನಲ್ಲಿ ಸಿಎಂʼಗೆ ನಿರಾಳ : ʻಸತ್ಯ ಮೇವ ಜಯತೆʻ ಫ್ಲೇ ಕಾರ್ಡ್‌ ಹಿಡಿದು ಕಾಂಗ್ರೆಸ್‌ ಸಂಭ್ರಮ

ಮೈಸೂರು : ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಬಿ ರಿಪೋರ್ಟ್…

59 mins ago

ಕೆ.ಜೆ.ಜಾರ್ಜ್‌ ರಾಜೀನಾಮೆ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಿದ್ದರು ಎಂಬ…

3 hours ago

ವಿಕಲಚೇತನರಿಗಾಗಿಯೇ ಬೃಹತ್‌ ಉದ್ಯೋಗ ಮೇಳ ಆಯೋಜನೆ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಬೆಂಗಳೂರು: ವಿಕಲಚೇತನರಿಗಾಗಿಯೇ ಮುಂದಿನ ಮೂರು ತಿಂಗಳಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್…

3 hours ago

ಕೊಡಗಿನಲ್ಲಿ ಮುಂದುವರೆದ ಆನೆ–ಮಾನವ ಸಂಘರ್ಷ: ಕಾಡಾನೆ ದಾಳಿಗೆ ವ್ಯಕ್ತಿ ದಾರುಣ ಸಾವು

ಕೊಡಗು: ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ಮತ್ತೆ ಜೀವ ಬಲಿ ಪಡೆದಿದೆ. ಸಿದ್ದಾಪುರ ಸಮೀಪದ ಗೌರಿ ಬೆಟ್ಟ ಬಳಿ ಕಾಡಾನೆ ದಾಳಿಗೆ…

3 hours ago

ವಿಮಾನ ದುರಂತದಲ್ಲಿ ಅಜಿತ್‌ ಪವಾರ್‌ ಸಾವು ಪ್ರಕರಣ: ದುರಂತದ ಸಂಪೂರ್ಣ ತನಿಖೆಯಾಗಲಿದೆ ಎಂದ ಯದುವೀರ್‌ ಒಡೆಯರ್‌

ಮಡಿಕೇರಿ: ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಕತೆ ಕಟ್ಟುತ್ತಿದ್ದಾರೆ ಎಂದು…

4 hours ago